ಶಕ್ತಿ ಯೋಜನೆ; ಸಾರಿಗೆ ನಿಗಮಗಳಿಗೆ ಇನ್ನೂ 513.34 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು: ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸಹಾಯಾನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಅಕ್ಟೋಬರ್‍‌ವರೆಗೆ ಒಟ್ಟಾರೆ 513.34 ಕೋಟಿ ರು.ಗಳನ್ನು ಸಾರಿಗೆ ನಿಗಮಗಳಿಗೆ ಬಾಕಿ ಉಳಿಸಿಕೊಂಡಿದೆ.

 

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಮತ್ತು ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರೀಸ್‌ ಅವರು ಕೇಳಿದ್ದ ಪ್ರಶ್ನೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

 

ಸಾರಿಗೆ ನಿಗಮಗಳು ಕ್ಲೈಮ್‌ ಮಾಡುತ್ತಿರುವ ವೆಚ್ಚಕ್ಕಿಂತಲೂ ಅತ್ಯಂತ ಕಡಿಮೆ ಸಹಾಯ ಧನ ಬಿಡುಗಡೆ ಮಾಡುತ್ತಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಎಲ್ಲಾ ಆರ್ಥಿಕ ಬಿಕ್ಕಟ್ಟುಗಳ ನಡುವೆಯೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

2023-24ನೇ ಸಾಲಿನ (ಜೂನ್‌ 23ರಿಂದ ಮಾರ್ಚ್‌ 24ರವರೆಗೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಶಕ್ತಿ ಯೋಜನೆಗಾಗಿ ಸರ್ಕಾರದಿಂದ ಇನ್ನೂ 1,180.61 ಕೋಟಿ ರು ಬಿಡುಗಡೆ ಮಾಡಲು ಬಾಕಿ ಉಳಿಸಿಕೊಂಡಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 452.61 ಕೋಟಿ ರು., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 205.43 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 283.90 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 238.65 ಕೋಟಿ ರು ಸೇರಿ ಒಟ್ಟಾರೆ 1,180.61 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಉತ್ತರ ಒದಗಿಸಿದ್ದಾರೆ.

 

2024-25ನೇ ಸಾಲಿಗೆ ಒಟ್ಟಾರೆ 513 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 230.60 ಕೋಟಿ ರು., ಬೆಂಗಳೂರು ಮಹಾನಗರ ಸಾರಿಗೆ ನಿಗಮಕ್ಕೆ 75.39 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 111.79 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 97.01 ಕೋಟಿ ರು ಸೇರಿ ಒಟ್ಟಾರೆ 513.80 ಕೋಟಿ ರು.ಗಳನ್ನು ಬಿಡುಗಡೆ ಮಾಡಿಲ್ಲ ಎಂದು ಉತ್ತರದಿಂದ ಗೊತ್ತಾಗಿದೆ.

 

 

 

‘2023-24ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿದ್ದ ಅನುದಾನವನ್ನು ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ ನಿಗದಿಪಡಿಸಿರುವ ಅನುದಾವನ್ನು ಹಂತ ಹಂತವಾಗಿ ಮಾಹೆವಾರು ಬಿಡುಗಡೆಗೊಳಿಸಲಾಗುತ್ತಿದೆ. ಆಯವ್ಯಯದಲ್ಲಿ ಅಗತ್ಯ ಅನುದಾನ ದೊರಕಿದ ನಂತರ ಬಾಕಿ ಅನುದಾನವನ್ನು ಸಹ ಪಾವತಿಸಲು ಕ್ರಮ ವಹಿಸಲಾಗುವುದು,’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿವರವಾದ ಉತ್ತರ ಒದಗಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ 2023-24ನೇ ಸಾಲಿನಲ್ಲಿ ಶಕ್ತಿ ಯೋಜನೆಗಾಗಿ ಒಟ್ಟಾರೆ 4,380.36 ಕೋಟಿ ರು. ವೆಚ್ಚವಾಗಿದೆ. ನರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ಒಟ್ಟಾರೆ 3,995.77 ಕೋಟಿ ರು, ಬಿಎಂಟಿಸಿಯು  2,035.46 ಕೋಟಿಯಷ್ಟು ಆದಾಯ ಸಂಗ್ರಹಿಸಿದೆ.

