ಬೆಂಗಳೂರು; ಇನ್ನೆರಡು ತಿಂಗಳಲ್ಲಿ 2025-26ನೇ ಸಾಲಿನ ಆಯವ್ಯಯ ಮಂಡಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ. ಆದರೆ ಡಿಸೆಂಬರ್ ಅಂತ್ಯಕ್ಕೆ ವೆಚ್ಚದ ಪ್ರಮಾಣವು ಶೇ.60ರಷ್ಟು ಗಡಿಯನ್ನೂ ದಾಟಿಲ್ಲ. ಪ್ರಸಕ್ತ 2024-25ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ ಒಟ್ಟು ಅನುದಾನದಲ್ಲಿ ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚವಾಗಿದೆ. ಕಳೆದ ಸಾಲಿನ ವೆಚ್ಚಕ್ಕೆ ಹೋಲಿಸಿದರೇ ಈ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಕೇವಲ ಶೇ.2.3ರಷ್ಟು ಮಾತ್ರ ಪ್ರಗತಿಯಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನ ಬಜೆಟ್ ಅನುದಾನದಲ್ಲಿ ಅಕ್ಟೋಬರ್ ಅಂತ್ಯಕ್ಕೆ ಶೇ.35.41ರಷ್ಟೇ ಪ್ರಗತಿ ಆಗಿತ್ತು. ನವೆಂಬರ್ ಮತ್ತು ಡಿಸೆಂಬರ್ ಅಂತ್ಯಕ್ಕೆ ಶೇ.21.93ರಷ್ಟು ಮಾತ್ರ ವೆಚ್ಚದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ಜನವರಿ 6ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಖರ್ಚು ವೆಚ್ಚದ ಲೆಕ್ಕಾಚಾರದ ಕುರಿತು ಚರ್ಚೆಯಾಗಿದೆ.
ಸಭೆಯ ನಡವಳಿಗಳು ಮತ್ತು ಸಭೆಗೆ ಮಂಡನೆಯಾಗಿದ್ದ ಇಲಾಖೆಗಳ ಪಕ್ಷಿನೋಟದ ಚಿತ್ರಣದ ದಾಖಲೆಗಳೂ ‘ದಿ ಫೈಲ್’ಗೆ ಲಭ್ಯವಾಗಿವೆ.
2024-25ನೇ ಸಾಲಿನಲ್ಲಿ ಒಟ್ಟು 3,30,960 ಕೋಟಿ ರು ರು ಪೈಕಿ ಡಿಸೆಂಬರ್ ಅಂತ್ಯಕ್ಕೆ 2,03,050 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,89,780 ಕೋಟಿ ರು ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ.57.34ರಷ್ಟು ಪ್ರಗತಿಯಾಗಿದೆ. ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 1,86,379 ಕೋಟಿ ರು. ಬಿಡುಗಡೆಯಾಗಿತ್ತು. ಆ ಪೈಕಿ 1,63,665 ಕೋಟಿ ರು. ವೆಚ್ಚವಾಗಿತ್ತು. ಒಟ್ಟಾರೆ ಅನುದಾನಕ್ಕೆ ಶೇ.55ರಷ್ಟು ವೆಚ್ಚವಾಗಿತ್ತು. ಕಳೆದ ಸಾಲಿಗಿಂತ ಶೇ.2.3ರಷ್ಟು ಮಾತ್ರ ಪ್ರಗತಿ ಆಗಿದೆ. ಅಂಕಿ ಅಂಶಗಳಲ್ಲಿ 26,115 ಕೋಟಿ ರು ಹೆಚ್ಚಿಗೆ ವೆಚ್ಚವಾಗಿರುವುದು ಸಭೆ ನಡವಳಿಗಳಿಂದ ತಿಳಿದು ಬಂದಿದೆ.
ಪ್ರವಾಸೋದ್ಯಮ, ಪರಿಶಿಷ್ಟ ಪಂಗಡಗಳು, ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ, ಜವಳಿ, ಗಣಿ), ಯುವ ಸಬಲೀಕರಣ ಇಲಾಖೆಗಳು ಶೇ.40ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿವೆ.
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಕೇಂದ್ರವು ತನ್ನ ಪಾಲಿನ 24,647 ಕೋಟಿ ರು.ಗಳ ಪೈಕಿ 14,778 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಇದು ಒಟ್ಟು ಅನುದಾನಕ್ಕೆ ಹೋಲಿಸಿದರೆ ಶೇ.60ರಷ್ಟಿದೆ. ರಾಜ್ಯದ ಪಾಲೂ ಸೇರಿದಂತೆ ಒಟ್ಟಾರೆ 29,340 ಕೋಟಿ ರು. ವೆಚ್ಚವಾಗಿದೆ. ಒಟ್ಟಾರೆ ಲಭ್ಯ ಅನುದಾನಕ್ಕೆ ಶೇ.80ರಷ್ಟು ಪ್ರಗತಿ ಸಾಧಿಸಿರುವುದು ಗೊತ್ತಾಗಿದೆ.
ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ 27,570.63 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 15,739 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ 15,284 ಕೋಟಿ ರು. ವೆಚ್ಚವಾಗಿದೆ. ಗಿರಿಜನ ಉಪ ಯೋಜನೆ ಅಡಿಯಲ್ಲಿ 11,419 ಕೋಟಿ ರು.ಗಳ ಒಟ್ಟು ಅನುದಾನದಲ್ಲಿ ಡಿಸೆಂಬರ್ ಅಂತ್ಯಕ್ಕೆ 5,665 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 5,573 ಕೋಟಿ ರು ವೆಚ್ಚವಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆಯಲ್ಲಿ ಒಟ್ಟು ಅನುದಾನಕ್ಕೆ ಶೇ. 51ರಷ್ಟು ಮತ್ತು ಗಿರಿಜನ ಉಪಯೋಜನೆ ಅನುದಾನಕ್ಕೆ ಶೇ.46ರಷ್ಟು ಮಾತ್ರ ವೆಚ್ಚವಾಗಿರುವುದು ತಿಳಿದು ಬಂದಿದೆ.
ಅಕ್ಟೋಬರ್ 21ರಂದೇ ನಡೆದಿದ್ದ ಕೆಡಿಪಿ ಸಭೆಯ ನಡವಳಿಯಲ್ಲೇ ದಾಖಲಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅನುದಾನದಲ್ಲಿ ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದರು.
ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆಗಳಲ್ಲಿ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ಮನೆ ನಿರ್ಮಾಣದಲ್ಲಿಯೂ ಪ್ರಗತಿ ಕುಂಠಿತವಾಗಿದೆ ಎಂದು ಸಭೆಯ ನಡವಳಿಯಲ್ಲಿ ದಾಖಲಾಗಿತ್ತು.
ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಇಂಟ್ರೆಸ್ಟ್ ಡಿಪಾಸಿಟ್ ಸರ್ಟಿಫಿಕೇಟ್ ನೀಡಿಲ್ಲ. ಹೀಗಾಗಿ ಎರಡನೇ ಕಂತೂ ಬಿಡುಗಡೆ ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.
ಕಳೆದ ವರ್ಷ ಇದೇ ಸಮಯಕ್ಕೆ (ಅಕ್ಟೋಬರ್ 21, 2023) ಶೇ.36.98ರಷ್ಟು ಖರ್ಚು ಮಾಡಿತ್ತು. ಪ್ರಸಕ್ತ ಸಾಲಿನ ಈ ಸಮಯಕ್ಕೆ (ಅಕ್ಟೋಬರ್ 21,2024) ಹೋಲಿಸಿದರೆ ಕಳೆದ ವರ್ಷಕ್ಕಿಂತಲೂ ಶೇ.1ರಷ್ಟು ಕಡಿಮೆ ವೆಚ್ಚ ಮಾಡಿದೆ ಎಂದು ಸಭೆ ನಡವಳಿಯಲ್ಲೇ ದಾಖಲಾಗಿತ್ತು.
2024-25ನೇ ಸಾಲಿನಲ್ಲಿ ಆಯವ್ಯಯ ಅಂದಾಜು 3,11,586, ಪ್ರಾಥಮಿಕ ಶಿಲ್ಕು 17,574 ಕೋಟಿ ಸೇರಿ ಒಟ್ಟು 3,29,160 ಕೋಟಿ ರು. ಇದೆ. ಈ ಪೈಕಿ ಅಕ್ಟೋಬರ್ 21ರ ಅಂತ್ಯಕ್ಕೆ 1,50,834.97 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 1,33,827.97 ಕೋಟಿ ರು. ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ. 35.41ರಷ್ಟು ಪ್ರಗತಿಯಾಗಿತ್ತು.
ಶೇ.35.41ರಷ್ಟು ವೆಚ್ಚ; ಹಗರಣಗಳಲ್ಲಿ ಉಸಿರು ಕಟ್ಟಿದ ಸರ್ಕಾರ, ಮೈಗಳ್ಳರಿಗೆ ಸ್ವರ್ಗಸೀಮೆಯಾಯಿತೇ?
‘ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 1,25,115.63 ಕೋಟಿ ವೆಚ್ಚವಾಗಿದ್ದು ಒಟ್ಟಾರೆ ಅನುದಾನಕ್ಕೆ ಶೇ.36.98ರಷ್ಟು ವೆಚ್ಚವಾಗಿದೆ,’ ಎಂಬ ಅಂಶವನ್ನು ನಡವಳಿಯಲ್ಲಿ ಉಲ್ಲೇಖಿಸಿತ್ತು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಸ್ವಚ್ಛ ಭಾರತ (ನಗರ) ಕಾರ್ಯಕ್ರಮಗಳಡಿಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1,012.00 ಕೋಟಿ ರು. ಇದೆ. ಆದರೆ ಬಹಳ ಕಡಿಮೆ ವೆಚ್ಚವಾಗಿತ್ತು.
ಅರ್ಧ ವರ್ಷ ಕಳೆದರೂ 22 ಇಲಾಖೆಗಳಲ್ಲಿ ಖರ್ಚೇ ಆಗದ 32,250.02 ಕೋಟಿ; ಕುಸಿದ ಆಡಳಿತ ಯಂತ್ರ?
2024-25ನೇ ಸಾಲಿನಲ್ಲಿ ಒಟ್ಟು 3.28 ಲಕ್ಷ ಕೋಟಿ ರು ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಸೆ.21ರ ಅಂತ್ಯಕ್ಕೆ 1.26 ಲಕ್ಷ ಕೋಟಿ ರು. ಬಿಡುಗಡೆ ಆಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ. 40.67ರಷ್ಟಿತ್ತು ಈ ಪೈಕಿ 1.11 ಲಕ್ಷ ಕೋಟಿ ರು. ಒಟ್ಟು ವೆಚ್ಚವಾಗಿದೆ. ಇದು ಸಹ ಒಟ್ಟು ಅನುದಾನಕ್ಕೆ ಶೇ. 34.00 ರಷ್ಟಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ ಶೇ. 27.37ರಷ್ಟು ಮಾತ್ರ ವೆಚ್ಚವಾಗಿತ್ತು.
ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರು. ಅನುದಾನದ ಪೈಕಿ 1,003.54 ಕೋಟಿ ರು (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರು. ಮಾತ್ರ ಖರ್ಚಾಗಿದೆ. ಖರ್ಚು ಮಾಡಲು ಇನ್ನೂ 241.63 ಕೋಟಿ ರು. ಬಾಕಿ ಇತ್ತು.
ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!
2023-24ನೇ ಸಾಲಿಗೆ ಹೋಲಿಸಿದರೇ ಸೆಪ್ಟಂಬರ್ ಅಂತ್ಯಕ್ಕೆ ಶೇ. 31ರಷ್ಟು ಅನುದಾನ ಖರ್ಚು ಮಾಡಿತ್ತು. 2024-25ನೇ ಸಾಲಿನ ಸೆಪ್ಟಂಬರ್ ಅಂತ್ಯಕ್ಕೆ ಶೇ. 34.96ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಶೇ.3ರಷ್ಟು ಮಾತ್ರ ಖರ್ಚಾಗಿದ್ದನ್ನು ಸ್ಮರಿಸಬಹುದು.