ಮೈಸೂರು ರಾಜ ಮನೆತನಕ್ಕೆ 3,011.66 ಕೋಟಿ ರು ಮೊತ್ತದ ಟಿಡಿಆರ್; ಬೊಕ್ಕಸಕ್ಕೆ ಹೊರೆಯಾಗಲಿದೆಯೇ?

ಬೆಂಗಳೂರು; ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಅವರ ಕಾನೂನು ವಾರಸುದಾರರಿಗೆ ಕರ್ನಾಟಕ ಸ್ಟಾಂಪ್ ಕಾಯ್ದೆಯ ಪ್ರಕಾರ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಒಟ್ಟು ಮೊತ್ತವು ಬರೋಬ್ಬರಿ 3,011.66 ಕೋಟಿ ರು ಆಗಲಿದೆ.

 

ಜಯಮಹಲ್‌ ಹಾಗೂ ಬಳ್ಳಾರಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಅರಮನೆ ಮೈದಾನದ ಭೂಮಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‍‌) ನೀಡಬೇಕು ಎಂದು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವ ಬೆನ್ನಲ್ಲೇ ಬಿಬಿಎಂಪಿಯು ಈ ಲೆಕ್ಕಾಚಾರ ಮಾಡಿದೆ.

 

ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್  ಗಿರಿನಾಥ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2024ರ ಡಿಸೆಂಬರ್‍‌ 13 ಮತ್ತು 16ರಂದು ಎರಡು ಪತ್ರ ಬರೆದಿದ್ದಾರೆ. ಈ ಪತ್ರಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

2024ರ ಮೇ 5ರಂದು ಹೊರಡಿಸಿದ್ದ ಸರ್ಕಾರದ ಆದೇಶದ ಪ್ರಕಾರ ಟಿಡಿಆರ್‍‌ ಮೊತ್ತವು 1,50,79,007.03 ಕೋಟಿ ರು.ಗಳಾಗಿತ್ತು. ಕರ್ನಾಟಕ ಸ್ಟ್ಯಾಂಪ್ಸ್ ಆಕ್ಟ್ 1957ರ ಅನುಗುಣವಾಗಿ ಅಕ್ಕಪಕ್ಕದ ಆಸ್ತಿಗಳ ಮಾರ್ಗದರ್ಶಿ ಮೌಲ್ಯದ ಪ್ರಕಾರ ಹೊಸ ಟಿಡಿಆರ್ ನೀಡುವಂತೆ ಏಜೆನ್ಸಿಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 2,000 ಕೋಟಿ ದಾಟಲಿದೆ ಎಂದು ಅಂದಾಜಿಸಿತ್ತು.

 

 

2023-24 ರಲ್ಲಿ ಪರಿಷ್ಕೃತ ಮೌಲ್ಯಗಳ ಪ್ರಕಾರ ಪ್ರದೇಶದಲ್ಲಿ ಮಾರ್ಗದರ್ಶಿ ಮೌಲ್ಯವು ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ  2.83 ಲಕ್ಷ ರು., ಮತ್ತು ಜಯಮಹಲ್ ರಸ್ತೆಯಲ್ಲಿ ಪ್ರತಿ ಚದರ ಮೀಟರ್‌ಗೆ  2.04 ಲಕ್ಷ ರು. ಇದೆ.

 

ಸದ್ಯದ ಮೌಲ್ಯವನ್ನು ಪರಿಗಣಿಸಿರುವ ಬಿಬಿಎಂಪಿಯು, ಈ ಮೊತ್ತವು 3,011.66 ಕೋಟಿ ಆಗಲಿದೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.

 