 

ವಾಯುವ್ಯ ಕರ್ನಾಟಕ ಸಾರಿಗೆ ನಿಗಮವು 2,342.01 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು  2,291.84 ಕೋಟಿ ರು., ಆದಾಯ ಸಂಗ್ರಹಿಸಿದೆ. ಒಟ್ಟಾರೆ ಈ ನಾಲ್ಕು ಸಾರಿಗೆ ನಿಗಮಗಳು 10,665.08 ಕೋಟಿಯಷ್ಟು ಆದಾಯ ಸಂಗ್ರಹಿಸಿದೆ ಎಂದು ಲೆಕ್ಕವನ್ನು ಒದಗಿಸಿದ್ದಾರೆ.

 

 

 

ಶಕ್ತಿ ಯೋಜನೆ ಜಾರಿಯಾದ ಜೂನ್‌ 2023ರಿಂದ 2024ರ ನವೆಂಬರ್‍‌ ವರೆಗೆ   ಸರ್ಕಾರವು ನಾಲ್ಕು ನಿಗಮಗಳಿಗೆ ಒಟ್ಟಾರೆ 6, 543.06 ಕೋಟಿ ರು. ಪಾವತಿಸಿದೆ. ಇದರಲ್ಲಿ  ಕೆಎಸ್‌ಆರ್‍‌ಟಿಸಿಗೆ 2,481.93 ಕೋಟಿ ರು., ಬಿಎಂಟಿಸಿಗೆ 1,126.05 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,613.67 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1,321.41 ಕೋಟಿ ರು. ಪಾವತಿಸಿರುವುದು ಉತ್ತರದಿಂದ ಗೊತ್ತಾಗಿದೆ.

 

ಹಾಗೆಯೇ 2023-24 ಸಾಲಿನ (ಜೂನ್ 23ರಿಂದ ಮಾರ್ಚ್‌ 24ರವರೆಗೆ 3,199.75 ಕೋಟಿ ರು.,  ಮತ್ತು 2024-25ನೇ ಸಾಲಿನ ನವೆಂಬರ್‍‌ ಅಂತ್ಯದವರೆಗೆ 3,343.33 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ.

 

 

ಒಟ್ಠಾರೆ ಈ ಎರಡೂ ವರ್ಷದಲ್ಲಿ 6,543.08 ಕೋಟಿ ರು ಅನುದಾನ ಬಿಡುಗಡೆ ಮಾಡಿದೆ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಶಕ್ತಿ’ ಉಚಿತ ಸಂಚಾರದಿಂದಲೇ ಹೆಚ್ಚಿನ ನಷ್ಟ; ಬಿಎಂಟಿಸಿ ಎಂಡಿಯಿಂದಲೇ ಬಹಿರಂಗ

 

ಶಕ್ತಿ ಯೋಜನೆಯಡಿ ಜೂನ್‌ 2023ರಿಂದ ಫೆಬ್ರುವರಿ 2024ರವರೆಗೆ ಸಹಾಯಾನುದಾನ ಬಿಡುಗಡೆ ಮಾಡಿತ್ತಾದರೂ  1,373.77 ಕೋಟಿ ರು. ಕೊರತೆಯುಂಟಾಗಿತ್ತು. ಈ ಬಗ್ಗೆ ಕೆಎಸ್‌ಆರ್‍‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಗಮನಕ್ಕೆ ತಂದಿದ್ದರು. ಆದರೂ ಸಹ ನಿಗಮಗಳು ಇರಿಸಿದ್ದ ಬೇಡಿಕೆ ಪೈಕಿ 2024ರ ಮಾರ್ಚ್‌ 13ರಂದು ಕೇವಲ 399.75 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು.  ಅಲ್ಲದೇ   ಈ ಯೋಜನೆಯಡಿ ಬಿಡುಗಡೆ ಮಾಡಲು ಇನ್ನೂ 974.02 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು.

 

ಶಕ್ತಿ ಯೋಜನೆ; 1,373 ಕೋಟಿ ರು.ನಲ್ಲಿ 399 ಕೋಟಿಯಷ್ಟೇ ಬಿಡುಗಡೆ, ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಸೇರಿದಂತೆ ಕೆಎಸ್‌ಆರ್‍‌ಟಿಸಿಗೆ 151.36 ಕೋಟಿ ರು., ಬಿಎಂಟಿಸಿಗೆ 69.77 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆಗೆ 97.31 ಕೋಟಿ ರು.,  ಕಲ್ಯಾಣ ಕರ್ನಾಟಕ ಸಾರಿಗೆಗೆ 81.29 ಕೋಟಿ ರು. ಸೇರಿ ಒಟ್ಟಾರೆ 399.75 ಕೋಟಿ ರು.,ಗ ಬಿಡುಗಡೆ ಮಾಡಿತ್ತು.

