ಬೆಂಗಳೂರು; ಲೋಕಾಯುಕ್ತ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಪ್ರಕರಣವು ಇದೀಗ ನೇರವಾಗಿ ಕಾಂಗ್ರೆಸ್ ಸರ್ಕಾರದ ಬುಡಕ್ಕೆ ಬರುತ್ತಿದೆ. ಬಂಧಿತ ಆರೋಪಿ ನಿಂಗಪ್ಪ ನೇರವಾಗಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಹೇಳಿದ್ದರೂ ಸಹ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರವು ಮೌನ ವಹಿಸಿದೆ.
ಏಕೆಂದರೇ ಈ ಪ್ರಕರಣದ ಪ್ರಮುಖ ಆರೋಪಿ ನಿಂಗಪ್ಪ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದ. ಹೀಗಾಗಿಯೇ ಸರ್ಕಾರದ ಯಾರೊಬ್ಬರೂ ಸಹ ಈ ಪ್ರಕರಣದ ಬಗ್ಗೆ ಬಾಯಿಬಿಡುತ್ತಿಲ್ಲ. ಪ್ರಕರಣದ ತನಿಖೆಯು ಆಳಕ್ಕೆ ಇಳಿದಂತೆಲ್ಲಾ ಇದು ನೇರವಾಗಿ ಕಾಂಗ್ರೆಸ್ ಪಕ್ಷದ ಬುಡಕ್ಕೆ ನೇರವಾಗಿ ಬರುತ್ತಿದೆ!
ಆರೋಪಿ ನಿಂಗಪ್ಪ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದುಕೊಂಡು ಮತ್ತು ಹವಾಲಾ ವ್ಯವಹಾರದ ನಂಟು ಹೊಂದಿರುವ ಸಂಗತಿಯೂ ಸಹ ಕುತೂಹಲ ಮೂಡಿಸಿದೆ.
ಹಾಗೆಯೇ ಆರೋಪಿ ನಿಂಗಪ್ಪ, ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕಾಗಿ ಹವಾಲ ವ್ಯವಹಾರದ ನಂಟು ಬೆಳೆಸಿಕೊಂಡಿದ್ದ!
ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಅವರನ್ನು ಸಚಿವ ತಿಮ್ಮಾಪುರ ಅವರೊಂದಿಗೆ ಆರೋಪಿ ನಿಂಗಪ್ಪ ಭೇಟಿ ಮಾಡಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಆರೋಪಿ ನಿಂಗಪ್ಪ ಸೇವೆಯಿಂದ ವಜಾಗೊಂಡಿದ್ದರೂ ಸಹ ತನ್ನನ್ನು ತಾನು ಕಾಂಗ್ರೆಸ್ ಕಾರ್ಯಕರ್ತ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದೇನೆ ಎಂದೇ ಅಧಿಕಾರಿಗಳಿಗೆ ಪರಿಚಯಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಷಿ ಅವರನ್ನು ಸಿಸಿಬಿಯಲ್ಲಿ ಡಿಸಿಪಿ ಹುದ್ದೆಗೆ ಆಹ್ವಾನ ನೀಡುವ ಸಂದರ್ಭದಲ್ಲಿ ತಾನು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಆ ನಂತರ ಅವರೊಂದಿಗೆ ಪರಿಚಯವು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು ಎಂದು ಗೊತ್ತಾಗಿದೆ.
ಅಲ್ಟಿಮಾ ಕಾಯಿನ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ!
ಶ್ರೀನಾಥ ಜೋಷಿ ಅವರು ಕೋರಮಂಗಲದ ಡಿಸಿಪಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಹಣಕಾಸಿನ ಹೂಡಿಕೆ ವಿಚಾರದಲ್ಲಿ ಆರೋಪಿ ನಿಂಗಪ್ಪನಿಗೆ ಮೋಸವಾಗಿತ್ತು. ಹೀಗಾಗಿ ಜೋಷಿ ಅವರ ಸಹಾಯ ಕೇಳಲು ಭೇಟಿ ಮಾಡಿದ್ದ. ಆ ವೇಳೆಯಲ್ಲಿ ತನ್ನನ್ನು ತಾನು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.
ಅವರೊಂದಿಗಿನ ಪರಿಚಯವು ಆ ನಂತರದ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು!. ಶ್ರೀನಾಥ ಜೋಷಿ ಅವರು ಲೋಕಾಯುಕ್ತಕ್ಕೆ ಎಸ್ಪಿಯಾಗಿ ಬಂದ 2 ವರ್ಷಗಳ ನಂತರ ಕ್ರಿಪ್ಟೋ ಕರೆನ್ಸಿ ವ್ಯವಹಾರವನ್ನೂ ಆರೋಪಿ ನಿಂಗಪ್ಪ ಕುದುರಿಸಿದ್ದ ಎಂದು ಗೊತ್ತಾಗಿದೆ.
ಪಿಎಲ್‌ಸಿ ಅಲ್ಟಿಮಾ ಎಂಬ ಕಾಯಿನ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದರೆ 2-3 ವರ್ಷದಲ್ಲಿ 2-3 ಕೋಟಿ ರು ಆಗಲಿದೆ ಎಂದು ಶ್ರೀನಾಥ್ ಜೋಷಿ ಅವರನ್ನು ನಂಬಿಸಿದ್ದ. ಈ ವ್ಯವಹಾರಕ್ಕಾಗಿ ಆರೋಪಿ ನಿಂಗಪ್ಪ, ಶ್ರೀನಾಥ ಜೋಷಿ ಅವರಿಂದ 14 ಲಕ್ಷ ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದ. ನಂತರ ಇದೇ 14 ಲಕ್ಷ ರು.ಗಳನ್ನು ಅಲ್ಟಿಮಾ ಕಾಯಿನ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ.
ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?
ಆ ನಂತರವೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಸಂಬಂಧ ಆರೋಪಿ ನಿಂಗಪ್ಪ, 2024ರಲ್ಲಿಯೂ 5 ರಿಂದ 10 ಲಕ್ಷ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದ. ಆ ಹಣದ ನಗದನ್ನು ಬೆಂಗಳೂರಿನ ಜಯನಗರದಲ್ಲಿರುವ ಹವಾಲಾ ನಡೆಸುವವರಿಗೆ ನೀಡಿದ್ದ. ಡಾಲರ್ಸ್‌ನಲ್ಲಿ ನಗದು ಪಡೆದು ನಂತರ ಕ್ರಿಪ್ಟೋದಲ್ಲಿ ಹೂಡಿದ್ದ ಎಂದು ಗೊತ್ತಾಗಿದೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದರಿಂದ ಆರೋಪಿ ನಿಂಗಪ್ಪನಿಗೆ ಪಿಎಲ್‌ಸಿ ಕಂಪನಿಯೇ ದುಬೈ ಪ್ರವಾಸವನ್ನು ಪ್ರಾಯೋಜಿಸಿತ್ತು. 2024ರ ಏಪ್ರಿಲ್ ಮೊದಲನೇ ವಾರದಲ್ಲಿ 7 ದಿನಗಳ ಕಾಲ ದುಬೈ ಪ್ರವಾಸ ಕೈಗೊಂಡಿದ್ದ ಎಂದು ಗೊತ್ತಾಗಿದೆ.
ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?
ಲೋಕಾಯುಕ್ತ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಬಂಧಿತನಾಗಿರುವ ಆರೋಪಿ ನಿಂಗಪ್ಪನ ಪ್ರಕರಣವು ಅಧಿಕಾರಿಗಳ ವರ್ಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹೊತ್ತಿನಲ್ಲೇ ಇದೀಗ ನೇರವಾಗಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರು ತಳಕು ಹಾಕಿಕೊಂಡಿತ್ತು.
ಲೋಕಾ ಎಸ್ಪಿ ಜೋಷಿ, ನಿಂಗಪ್ಪನೊಂದಿಗೆ ಅಬಕಾರಿ ಸಚಿವ ತಿಮ್ಮಾಪುರ ನಂಟು; ಐಷಾರಾಮಿ ಹೋಟೆಲ್‌ನಲ್ಲಿ ಭೇಟಿ?
ಅಬಕಾರಿ ಆಯುಕ್ತರು, ಡಿ ಸಿ, ಡಿವೈಎಸ್ಪಿಗಳ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಅಬಕಾರಿ ಸಚಿವ ತಿಮ್ಮಾಪುರ ಅವರ ವಿರುದ್ಧ ಈಗಾಗಲೇ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಬಿಜೆಪಿಯೂ ಸಹ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು. ಈ ಬೆಳವಣಿಗೆ ನಡುವೆಯೇ ಲೋಕಾಯುಕ್ತ ಎಸ್ ಪಿ ಶ್ರೀನಾಥ ಜೋಷಿ ಅವರನ್ನೂ ವರ್ಗಾವಣೆ ವಿಚಾರವಾಗಿಯೇ ಆರೋಪಿ ನಿಂಗಪ್ಪ, ಸಚಿವ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂಬ ಸಂಗತಿಯು ಮುನ್ನೆಲೆಗೆ ಬಂದಿತ್ತು.
ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍ನಲ್ಲಿಲ್ಲ ಎಸ್ಪಿ ಜೋಷಿ ಹೆಸರು
ಆರೋಪಿ ನಿಂಗಪ್ಪನು ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಷಿ ಅವರನ್ನು ಬೆಂಗಳೂರಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ಭೇಟಿ ಮಾಡಿಸಿದ್ದ ಎಂದು ಗೊತ್ತಾಗಿದೆ. ಆರೋಪಿ ನಿಂಗಪ್ಪನಿಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ಆಪ್ತ ಸಹಾಯಕ ಎಂದು ಹೇಳಲಾಗಿರುವ ರಮೇಶ್ ಎಂಬಾತನೂ ಪರಿಚಯವಿದ್ದ ಎಂದು ಹೇಳಲಾಗಿದೆ.
ತಿಂಗಳಿಗೆ 3 ಲಕ್ಷಕ್ಕೆ ಬೇಡಿಕೆ, ಹಣದ ಮೌಲ್ಯಕ್ಕೆ ‘ಕೆ ಜಿ’ ಕೋಡ್‌ವರ್ಡ್; ಅಧಿಕಾರಿಗಳ ಹೆಸರು ಬಾಯ್ಬಿಟ್ಟ ನಿಂಗಪ್ಪ
ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರುಪಾಯಿ ವಸೂಲು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದಲೂ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಎಂದು ಲೋಕಾಯುಕ್ತ ಪೊಲೀಸ್ ವಿಭಾಗವು ಇದೀಗ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.
ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ
ಅಲ್ಲದೇ ಆರೋಪಿ ನಿಂಗಪ್ಪ ಎಂಬಾತನು 6 ತಿಂಗಳಿನಿಂದಲೂ ಅಧಿಕಾರಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿದ್ದ ಎಂದು ‘ದಿ ಫೈಲ್’, ವರದಿ ಪ್ರಕಟಿಸಿತ್ತು. ಈ ವರದಿಯು ಅಧಿಕಾರಿ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಲೋಕಾಯುಕ್ತ ಪೊಲೀಸ್ ವಿಭಾಗವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿಯೂ ಕ್ರಿಪ್ಟೋ ಕರೆನ್ಸಿಯಲ್ಲಿ ಆರೋಪಿಯು ಹೂಡಿಕೆ ಮಾಡಿದ್ದಾನೆ ಎಂದು ಅಧಿಕೃತವಾಗಿ ಹೇಳಿತ್ತು.
ಇದು ‘ದಿ ಫೈಲ್’, ವರದಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಲೋಕಾ ಹೆಸರಿನಲ್ಲಿ ವಸೂಲಿ; ಬಂಧಿತ ಆರೋಪಿಯೊಂದಿಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನಂಟು?
ಪತ್ರಿಕಾ ಹೇಳಿಕೆಯಲ್ಲೇನಿತ್ತು?
ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ವಿವಿಧ ಅಧಿಕಾರಿಗಳಿಂದ ಕಳೆದ 6 ತಿಂಗಳಿನಿಂದ ಹಣವನ್ನು ವಸೂಲಿ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಹಾಗೂ ತನ್ನಸಂಬಂಧಿಕರುಗಳ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುತ್ತೇನೆಂದು ಒಪ್ಪಿಕೊಂಡಿರುತ್ತಾನೆ ಎಂದು ಹೇಳಲಾಗಿದೆ.
ಹಣ ವಸೂಲಿ, ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ; ‘ದಿ ಫೈಲ್’ ವರದಿ ಬೆನ್ನಲ್ಲೇ ಬಿಡುಗಡೆಯಾದ ಪತ್ರಿಕಾ ಹೇಳಿಕೆ
‘ಆತನ ಮೊಬೈಲ್‌ನ್ನು ಪರಿಶೀಲಿಸಲಾಗಿ ಸುಮಾರು 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಹಣದ ಮೂಲ ಪತ್ತೆ ಹಚ್ಚುವ ಸಲುವಾಗಿ ಸದರಿ ವ್ಯಾಲೆಟ್‌ಗಳನ್ನು ಫ್ರೀಜ್ ಆಡಿ ತನಿಖೆ ಮುಂದುವರೆಸಲಾಗಿದೆ,’ ಎಂದು ವಿವರಿಸಿತ್ತು.
ಅಬಕಾರಿ ಇಲಾಖೆಯ ಯಾವ ಯಾವ ಅಧಿಕಾರಿಗಳು ಆರೋಪಿ ನಿಂಗಪ್ಪನಿಗೆ ಎಷ್ಟೆಷ್ಟು ಹಣ ನೀಡುರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ಮುಂದುವರೆಸಲಾಗಿದೆ. ಆರೋಪಿಯೊಂದಿಗೆ ಬೇರೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ವಾಟ್ಸ್‌ಪ್ ಸಂದೇಶಗಳು, ಕರೆಗಳ ವಿವರಗಳು ಮತ್ತು ವಾಟ್ಸ್‌ಪ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು ಶಾಮೀಲಾಗಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿರುತ್ತದೆ ಎಂದು ತಿಳಿಸಿತ್ತು.
ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು 8ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ, ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿತ್ತು.
ಬಂಧಿತ ಆರೋಪಿ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ?
ಹಣ ವಸೂಲು ಮಾಡುತ್ತಿದ್ದ ಎಂದು ಹೇಳಲಾಗಿರುವ ಆರೋಪಿತ ನಿಂಗಪ್ಪ , ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದ ಕ್ರಿಪ್ಟೋ ಕರೆನ್ಸಿಯಲ್ಲಿಯೂ ಹೂಡಿಕೆ ಮಾಡಿಸಿದ್ದ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ ಲೋಕಾ ಎಸ್ಪಿಗಳಿಂದಲೂ ಕ್ರಿಪ್ಟೋ ಕರೆನ್ಸಿಯಲ್ಲಿ ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡಿಸಿದ್ದ ಎಂಬ ಆಪಾದನೆ ಕೇಳಿ ಬಂದಿತ್ತು.
ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲಿ!
ಹಣಕ್ಕಾಗಿ ಬೇಡಿಕೆ ಮತ್ತು ಹಣ ನೀಡದೇ ಇದ್ದ ಹಲವು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿತನಾಗಿರುವ ನಿಂಗಪ್ಪ, ಅಬಕಾರಿ ಡಿಸಿಗಳಿಂದ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ವಸೂಲು ಮಾಡಿದ್ದಾನೆ ಎಂಬ ಆಪಾದನೆ ಕೇಳಿ ಬಂದಿದೆ. ವಿಜಯನಗರ ಮೆಟ್ರೋ ಸ್ಟೇಷನ್, ಜೀವನ್ ಭೀಮಾ ನಗರ, ಎಂ ಜಿ ರಸ್ತೆ, ಜೆಡಿಎಸ್‌ನ ಹಳೇ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಣವನ್ನು ವಸೂಲು ಮಾಡಿದ್ದ ಎಂದು ಹೇಳಲಾಗಿತ್ತು.
ಅಬಕಾರಿ ಹಗರಣವೊಂದರಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿರುವ 100ಕ್ಕೂ ಹೆಚ್ಚು ಅಬಕಾರಿ ಅಧಿಕಾರಿಗಳಿಂದ ತಿಂಗಳಿಗೆ ತಲಾ 1 ಲಕ್ಷ ರು ನಂತೆ ವಸೂಲು ಮಾಡಲಾಗುತ್ತಿತ್ತು. ಈ ಮಧ್ಯೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಅಬಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸ್ ವಿಭಾಗದ ಮತ್ತೊಬ್ಬ ಎಸ್‌ಪಿಯೊಬ್ಬರು ಮೊಕದ್ದಮೆ ದಾಖಲಿಸಿದ್ದರು ಎಂದು ತಿಳಿದು ಬಂದಿತ್ತು.
ಕೋಟ್ಯಂತರ ರು. ಕಪ್ಪುಹಣ ವರ್ಗಾವಣೆ; ಅಶ್ವಿನ್ ಕುಕೃತ್ಯದ ಬಗ್ಗೆ ಸಾಕ್ಷ್ಯ ನುಡಿದ ಇ ಡಿ ಉಪ ನಿರ್ದೇಶಕ
ಪ್ರತಿ ತಿಂಗಳೂ ತಲಾ 1 ಲಕ್ಷ ರು ನೀಡುತ್ತಿದ್ದರೂ ಸಹ ಮೊಕದ್ದಮೆ ದಾಖಲಾಗಿದ್ದಕ್ಕೆ ಈಗಾಗಲೇ ಹಣ ಕೊಟ್ಟಿದ್ದ ಅಧಿಕಾರಿಗಳು ಆರೋಪಿತ ನಿಂಗಪ್ಪ ವಿರುದ್ಧ ತಿರುಗಿ ಬಿದ್ದಿದ್ದರು ಎಂದು ಗೊತ್ತಾಗಿದೆ.
ಕೆಲ ವರ್ಷಗಳ ಹಿಂದೆ ನಿಂಗಪ್ಪ, ಸೇವೆಯಿಂದ ವಜಾಗೊಂಡಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.
ಲೋಕಾ ಪೊಲೀಸರ ಶೋಧ; ಬರಿಗೈಯಲ್ಲಿ ಮರಳಿದ ಪೊಲೀಸರು, ತಲೆಮರೆಸಿಕೊಂಡಿದ್ದಾರೆಯೇ ಜೋಷಿ?
ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಅವರ ಪುತ್ರ ಮತ್ತು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಹಲವರಿಂದ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರು ಈ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಅಲ್ಲದೇ ಲೋಕಾಯುಕ್ತ ಹುದ್ದೆಗೆ ಭಾಸ್ಕರರಾವ್ ಅವರು ರಾಜೀನಾಮೆ ನೀಡಿದ್ದರು. ಹಾಗೂ ಅವರ ಪುತ್ರ ಅಶ್ವಿನ್ ರಾವ್ ಸಹ ಪೊಲೀಸರ ಬಂಧನಕ್ಕೆ ಒಳಗಾಗಿದ್ದ.
ಈ ಪ್ರಕರಣದ ನಂತರ ಲೋಕಾಯುಕ್ತಕ್ಕಿದ್ದ ಪೊಲೀಸ್ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿತ್ತು. ಆ ನಂತರ ಎಸಿಬಿಯನ್ನೂ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಗೆ ಪುನಃ ಪೊಲೀಸ್ ಅಧಿಕಾರವನ್ನು ಮರು ಸ್ಥಾಪಿಸಲಾಗಿತ್ತು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಹೊತ್ತಿನಲ್ಲೇ ಲೋಕಾಯುಕ್ತ ಹೆಸರಿನಲ್ಲಿ ನಿಂಗಪ್ಪ ಎಂಬಾತ ಹಣ ವಸೂಲಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ. ಅಲ್ಲದೇ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಎದುರಾಗಿದೆ.