ಬೆಂಗಳೂರು; ರಾಜ್ಯದಲ್ಲಿ ವಕ್ಫ್ ಆಸ್ತಿಗಳ ದುರ್ಬಳಕೆ, ಒತ್ತುವರಿ ಮತ್ತು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ಸಲ್ಲಿಸಿದ್ದ ತನಿಖಾ ವರದಿಯನ್ನು ‘ದಿ ಫೈಲ್, ಇದೀಗ ಆರ್‌ಟಿಐ ಮೂಲಕ ಬಹಿರಂಗಗೊಳಿಸುತ್ತಿದೆ.
ರೈತರು ಸ್ವಾಧೀನ ಹೊಂದಿರುವ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವ ಹತ್ತಾರು ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿರುವ ಬೆನ್ನಲ್ಲೇ ವಕ್ಫ್ ಆಸ್ತಿ ದುರ್ಬಳಕೆ, ದುರುಪಯೋಗ, ಒತ್ತುವರಿಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರು ನೀಡಿದ್ದ ತನಿಖಾ ವರದಿಯು ಮುನ್ನೆಲೆಗೆ ಬಂದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಿ ತನಿಖೆ ನಡೆಸಿರುವ ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರು ನೀಡಿರುವ ಈ ತನಿಖಾ ವರದಿಯು 10ಕ್ಕೂ ಹೆಚ್ಚು ಸಂಪುಟಗಳನ್ನೊಳಗೊಂಡಿದೆ. ಇದರಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದ ಸಮಗ್ರ ಭೂ ದಾಖಲಾತಿಗಳೂ ಇವೆ. ಇದೇ ವರದಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನೂ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಪ್ರತಿ ಜಿಲ್ಲೆಗೂ ಸಂಬಂಧಿಸಿದಂತೆ ಪ್ರತ್ಯೇಕ ತನಿಖಾ ವರದಿ ನೀಡಿರುವ ಉಪ ಲೋಕಾಯುಕ್ತರು, ಪ್ರತೀ ಪ್ರಕರಣದಲ್ಲಿ ವಿವಿಧ ರೀತಿಯ ಕ್ರಮ ಜರುಗಿಸಲೂ ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.
ಸರ್ಕಾರದ ದಾಖಲೆಯಾಗಿರದ ತನಿಖಾ ವರದಿ
ವಿಶೇಷವೆಂದರೇ ಉಪ ಲೋಕಾಯುಕ್ತರು ನೀಡಿದ್ದ ಈ ತನಿಖಾ ವರದಿಯನ್ನು ಸಿದ್ದರಾಮಯ್ಯ ಅವರ ಮೊದಲ ಅವಧಿಯ ಕಾಂಗ್ರೆಸ್ ಸರ್ಕಾರವು ಸರ್ಕಾರದ ದಾಖಲೆಯನ್ನಾಗಿಸಲು ಅವಕಾಶವನ್ನೇ ನೀಡಿರಲಿಲ್ಲ. ಅಲ್ಲದೇ ತನಿಖೆ ನಡೆಸಲು 2012ರಲ್ಲಿದ್ದ ಬಿಜೆಪಿ ಸರ್ಕಾರವು ಹೊರಡಿಸಿದ್ದ ಆದೇಶವನ್ನೇ ರದ್ದುಗೊಳಿಸಿತ್ತು. ಈ ಮೂಲಕ ಉಪ ಲೋಕಾಯುಕ್ತ ಆನಂದ್ ಅವರ ವರದಿಯು ಸಾರ್ವಜನಿಕ ಮತ್ತು ಸರ್ಕಾರದ ದಾಖಲೆಯಾಗುವುದರಿಂದಲೇ ತಪ್ಪಿಸುವುದರಲ್ಲಿ ಯಶಸ್ವಿಯಾಗಿತ್ತು.
ಇದೇ ವರದಿಯನ್ನು ಕೋರಿ ಆರ್‍ಟಿಐ ಅಡಿಯಲ್ಲಿ ಕೋರಿದರೂ ವರದಿಯು ಸರ್ಕಾರದ ದಾಖಲೆಯಾಗಿಲ್ಲ ಎಂದು ಅರ್ಜಿಗಳನ್ನೇ ತಿರಸ್ಕರಿಸುತ್ತಿತ್ತು.
ವಕ್ಫ್ ಆಸ್ತಿ ದುರ್ಬಳಕೆ, ಒತ್ತುವರಿ; ತನಿಖಾ ವರದಿ ನೀಡಿದ್ದ ದಿನದಂದೇ ತನಿಖೆ ಆದೇಶವೂ ರದ್ದು
ಇದೀಗ ಲೋಕಾಯುಕ್ತ ಸಂಸ್ಥೆಯಿಂದಲೇ ಆರ್‍ಟಿಐ ಮೂಲಕ ತನಿಖಾ ವರದಿಯನ್ನು ಪಡೆದಿರುವ ‘ದಿ ಫೈಲ್’ ಅದನ್ನೀಗ ಹೊರಗೆಡವುತ್ತಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ನೀಡಿದ್ದ ವರದಿಯನ್ನಾಧರಿಸಿ 2012ರಲ್ಲಿದ್ದ ಬಿಜೆಪಿ ಸರ್ಕಾರವು ಹೆಚ್ಚಿನ ತನಿಖೆಗಾಗಿ ಉಪ ಲೋಕಾಯುಕ್ತರಿಗೆ ವಹಿಸಿತ್ತು. ಸರ್ಕಾರದ ನಿರ್ದೇಶನದಂತೆ ಅಂದಿನ ಉಪ ಲೋಕಾಯುಕ್ತರಾದ ಎನ್ ಆನಂದ್ ಅವರು ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿ ಅಂದರೇ 2016ರಲ್ಲಿ ಸರ್ಕಾರಕ್ಕೆ ಉಪ ಲೋಕಾಯುಕ್ತ ಆನಂದ್ ಅವರು ತನಿಖಾ ವರದಿಯನ್ನು ಸಲ್ಲಿಸಿದ್ದರು. ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಯು ಸಹ ವರದಿಯನ್ನು ಸ್ವೀಕರಿಸಿ ಹಿಂಬರಹ ನೀಡಿದ್ದರು.
ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆ, ಬೀದರ್, ಕಲ್ಬುರ್ಗಿ, ಮೈಸೂರು ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿ ದುರ್ಬಳಕೆ, ಅತಿಕ್ರಮಣ, ದುರುಪಯೋಗ ಆಗಿರುವುದನ್ನು ಉಪ ಲೋಕಾಯುಕ್ತ ಎನ್ ಆನಂದ್ ಅವರ ತಂಡವು ಪತ್ತೆ ಹಚ್ಚಿದೆ. ಅಲ್ಲದೇ ರಾಜ್ಯ ಸರ್ಕಾರದ ಹೊಣೆಗೇಡಿತನ, ರಾಜ್ಯ ವಕ್ಫ್ ಮಂಡಳಿ, ಜಿಲ್ಲಾ ವಕ್ಫ್ ಸಮಿತಿ, ವಕ್ಫ್ ಮಂಡಳಿ, ಮುತವಲ್ಲಿ, ಸಜ್ಜಾದೇಗಳು ಹೇಗೆಲ್ಲಾ ವಕ್ಫ್ ಆಸ್ತಿ ದುರ್ಬಳಕೆಗೆ, ದುರುಪಯೋಗಕ್ಕೆ, ಅತಿಕ್ರಮಣಕ್ಕೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿರುವುದು, ವಕ್ಫ್ ಆಸ್ತಿಗಳ ಸಂಶಯಾಸ್ಪದ ವಹಿವಾಟುಗಳನ್ನೂ ಬಯಲಿಗೆಳೆದಿದೆ.
ಮುತವಲ್ಲಿ, ಸಜ್ಜಾದೇ, ಆಡಳಿತ ಮಂಡಳಿಗಳ ವೈಯಕ್ತಿಕ ಹಿತಾಸಕ್ತಿ ಹಾಗೂ ಶೋಕಿ, ಹುಚ್ಚಾಟಗಳನ್ನೂ ಉಪ ಲೋಕಾಯುಕ್ತ ಎನ್ ಆನಂದ್ ಅವರು ಅನಾವರಣಗೊಳಿಸಿದ್ದಾರೆ. ಹಾಗೆಯೇ ಅನ್ವರ್ ಮಾಣಿಪ್ಪಾಡಿ ಅವರು ನೀಡಿದ್ದ ವರದಿಯನ್ನು ಮತ್ತಷ್ಟು ವಿಸ್ತೃತಗೊಳಿಸಿದ್ದಾರೆ.
‘ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವರದಿಯಲ್ಲಿ ಹೇಳಲಾದ ಪ್ರತಿಯೊಂದು ವಕ್ಫ್ ಆಸ್ತಿಯ ಬಗೆಗಿನ ದಾಖಲಾತಿಗಳನ್ನು ಪರಿಶೀಲಿಸಿದ್ದೇನೆ. ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಶಾಸನಬದ್ಧ ಅಧಿಕಾರವನ್ನು ಹೊಂದಿರುವ ಮುತವಲ್ಲಿಗಳು ತಮ್ಮ ಸಂಭಾವ್ಯ ಸ್ವಂತ ಲಾಭಕ್ಕಾಗಿ ವಕ್ಫ್ ಆಸ್ತಿಗಳ ನಕಲಿ ವಹಿವಾಟು, ವ್ಯವಹಾರಗಳನ್ನು ಮಾಡಿರುವುದು ಈ ವರದಿಯಿಂದ ಬಹಿರಂಗವಾಗಿದೆ,’ ಎಂದು ಉಪ ಲೋಕಾಯುಕ್ತ ಎನ್ ಆನಂದ್ ಅವರು ಉಲ್ಲೇಖಿಸಿರುವುದು ವರದಿಯಿಂದ ಗೊತ್ತಾಗಿದೆ.
ತನಿಖಾ ವರದಿಯಲ್ಲೇನಿದೆ?
ಪ್ರಥಮವಾಗಿ ಅನ್ವಯವಾಗದೇ ಇರುವ ವಿವಿಧ ಶಾಸನಗಳ ಅಡಿಯಲ್ಲಿ ವಕ್ಫ್ ಆಸ್ತಿಗಳಿಗೆ ಸ್ವಾಧೀನದ ಹಕ್ಕುಗಳನ್ನು ನೀಡಲಾಗಿದೆ. ಈ ಮೂಲಕ ವಕ್ಫ್ ಆಸ್ತಿಗಳನ್ನು ವ್ಯವಸ್ಥಿತವಾಗಿ ಕಳೆದುಕೊಳ್ಳಲಾಗಿದೆ. ಮತ್ತು ವಕ್ಫ್ ಆಸ್ತಿಯು ವ್ಯವಸ್ಥಿತವಾಗಿ ತನ್ನ ಅಧಿಕಾರವನ್ನು ಕಳೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದುಬಂದಿದೆ.
‘ಮುತವಲ್ಲಿ, ಸಜ್ಜಾದೇ, ಆಡಳಿತ ಮಂಡಳಿಯು ತನ್ನ ವೈಯಕ್ತಿಕ ಹಿತಾಸಕ್ತಿ ಹಾಗೂ ಶೋಕಿ, ಹುಚ್ಚಾಟಗಳಿಂದಾಗಿ ವಕ್ಫ್ ಆಸ್ತಿಯನ್ನು ಕಳೆದುಕೊಳ್ಳಲು, ವಕ್ಫ್ ಆಸ್ತಿಯ ದುರುಪಯೋಗಪಡಿಸಿಕೊಳ್ಳುವಲ್ಲಿ ನೇರ ಜವಾಬ್ದಾರರಾಗಿದ್ದಾರೆ. ಜಿಲ್ಲಾ ವಕ್ಫ್ ಸಮಿತಿ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳು, ತಮ್ಮ ಶಾಸನಬದ್ಧ ಅಧಿಕಾರವನ್ನು ಬಳಸಿ ಮುತವಲ್ಲಿಗಳ ಚಟುವಟಿಕೆ ಹಾಗೂ ಕರ್ತವ್ಯಗಳನ್ನು ಸೂಕ್ತ ಮೇಲ್ವಿಚಾರಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೆಚ್ಚು ಪ್ರಮಾಣದ ವಿಸ್ತೀರ್ಣದ ವಕ್ಫ್ ಆಸ್ತಿಯನ್ನು ಅಜಾಗರೂಕತೆ ಮತ್ತು ಉದ್ದೇಶಪೂರ್ವಕವಾಗಿ ಕಳೆದುಕೊಳ್ಳುವಲ್ಲಿಯೂ ಇವರು ಕಾರಣಕರ್ತರಾಗಿದ್ದಾರೆ,’ ಎಂದು ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.
ಈಗಾಗಲೇ ಕಾನೂನು ರೀತಿ ಇತ್ಯರ್ಥವಾಗಿರುವಂತೆ ಎಂದಿಂದಿಗೂ ವಕ್ಫ್ ಆಸ್ತಿಯೇ ಆಗಿರುತ್ತದೆ. ಇದನ್ನು ತಗ್ಗಿಸಲು ಅವಕಾಶವಿಲ್ಲ. ಮತ್ತೊಂದೆಡೆ ವಕ್ಫ್ ಆಸ್ತಿಯು ವಕ್ಫ್ ಆಸ್ತಿ ಎಂದೇ ಗೆಜೆಟ್ ಅಧಿಸೂಚನೆಯಲ್ಲಿ ಮಾತ್ರ ಉಳಿದಿದೆ. ಮುತವಲ್ಲಿಗಳ ಚಟುವಟಿಕೆಯಿಂದಾಗಿ ಜಿಲ್ಲಾ ವಕ್ಫ್ ಸಮಿತಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ವಕ್ಫ್ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾಗೂ ಅಜಾಗರೂಕತೆಯಿಂದ ಕಳೆದುಕೊಂಡಿರುವ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಎನ್ ಆನಂದ್ ಅವರು ಉಲ್ಲೇಖಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ರಾಜ್ಯ ವಕ್ಫ್ ಮಂಡಳಿ ಹಾಗೂ ಮುತವಲ್ಲಿಗಳು ಕಾನೂನು ಕ್ರಮವನ್ನು ಜರುಗಿಸಿದ್ದು ಅವರುಗಳು ಉದ್ದೇಶಿತ ಫಲಿತಾಂಶ ಪಡೆಯಲು ಸರಿಯಾದ ರೀತಿಯಲ್ಲಿ ಪ್ರಕರಣಗಳನ್ನು ಮುಂದುವರೆಸಿರುವುದಿಲ್ಲ. ಜಿಲ್ಲಾ ವಕ್ಫ್ ಸಮಿತಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ಆಸ್ತಿ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ವಿಫಲರಾಗಿರುತ್ತಾರೆ ಎಂದು ವಿವರಿಸಿದ್ದಾರೆ.