 

 

 

 

ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜೂನ್‌ ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದರು. ಪ್ರಯಾಣ ವೆಚ್ಚದ ಮರು ಪಾವತಿಗಾಗಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ 250.96 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ಇಲಾಖೆಯು ಸಾರಿಗೆ ನಿಗಮಗಳು ಸರ್ಕಾರವನ್ನು ಕೋರಿದ್ದವು.

 

ಶಕ್ತಿ ಯೋಜನೆ ಸಹಾಯಧನ ಪಾವತಿ; ಕೇಳಿದ್ದು 250 ಕೋಟಿ, ಕೊಟ್ಟಿದ್ದು 125 ಕೋಟಿ, ನೌಕರರ ವೇತನದಲ್ಲಿ ಅಡಚಣೆ?

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 4715.12 ಲಕ್ಷ ರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2185.10 ಲಕ್ಷ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 3257.59 ಲಕ್ಷ ರು., ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2390.40 ಲಕ್ಷ ರು. ಸೇರಿ ಒಟ್ಟಾರೆ 12548.21 ಲಕ್ಷ ರು.ಗಳನ್ನು ಬಿಡುಗಡೆ ಮಾಡಿತ್ತು.

 

 

ಶಕ್ತಿ ಯೋಜನೆಗೆ 687.49 ಕೋಟಿ ಆರ್ಥಿಕ ವೆಚ್ಚ; ಇನ್ನೂ ಬಿಡುಗಡೆಯಾಗದ ಮೊದಲ ಕಂತಿನ 250.96 ಕೋಟಿ ರು.

 

ಯೋಜನೆ ಆರಂಭಗೊಂಡ ದಿನದಂದೇ (ಜೂನ್‌ 11) 5,71,023 ಮಹಿಳಾ ಪ್ರಯಾಣಿಕರು ಉಚಿತ ಯೋಜನೆಯಡಿಯಲ್ಲಿ ಪ್ರಯಾಣಿಸಿದ್ದರು. ಪ್ರಯಾಣ ಮೌಲ್ಯವು 1,40,22,878 ರು. ನಷ್ಟಾಗಿತ್ತು. ಕ್ರಮೇಣ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ಹೆಚ್ಚಳಗೊಂಡಿತ್ತು.

 

 

ಶಕ್ತಿ ಯೋಜನೆ; ವಾರದಲ್ಲಿ 3.12 ಕೋಟಿ ಮಹಿಳೆಯರ ಪ್ರಯಾಣ, ಟಿಕೆಟ್‌ ಮೌಲ್ಯ 70.28 ಕೋಟಿ ರು.

 

ಶಕ್ತಿ ಯೋಜನೆ ಜಾರಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಹೆಚ್ಚುವರಿ ಸೇವೆಗಳಲ್ಲಿ ಕಾರ್ಯಾಚರಿಸಬೇಕು. ಅಲ್ಲದೇ ನೆರೆ ರಾಜ್ಯದ ಗಡಿಭಾಗಗಳಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸಮಯ ಪ್ರಯಾಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬೇಡಿಕೆ ಇಡುವ ಸಾಧ್ಯತೆಗಳೂ ಇವೆ  ಎಂದೂ ಪ್ರಸ್ತಾವನೆಯಲ್ಲಿ ತಿಳಿಸಿತ್ತು.

 

ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ

 

ಪ್ರಸ್ತಾವನೆ ಪ್ರಕಾರ ಕೆಎಸ್‌ಆರ್‍‌ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ. ಈ ಕುರಿತು ‘ದಿ ಫೈಲ್‌’ 2023ರ ಮೇ 31ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,823, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,445, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಒಟ್ಟು 4,028 ಹೊಸ ವಾಹನಗಳನ್ನು ಖರೀದಿಸಬೇಕು. ಅದೇ ರೀತಿ ಕರ್ನಾಟಕ ಸಾರಿಗೆ ನಿಗಮಕ್ಕೆ 5,178, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,415, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,425, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,775 ಸೇರಿ ಒಟ್ಟಾರೆ 13,793 ಸಿಬ್ಬಂದಿ ನೇಮಕಕ್ಕೆ ಸರ್ಕಾರವು ಸಹಾಯ ಹಸ್ತ ಚಾಚಬೇಕಿದೆ ಎಂಬ ಮಾಹಿತಿಯು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts