ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ; ಬಳಕೆಯಾಗದ ಪೂರ್ಣ ಅನುದಾನ, 244.81 ಕೋಟಿ ಉಳಿಕೆ

ಬೆಂಗಳೂರು;  ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಸೇರಿದಂತೆ 12 ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ಮಾಸಿಕ ವೇತನ ವಿತರಿಸಿಲ್ಲ. ಕಳೆದ 3 ವರ್ಷದಲ್ಲಿ ಹಂಚಿಕೆ ಮಾಡಿದ್ದ ಒಟ್ಟು ಮೊತ್ತದಲ್ಲಿ 244.81 ಕೋಟಿ  ರು ಉಳಿಕೆ ಮಾಡಿದೆ.

 

ಅದೇ ರೀತಿ ಹಿರಿಯ ನಾಗರೀಕರು, ಅಂಗವಿಕಲರು ಮತ್ತು ವಿಧವೆಯರಿಗೆ ಈಗಿನ ಮಾಸಾಶನ ಮೊತ್ತ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಷದ ಹಿಂದೆಯೇ  ಹೇಳಿಕೆ ನೀಡಿದ್ದರು. ಆದರೀಗ ಅಂತಹ  ಯಾವುದೇ ಪ್ರಸ್ತಾವವು ಇಲ್ಲ ಎಂದು ಸರ್ಕಾರವು ಉತ್ತರಿಸಿದೆ.

 

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನದಲ್ಲಿ ಪಿಂಚಣಿ ಯೋಜನೆಗಳ ಕುರಿತು ಚರ್ಚಿಸಿದ್ದರು. ಅಲ್ಲದೇ ಯಾವುದೇ ಕಾರಣಕ್ಕೂ ಪಿಂಚಣಿ ಹಣವನ್ನು ಉಳಿಕೆ ಮಾಡಕೂಡದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆ ನಡುವೆಯೇ ಕಳೆದ ವರ್ಷಗಳಲ್ಲಿ 244.81 ಕೋಟಿ ರು ಉಳಿಕೆ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರ್‍‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಖರ್ಚು ವೆಚ್ಚ ಮತ್ತು ಉಳಿಕೆ ಆಗಿರುವ ಮೊತ್ತದ  ಮಾಹಿತಿ ಒದಗಿಸಿದ್ಧಾರೆ.

 

 

ಸಾಮಾಜಿಕ ಭದ್ರತೆ ಅಡಿಯಲ್ಲಿ ಮಾಸಾಶನ ಯೋಜನೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟಾರೆ ಅನುದಾನದಲ್ಲಿ 30,243.8 ಕೋಟಿ ರು ಖರ್ಚಾಗಿದೆ. ಈ ಮೂರು ವರ್ಷದಲ್ಲಿ 244.81 ಕೋಟಿ ರು ಮೊತ್ತವನ್ನು ಖರ್ಚು ಮಾಡದೇ ಉಳಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರ ಒದಗಿಸಿರುವುದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಈ ಹಣವು ಖರ್ಚಾಗಿಲ್ಲ ಎಂಬ ಮಾಹಿತಿಯನ್ನು ಉತ್ತರದಲ್ಲಿ ಒದಗಿಸಿಲ್ಲ.

 

ವೃದ್ಧಾಪ್ಯ ವೇತನದಡಿಯಲ್ಲಿ 60ರಿಂದ 64 ವರ್ಷ ವಯಸ್ಸಿನವರಿಗೆ ತಿಂಗಳೀಗೆ 600 ರು ಮತ್ತು 65 ವರ್ಷ ಮೇಲ್ಪಟ್ಟವರಿಗೆ 1,200 ರು ಪಿಂಚಣಿ ನೀಡುತ್ತಿದೆ. ಕಳೆದ 3 ವರ್ಷದಲ್ಲಿ ವೃದ್ಧಾಪ್ಯ ವೇತನಕ್ಕೆ 6,894.06 ಕೋಟಿ ರು ಅನದಾನ ಹಂಚಿಕೆಯಾಗಿತ್ತು. ಈ ಪೈಕಿ 67.15 ಕೋಟಿ ರು ಖರ್ಚಾಗದೇ ಬಾಕಿ ಉಳಿದಿದೆ.

 

ರಾಜ್ಯದಲ್ಲಿ ಸದ್ಯ 1,200 ರು ಮೊತ್ತವನ್ನು  ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು  ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯಿತ್ತು. ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿಯೂ ಇತ್ತು. 2024-25ನೇ ಸಾಲಿನಿಂದಲೇ ಹೆಚ್ಚಳ ಮಾಡಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಆದರೀಗ ಈ ಮೊತ್ತವನ್ನು ಹೆಚ್ಚಳ ಮಾಡುವ ಪ್ರಸ್ತಾವವೇ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.

 

 

2025-26ನೇ ಸಾಲಿನಲ್ಲಿ ವೃದ್ಧಾಪ್ಯ ವೇತನಕ್ಕೆ 2,294.54 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿದೆ. ಈ ಪೈಕಿ ಜೂನ್‌ ಅಂತ್ಯಕ್ಕೆ 232.59 ಕೋಟಿ ರು ವೆಚ್ಚ ಮಾಡಿರುವುದು ಸಚಿವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

 

ವೃದ್ಧಾಪ್ಯ ವೇತನ ಮಾತ್ರವಲ್ಲದೇ ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಮಿತ ವೇತನ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ವಿಧವಾ ವೇತನ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ, ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನ ಮತ್ತು ಕುಟುಂಬ ಪಿಂಚಣಿ, ಮಾಜಿ ದೇವದಾಸಿ ಮಾಸಾಶನವೂ ಪೂರ್ಣ ಪ್ರಮಾಣದಲ್ಲಿ ವಿತರಿಸಿಲ್ಲ.

 

2022-23ರಲ್ಲಿ ಈ ಎಲ್ಲಾ ಯೋಜನೆಗಳಿಗೆ 9,381.26 ಕೋಟಿ ರು ಅನುದಾನ ಮಂಜೂರಾಗಿತ್ತು. ಇದರಲ್ಲಿ 9,342.28 ಕೋಟಿ ರು ಖರ್ಚಾಗಿದೆ. 38.97 ಕೋಟಿ ರು ಉಳಿಕೆಯಾಗಿದೆ. 2023-24ರಲ್ಲಿ 10,178.94 ಕೋಟಿ ರು ಅನುದಾನದ ಪೈಕಿ 9,989.24 ಕೋಟಿ ರು ಖರ್ಚಾಗಿದೆ. 189.69 ಕೋಟಿ ರು ಉಳಿಕೆಯಾಗಿದೆ. 2024-25ರಲ್ಲಿ 10,208.41 ಕೋಟಿ ರು ಅನುದಾನದ ಪೈಕಿ 10,192.28 ಕೋಟಿ ರು ಖರ್ಚಾಗಿದೆ. 16.15 ಕೋಟಿ ರು ಉಳಿಕೆಯಾಗಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಯೋಜನೆವಾರು ಖರ್ಚು-ಉಳಿಕೆ ವಿವರ

 

ವಿಧವಾ ವೇತನಕ್ಕೆ 2022-23ರಲ್ಲಿ 1,724.62 ಕೋಟಿ ರು ಅನುದಾನ ಒದಗಿಸಿತ್ತು. 1,724 ಕೋಟಿ ರು ಖರ್ಚಾಗಿದೆ. 0.62 ಕೋಟಿ ರು ಉಳಿಕೆಯಾಗಿದೆ. 2023-24ರಲ್ಲಿ 1,687.28 ಕೋಟಿ ರು ಅನುದಾನದ ಪೈಕಿ 1,682.23 ಕೋಟಿ ರು ಖರ್ಚು ಮಾಡಿರುವ ಸರ್ಕಾರವು 5.05 ಕೋಟಿ ರು ಉಳಿಕೆ ಮಾಡಿತ್ತು. 2024-25ರಲ್ಲಿ ಹಂಚಿಕೆಯಾಗಿದ್ದ 1,725 ಕೋಟಿ ರು ಅನುದಾನದಲ್ಲಿ 1,723 .17 ಕೋಟಿ ರು ಖರ್ಚಾಗಿದ್ದು 1.83 ಕೋಟಿ ರು ಉಳಿಕೆಯಾಗಿತ್ತು.

 

ಅಂಗವಿಕಲರ ವೇತನಕ್ಕಾಗಿ 2022-23ರಲ್ಲಿ 1,265.70 ಕೋಟಿ ರು ಅನುಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 1,265.66 ಕೋಟಿ ರು ಖರ್ಚಾಗಿದ್ದು 0.04 ಕೋಟಿ ರು ಉಳಿಕೆಯಾಗಿತ್ತು. 2023-24ರಲ್ಲಿ 1,508.09 ಕೋಟಿ ರು ಅನುದಾನದ ಪೈಕಿ 1,431.16 ಕೋಟಿ ರು ಖರ್ಚಾಗಿದ್ದು 76.93 ಕೋಟಿ ರು ಪಾವತಿಯಾಗದೇ ಬಾಕಿ ಉಇಳಿದಿತ್ತು. 2024-25ರಲ್ಲಿ 1,417.19 ಕೋಟಿ ರು ಅನುದಾನದ ಪೈಕಿ 1,414.16 ಕೋಟಿ ರು ಖರ್ಚಾಗಿದ್ದು 3.03 ಕೊಟಿ ರು ಬಾಕಿ ಉಳಿದಿತ್ತು.

 

ಸಂಧ್ಯಾ ಸುರಕ್ಷಾ ಯೋಜನೆಗೆ 2022-23ರಲ್ಲಿ 4,008.23 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ 4,000.66 ಕೋಟಿ ರು ಖರ್ಚಾಗಿದೆ. 7.36 ಕೋಟಿ ರು ಉಳಿಕೆಯಾಗಿತ್ತು. 2023-24ರಲ್ಲಿ 4,357.95 ಕೋಟಿ ರು ಅನುದಾನದ ಪೈಜು4,3428.25 ಕೋಟಿ ರು ಖರ್ಚು ಮಾಡಿದ್ದ ಇಲಾಖೆಯು 9.7 ಕೋಟಿ ರು ಗಳನ್ನು ಬಾಕಿ ಇಉಳಿಸಿಕೊಂಈಡಿತ್ತು. 2024-25ರಲ್ಲಿ ಬಿಡುಗಡೆಯಾಗಿದ್ದ 4,352.66 ಕೋಟಿ ರು ಬಿಡುಗಡೆ ಅನುದಾನದ ಪೈಕಿ 4,345.67 ಕೋಟಿ ಖರ್ಚಾಗಿದೆ. ಇನ್ನೂ 6.99 ಕೋಟಿ ರು ಉಳಿದಿದೆ.

 

 

 

ಮನಸ್ವಿನಿ ಯೋಜನೆಗೆ 2022-23ರಲ್ಲಿ 137.57 ಕೋಟಿ ರು ಅನುದಾನದ ಪೈಇ 121.07 ಕೋಟಿ ರು ಖರ್ಚಾಗಿದೆ. 16.50 ಕೋಟಿ ರು ಖರ್ಚು ಮಾಡಲು ಉಳಿಸಿಕೊಂಡಿತ್ತು. 2023-24ರಲ್ಲಿ 136.12 ಕೋಟಿ ರು ಅನುದಾನದ ಪೈಕಿ 133.88 ಕೋಟಿ ರು ಖರ್ಚು ಮಾಡಿದ್ದ ಇಲಾಖೆಯು 2.224 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. 2024-25ರಲ್ಲಿ 138.08 ಕೋಟಿ ರು ಅನುದಾನದ ಪೈಕಿ 136.30 ಕೋಟಿ ರು ಖರ್ಚು ಮಾಡಿ 1.48 ಕೋಟಿ ರು ಉಳಿಸಿಕೊಂಡಿರುವುದು ಉತ್ತರದಿಂದ ಗೊತ್ತಾಗಿದೆ.

 

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ, ರೈತ ವಿಧವಾ ವೇತನ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿ ಮಾಡಲಾಗಿತ್ತು.

 

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸುವ ಸಂಬಂಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಮೇ 24 ಮತ್ತು 25ರಂದು ನಡೆಸಿದ್ದ ವಿಡಿಯೋ ಸಂವಾದದಲ್ಲಿ ಈ ವಿಚಾರವು ಪ್ರಸ್ತಾಪವಾಗಿತ್ತು.

 

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಜೂನ್‌ 2ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿತ್ತು.

 

 

 

‘ರಾಜ್ಯದಲ್ಲಿ 39,689 ಡ್ಯೂಪ್ಲಿಕೇಟ್‌ ಆಧಾರ್ ಪ್ರಕರಣಗಳಿವೆ. ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ ಒಬ್ಬ ಫಲಾನುಭವಿ ಎರಡೆರಡು ಪಿಂಚಣಿ ಪಡೆಯುತ್ತಿದ್ದಲ್ಲಿ ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನು ಉಳಿಸಿಕೊಂಡು ಇನ್ನೊಂದು ಪ್ರಕರಣವನ್ನು ರದ್ದುಪಡಿಸಬೇಕು. ಒಂದೇ ಆಧಾರ್‍‌ ಸಂಖ್ಯೆಯನ್ನು ಒಬ್ಬರು ಹಾಗೂ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಸರಿಯಾದ ಆಧಾರ್‍‌ ಮಾಹಿತಿಯನ್ನು ಫಲಾನುಭವಿಗೆ ಜೋಡಣೆ ಮಾಡಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿತ್ತು.

 

 

 

 

‘ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ಆಧಾರ್‍‌ ಸೀಡಿಂಗ್‌ಗೆ ಬಾಕಿ ಇವೆ. ಈ ಕುರಿತು ಕೂಡಲೇ ಪರಿಶೀಲಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರಿಗೆ ಪಟ್ಟಿಯನ್ನು ಒದಗಿಸಿ ಅರ್ಹ ಫಲಾನುಭವಿಗಳಿಂದ ಬಾಕಿ ಇರುವ ಪ್ರಕರಣಗಳ ಆಧಾರ್‍‌ ಮಾಹಿತಿಯನ್ನು ಸಂಗ್ರಹಿಸಿ ಬ್ಯಾಂಕ್‌ಗಳ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು,’ ಎಂದು ಇದೇ ಪತ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ರಾಜ್ಯದಲ್ಲಿ 33,327 ಪ್ರಕರಣಗಳಲ್ಲಿ ಪಿಂಚಣಿಯನ್ನು ಇಎಂಒ ಮೂಲಕ ಪಡೆಯುತ್ತಿದ್ದ ಕಾರಣ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಪರಿಶೀಲಿಸಿ ಅಂಚೆ ಇಲಾಖೆಯ ಸಮನ್ವಯದೊಂದಿಗೆ ಅಂಚೆ ಉಳಿತಾಯ ಖಾತೆ ಅಥವಾ ಬ್ಯಾಂಕ್‌ ಖಾತೆ ತೆರೆದು ಬ್ಯಾಂಕ್‌ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿತ್ತು.

 

ನೇರ ನಗದು ವರ್ಗಾವಣೆ; ಇಲಾಖೆಗಳಲ್ಲಿಲ್ಲ ತಂತ್ರಾಂಶ, ಸರ್ಕಾರದ ಮುಖವಾಡ ಕಳಚಿತು ಇ-ಆಡಳಿತ

 

ಪಿಂಚಣಿ ಯೋಜನೆಯನ್ನು ಇದೀಗ ನೇರ ಹಣ ಸಂದಾಯ ಯೋಜನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಈ ಯೋಜನೆಯಡಿ ಪ್ರಾಯೋಗಿಕ ಜಿಲ್ಲೆಗಳನ್ನಾಗಿ ಪರಿಗಣಿಸಿ, ಮೊದಲನೆ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿತ್ತು.

 

ನೇರ ಹಣ ಸಂದಾಯ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಎನ್‌ಪಿಸಿಐ ಸೀಡಿಂಗ್‌ ಸ್ಟೇಟಸ್‌, ಹೆಸರು ಹೊಂದಾಣಿಕೆಯಾಗದ ಪ್ರಕರಣಗಳಲ್ಲಿ ಪ್ರಾಥಮಿಕ ಹಂತದ ಕಾರ್ಯಗಳನ್ನು ನಿರ್ದೇಶನಾಲಯದ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣಗಳನ್ನು ಎನ್‌ ಪಿಸಿಐನಲ್ಲಿ2016ರ ಹಿಂದಿನ ಸೀಡಿಂಗ್ ಪ್ರಕರಣಗಳು, ಎನ್‌ಪಿಸಿಐ ಸೀಡಿಂಗ್‌ ಬಾಕಿ ಇರುವ ಪ್ರಕರಣಗಳು, ಡ್ಯೂಪ್ಲಿಕೇಟ್‌ ಆಧಾರ್‍‌ ಪ್ರಕರಣಗಳು ಎಂದು ವರ್ಗೀಕರಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿತ್ತು.

 

‘ಜೂನ್‌ 2023ರಿಂದಲೇ ಮಾಸಿಕ ಪಿಂಚಣಿ ಯೋಜನೆಯನ್ನು ಆಧಾರ್ ಆಧರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿರುವುದರಿಂದ ಆಧಾರ್‍‌ ಸಂಗ್ರಹಣೆ ಕಾರ್ಯಕ್ಕೆ ಆದ್ಯತೆ ನೀಡಿ ಪೂರ್ಣಗೊಳಿಸಬೇಕು. ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿರುವ ಉಡುಪಿ,ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಡವರು ಅಂಚೆ ಇಲಾಖೆ ಹಾಗೂ ಲೀಡ್‌ ಬ್ಯಾಂಕ್‌ ನೊಂದಿಗೆ ತುರ್ತಾಗಿ ಸಭೆ ನಡೆಸಿ ಪ್ರಗತಿ ಸಾಧಿಸಬೇಕು,’ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.

 

ಆಧಾರ್‌, ಪಾನ್‌ ಲಿಂಕ್‌ ಮಾಡುವ ಸಮಸ್ಯೆಯಿಂದಾಗಿ ಬೆಂಗಳೂರು ನಗರವೊಂದರಲ್ಲೇ ಸುಮಾರು 300 ಹಿರಿಯ ನಾಗರಿಕರು ಹಲವು ತಿಂಗಳಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಏಳು ವಾರ್ಡ್‌ಗಳಲ್ಲಿ ಸ್ಲಂ ಮಹಿಳಾ ಸಂಘಟನೆ ಯೊಂದು ನಡೆಸಿದ್ದ ಸಮೀಕ್ಷೆ ತಿಳಿಸಿತ್ತು.

SUPPORT THE FILE

Latest News

Related Posts