118 ಕೋಟಿ ರು. ಶುಲ್ಕ ಮನ್ನಾ ; ಖಾಸಗಿ ಕಾಲೇಜುಗಳ ಮುಂದೆ ಮಂಡಿಯೂರಿತೇ ಬಿಜೆಪಿ ಸರ್ಕಾರ?

ರೈತರ ಸಾಲಮನ್ನಾ ಸೇರಿದಂತೆ ಚಾಲ್ತಿಯಲ್ಲಿರುವ ವಿವಿಧ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಹೈರಾಣಾಗಿರುವ ಬಿಜೆಪಿ ಸರ್ಕಾರ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವಸೂಲಾಗಿರುವ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕದ ಮೊತ್ತ  ಒಟ್ಟು 118 ಕೋಟಿ ರು.ಗಳನ್ನು  ಮನ್ನಾ ಮಾಡಲು ಇದೀಗ ಮುಂದಾಗಿದೆ. ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೂ ಬದಿಗೊತ್ತಿರುವ ಬಿಜೆಪಿ ಸರ್ಕಾರ, ಖಾಸಗಿ ಅನುದಾನಿತ ಕಾಲೇಜುಗಳ ಆಡಳಿತ ಮಂಡಳ ಬೆನ್ನಿಗೆ ನಿಂತಿದೆ. 

ದರಿದ್ರ ಸರ್ಕಾರ ಎಂಬ ಮೂದಲಿಕೆಗೆ ಒಳಗಾಗಿರುವ ಬಿಜೆಪಿ ಸರ್ಕಾರ, ಖಾಸಗಿ ಅನುದಾನಿತ ಕಾಲೇಜುಗಳ ಶುಲ್ಕ ವಸೂಲಾತಿಯನ್ನು ಮನ್ನಾ ಮಾಡಲು ಹೊರಟು ಮತ್ತಷ್ಟು ದರಿದ್ರವನ್ನು ಮೆತ್ತಿಕೊಳ್ಳಲಿದೆ. 

ಶುಲ್ಕದ ಮೊತ್ತವನ್ನು ಜಮೆ ಮಾಡುವ ಬಗ್ಗೆ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿರುವ ಖಾಸಗಿ ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ, ಬಾಕಿ ಉಳಿಸಿಕೊಂಡಿರುವ ಶುಲ್ಕ ಮನ್ನಾ ಮಾಡಲು ಕೈಗೊಂಡಿರುವ ನಿರ್ಧಾರವೇ  ಖಾಸಗಿ ಕಾಲೇಜುಗಳ ಮುಂದೆ ಮಂಡಿಯೂರಿದೆ ಎಂಬುದನ್ನು ಸಂಕೇತಿಸುತ್ತಿದೆ. 

ಶುಲ್ಕ ವಸೂಲಾತಿಯನ್ನು ಮನ್ನಾ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಲಿದೆ ಎಂದು ಆರ್ಥಿಕ ಇಲಾಖೆ ನೀಡಿರುವ ಸ್ಪಷ್ಟ ಅಭಿಪ್ರಾಯವನ್ನು ಬದಿಗೊತ್ತಿರುವ ಬಿಜೆಪಿ ಸರ್ಕಾರ, ಖಾಸಗಿ ಅನುದಾನಿತ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಶುಲ್ಕ ಮನ್ನಾ ಆಗಲಿರುವ ಬಹುತೇಕ ಖಾಸಗಿ ಅನುದಾನಿತ ಕಾಲೇಜುಗಳು ಪ್ರಬಲ ಸಮುದಾಯಗಳಿಗೆ ಸೇರಿರುವುದು ವಿಶೇಷ. 

ಶುಲ್ಕ ವಸೂಲಾತಿಯನ್ನು ಮನ್ನಾ ಮಾಡಿಸಲು ತರಾತುರಿಯಲ್ಲಿರುವ ಉನ್ನತ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ  ರಾಜಕುಮಾರ್‌ ಖತ್ರಿ ಅವರು ಅನುಮೋದನೆ ಪಡೆಯಲು ಸಚಿವ ಸಂಪುಟದ ಮುಂದೆ ಕಡತವನ್ನು (ಕಡತ ಸಂಖ್ಯೆ; ಇಡಿ 268 ಯುಪಿಸಿ  2014) ಮಂಡಿಸಿದ್ದಾರೆ. ಉಪ ಮುಖ್ಯಮಂತ್ರಿ  ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್‌ ನಾರಾಯಣ್‌ ಅವರು ಈ  ಕಡತವನ್ನು ಅನುಮೋದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ. 

ಅಲ್ಲದೆ, ವಸೂಲಾಗಬೇಕಾದ ಬಾಕಿ  ಮೊತ್ತವನ್ನು ಮನ್ನಾ ಮಾಡುವ ಸಂಬಂಧ  ಉನ್ನತ ಶಿಕ್ಷಣ ಇಲಾಖೆ ಯಾವ ಸಮರ್ಥನೆಯನ್ನೂ ಒದಗಿಸಿಲ್ಲ. ಬದಲಿಗೆ ವಸೂಲಾಗಬೇಕಾದ ಮೊತ್ತ 50.00 ಲಕ್ಷ ರು.ಮೀರಿರುವುದರಿಂದ ಸಚಿವ ಸಂಪುಟದ ಮುಂದೆ ಮಂಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದೆ. 

ಖಾಸಗಿ  ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಸರ್ಕಾರದೊಂದಿಗೆ ಆಡಳಿತ ಮಂಡಳಿಗಳು ಖಾಸಗಿ ಅನುದಾನಿತ ಕಾಲೇಜುಗಳು ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮ 2003 ರ ಒಪ್ಪಂದ ಮಾಡಿಕೊಂಡಿವೆ. ಇದರ ಪ್ರಕಾರ ಖಾಸಗಿ ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳಿಂದ ವಸೂಲು ಮಾಡಿರುವ ಶುಲ್ಕಗಳನ್ನು ಸರ್ಕಾರಕ್ಕೆ  ಜಮೆ ಮಾಡಬೇಕು. 

ಆದರೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು 2003-04ರಿಂದ 2013-14ರವರೆಗೆ  ವಸೂಲು ಮಾಡಿರುವ ಶುಲ್ಕಗಳ ಮೊತ್ತದಲ್ಲಿ ಒಂದು ಭಾಗವನ್ನೂ ಸರ್ಕಾರಕ್ಕೆ  ಜಮೆ ಮಾಡಿಲ್ಲ ಎಂಬ ಸಂಗತಿ ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ  ತಿಳಿದು ಬಂದಿದೆ. 

ವಸೂಲು ಮಾಡಿರುವ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಪ್ರಸ್ತುತ ಈ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ಆಡಳಿತ ಮಂಡಳಿಗಳು ಸಲ್ಲಿಸಿರುವ  ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗಲೇ ರಾಜ್ಯ ಬಿಜೆಪಿ ಸರ್ಕಾರ, 118 ಕೋಟಿ ರು.ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಕಾಲೇಜು ಶಿಕ್ಷಣ ಆಯುಕ್ತಾಲಯ ಈಗಾಗಲೇ 319 ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಲೆಕ್ಕ ಪರಿಶೋಧನೆ ನಡೆಸಲು ನಿರ್ಧರಿಸಿದೆ. ‘ದಿ ಫೈಲ್‌’ ಬಳಿ ಇರುವ ದಾಖಲೆಗಳ ಪ್ರಕಾರ ರಾಜ್ಯದ ಎಲ್ಲಾ ಖಾಸಗಿ  ಅನುದಾನಿತ ಪದವಿ ಕಾಲೇಜುಗಳು ಒಟ್ಟು  196 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ಈ ಪೈಕಿ ಇದುವರೆಗೆ 77,65,07,702 ರು.ಗಳನ್ನಷ್ಟೇ  ಜಮೆ  ಮಾಡಿರುವ  ಖಾಸಗಿ  ಅನುದಾನಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಇನ್ನೂ 118,99, 66,159 ರು.ಗಳನ್ನು ಬಾಕಿ ಉಳಿಸಿಕೊಂಡಿವೆ. 

ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಮನ್ನಾ ಮಾಡುವ ಉನ್ನತ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸಿಲ್ಲ.  ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆ ‘ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕದ ಮೊತ್ತವನ್ನು ಸರ್ಕಾರಕ್ಕೆ ಜಮೆಯಾಗಬೇಕಾಗಿರುವ ಮೊತ್ತದಿಂದ ವಿನಾಯಿತಿ ನೀಡಿದರೆ ರಾಜಸ್ವ ನಷ್ಟವಾಗುತ್ತದೆ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ದಾಖಲೆಯಿಂದ ಗೊತ್ತಾಗಿದೆ. 

ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್‌ ಮತ್ತು ಮಧ್ಯಮಾವಧಿ  ವಿತ್ತೀಯ ಯೋಜನೆಯ ಪ್ರಕಾರ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಜಿಎಸ್‌ಟಿ ಮೊತ್ತವನ್ನು ಕೇಂದ್ರ ಸರ್ಕಾರ ಸಕಾಲದಲ್ಲಿ ನೀಡದಿದ್ದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮುಂದುವರೆಸಲು ರಾಜ್ಯ ಸರ್ಕಾರ ಹರಸಾಹಸ ಪಡುವ ಸ್ಥಿತಿ ಇದೆ.  

ಇಂತಹ ಹೊತ್ತಿನಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಬಾಕಿ ಉಳಿಸಿಕೊಂಡಿರುವ ಶುಲ್ಕದ ಮೊತ್ತವನ್ನು ವಸೂಲು ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕಿದ್ದ ಬಿಜೆಪಿ ಸರ್ಕಾರ, 118 ಕೋಟಿ ರು.ಮೊತ್ತವನ್ನು ಮನ್ನಾ ಮಾಡಲು ಹೊರಟಿರುವುದು ಆರ್ಥಿಕ ಆಘಾತದ ಮುನ್ಸೂಚನೆ ನೀಡಿದಂತಾಗಿದೆ. 

the fil favicon

SUPPORT THE FILE

Latest News

Related Posts