ರಾಜೀವ್‌ ಆರೋಗ್ಯ ವಿ ವಿ; ಹೊರಗುತ್ತಿಗೆಯಲ್ಲಿ ಮೀಸಲಾತಿಯೇ ಇಲ್ಲ, ನಿಯಮೋಲ್ಲಂಘನೆಯೇ ಎಲ್ಲ

ಬೆಂಗಳೂರು; ಸರ್ಕಾರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಮೀಸಲಾತಿ ನೀತಿ ಅನುಸರಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟೇ ಏಕೆ ಯಾವ ವಿದ್ಯಾರ್ಹತೆಯನ್ನೂ ಪರಿಗಣಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾರೆ. 

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಿನಗೂಲಿ ನೌಕರರ ಖಾಯಂಗೊಳಿಸುವ ಕುರಿತು ಇತ್ತೀಚೆಗೆ ನಡೆದಿರುವ ಕರ್ನಾಟಕ ವಿಧಾನಪರಿಷತ್‌ನ ಅರ್ಜಿಗಳ ಸಮಿತಿ ಸಭೆ ಹೊರಗುತ್ತಿಗೆ ಪದ್ಧತಿಯ ಇನ್ನೊಂದು ಮುಖವನ್ನು ಪರಿಚಯಿಸಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಹೊರಗುತ್ತಿಗೆ ಮೇಲೆ ಯಾರು ಕೆಲಸ ಮಾಡುತ್ತಿದ್ದಾರೋ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ. ಟೆಂಡರ್‌ ಮೂಲಕ ಒಪ್ಪಂದ ಮಾಡಿಕೊಂಡು ಕೆಲಸ ಕೊಡುತ್ತೇವೆ.  ನಾವು ಮಾಡಿಕೊಂಡಿರುವ ಒಪ್ಪಂದ ಅವರ ಜತೆಗಿರುತ್ತದೆಯೇ  ಹೊರತು ನಮ್ಮ ನೌಕರರ ಜತೆ ಇರುವುದಿಲ್ಲ. ಆದ್ದರಿಂದ ನಾವು  ಯಾವುದೇ ರೋಸ್ಟರ್‌ನ್ನು  ಫಾಲೋ ಮಾಡಿರುವುದಿಲ್ಲ,’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಒಪ್ಪಿಕೊಂಡಿದ್ದಾರೆ.

ಬೇರೆ ಬೇರೆ ಇಲಾಖೆಯಲ್ಲಿಯೂ  ಗುತ್ತಿಗೆ  ಆಧಾರದ ಮೇಲೆ ನೇಮಕ ಪ್ರಕ್ರಿಯೆ ನಡೆದಿದೆ. ಆದರೆ ಎಲ್ಲಿಯೂ ಜಾಹೀರಾತು ನೀಡಿಲ್ಲ.  ರೋಸ್ಟರ್‌  ಕೂಡ ಅನುಸರಿಸಿಲ್ಲ ಎಂಬ ಮಾಹಿತಿ ನಡವಳಿಯಿಂದ ತಿಳಿದು ಬಂದಿದೆ. 

‘ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದು ಒಂದು ದೊಡ್ಡ ಹಗರಣವಾಗಿದೆ. ಗುತ್ತಿಗೆ ಆಧಾರದ ನೇಮಕಾತಿ ಯಾವ ಇಲಾಖೆಯಲ್ಲಿಯೂ ಶೇ.90ರಷ್ಟು ಸರಿಯಾಗಿಲ್ಲ,’  ಸಭೆಯಲ್ಲಿ ಸಮಿತಿ ಸದಸ್ಯ ಶಾಸಕ ಆರ್‌ ಚೌಡರೆಡ್ಡಿ  ತೂಪಲ್ಲಿ ಅವರು ಹೊರಗುತ್ತಿಗೆಯ ಇನ್ನೊಂದು ಮುಖವನ್ನು ತೆರೆದಿಟ್ಟಿರುವುದು ಗೊತ್ತಾಗಿದೆ. 

ವಿಶ್ವವಿದ್ಯಾಲಯಗಳಿಗೆ ನೇಮಕವಾಗುವ ಕುಲಪತಿಗಳು ತಮ್ಮ ಅವಧಿಯಲ್ಲಿ ತಮಗೆ  ಇಷ್ಟಬಂದಂತೆ ಸುಮಾರು  50-60 ಜನರಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ನಡೆಸುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿರುವ ಸದಸ್ಯ ಮರಿತಿಬ್ಬೇಗೌಡ ಅವರು ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಮನಸೋ ಇಚ್ಛೆ ಹೊರಗುತ್ತಿಗೆ ಅಡಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. 

ಇನ್ನು, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ  ವಿಶ್ವವಿದ್ಯಾಲಯ ಹಳೆಯ ವಿಶ್ವವಿದ್ಯಾಲಯವಾದರೂ ಈವರೆವಿಗೂ ವೃಂದ  ಮತ್ತು ನೇಮಕಾತಿ ನಿಯಮಗಳನ್ನೇ ರಚಿಸಿಕೊಂಡಿಲ್ಲ. ಆದರೆ  ಈ ವಿಚಾರ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೇ ಗೊತ್ತಿಲ್ಲ  ಎಂಬ  ಮಾಹಿತಿಯೂ ನಡವಳಿಯಿಂದ  ತಿಳಿದು ಬಂದಿದೆ.

ಅದೆ ರೀತಿ ಹೊರಗುತ್ತಿಗೆ ಆಧಾರದ ಮೇಲೆ ಮಾಡಿಕೊಳ್ಳುತ್ತಿರುವ ನೇಮಕಾತಿಯಲ್ಲಿ ಮೀಸಲಾತಿ ಪಾಲಿಸದಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ  ಸಂಸ್ಥೆಯೂ ಸೇರಿದೆ. 

‘ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನೇಮಕ ಮಾಡುವಾಗ ಜಾಹೀರಾತು  ನೀಡಿಲ್ಲ ಮತ್ತು ರೋಸ್ಟರ್‌ ಕೂಡ ಫಾಲೋ ಮಾಡಿಲ್ಲ,’ ಎಂದು ಒಪ್ಪಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಈ ವಿಚಾರದಲ್ಲಿ ನಾವು ಹಾಗೆ ಮಾಡಬಾರದಿತ್ತು ಎಂದೂ  ಸಮಿತಿ ಮುಂದೆ  ತಪ್ಪೊಪ್ಪಿಕೊಂಡಿರುವುದು ನಡವಳಿಯಿಂದ ಗೊತ್ತಾಗಿದೆ. 

SUPPORT THE FILE

Latest News

Related Posts