ಬೆಂಗಳೂರು; ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶಕ್ಕೆ ದೇವನಹಳ್ಳಿಯ ಹರಳೂರು ಲೇಔಟ್ ಬಳಿ ಎಕರೆಯೊಂದಕ್ಕೆ 1.61 ಕೋಟಿ ರು.ಗೆ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ ಹಂಚಿಕೆ ಮಾಡಲು ಅನುಮೋದಿಸಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಟಿಪ್ಪಣಿ ಕಂಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರವು ಬದಿಗಿರಿಸಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೆ ಸಗಟು ಹಂಚಿಕೆ ಹೆಸರಿನಲ್ಲಿ 116.16 ಎಕರೆಯನ್ನು 50 ಕೋಟಿಗೆ ಹಂಚಿಕೆ ಮಾಡಲು ನಿರ್ಣಯಿಸಿದ್ದ ಸಚಿವ ಸಂಪುಟವು ಪ್ರತಿ ಎಕರೆಗೆ 1.18 ಕೋಟಿ ರು. ಕಡಿಮೆ ಮೊತ್ತಕ್ಕೆ ಜಮೀನನ್ನು ಹಂಚಿಕೆ ಮಾಡಿದಂತಾಗಿದೆ. ಮತ್ತೊಂದು ವಿಶೇಷವೆಂದರೆ ಕೋವಿಡ್ 2ನೇ ಅಲೆ ತೀವ್ರವಾಗಿದ್ದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗಲೇ ಸೆಸ್ ಸಂಸ್ಥೆಗೆ ಅತ್ಯಂತ ಬೆಲೆ ಬಾಳುವ ಜಮೀನು ಹಂಚಿಕೆಯಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಬೆಂಗಳೂರು ಮಹಾನಗರದ ಸಂಘ ಚಾಲಕ್ ಮತ್ತು ಎಬಿವಿಪಿ ರಾಷ್ಟ್ರೀಯ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದ ಎಂ ಕೆ ಶ್ರೀಧರ್ ಅವರು ಅಧ್ಯಕ್ಷರಾಗಿರುವ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಯು ಸ್ಥಾಪಿಸಲು ಹೊರಟಿರುವ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಜಮೀನು ಹಂಚಿಕೆ ಮಾಡಿರುವ ಸಂಬಂಧ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದಿದೆ.
ಸೆಸ್ ಸಂಸ್ಥೆಯು ಜಮೀನು ಮಂಜೂರು ಮಾಡಿಸಿಕೊಳ್ಳುವ ಸಲುವಾಗಿ 2021ರ ಮಾರ್ಚ್ 25ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ಯಡಿಯೂರಪ್ಪ ಅವರು ‘ಸೆಸ್ ಸಂಸ್ಥೆಗೆ ಜಮೀನು ಮಂಜೂರು ಮಾಡಲು ತ್ವರಿತವಾಗಿ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ತರಲು ಅಗತ್ಯ ಕ್ರಮ ವಹಿಸಲು ಸೂಚಿಸಿದೆ,’ ಎಂದು ಸೆಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ರೆಡ್ಡಿ ಅವರು ಬರೆದಿದ್ದ ಪತ್ರದ ಮೇಲೆಯೇ ಟಿಪ್ಪಣಿ ಹಾಕಿದ್ದರು. ಆ ನಂತರ ಈ ಪತ್ರವನ್ನಾಧರಿಸಿ ಅತ್ಯಂತ ಕ್ಷಿಪ್ರಗತಿಯಲ್ಲಿ ಮೂರ್ನಾಲ್ಕು ತಿಂಗಳೊಳಗೇ ಜಮೀನು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
137 ಕೋಟಿ ರು. ನಷ್ಟ?
ಇಲಾಖೆ ಅನುಮೋದಿಸಿದ್ದಂತೆ ಎಕರೆಗೆ 1.16 ಕೋಟಿಯಂತೆ ಹಂಚಿಕೆ ಮಾಡಿದ್ದರೆ 187.01 ಕೋಟಿ ರು. ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಆದಾಯ ಸಂದಾಯವಾಗುತ್ತಿತ್ತು. ಆದರೆ ಇದನ್ನು ಬದಿಗಿರಿಸಿರುವ ಸಚಿವ ಸಂಪುಟವು 116.16 ಎಕರೆಗೆ ಕೇವಲ 50 ಕೋಟಿಯಷ್ಟೇ ವಿಧಿಸಿರುವುದು ಮಂಡಳಿಗೆ 137 ಕೋಟಿ ರು. ನಷ್ಟವಾಗಿದೆ.
ಹಾಗೆಯೇ ಸಗಟು ಹಂಚಿಕೆ ಹೆಸರಿನಲ್ಲಿ ಪ್ರತಿ ಎಕರೆಗೆ 43 ಲಕ್ಷಕ್ಕೆ ಹಂಚಿಕೆ ಮಾಡಿದಂತಾಗಿದೆ. ಕೆಐಎಡಿಬಿ ಭೂಮಿಯನ್ನು ಹಂಚಿಕೆ ವೆಚ್ಚದಲ್ಲಿ ಹಂಚಿಕೆಗೆ ನಿಗದಿಪಡಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಎಕರೆಗೆ 1.18 ಕೋಟಿ ರು. ಕಡಿಮೆ ಮೊತ್ತಕ್ಕೆ ಹಂಚಿಕೆ ಮಾಡಿದಂತಾಗಿದೆ. ಅತ್ಯಂತ ಬೆಲೆ ಬಾಳುವ ಜಮೀನನ್ನು ಕೇವಲ ಚಿಲ್ಲರೆ ಬೆಲೆಗೆ ಜಮೀನು ಹಂಚಿಕೆ ಮಾಡುವ ಮೂಲಕ ಕೆಐಎಡಿಬಿ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. .
ಅದೇ ರೀತಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪ್ರಸ್ತಾಪಿಸಿದ್ದ 116.16 ಎಕರೆ ಸಂಸ್ಥೆಗೆ ಅವಶ್ಯಕತೆ ಇದೆಯೇ ಅಥವಾ ಕಡಿಮೆಗೊಳಿಸಬಹುದೇ ಎಂಬ ಬಗ್ಗೆ ಮರು ಪರಿಶೀಲಿಸಬೇಕು. ಹಂಚಿಕೆಗೆ ನಿಗದಿಪಡಿಸಿದ್ದ ದರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ನಷ್ಟವುಂಟಾಗುವುದಿಲ್ಲವೇ ಎಂದು ಆರ್ಥಿಕ ಇಲಾಖೆಯು ಪ್ರಶ್ನಿಸಿತ್ತು. ‘ಕೆಐಎಡಿಬಿಗೆ ಯಾವುದೇ ಆರ್ಥಿಕ ನಷ್ಟವಾಗದಂತೆ ಹೈಟೆಕ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಹಂತ-2 ಹರಳೂರು ದೇವನಹಳ್ಳಿ ತಾಲೂಕಿನಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಬಲ್ಕ್ ಲ್ಯಾಂಡ್ ಆಗಿ ಹಂಚಿಕೆ ಮಾಡಬಹುದು,’ ಎಂದು ಪ್ರಸ್ತಾಪಿಸಿತ್ತು.
ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇದಕ್ಕೆ ಸಮರ್ಥನೀಯ ಕಾರಣಗಳನ್ನು ಒದಗಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ‘ಸಿಇಎಸ್‌ಎಸ್ ಸಂಸ್ಥೆಯು ಒಂದು ಲಾಭರಹಿತ ಸಂಸ್ಥೆಯಾಗಿದ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಕೆಐಎಡಿಬಿ ಭೂಮಿಯನ್ನು ಹಂಚಿಕೆ ವೆಚ್ಚದಲ್ಲಿ ಹಂಚಿಕೆ ಮಾಡಿದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆಯು ಕಾರ್ಯಸಾಧ್ಯವಾಗುವುದಿಲ್ಲ,’ ಎಂಬ ವಾದವನ್ನು ಮುಂದೊಡ್ಡಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಬಲ್ಕ್ ಲ್ಯಾಂಡ್ ಹೆಸರಿನಲ್ಲಿ ಪ್ರತಿ ಎಕರೆಗೆ ಕೇವಲ 43 ಲಕ್ಷಕ್ಕೆ ಮಾರಾಟ ಮಾಡಿ ಮಂಡಳಿಗೆ ನಷ್ಟದ ಹೊರೆ ಹೊರಿಸಲಾಗಿದೆ.
ವಿಶೇಷವೆಂದರೆ ಇದೇ ಇಲಾಖೆಯು ಪ್ರತಿ ಎಕರೆಗೆ 1.61 ಕೋಟಿಗೆ ಹಂಚಿಕೆ ಮಾಡಲು ಸಂಪುಟದ ಅನುಮೋದನೆ ಕೋರಿತ್ತು. ಬಲ್ಕ್ ಲ್ಯಾಂಡ್ ಹೆಸರಿನಲ್ಲಿ ಒಟ್ಟಾರೆ 116.16 ಎಕರೆಯನ್ನು ಕೇವಲ 50 ಕೋಟಿ ರು.ಗೆ ಹಂಚಿಕೆ ಮಾಡಲು ಸಂಪುಟ ನಿರ್ಧರಿಸಿದರೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತಕರಾರು ಎತ್ತಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಇಲಾಖೆ ಟಿಪ್ಪಣಿ ಬದಿಗಿರಿಸಿದ ಸಂಪುಟ
‘ಹೈಟೆಕ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ , ಹಂತ-2ರ ಕೈಗಾರಿಕೆ ಪ್ರದೇಶದ ಹರಳೂರು ಲೇ ಔಟ್ ಪಕ್ಕದಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಎನ್ ಹೆಚ್ 207 (ಯಾವುದೇ ಮೂಲಸೌಕರ್ಯಗಳಿಲ್ಲದೆ)ನಿಂದ ಪ್ರತ್ಯೇಕ ರಸ್ತೆಯಿರುವ ಬಲ್ಕ್ ಲ್ಯಾಂಡ್‌ನ್ನು ಸ್ವಾಧೀನ ವೆಚ್ಚ, ಮಂಡಳಿಯ ಸೇವಾ ಶುಲ್ಕ ಮತ್ತು ಬಡ್ಡಿಯನ್ನೊಳಗೊಂಡಂತೆ ಪ್ರತಿ ಎಕರೆಗೆ 1.61 ಕೋಟಿಗೆ ಹಂಚಿಕೆ ಮಾಡಲು,’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ರಾಜ್‌ಕುಮಾರ್ ಖತ್ರಿ ಅವರು ಸಂಪುಟದ ಅನುಮೋದನೆಗೆ ಮಂಡಿಸಿದ್ದರು ಎಂಬುದು ಸಂಪುಟದ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್‌ಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಜಮೀನು ಮಂಜೂರು ಮಾಡುವ ಸಂಬಂಧ 2021ರ ಏಪ್ರಿಲ್ 26ರಂದು ನಡೆದಿದ್ದ ಸಚಿವ ಸಂಫುಟ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಂಡಿಸಿತ್ತು. ಇದಕ್ಕೆ ಅಂದಿನ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಅನುಮೋದಿಸಿದ್ದರು.
ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದ ನಂತರ ‘ ಹರಳೂರು ಲೇ ಔಟ್ ಪಕ್ಕದಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಎನ್ ಎಚ್ 207ನಿಂದ ಪ್ರತ್ಯೇಕ ರಸ್ತೆಯಿರುವ ಬಲ್ಕ್ ಲ್ಯಾಂಡ್‌ನ್ನು ಸ್ವಾಧೀನ ವೆಚ್ಚ, ಮಂಡಳಿಯ ಸೇವಾ ಶುಲ್ಕ ಮತ್ತು ಬಡ್ಡಿಯನ್ನೊಳಗೊಂಡಂತೆ ಒಟ್ಟಾರೆಯಾಗಿ 50.00 ಕೋಟಿಗಳನ್ನು ವಿಧಿಸಿ ಮಂಜೂರು ಮಾಡಲು ಸಚಿವ ಸಂಪುಟವು ನಿರ್ಧರಿಸಿತು,’ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟ ನಿರ್ಣಯದ ಪ್ರತಿಗೆ ಸಹಿ ಹಾಕಿರುವುದು ದಾಖಲೆಯಿಂದ ಗೊತ್ತಾಗಿದೆ.
ಸಂಪುಟವು ಅನುಮೋದಿಸಿದ ನಂತರ ಎರಡೇ ದಿನದಲ್ಲಿ ಅಂದರೆ 2021ರ ಏಪ್ರಿಲ್ 28ರಂದು ನಡವಳಿಯನ್ನು ದಾಖಲಿಸಿ ಆದೇಶವನ್ನೂ ಹೊರಡಿಸಿತ್ತು. ಆದೇಶ ಹೊರಬಿದ್ದ ಒಂದೇ ತಿಂಗಳ ಅಂತರದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು 2021ರ ಮೇ 5ರಂದು ಹಂಚಿಕೆ ಪತ್ರವನ್ನು ಸಂಸ್ಥೆಗೆ ನೀಡಿತ್ತು.
ಲೀಸ್ ಬದಲು ಕ್ರಯಪತ್ರ
ಅಲ್ಲದೆ ಕೆಐಎಡಿಬಿ ಜಮೀನನ್ನು 99 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ತೆಗೆದುಕೊಳ್ಳಲು ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ಅವರು ಆರಂಭದಲ್ಲಿ ಒಪ್ಪಿಗೆ ಸೂಚಿಸಿತ್ತು ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿಗಳಾಗಿದ್ದ ಗಿರೀಶ್ ಹೊಸೂರ್ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಗಮನಕ್ಕೆ ತಂದಿದ್ದರು. ತರುವಾಯ ಇದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೂ ತರಲಾಗಿತ್ತು.