2024ರ ಮೇ 5ರಂದು ಹೊರಡಿಸಿದ್ದ ಆದೇಶದ ಪ್ರಕಾರ ಬಿಬಿಎಂಪಿಯು ಮಾಡಿದ್ದ ಲೆಕ್ಕಾಚಾರಕ್ಕೂ ಸುಪ್ರೀಂ ಕೋರ್ಟ್‌ ಆದೇಶ ಹೊರಬಿದ್ದ ನಂತರ ಮಾಡಿರುವ ಲೆಕ್ಕಾಚಾರಕ್ಕೆ ಅಜಗಜಾಂತರವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಮೇ 24ರಂದು ಹೊರಡಿಸಿದ್ದ ಆದೇಶದ ಪ್ರಕಾರ ಪ್ರಮೋದಾದೇವಿ ಒಡೆಯರ್‍‌ ಅವರ ಹೆಸರಿನಲ್ಲಿರುವ ಒಟ್ಟಾರೆ 31,836.16 ಚದರ ಮೀಟರ್‍‌ ವಿಸ್ತೀರ್ಣದ ಕಾಲ್ಪನಿಕ ಭೂಮಿಗೆ 38,41,987 ರು., ಇಂದ್ರಾಕ್ಷಿ ದೇವಿ ಅವರ ಹೆಸರಿನಲ್ಲಿರುವ 2,441.36 ಚದರ ಮೀಟರ್‍‌ಗೆ 2,94,623.32 ರು., ರಾಮಚಂದ್ರ ರಾಜ ಅರಸ್ (ದಿವಂಗತ) ಅವರ ಕಾನೂನುಬದ್ಧ ವಾರಸುದಾರರಾದ ಗಾಯತ್ರಿದೇವಿ ಮತ್ತಿತರರ ಹೆಸರಿನಲ್ಲಿರುವ 5,916.88 ಚದರ ಮೀಟರ್‍‌ಗೆ 7,14,049.08 ರು., ವಿಶಾಲಾಕ್ಷಿದೇವಿ ಅವರ ಹೆಸರಿನಲ್ಲಿರುವ 5,954.50 ಚದರ ಮೀಟರ್‍‌ ವಿಸ್ತೀರ್ಣದ ಪ್ಯಾಲೇಸ್‌ ಗ್ರೌಂಡ್‌ಗೆ 7,18,589.06 ರು., ಕಾಮಾಕ್ಷಿ ದೇವಿ ಅವರ ಹೆಸರಿನಲ್ಲಿರುವ 5,929.80 ಚದರ ಮೀಟರ್‍‌ಗೆ 7,15,608.26 ರು., ಆಗಲಿದೆ ಎಂದು ಲೆಕ್ಕಾಚಾರ ಮಾಡಿತ್ತು.

 

ಅದೇ ರೀತಿ ದಿವಂಗತ ಮೀನಾಕ್ಷಿ ದೇವಿ ಅವರ ಹಕ್ಕುದಾರರು ಎಂದು ಹೇಳಲಾಗಿರುವ ಎಂ ಎಲ್‌ ವರ್ಚಸ್ವಿನ್‌ ರಾಜೇ ಮತ್ತಿತರರ ಹೆಸರಿಲ್ಲಿರುವ 6,119.78 ಚದರ ಮೀಟರ್‍‌ಗೆ 7,38,535.05 ರು., ದಿವಂಗತ ಜಯ ಚಾಮರಾಜೇಂದ್ರ ಒಡೆಯರ್ ಅವರ ಉತ್ತರಾಧಿಕಾರಿಗಳ ಹೆಸರಿನಲ್ಲಿರುವ 22,619.36 ಚದರ ಮೀಟರ್‍‌ಗೆ 27, 29, 704.36 ರು., ಇಂದ್ರಾಕ್ಷಿ ದೇವಿ (ತ್ರಿಪುರ ವಾಸಿನಿ) ಅವರ ಹೆಸರಿನಲ್ಲಿರುವ 340.50 ಚದರ ಮೀಟರ್‍‌ಗೆ 41,091.54 ರು., ಪ್ರಮೋದಾದೇವಿ ಒಡೆಯರ್‍‌ ಅವರ ಹೆಸರಿನಲ್ಲಿರುವ 43,792.00 ಚದರ ಮೀಟರ್‍‌ಗೆ 52,84,818.56 ರು. ಟಿಡಿಆರ್‍‌ ಮೌಲ್ಯ ಆಗಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಆದರೀಗ ಇದೇ ಪ್ರಕರಣದಲ್ಲಿ ಅರಮನೆ ರಸ್ತೆ ಮತ್ತು ಇದಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ, ಜಯಮಹಲ್‌ ರಸ್ತೆಯ ಮೌಲ್ಯ ಹೆಚ್ಚಾಗಿದೆ. ಇದರ ಪ್ರಕಾರ ಪ್ರತಿ ಚದರ ಮೀಟರ್‍‌ವೊಂದಕ್ಕೆ 2,83,500 ರು.ಇದೆ. ಸುಪ್ರಿಂ ಕೋರ್ಟ್‌ ನೀಡಿರುವ ಆದೇಶದ ಪ್ರಕಾರ ಲೆಕ್ಕಾಚಾರ ಮಾಡಿದರೆ ಟಿಡಿಆರ್‍‌ ಮೌಲ್ಯವು 3,011.66 ಕೋಟಿ ರು ಆಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

 

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬರೆದಿರುವ ಪತ್ರದ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಹಾಗೂ ಅರವಿಂದ ಕುಮಾರ್‍‌ ಅವರಿದ್ದ ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಪ್ರಕರಣವನ್ನು ಇತ್ಯರ್ಥಪಡಿಸದೇ ಹಲವಾರು ವರ್ಷಗಳ ಕಾಲ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅಡಿಯಲ್ಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಟಿಡಿಆರ್‍‌ ನೀಡಬೇಕು ಎಂದು ಪೀಠವು ಸೂಚಿಸಿತ್ತು.

 

ಈ ಭೂಮಿಯನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ರಸ್ತೆ ವಿಸ್ತರಣೆಗಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾಗ ಹಾಗೂ ಅಂದಾಜು ಮೌಲ್ಯಗಳ ಮೇಲೆ ಟಿಡಿಆರ್‍‌ ನೀಡಲು ಪ್ರಯತ್ನಿಸಿರುವುದು ಸ್ವೀಕಾರಾರ್ಹ ಅಲ್ಲ ಎಂದೂ ಪೀಠ ಹೇಳಿತ್ತು.

 

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಈಗ ತನ್ನ ಕ್ರಮಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಆಶ್ತಿಯ ಮೌಲ್ಯವನ್ನು ತನ್ನ ಇಚ್ಛೆ ಅಥವಾ ಕಲ್ಪನೆಗಳಿಗೆ ಯಾವುದೇ ಕಾಲ್ಪನಿಕ ಮೌಲ್ಯದ ಮೇಲೆ ಟಿಡಿಆರ್‍‌ ನೀಡುವ ಉದ್ದೇಶಗಳಿಗಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವುದನ್ನು ಸ್ಮರಿಸಬಹುದು.

 

ಪ್ರಕರಣದ ವಿವರ

 

ಈ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಬದಲಿಯಾಗಿ ಟಿಡಿಆರ್‍‌ ನೀಡುವ ಪ್ರಸ್ತಾವವನ್ನು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅರಮನೆ ಮಾಲೀಕತ್ವದ ಕುರಿಉತ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮೈಸೂರು ರಾಜವಂಶಸ್ಥರ ಮುಂದಿಟ್ಟಿದ್ದರು. ಎರಡೂ ಕಡೆಯವರು ಒಪ್ಪಿದ್ದಂರಿಂದ ರಸ್ತೆ ವಿಸ್ತರಣೆಗಾಗಿ ಬೇಕಾದ ಜಾಘವನ್ನು ಟಿಡಿಆರ್‍‌ ನೀಡಿ ಸ್ವಾಧೀನಪಡಿಸಿಕೊಳ್ಲಲು ಸುಪ್ರೀಂ ಕೋರ್ಟ್‌ ಸಮ್ಮತಿ ನೀಡಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸರ್ಕಾರಗಳು ಈ ಹಿಂದಿನ ಆದೇಶಗಳನ್ನು ಮೂರು ಬಾರಿ ಮಾರ್ಪಾಡು ಮಾಡಿವೆ. ವಿವಾದಿತ ಜಾಘವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಘಿ 13.91 ಲಕ್ಷ ಚದರಡಿ ನಿರ್ಮಿಸಿದ ಪ್ರದೇಶ ಹಸ್ತಾಂತರಿಸುವ ಪ್ರಸ್ತಾವನ್ನೂ ಒಳಗೊಂಡಿತ್ತು.

 

ಟಿಡಿಆರ್‍‌ನಿಂದಾಗಿ ಅನುಮತಿ ನೀಡಿದ ವ್ಯಾಪ್ತಿಯನ್ನು ಮೀರಿ ನಿರ್ಮಾಣ ಮಾಡುವುದಕ್ಕೆ ಡೆವಲಪರ್‍‌ಗಳಿಗೆ ಅವಕಾಶವಿರುತ್ತದೆ. ಸರ್ಕಾಅರವು ಪರಿಹಾರವಾಗಿ ಹಣವನ್ನು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಟಿಡಿಆರ್‍‌ ಅವಕಾಶ ನೀಡುತ್ತದೆ. ರಸ್ತೆ ವಿಸ್ತರಣೆಗಾಗಿ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ಟಿಡಿಆರ್‍‌ ನೀಡಲು ಮಾರ್ಚ್‌ನಲ್ಲಿ ನಡೆದಿದ್ದ ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts