ಬೆಂಗಳೂರು; ರಾಜ್ಯದಲ್ಲಿ ಜಾರಿಗೊಂಡಿರುವ ಶಕ್ತಿ ಯೋಜನೆಯಡಿಯಲ್ಲಿನ ಒಟ್ಟು ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಎಷ್ಟಿದ್ದಾರೆ ಎಂಬ ನಿಖರವಾದ ಅಂಕಿ ಅಂಶವನ್ನು ಸಾರಿಗೆ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಗೆ ಒದಗಿಸುತ್ತಿಲ್ಲ.
ಅಲ್ಲದೇ ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸಮಾಜ ಕಲ್ಯಾಣ ಇಲಾಖೆಯು ಸೂಚಿಸಿದ್ದರೂ ಸಹ ಸಾರಿಗೆ ಇಲಾಖೆಯು ಪಾಲಿಸಿಲ್ಲ.
ಗೃಹ ಜ್ಯೋತಿ ಯೋಜನೆ ಒಟ್ಟು ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿರ್ದಿಷ್ಯ ಅಂಕಿ ಅಂಶಗಳು ಸರ್ಕಾರದ ಬಳಿ ಲಭ್ಯವಿಲ್ಲ ಎಂದ ಸರ್ಕಾರವು ಅಧಿಕೃತವಾಗಿ ನೀಡಿದ್ದ ಉತ್ತರದ ಬೆನ್ನಲ್ಲೇ ಇದೀಗ ಶಕ್ತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಸಂಖ್ಯೆಯೂ ಇಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಅಲ್ಲದೇ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ಶಕ್ತಿ ಯೋಜನೆಯಡಿ ಪ್ರಗತಿಯ ಅಂಕಿ ಅಂಶಗಳನ್ನಿಡಿದು ಹೆಮ್ಮೆಯಿಂದ ಬೀಗಿದ್ದರು. ಆದರೆ ಸಾರಿಗೆ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿಖರ ಅಂಕಿ ಅಂಶಗಳನ್ನು ಒದಗಿಸುತ್ತಿಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ.
ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ನೋಡಲ್ ಏಜೆನ್ಸಿಯು 2025ರ ಜನವರಿ 18ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಶಕ್ತಿ ಯೋಜನೆಯಡಿ ಎಸ್ ಸಿ ಎಸ್ ಟಿ ಫಲಾನುಭವಿಗಳ ನಿಖರ ಅಂಕಿ ಅಂಶವನ್ನು ಸಾರಿಗೆ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಗೆ ನೀಡುತ್ತಿಲ್ಲ. ಈ ಹಿಂದೆ ಸ್ಮಾರ್ಟ್ ಕಾರ್ಡ್ ಎಲ್ಲಾ ಅರ್ಹ ಫಲಾನುಭವಿಗಳಿಗೆ ವಿತರಿಸಲು ಹಲವಾರು ಬಾರಿ ಇಲಾಖೆಯು ಸೂಚಿಸಿತ್ತು. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ,’ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ನೋಡಲ್ ಏಜೆನ್ಸಿ ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಅಲ್ಲದೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಅನ್ವಯ ಈ ಮೊತ್ತನ್ನು ಎಸ್ ಸಿ ಮತ್ತು ಎಸ್ ಟಿ ಜನರಿಗೆ ಮಾತ್ರ ಉಪಯೋಗಿಸಬೇಕು ಎಂದಿದೆ. ಫಲಾನುಭವಿಗಳ ನಿಖರ ಅಂಕಿ ಅಂಶವ ಲಭ್ಯವಿವಿಲ್ಲದೇ ಇರುವ ಆರಣ ಒಟ್ಟು ಅನುದಾನದಲ್ಲಿ ಶೇ.24.10ರಂತೆ ಎಸ್ ಸಿ ಎಸ್ ಪಿ , ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲು ಆರ್ಥಿಕ ಇಲಾಖೆಯಿಂದ ಕ್ರಮ ವಹಿಸಬೇಕು ಎಂದು ಮಾಹಿತಿ ನೀಡಿದ್ದರು ಎಂಬುದು ತಿಳಿದು ಬಂದಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಫಲಾನುಭವಿಗಳ ಅಂಕಿ ಅಂಶಗಳನ್ನು ಪಡೆಯಲು ಕಷ್ಟವಾಗುತ್ತಿರುವ ಕಾರಣ ಶೇ.24.10ರಂತೆ ಎಸ್‌ಸಿ ಎಸ್ ಪಿ ಟಿಎಸ್‌ಪಿ ಅಡಿ ಅನುದಾನ ಒದಗಿಸಬೇಕು,’ ಎಂದು ಕೆಎಸ್‌ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆರ್ಥಿಕ ಇಲಾಖೆಯನ್ನು ಕೋರಿರುವುದು ನಡವಳಿಯಿಂದ ಗೊತ್ತಾಗಿದೆ.
ಸಾರಿಗೆ ಇಲಾಖೆಯಡಿ 2025ರ ಜನವರಿ 17ರ ಅಂತ್ಯಕ್ಕೆ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಟ್ಟಾರೆ 1,225.02 ಕೋಟಿ ರು ಹಂಚಿಕೆಯಾಗಿತ್ತು. ಈ ಪೈಕಿ 994.68 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 925.65 ಕೋಟಿ ರು ಖರ್ಚಾಗಿದೆ. ಇದು ಹಂಚಿಕೆಗೆ ಶೇ.76ರಷ್ಟಿದೆ. ಬಿಡುಗಡೆಗೆ ಶೇ.93ರಷ್ಟಿದೆ.
ಅದೇ ರೀತಿ ಟಿಎಸ್‌ಪಿ ಅಡಿಯಲ್ಲಿ 547.50 ಕೋಟಿ ರು ಹಂಚಿಕೆಯಾಗಿದ್ದರ ಪೈಕಿ 444.39 ಕೊಟಿ ರು ಬಿಡುಗಡೆಯಾಗಿದೆ. ಇದರಲ್ಲಿ 405.46 ಕೋಟಿ ರು ವೆಚ್ಚವಾಗಿದೆ.ಇದು ಹಂಚಿಕೆಗೆ ಶೇ.74ರಷ್ಟಿದೆ. ಬಿಡುಗಡೆಗೆ ಶೇ.91ರಷ್ಟಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಒಟ್ಟಾರೆ 1,772.52 ಕೋಟಿ ರು ಹಂಚಿಕೆಯಾಗಿತ್ತು. ಇದರಲ್ಲಿ 1,439.07 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 1,331.11 ಕೋಟಿ ರು ವೆಚ್ಚವಾಗಿರುವುದು ತಿಳಿದು ಬಂದಿದೆ.
ಗೃಹ ಜ್ಯೋತಿ ಯೋಜನೆ ಒಟ್ಟು ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಸರ್ಕಾರದ ಬಳಿ ಲಭ್ಯವಿಲ್ಲ.
ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ
ಗೃಹ ಜ್ಯೋತಿ ಯೋಜನೆಯನ್ನು ರಾಜ್ಯದಲ್ಲಿನ ಎಲ್ಲಾ ಪ್ರವರ್ಗದ ಗೃಹ ಬಳಕೆ ಗ್ರಾಹಕರ ಸೌಲಭ್ಯಕ್ಕಾಗಿ ಅನುಷ್ಠಾನಗೊಳಿಸಲಾಗಿರುತ್ತದೆ. ಈ ಯೋಜನೆಯ ಸೌಲಭ್ಯಕ್ಕಾಗಿ ನೋಂದಾಯಿಸುವ ಫಲಾನುಭವಿಗಳು ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಬೇಕಾಗಿದೆ. ಈ ನೋಂದಣಿ ಅರ್ಜಿಯಲ್ಲಿ ಮಾಹಿತಿಯನ್ನು ಸರಳೀಕರಣಗೊಳಿಸುವ ಸಲುವಾಗಿ ಪ್ರತ್ಯೇಕವಾಗಿ ಜಾತಿವಾರು ಮಾಹಿತಿ ಅಂಕಣ ನಮೂದಿಸಿರುವುದಿಲ್ಲ. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿಯೂ ಸಹ ಜಾತಿವಾರು ವಿವರಗಳ ಮಾಹಿತಿ ಸಂಗ್ರಹಿಸಲ್ಪಡುವುದಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಲಭ್ಯವಿರುವುದಿಲ್ಲ ಎಂದು ಸಚಿವ ಕೆ ಜೆ ಜಾರ್ಜ್ ಅವರು ಉತ್ತರ ಒದಗಿಸಿರುವುದು ಗೊತ್ತಾಗಿದೆ.
ವಿಶೇಷವೆಂದರೇ ಇಂಧನ ಇಲಾಖೆಯಡಿ ಒಟ್ಟು 3.53 ಲಕ್ಷ ಎಸ್ ಸಿ ಮತ್ತು ಎಸ್ ಟಿ ರೈತರ ಪಂಪ್ ಸೆಟ್‌ಗಳಿವೆ. ಇದಕ್ಕೆ ಅನುಗುಣವಾಗಿ 1,437.18 ಅನುದಾನ ಮಾತ್ರ ಅಗತ್ಯವಿದೆ. ಎಸ್‌ಸಿಎಸ್‌ಪಿ ಮತ್ತು ಎಸ್‌ಟಿಪಿ ಕಾಯ್ದೆಯಂತೆ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ವೆಚ್ಚ ಭರಿಸಬೇಕಾಗಿದೆ. ಅಂದಾಜು 846 ಕೋಟಿ ರು ಉಳಿಕೆಯಾಗಗುತ್ತದೆ. ಅದೇ ರೀತಿ ಗೃಹ ಜ್ಯೋತಿ ಯೋಜನೆಯಡಿಯೂ ಸಹ ನಿಖರ ಅಂಕಿ ಅಂಶಗಳನ್ನು ಇಂಧನ ಇಲಾಖೆಯಿಂದ ಒದಗಿಸಿಲ್ಲ.
ಬೆಸ್ಕಾಂ ಸೇರಿದಂತೆ ಎಸ್ಕಾಂಗಳ ವ್ಯಾಪ್ತಿಯಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 2024ರ ಜೂನ್ ಅಂತ್ಯಕ್ಕೆ ಒಟ್ಟಾರೆ 1,66,41,767 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇದೇ ಅವಧಿಯಲ್ಲಿ 30,99, 711 ಮಂದಿ ಗೃಹ ಜ್ಯೋತಿ ಯೋಜನೆಯಿಂದ ಹೊರಗುಳಿದಿದ್ದರು.
ಬೆಸ್ಕಾಂ ವ್ಯಾಪ್ತಿಯಲ್ಲಿ 7013678, ಮೆಸ್ಕಾಂ ವ್ಯಾಪ್ತಿಯಲ್ಲಿ 1744327, ಸೆಸ್ಕ್ 2393702, ಹೆಸ್ಕಾಂ 3317039, ಜೆಸ್ಕಾಂ 2173021 ಸೇರಿ ಒಟ್ಟಾರೆ 1,66,41,767 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಅದೇ ರೀತಿ ಬೆಸ್ಕಾಂ ವ್ಯಾಪ್ತಿಯಲ್ಲಿ 2190395, ಮೆಸ್ಕಾಂ 347150, ಸೆಸ್ಕ್ 135250, ಹೆಸ್ಕಾಂ 348355, ಜೆಸ್ಕಾಂ 78561 ಸೇರಿ 3099711 ಮಂದಿ ಯೋಜನೆಯಿಂದ ಹೊರಗುಳಿದಿದ್ದರು ಎಂದು ಸದನಕ್ಕೆ ಮಾಹಿತಿ ಒದಗಿಸಿದ್ದರು.
ಹಾಗೆಯೇ 2023-24ನೇ ಸಾಲಿನಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿತ ವಿದ್ಯುತ್ ಬಳೆಕದಾರರು 5953.89 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದರು. ಇದಕ್ಕಾಗಿ ಒಟ್ಟಾರೆ 2,554.11 ಕೋಟಿ ರು ವೆಚ್ಚವಾಗಿತ್ತು. 2024-25ನೇ ಸಾಲಿನಲ್ಲಿ 2558.40 ದಶಲಕ್ಷ ಯೂನಿಟ್ ವಿದ್ಯುತ್‌ನನ್ನು 2024ರ ಜೂನ್ ಅಂತ್ಯಕ್ಕೆ ಬಳಕೆ ಮಾಡಿದ್ದರು. ಇದಕ್ಕಾಗಿ 2,304.24 ಕೋಟಿ ರು ವೆಚ್ಚವಾಗಿತ್ತು ಎಂದು ಉತ್ತರಿಸಿದ್ದರು.
2023-24ನೇ ಸಾಲಿನಲ್ಲಿ ಎಸ್ಕಾಂಗಳಿಗೆ ಯಾವುದೇ ಬಾಕಿ ಉಳಿಸಿರಲಿಲ್ಲ. ಇದೇ ಅವಧಿಯಲ್ಲಿ ಬೆಸ್ಕಾಂಗೆ 2,771.59 ಕೋಟಿ ರು., ಮೆಸ್ಕಾಂಗೆ 639.00 ಕೋಟಿ, ಸೆಸ್ಕ್‌ಗೆ 629.69 ಕೋಟಿ, ಹೆಸ್ಕಾಂಗೆ 1,092.91 ಕೋಟಿ, ಜೆಸ್ಕಾಂಗೆ 675 ಕೋಟಿ ರು ಬಿಡುಗಡೆಯಾಗಿತ್ತು ಎಂದು ಸಚಿವ ಜಾರ್ಜ್ ಅವರು ನೀಡಿದ್ದ ಉತ್ತರದಿಂದ ಗೊತ್ತಾಗಿದೆ.