ಆದರೆ ಇದೇ ಸಂಸ್ಥೆಯು 99 ವರ್ಷಗಳ ಲೀಸ್ ಕರಾರಿನ ಬದಲಾಗಿ ಶುದ್ಧ ಕ್ರಯಪತ್ರ ಮಾಡಿಕೊಡಲು 2021ರ ಜೂನ್ 10ರಂದು ಕೋರಿತ್ತು. ಈ ಮನವಿ ಪತ್ರದ ಮೇಲೆ ಪ್ರಸ್ತಾವನೆಯನ್ನು ಸಿ ಎಸ್ ಕಮಿಟಿ ಮುಂದೆ ಮಂಡಿಸಿ ಲೀಸ್ ಅವಧಿ ಬಗ್ಗೆ ಕ್ರಮ ಕೈಗೊಳ್ಳುವುದು ಎಂದು ಯಡಿಯೂರಪ್ಪ ಅವರು ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರಂತೆ ಜಾಗತಿಕ ಗುಣಮಟ್ಟಗಳನ್ನು ಅನ್ವಯಿಸಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದ ಸೆಂಟರ್ ಫಾರ್ ಎಜುಕೇಷನಲ್ ಅಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಯು ವಿಶ್ವವಿದ್ಯಾಲಯದ ಮೂಲಸೌಲಭ್ಯ ಸೇರಿದಂತೆ ಒಟ್ಟಾರೆ 600 ಕೋಟಿ ರು.ಗಳನ್ನು ಹೂಡಿಕೆ ಮಾಡಲಿದೆ ಎಂದು ತಿಳಿಸಿತ್ತು.
ಜಾಗತಿಕ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಉದ್ದೇಶ ಇರುವುದರಿಂದ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿದರೆ ವಿಶ್ವವಿದ್ಯಾಲಯದ ಈ ಎಲ್ಲಾ ಚಟುವಟಿಕೆಗಳಿಗೆ ತೊಡಕಾಗಲಿದೆ ಎಂದು ಪ್ರತಿಪಾದಿಸಿದ್ದ ಸಂಸ್ಥೆಯು ತಕ್ಷಣವೇ ಶುದ್ಧ ಕ್ರಯ (ಸೇಲ್ ಡೀಡ್) ಪತ್ರ ಮಾಡಿಕೊಡಬೇಕು ಎಂದು ಮತ್ತೊಂದು ಮನವಿ ಸಲ್ಲಿಸಿತ್ತು ಎಂದು ಸಂಸ್ಥೆ ಕಾರ್ಯದರ್ಶಿ ನಾಗರಾಜ ರೆಡ್ಡಿ ಅವರು 2021ರ ಜೂನ್ 14ರಂದು ಸಲ್ಲಿಸಿದ್ದ ಮನವಿ ಪತ್ರದಿಂದ ತಿಳಿದು ಬಂದಿದೆ.
ರೈತರಿಂದ ಪ್ರತಿ ಎಕರೆಗೆ 1.5 ಕೋಟಿ ಈ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಈ ಜಮೀನನ್ನು 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದ್ದಾರೆ. ರೈತರಿಗೆ 175 ಕೋಟಿ ಪರಿಹಾರ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದನ್ನು ಸ್ಮರಿಸಬಹುದು.
ಕರ್ನಾಟಕ ಜ್ಞಾನ ಆಯೋಗದ ಸದಸ್ಯರಾಗಿದ್ದ ಡಾ ಎಂ ಕೆ ಶ್ರೀಧರ್ ಅವರು ಸೆಸ್ ಸಂಸ್ಥೆಗೆ ಅಧ್ಯಕ್ಷರಾಗಿದ್ದರೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ವಿಶೇಷ ಪ್ರತಿನಿಧಿ ಡಾ ಟಿ ವಿ ರಾಜು ಅವರು ಉಪಾಧ್ಯಕ್ಷ ಮತ್ತು ನಾಗರಾಜರೆಡ್ಡಿ ಕಾರ್ಯದರ್ಶಿಯಾಗಿದ್ದಾರೆ. ಅದೇ ರೀತಿ ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ ಎಸ್ ಆರ್ ಕೇಶವ, ನಿಮ್ಹಾನ್ಸ್‌ನ ಸಹ ಪ್ರಾಧ್ಯಾಪಕ ಡಾ ಪಿ ಎನ್ ರವೀಂದ್ರ, ಎಂ ಎಸ್ ರಾಮಯ್ಯ ಇನ್ಸಿಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ ಮಾನಸ ನಾಗಭೂಷಣ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ ಆರ್ ರಾಜೇಶ್, ನಿಮ್ಹಾನ್ಸ್‌ನ ಆಯುರ್ವೇದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಕಿಶೋರ್‌ಕುಮಾರ್ ಆರ್ ಅವರು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಾಧ್ಯಾಪಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಹೊರರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರೂ ಈ ಸಂಸ್ಥೆಯ ಸದಸ್ಯರಾಗಿದ್ದಾರೆ.