ಬೆಂಗಳೂರು : ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ, ಈವರೆಗೆ ರಾಜ್ಯ ಸರ್ಕಾರ ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ವಯ 17,049.21ಕೋಟಿ ರು., ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 13, 488.45ಕೋಟಿ ರು. ಸೇರಿ ಒಟ್ಟು 30,537.66ಕೋಟಿ ರು.ಗಳನ್ನು ವೆಚ್ಚಮಾಡಿದ್ದರೂ ಉತ್ತರ ಕರ್ನಾಟಕವು ನಿರ್ದಿಷ್ಟ ಪಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.
ಡಾ. ಡಿ.ಎಂ. ನಂಜುಂಡಪ್ಪ ವರದಿಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರವು 2007-08ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಗೆ 2007-08 ರಿಂದ 2024-25ರವರೆಗೆ 48,866.00ಕೋಟಿ ರು.ಗಳನ್ನು ಹಂಚಿಕೆ ಮಾಡಿತ್ತು. 40,097.00ಕೋಟಿ ರು. ಬಿಡುಗಡೆ ಕೂಡ ಆಗಿತ್ತು. ಈ ಅನುದಾನದಲ್ಲಿ ಕಲಬುರಗಿ ವಿಭಾಗಕ್ಕೆ 11,229.51ಕೋಟಿ ರು.ಗಳನ್ನು, ಬೆಳಗಾವಿ ವಿಭಾಗಕ್ಕೆ 5,819.70ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ.
ಆದರೂ ನಂಜುಂಡಪ್ಪ ವರದಿಯಲ್ಲಿ ಹೇಳಿರುವ ಉತ್ತರ ಕರ್ನಾಟಕದ ಹಿಂದುಳಿದ ಒಟ್ಟಾರೆ 89 ತಾಲ್ಲೂಕುಗಳಲ್ಲಿ 29 ತಾಲ್ಲೂಕುಗಳು ಮಾತ್ರ ಅಭಿವೃದ್ಧಿ ಹೊಂದಿದ್ದು, ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದಲ್ಲಿ ಉತ್ತರ ಕರ್ನಾಟಕವು ನಿರ್ದಿಷ್ಟ ಪಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸರ್ಕಾರವು ವಿಧಾನ ಪರಿಷತ್ತಿಗೆ ತಿಳಿಸಿದೆ.
ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ. ನಾಗರಾಜು ಇತರ ನಿಯಮ 330ರಡಿ ನೀಡಿರುವ ಗಮನ ಸೆಳೆಯುವ ಸೂಚನೆಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.
ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ 2013ರಲ್ಲಿ ʻಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿʼಯನ್ನು ರಚಿಸಲಾಗಿದ್ದು, 2013-14 ರಿಂದ 2024- 25ರವರೆಗೆ 19,878.33ಕೋಟಿ ರು.ಗಳನ್ನು ಈ ಮಂಡಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ 16,228.80ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈವರೆಗೆ 13,488.45ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಚಿವರು ಈ ಉತ್ತರದಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಸೌಲತ್ತುಗಳನ್ನು ಒದಗಿಸಲು, ರಸ್ತೆ ಮತ್ತು ಸೇತುವೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು, ಸಾಮಾಜಿಕ ಕ್ಷೇತ್ರಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ್ ಮತ್ತು ವಸತಿ ನಿಲಯಗಳ ನಿರ್ಮಾಣ, ಕೈಗಾರಿಕಾ ವಲಯಗಳ ಅಭಿವೃದ್ಧಿ ಇ ಮೂಲಕ ಆರ್ಥಿಕ ವಿಕಾಸ ಮತ್ತು ಕೈಗಾರಿಕೀಕರಣ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿ, ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರಾದೇಶಿಕ ಅಸಮತೋಲನೆಯನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.
ಪ್ರಾದೇಶಿಕ ಅಸಮತೋಲನೆಯನ್ನು ನಿವಾರಣೆ ಮಾಡಲು ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ 5,000 ಕೋಟಿ ರು.ಗಳನ್ನು ನೀಡುವುದರ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಪೂರಕವಾದಂತಹ ಎಲ್ಲಾ ಸಹಕಾರವನ್ನು ನೀಡುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಡಾ. ಡಿ.ಎಂ ನಂಜುಂಡಪ್ಪ ವರದಿಯ ಸೂಚ್ಯಂಕಗಳು 22 ವರ್ಷಗಳಷ್ಟು ಹಳೆಯದಾಗಿರುವುದರಿಂದ ಹಾಗೂ ಕೆಲವು ಸೂಚ್ಯಂಕಗಳು ಮಹತ್ವ ಕಳೆದುಕೊಂಡಿರುವುದರಿಂದ ಹೊಸ ಅಭಿವೃದ್ಧಿ ಸೂಚ್ಯಾಂಕಗಳನ್ನು ಕಂಡು ಹಿಡಿಯಲು ಆರ್ಥಿಕ ತಜ್ಞ ಪ್ರೊ. ಎಂ ಗೋವಿಂದರಾವ್ ಅಧ್ಯಕ್ಷತೆಯಲ್ಲಿ ʻಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿʼಯನ್ನು ರಚಿಸಲಾಗಿದೆ. ಈ ಸಮಿತಿಯು ನೀಡುವ ಶಿಫಾರಸ್ಸುಗಳನ್ನು ಆಧರಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೇಕಾದ ಪೂರಕ ಯೋಜನೆಗಳನ್ನು ರೂಪಿಸಲು ಕ್ರಮವಹಿಸಲಾಗುತ್ತದೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 2000 ರಲ್ಲಿ ಡಾ. ಡಿ.ಎಂ ನಂಜುಂಡಪ್ಪ ರವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಜೂನ್-2002ರಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ವಯ ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿರುವಿಕೆಯನ್ನು ಗುರುತಿಸಿ ಇವುಗಳಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುಗಳು 39, ಅತೀ ಹಿಂದುಳಿದ ತಾಲ್ಲೂಕುಗಳು 40, ಹಿಂದುಳಿದ ತಾಲ್ಲೂಕುಗಳು 35 ಎಂದು ವರದಿಯಲ್ಲಿ ಹೇಳಿತ್ತು.
ಈ ವರದಿ ಪುಕಾರ ಸಾಪೇಕ್ಷವಾಗಿ ಉತ್ತರ ಕರ್ನಾಟಕದಲ್ಲಿ 61 ತಾಲ್ಲೂಕುಗಳು ಮುಂದುವರೆದಿದೆ ಎಂದು ಹೇಳಲಾಗಿದೆ. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಅತ್ಯಂತ ಹಿಂದುಳಿದ 22 ತಾಲ್ಲೂಕುಗಳಿದ್ದು, ಅತೀ ಹಿಂದುಳಿದ 05 ತಾಲ್ಲೂಕುಗಳಿದ್ದು ಹಾಗೂ ಹಿಂದುಳಿದ 02 ತಾಲ್ಲೂಕುಗಳಾಗಿರುತ್ತವೆ. ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ 03 ತಾಲ್ಲೂಕುಗಳು ಇವೆ. ಬೆಳಗಾವಿ ವಿಭಾಗದಲ್ಲಿ ಅತ್ಯಂತ ಹಿಂದುಳಿದ 05 ತಾಲ್ಲೂಕುಗಳಿದ್ದು, ಅತೀ ಹಿಂದುಳಿದ 12 ತಾಲ್ಲೂಕುಗಳಿದ್ದು ಹಾಗೂ ಹಿಂದುಳಿದ 14 ತಾಲ್ಲೂಕುಗಳಾಗಿರುತ್ತವೆ. ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ 26 ತಾಲ್ಲೂಕುಗಳು ಇರುತ್ತವೆ ಎಂದು ವರದಿ ಹೇಳಿತ್ತು.
ಒಟ್ಟಾರೆ ಉತ್ತರ ಕರ್ನಾಟಕದಲ್ಲಿ 27 ಅತ್ಯಂತ ಹಿಂದುಳಿದ ತಾಲ್ಲೂಕುಗಳು, 17 ಅತೀ ಹಿಂದುಳಿದ ತಾಲ್ಲೂಕುಗಳು, 16 ಹಿಂದುಳಿದ ತಾಲ್ಲೂಕುಗಳಿದ್ದು, 29 ತಾಲ್ಲೂಕುಗಳು ಅಭಿವೃದ್ಧಿ ಹೊಂದಿವೆ ಎಂದು ಡಾ. ಡಿ.ಎಂ ನಂಜುಂಡಪ್ಪ ವರದಿ ಹೇಳಿತ್ತು.
24 ವರ್ಷದಲ್ಲಿ 48,791.49 ಕೋಟಿ ರು ಹಂಚಿಕೆ; ಇನ್ನೂ ನಿವಾರಣೆಯಾಗದ ಪ್ರಾದೇಶಿಕ ಅಸಮತೋಲನ
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು 2007-08ರಿಂದ 2024-25ನೇ ಸಾಲಿನವರೆಗೆ ಅಂದರೆ 24 ವರ್ಷಗಳಲ್ಲಿ ಬರೋಬ್ಬರಿ 48,791.49 ಕೋಟಿ ರು ಹಂಚಿಕೆಯಾಗಿದೆ. ಆದರೆ ಇದುವರೆಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ ಎಂದು 2024ರ ಡಿಸೆಂಬರ್‌ನಲ್ಲಿ ಯೋಜನೆ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಕುರಿತು ʻದಿ ಫೈಲ್ʼ ವಿವರವಾಗಿ ವರದಿ ಪ್ರಕಟಿಸಿತ್ತು.