ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದ ಮೇಲೆ ಈ ವಿಧೇಯಕದ ಪರವಾಗಿ ಕೆಲಸ ಮಾಡಲು ಕಾರಣವೇನು ಎಂಬುದನ್ನು ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯು ಬಹಿರಂಗಪಡಿಸಿದೆ.
ಉನ್ನತ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಲು ಸರ್ಕಾರ ಸಮರ್ಥವಾಗಿಲ್ಲ. ಹೀಗಾಗಿ ಖಾಸಗಿ ವಿವಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಇದರ ಭಾಗವಾಗಿಯೇ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಈ ಸಮತಿ ತನ್ನ ವರದಿಯಲ್ಲಿ ಹೇಳಿದೆ.
ಹಿಂದಿನ ಬಿಜೆಪಿ ಸರ್ಕಾರವು 2021ರಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಿತ್ತು. ಇದನ್ನು ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ತೀವ್ರವಾಗಿ ವಿರೋಧಿಸಿದ್ದರು. ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಈ ವಿಧೇಯಕ ಅಂಗೀಕಾರ ಪಡೆದುಕೊಂಡಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ವಿಧೇಯಕವನ್ನು ಅಥವಾ ಚಾಣಕ್ಯ ವಿವಿಗೆ ಕಡಿಮೆ ಬೆಲೆಗೆ ನೀಡಲಾಗಿದ್ದ ಬೆಲೆಬಾಳುವ 116 ಎಕರೆ 16 ಗುಂಟೆ ಜಮೀನನ್ನು ಹಿಂಪಡೆಯುವ ಬಗ್ಗೆ ತೀರ್ಮಾನಿಸಿರಲಿಲ್ಲ.
ಇದಕ್ಕೆ ಬದಲಾಗಿ, ಈ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಧೇಯಕಕ್ಕೆ 2024ರ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ತಂದಿತ್ತು. ಚಾಣಕ್ಯ ವಿಶ್ವವಿದ್ಯಾಲಯದ ಅಧಿನಿಯಮ 2021ರ (2021ರ ಕರ್ನಾಟಕ ಅಧಿನಿಯಮ ಸಂಖ್ಯೆ 37), ಪ್ರಕರಣ 26 (1) (vii)ನೇ ಪ್ರಕಾರ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಆಡಳಿತವನ್ನು ಒಳಗೊಂಡಂತೆ ವ್ಯವಸ್ಥಾಪನೆ, ಹಣಕಾಸು ಅಥವಾ ಯಾವುದೇ ಇತರೆ ವಿಶೇಷ ಕ್ಷೇತ್ರದಲ್ಲಿನ ಒಬ್ಬ ತಜ್ಞರು ಇರಲಿದ್ದಾರೆ ಎಂಬ ಅಂಶವನ್ನು ಸೇರಿಸಿತ್ತು.
ಚಾಣಕ್ಯ ವಿಶ್ವವಿದ್ಯಾಲಯದ ಅಧಿನಿಯಮ 2021ರ ವಿಧೇಯಕಕ್ಕೆ ಸಂಬಂಧಿಸಿದಂತೆ 2022ರಲ್ಲಿ ಹೊರಡಿಸಲಾಗಿದ್ದ ಎರಡು ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯು 2024ರ ಜನವರಿ 02 ರಂದು ಇಲಾಖಾಧಿಕಾರಿಗಳೊಂಧಿಗೆ ಚರ್ಚೆ ನಡೆಸಿದೆ. ಈ ಚರ್ಚೆಯ ಸಂದರ್ಭದಲ್ಲಿ ಈ ವಿಧೇಯಕವನ್ನು ಏಕೆ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿದೆ ಎಂಬ ಕುರಿತು ಇಲಾಖೆಯು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಮಟ್ಟದಲ್ಲಿ 440 ಡಿಗ್ರಿ ಕಾಲೇಜುಗಳು ಇದ್ದು, 19-20 ಖಾಸಗಿ ವಿಶ್ವವಿದ್ಯಾಲಯಗಳು, 19 ಇಂಜಿನಿಯರಿಂಗ್ ಕಾಲೇಜುಗಳಿವೆ. ಐದು ಸಾವಿರ ಕೋಟಿ ಸೀಮಿತ ಬಜೆಟ್‌ನಲ್ಲಿ ನಾಲ್ಕು ಸಾವಿರ ಕೋಟಿ ರು.ಗಳು ವೇತನಕ್ಕೆ ಹೋಗುತ್ತದೆ, ಉಳಿದ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ದೊಡ್ಡ ಪ್ರಮಾಣದಲ್ಲಿ ಮೂಲ ಸೌಲಭ್ಯಗಳು, ಲ್ಯಾಬ್‌ಗಳು, ರೀಸರ್ಚ್, ಸೆಂಟರ್‌ಗಳನ್ನು ಮಂಜೂರು ಮಾಡುವುದು ಸರ್ಕಾರದ ಮಟ್ಟದಲ್ಲಿ ತೊಂದರೆಯಾಗುತ್ತಿರುವುದರಿಂದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರೋತ್ಸಾಹ ಮಾಡುವಂತಹ ಪಾಲಿಸಿಯನ್ನು ಸರ್ಕಾರ ಅಳವಡಿಸಿಕೊಂಡಿದೆ ಎಂದು ಇಲಾಖಾಧಿಕಾರಿಗಳು ಈ ವಿಧೇಯಕವನ್ನು ಸಮರ್ಥಿಸಿಕೊಂಡು ಲಿಖಿತವಾಗಿ ಮತ್ತು ಮೌಖಿಕವಾಗಿ ಮಾಹಿತಿ ನೀಡಿದ್ದರು.
ಇಲಾಖೆಯ ಅಧಿಕಾರಿಗಳು ನೀಡಿದ್ದ ಈ ವಿವರಣೆಗಳನ್ನು ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯು ಒಪ್ಪಿ, ಈ ಅಧಿಸೂಚನೆಗಳನ್ನು ಅಂಗೀಕರಿಸಿತ್ತು ಎಂಬುದು ಸಮಿತಿಯು ವಿಧಾನ ಮಂಡಲದಲ್ಲಿ ಮಂಡಿಸಿದ್ದ ಐವತ್ಮೂರನೇ ವರದಿಯಿಂದ ಬಹಿರಂಗಗೊಂಡಿದೆ.
ಶಾಸಕ ಬಿ ಶಿವಣ್ಣ ನೇತೃತ್ವದ ಈ ಸಮಿತಿಯು ಅಧಿಸೂಚನೆಗಳಿಗೆ ಒಪ್ಪಿಗೆ ನೀಡುತ್ತಿದ್ದಂತೆಯೇ ಇಲಾಖೆಯು ಸಣ್ಣ ತಿದ್ದುಪಡಿಯೊಂದನ್ನು ತಂದು, ಈ ಮಸೂದೆಗೆ ಸಂಬಂಧಿಸಿದ ವಿವಾದಕ್ಕೆ ತೆರೆ ಎಳೆದಿತ್ತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಉಭಯ ಸದನಗಳಲ್ಲಿಯೂ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು, ಅದು ಅಂಗೀಕಾರಗೊಂಡಿದೆ.
2021ರಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕವನ್ನು ವಿಧಾನಸಭೆಯಲ್ಲಿ ಆಗಿನ ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಮಂಡಿಸಿದ್ದರು. ಆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್ ಶಾಸಕರೆಲ್ಲರೂ ಒಕ್ಕೊರಲಿನಿಂದ ಈ ವಿಧೇಯಕವನ್ನು ವಿರೋಧಿಸಿದ್ದರು.
ಚಾಣಕ್ಯ ವಿವಿ ಅಧಿನಿಯಮಕ್ಕೆ ತಿದ್ದುಪಡಿ ಪ್ರಸ್ತಾವ; ಅಂದು ವಿರೋಧ, ಇಂದು ಸಮ್ಮತಿಯೇ?
116 ಎಕರೆ 16 ಗುಂಟೆಯನ್ನು 50 ಕೋಟಿ ರುಪಾಯಿಗೆ ಕೆಐಎಡಿಬಿಯವರು ಸ್ವಾಧೀನ ಮಾಡಿರುವ ಜಮೀನನ್ನು ಕೊಟ್ಟಿದ್ದಾರೆ. ಏಕೆ ಕೊಟ್ಟೀರಿ? ಇದೊಂದು ಖಾಸಗಿ ವಿಶ್ವವಿದ್ಯಾಲಯ. ಏನು ಸರ್ಕಾರಿ ವಿಶ್ವವಿದ್ಯಾಲಯವೇ? ಖಾಸಗಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಉದ್ಧೇಶವಾದರೂ ಏನು? what is the purpose of this university ? No it is impossible ಈ ಬಿಲ್‌ನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಗಟ್ಟಿ ದನಿಯಲ್ಲಿ ವಿರೋಧಿಸಿದ್ದರು.
ಚಾಣಕ್ಯ ವಿವಿಗೆ 116 ಎಕರೆ ಜಮೀನು; ಪ್ರತಿಪಕ್ಷದಲ್ಲಿದ್ದಾಗ ವಿರೋಧ, ಅಧಿಕಾರದಲ್ಲಿರುವಾಗ ಮೌನ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿರುವ ಅಂದಾಜು 300 ಕೋಟಿ ರು. ಬೆಲೆಬಾಳುವ 116 ಎಕರೆ 16 ಗುಂಟೆ ಜಮೀನನ್ನು ಹಿಂಪಡೆಯುವುದರ ಬಗ್ಗೆ ಇದುವರೆಗೂ ಸರ್ಕಾರ ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಬದಲಾಗಿ, ಈ ಬಗ್ಗೆ ʻಯಾವ ಕ್ರಮವೂ ಇಲ್ಲʼ ಎಂಬ ಪರೋಕ್ಷ ಸೂಚನೆಯನ್ನು ನೀಡಿದೆ.
ಚಾಣಕ್ಯ ವಿವಿಗೆ 116 ಎಕರೆ ಬಳುವಳಿ; ಆರೆಸ್ಸೆಸ್ ಓಲೈಸಲು ಇಲಾಖೆ ಟಿಪ್ಪಣಿ ಬದಿಗಿರಿಸಿತ್ತೇ?
ಸಂಘಪರಿವಾರದ ಸಂಘಟನೆಗಳಿಗೆ ಮತ್ತು ಚಾಣಕ್ಯ ವಿವಿಗೆ ಬಿಜೆಪಿ ಸರ್ಕಾರವು ನಿಯಮಗಳನ್ನು ಉಲ್ಲಂಘಿಸಿ ಮತ್ತು ಇಲಾಖೆಗಳ ಸಲಹೆಗಳನ್ನು ಬದಿಗೆ ತಳ್ಳಿ ಭೂಮಿ ನೀಡಿರುವ ಕುರಿತು ʻದಿ ಫೈಲ್ʼ ಸರಣಿ ವರದಿಗಳನ್ನು ಪ್ರಕಟಿಸಿತ್ತು.