ಬೆಂಗಳೂರು; ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ವಿಜಯಪುರ, ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳು, ಪರಮಾಣು ವಿದ್ಯುತ್ ಸ್ಥಾವರಕ್ಕೆ ಅಂದಾಜು 4,800 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನುಗಳನ್ನು ಗುರುತಿಸಿದ್ದಾರೆ.
ಜಿಲ್ಲಾಧಿಕಾರಿಗಳು ನೀಡಿರುವ ವರದಿಗಳನ್ನಾಧರಿಸಿ 2025 ಜನವರಿ 8ರ ಇಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಇಂಧನ ಸಚಿವ ಕೆ ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಮಂಡಿಸಿರುವ ಟಿಪ್ಪಣಿ ಮತ್ತಿತರ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಎನ್‌ಟಿಪಿಸಿ ಕೋರಿಕೆಯಂತೆ 4,800 ಎಕರೆ ವಿಸ್ತೀರ್ಣದ ಜಮೀನುಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಬೇಕಿತ್ತು. ಅದರಂತೆ ವಿಜಯಪುರದ ಮಣ್ಣೂರು, ಕೊಪ್ಪಳದ ಕುಕನಪಲ್ಲಿ ಮತ್ತು ರಾಯಚೂರು ಜಿಲ್ಲೆಯ ಹಲಕಾವಟಗಿ ಗ್ರಾಮದಲ್ಲಿ ಜಮೀನುಗಳನ್ನು ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಮಣ್ಣೂರಿನಲ್ಲಿ 1,200 ಎಕರೆಯನ್ನು ತಹಶೀಲ್ದಾರ್ ಗುರುತಿಸಿದ್ದಾರೆ.
ಕುಕನಪಲ್ಲಿಯಲ್ಲಿ 2,000 ಎಕರೆ ಮತ್ತು ಇದಕ್ಕೆ ಹೊಂದಿಕೊಂಡಂತಿರುವ ಇನ್ನೂ 1,200 ಎಕರೆ ವಿಸ್ತೀರ್ಣದ ಜಮೀನುಗಳನ್ನು ಕೊಪ್ಪಳದ ಕಂದಾಯ ನಿರೀಕ್ಷಕರು ಮತ್ತು ಶಿರಸ್ತೆದಾರರು ಗುರುತಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.
ಮಣ್ಣೂರಿನಲ್ಲಿ ಗುರುತಿಸಿರುವ 1,200 ಎಕರೆ ವಿಸ್ತೀರ್ಣದ ಜಮೀನುಗಳ ವಿವರಗಳ ಬಗ್ಗೆ ವಿಜಯಪುರ ಜಿಲ್ಲಾಧಿಕಾರಿ ಅವರು ಸದ್ಯದಲ್ಲೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದ್ದಾರೆ. ಅದೇ ರೀತಿ ಕೊಪ್ಪಳದ ಶಿರಸ್ತೆದಾರರು ಮತ್ತು ಕಂದಾಯ ನಿರೀಕ್ಷಕರು 2,000 ಎಕರೆ ವಿಸ್ತೀರ್ಣದ ಜಮೀನುಗಳನ್ನು ತಪಾಸಣೆ ನಡೆಸಿ ಗುರುತಿಸಿರುವುದು ತಿಳಿದು ಬಂದಿದೆ.
ಎನ್‌ಟಿಪಿಸಿಯು ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇದಕ್ಕಾಗಿ ಕೊಪ್ಪಳ ಜಿಲ್ಲೆಯ ಕರಡಿಗುಡ್ಡ, ರಾಯಚೂರು ಜಿಲ್ಲೆಯ ಹಲಕಾವಟಗಿ, ವಿಜಯಪುರದ ಮಣ್ಣೂರಿನಲ್ಲಿ ಸ್ಥಳ ಗುರುತಿಸಿತ್ತು.
ಈ ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಕನಿಷ್ಠ 1,200 ಎಕರೆ ಜಮೀನಿನ ಅಗತ್ಯತೆ ಇದೆ. ಈ ಜಾಗಗಳು ಪರಮಾಣು ಯೋಜನೆಯ ಅಭಿವೃದ್ಧಿಗೆ ಸೂಕ್ತವಾಗಿದೆಯೇ ಎಂದು ತಿಳಿಯಲು ಪ್ರಾಥಮಿಕ ಅಧ್ಯಯನಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರವನ್ನು ಕೋರಿತ್ತು.
ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಡಿಸೆಂಬರ್ 2ರಂದು ಮನೋಹರ್ ಲಾಲ್ ಅವರಿಗೆ ಪತ್ರ ಬರೆದಿದ್ದರು. ಈ ಎಲ್ಲಾ ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ಪ್ರಸ್ತಾವಿತ ಜಾಗವು ಲಭ್ಯವಿದೆಯೆ, ಬೇರೆ ಯಾವುದೇ ನಿರ್ಮಾಣ, ಯೋಜನೆಗಳನ್ನು ಹೊಂದಿಲ್ಲವೇ ಎಂಬುದರ ಕುರಿತು ಪರಿಶೀಲಿಸಿ ವರದಿ ನೀಡಬೇಕು ಎಂದು ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು 2024ರ ಜೂನ್ 14ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯು 2024 ಜೂನ್ 26ರಂದು ವಿಜಯಪುರ,
ರಾಯಚೂರು ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ 2024ರ ನವೆಂಬರ್ 28ರಂದು ಪತ್ರಗಳನ್ನು ಬರೆದಿತ್ತು.
ಅಲ್ಲದೇ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಅವರೂ ಸಹ 2024ರ ನವೆಂಬರ್ 4ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರವನ್ನಾಧರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರೂ ಸಹ ಮನೋಹರ್ ಲಾಲ್ ಅವರಿಗೆ ಪತ್ರ ಬರೆದಿದ್ದರು.
ಅ ನಂತರ ಕೊಪ್ಪಳ, ಗಂಗಾವತಿ, ಕಾರಟಗಿ, ಕುಕನೂರು, ಯಲಬುರ್ಗಾ, ಕನಕಗಿರಿ ತಾಲೂಕಿನಲ್ಲಿ 1200 ಎಕರೆ ಭೂಮಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದನ್ನು ಸ್ಮರಿಸಬಹುದು.
ಪರಮಾಣು ಅಣು ಸ್ಥಾವರ ಆರಂಭಿಸಿದರೆ ಜನರ ಆರೋಗ್ಯ ಹದಗೆಡುವುದಲ್ಲದೇ ಉಳುಮೆ ಮಾಡುವ ರೈತರ ಭೂಮಿ ಕೈಗಾರಿಕೆಗಳ ಪಾಲಾಗಲಿದೆ ಎಂಬ ಆತಂಕ ಇಲ್ಲಿಯ ಜನರದ್ದಾಗಿದೆ. ವಾಸ್ತವದಲ್ಲಿ ಪರಮಾಣು ಸ್ಥಾವರದಿಂದ ಧೂಳು ಹೊರ ಬರದಿದ್ದರೂ ಬೃಹತ್ ಯೋಜನೆಯಾಗಿರುವುದರಿಂದ 1200ಎಕರೆಗೂ ಹೆಚ್ಚು ಭೂಮಿ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ.