3 ಲಕ್ಷ ಸಂಖ್ಯೆಯಲ್ಲಿ ತಪಾಸಣೆ ಆಗಿದ್ದು 30 ಸಾವಿರ!; ಸತ್ಯಾಂಶ ಮುಚ್ಚಿಟ್ಟು ಬೆನ್ನು ಚಪ್ಪರಿಸಿತೇ?

ಬೆಂಗಳೂರು; ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ದಿನದಿಂದ ಈವರೆವಿಗೆ ಆಸ್ಪತ್ರೆ, ಮನೆ ಸೇರಿದಂತೆ ವಿವಿಧೆಡೆ ಪ್ರತ್ಯೇಕವಾಗಿರಿಸಲ್ಪಟ್ಟ 3 ಲಕ್ಷ ಜನರಲ್ಲಿ  ಕೇವಲ 30 ಸಾವಿರ ಜನರಿಗಷ್ಟೇ  ತಪಾಸಣೆ ಆಗಿದೆ  ಎಂದು ತಿಳಿದು  ಬಂದಿದೆ. ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆ ನಡೆಯುತ್ತಿಲ್ಲ ಎಂಬ ಆರೋಪಗಳಿಗೆ ಇನ್ನಷ್ಟು ಪುಷ್ಠಿ ನೀಡುತ್ತಿರುವ  ಈ ಅಂಕಿಸಂಖ್ಯೆಗಳು,  ಸರ್ಕಾರ ಸತ್ಯಾಂಶವನ್ನೇ ಮುಚ್ಚಿಡುತ್ತಿದೆ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.  

ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸದೆಯೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ರಾಜ್ಯ ಸರ್ಕಾರ  ಹೇಳುತ್ತಿದೆ.  ತಪಾಸಣೆಗಳು ನಡೆಯದೇ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳುತ್ತಿರುವುದಕ್ಕೆ  ಯಾವುದೇ ವೈಜ್ಞಾನಿಕ, ತಾಂತ್ರಿಕ ಮತ್ತು ವೈದ್ಯಕೀಯ ಕಾರಣಗಳೇ ಇಲ್ಲ. 

ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವುದು ನಿಜವಾಗಿದ್ದರೆ ಅದಕ್ಕೆ ಸರ್ಕಾರ ಸೂಕ್ತ ವೈದ್ಯಕೀಯ, ವೈಜ್ಞಾನಿಕ, ತಾಂತ್ರಿಕ ಕಾರಣಗಳೊಂದಿಗೆ ಸರ್ಕಾರ ಸಮರ್ಥನೆ ನೀಡಬೇಕಿತ್ತು. ಆದರೆ ಈ ವಿಚಾರದಲ್ಲಿ ಸತ್ಯಾಂಶವನ್ನು ಮುಚ್ಚಿಟ್ಟು ಕೇವಲ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. 

‘ರಾಜ್ಯದಲ್ಲಿ ಇಲ್ಲಿಯವರೆಗೆ 22, ಏಪ್ರಿಲ್ 2020ಕ್ಕೆ 29,512 ಜನರನ್ನು ಪರೀಕ್ಷೆ ಮಾಡಲಾಗಿದೆ. 23 ಮತ್ತು 24ರಂದು ಕೈಗೊಂಡಿರುವ ಒಟ್ಟು ಪರೀಕ್ಷೆಗಳ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ನಮ್ಮ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಬೆನ್ನು ಚಪ್ಪರಿಸಿಕೊಳ್ಳುತ್ತಿದೆ. ಇದು ಸುಳ್ಳು ಸಮರ್ಥನೆಯಾಗುತ್ತಿದೆ,’ ಎಂದು ಎಚ್.ಕೆ.ಪಾಟೀಲ್‌ ಕೂಡ  ಟೀಕಿಸಿದ್ದಾರೆ.

ತಪಾಸಣೆಗೊಳಪಡಿಸುತ್ತಿರುವ ನೆರೆಯ ರಾಜ್ಯಗಳ ಪೈಕಿ ಕರ್ನಾಟಕ ಹಿಂದೆ  ಬೀಳುತ್ತಲೇ ಇದೆ. ಮಹಾರಾಷ್ಟ್ರದಲ್ಲಿ 95,210 ಜನರನ್ನು, ತಮಿಳುನಾಡಿನಲ್ಲಿ 65,977, ಆಂಧ್ರಪ್ರದೇಶದಲ್ಲಿ 54,338, ಕೇರಳದಲ್ಲಿ 21,334, ತೆಲಂಗಾಣದಲ್ಲಿ 16,827, ಗುಜರಾತ್‍ನಲ್ಲಿ 42,384, ರಾಜಸ್ಥಾನದಲ್ಲಿ 74,484,  ಮಧ್ಯಪ್ರದೇಶದಲ್ಲಿ 33,074, ಹರಿಯಾಣದಲ್ಲಿ 17,582, ಉತ್ತರಪ್ರದೇಶದಲ್ಲಿ 45,483 ಜನರನ್ನು ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಎಚ್‌ ಕೆ ಪಾಟೀಲ್‌ ಅವರು ಸರ್ಕಾರಕ್ಕೆ  ಇತ್ತೀಚೆಗೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ. 

ಏಪ್ರಿಲ್‌ 24ರ ಸಂಜೆ 5 ಗಂಟೆಯಿಂದ 25ರ ಮಧ್ಯಾಹ್ನ 12 ಗಂಟೆವರೆಗೆ ಹೊಸದಾಗಿ 15 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆವಿಗೆ ಒಟ್ಟು 489 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಮಾಹಿತಿಗಳನ್ನು ಬಿಡುಗಡೆ ಮಾಡಿದೆ. 

ಇದುವರೆಗೂ 18 ಜನರು ಕೋವಿಡ್-19ನಿಂದ ಮರಣ ಹೊಂದಿದ್ದರೆ, 153 ಜನರು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದ 6 ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆಯಲ್ಲದೆ, ಈ ಪೈಕಿ 34 ವರ್ಷದ ಪುರುಷ, 37 ವರ್ಷ, 21 ವರ್ಷ, 17 ವರ್ಷ, 28 ಮತ್ತು 19 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ.ಇವರೆಲ್ಲರಿಗೂ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿರುವುದು ಆತಂಕ ಹೆಚ್ಚಲು ಕಾರಣವಾಗುತ್ತಿರುವ ನಡುವೆಯೇ ಲಾಕ್‌ಡೌನ್‌ ಸಡಿಲಗೊಳಿಸಿರುವುದು ಇನ್ನಷ್ಟು  ಅಪಾಯಗಳನ್ನು ಮೈಮೇಲೆ  ಎಳೆದುಕೊಂಡಿದೆ. ರಾಜ್ಯದಲ್ಲಿ ಲಾಕ್‍ಡೌನ್‌ನ್ನು ಮೇ 3, 2020ರವರೆಗೆ ವಿಸ್ತರಿಸಿದ್ದರೂ ಏಕಾಏಕಿ 22ನೇ ತಾರೀಕು ರಾತ್ರಿ ಈ ಲಾಕ್‍ಡೌನ್‌ ಸಡಿಲಗೊಳಿಸಿರುವುದು ಸಮುದಾಯ ಪ್ರಸರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.  

‘ರಾಜ್ಯದಲ್ಲಿ ಈ ಲಾಕ್‍ಡೌನ್ ಸಡಿಲಿಕೆ ನಂತರ ಬೆಂಗಳೂರು ಮತ್ತು ಇತರೆ ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗಿದೆ. ಈ ಸಾರಿ ಫಲಿತಾಂಶ ಪ್ರಕಟವಾಗಿ ಕೋವಿಡ್-19 ಪತ್ತೆಯಾದ ಪ್ರಕರಣಗಳಲ್ಲಿ ನಮ್ಮ ರಾಜ್ಯದಲ್ಲಿ ಸಾಮುದಾಯಿಕ ಹರಡುವಿಕೆ ಆರಂಭವಾಗಿದೆ ಎಂಬ ಭಾವನೆ ಗಟ್ಟಿಗೊಳ್ಳುತ್ತಿದೆ,’ ಎಂದು  ಎಚ್‌ ಕೆ ಪಾಟೀಲ್‌ ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದ್ದಾರೆ. 

ಅದೇ ರೀತಿ ಹಳಿತಪ್ಪಿರುವ ಅರ್ಥ ವ್ಯವಸ್ಥೆಯನ್ನು ಮರಳಿ ಅಭಿವೃದ್ಧಿ ಪಥದತ್ತ ಚಲಿಸುವಂತೆ ಮಾಡಲು ಕೇವಲ ಲಾಕ್‍ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ, ನೈತಿಕ ಮನಸ್ಥಿತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜನತೆ ತಮ್ಮ ತಮ್ಮ ಉದ್ಯೋಗಗಳಲ್ಲಿ ಮರಳಿ ತೊಡಗಿ, ಎಂದಿನಂತೆ ತಮ್ಮ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದು ಕೇವಲ ಈ ಸಡಿಲಿಕೆಯಿಂದ ಸಾಧ್ಯವಾಗುವುದಿಲ್ಲ ಎಂದು ಎಚ್.ಕೆ.ಪಾಟೀಲ್‌ ಅವರು ವಿವರಿಸಿದ್ದಾರೆ. 

ರಾಜಕಾರಣಿಗಳು ಹೊಂದಿರುವ ಕಟ್ಟಡ ಸಂಕೀರ್ಣಗಳ ಬಾಡಿಗೆ ಬರಬೇಕೆಂಬ ಉದ್ದೇಶದಿಂದ ಐಟಿ-ಬಿಟಿ ಕಂಪನಿಗಳಿಗೆ ಲಾಕ್‍ಡೌನ್ ಸಡಿಲಗೊಳಿಸುವ ನಿರ್ಧಾರ ಮೇಲ್ಮಧ್ಯಮ ವರ್ಗದವರಿಗೆ ಮತ್ತು ಸಿರಿವಂತರಿಗೆ ಮಾತ್ರ ಸಹಾಯವಾಗಲಿದೆ ಎಂದು ಆರೋಪಿಸಿರುವ ಎಚ್‌ ಕೆ ಪಾಟೀಲ್‌ ಅವರು  ಇಂತಹ ನಿರ್ಣಯಗಳಿಂದ ಇತಿಹಾಸದ ಪುಟದಲ್ಲಿ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶಗಳು ಎದುರಾಗಲಿವೆ ಎಂದು  ಎಚ್ಚರಿಸಿದ್ದಾರೆ. 

ಸಂಪೂರ್ಣ ಲಾಕ್‍ಡೌನ್ ಅನ್ನು ಸಡಿಲಗೊಳಿಸಿ ಬೆಂಗಳೂರಿನಂಥ ರೆಡ್ ಅಲರ್ಟ್ ಪ್ರದೇಶದಲ್ಲಿಯೇ ಹತ್ತಾರು ಲಕ್ಷ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ  ಎಚ್‌ ಕೆ ಪಾಟೀಲ್‌  ಅವರು,  ಬೆಂಗಳೂರಿನಲ್ಲಿ ಒಂದು ಗಂಟೆಗೆ 60-70 ಸಾವಿರ ವಾಹನಗಳು ಚಲಿಸುತ್ತಿವೆ. ಐದು ಲಕ್ಷ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ರಸ್ತೆಗಿಳಿದಿವೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ. 

ರಾಷ್ಟ್ರದಲ್ಲಿ ಸೋಂಕಿತ 25 ಸಾವಿರ ಜನರಲ್ಲಿ, ಈವರೆಗೆ 5 ಸಾವಿರ ಜನರು ಮಾತ್ರ ಗುಣಮುಖರಾಗಿದ್ದಾರೆ. 1 ಸಾವಿರ ಜನರು ಸಾವಿಗೀಡಾಗಿದ್ದಾರೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಲಾಕ್‍ಡೌನ್ ಸಡಿಲಗೊಳಿಸುವ ತಮ್ಮ ತೀರ್ಮಾನ ದುರಂತಕ್ಕೆ ಆಹ್ವಾನ ನೀಡಿದಂತಾಗಿದೆ. ಆದ್ದರಿಂದ ತಕ್ಷಣವೇ ಈ ತೀರ್ಮಾನ ವಾಪಸ್ ಪಡೆಯಲು ಎಚ್‌ ಕೆ ಪಾಟೀಲ್‌ ಅವರು ಒತ್ತಾಯಿಸಿದ್ದಾರೆ.

the fil favicon

SUPPORT THE FILE

Latest News

Related Posts