‘ನಾನು ಬೀದರ್ ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಿದಾಗ ವಕ್ಫ್ ಆಸ್ತಿ ವಹಿ ಅಥವಾ ವಕ್ಫ್ ವಾರ್ಷಿಕ ಆದಾಯ ವಹಿಯನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಗಮನಿಸಿರುತ್ತೇನೆ. ಮತ್ತೊಂದೆಡೆ ಇದಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆಗಳನ್ನು ಬಂಡಲ್‌ಗಳನ್ನಾಗಿ ಕಟ್ಟಿ ಅಲ್ಲಲ್ಲಿ ಬೇಕಾಬಿಟ್ಟಿ ಬಿಸಾಡಿರುವುದನ್ನು ಗಮನಿಸಿರುತ್ತೇನೆ. ಈ ರೀತಿಯ ನಿಯಮಬಾಹಿರ ಚಟುವಟಿಕೆಗಳನ್ನು ರಾಜ್ಯ ವಕ್ಫ್ ಮಂಡಳಿಯು ಗಮನಹರಿಸಿರುವುದಿಲ್ಲ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಬೆಂಗಳೂರು ನಗರದಲ್ಲಿರುವ ಬಹಳ ಮೌಲ್ಯಯುತವಾದ ವಕ್ಫ್ ಆಸ್ತಿಗಳನ್ನು ಸಂಶಯಾಸ್ಪದ ವಹಿವಾಟುಗಳ ಮೂಲಕ ದೀರ್ಘ ಅವಧಿಯ ಅಂದರೇ 99 ವರ್ಷಗಳ ಅವಧಿಯವರೆಗೆ ಗುತ್ತಿಗೆ ನೀಡಲಾಗಿದೆ. ವಕ್ಫ್ ಮತ್ತು ಫಲಾನುಭವಿಗಳ ಹಿತಾಸಕ್ತಿ ಪರಿಗಣಿಸದೇ ಹಾಗೂ ರಾಜ್ಯ ವಕ್ಫ್ ಮಂಡಳಿಯಿಂದ ಯಾವುದೇ ಪೂರ್ವಾನುಮತಿಯನ್ನು ಪಡೆದಿಲ್ಲ ಎಂಬುದನ್ನು ತನಿಖೆಯಿಂದ ಹಲವು ಪ್ರಕರಣಗಳನ್ನು ಬಯಲು ಮಾಡಿದ್ದಾರೆ.
ಈ ರೀತಿಯ ಕಾನೂನುಬಾಹಿರ ವಹಿವಾಟುಗಳು ಅಸ್ತಿತ್ವಕ್ಕೆ ಬರಲು ಅಧಿಕಾರದಲ್ಲಿರುವ ವ್ಯಕ್ತಿಗಳು, ಜಿಲ್ಲಾ ವಕ್ಫ್ ಸಮಿತಿ ಸದಸ್ಯರುಗಳು, ರಾಜ್ಯ ವಕ್ಫ್ ಮಂಡಳಿಯ ಸದಸ್ಯರುಗಳು, ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಹಾಗೂ ಅಂದಿನ ವಕ್ಫ್ ಇಲಾಖೆಯ ಸಚಿವರುಗಳ ಸಹಾಯವಿಲ್ಲದೇ ನಡೆಯಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.
‘ವಕ್ಫ್ ಆಸ್ತಿಗೆ ಅನ್ವಯಿಸದಿದ್ದರೂ ಸಹ ಇನಾಂ ರದ್ದತಿ ಕಾಯ್ದೆ ಪ್ರಕಾರ ಜಿಲ್ಲಾ ವಕ್ಫ್ ಸಮಿತಿ ಹಾಗೂ ಮುತವಲ್ಲಿಗಳು ಗೇಣಿ ಹಕ್ಕನ್ನು ಬಿಟ್ಟುಕೊಟ್ಟಿರುತ್ತಾರೆ. ಇನ್ನು ಹಲವು ಪ್ರಕರಣಗಳಲ್ಲಿ ಸ್ವಾಧೀನಕ್ಕೆ ಸಂಬಂಧಿಸಿದ ಹಕ್ಕುಗಳಿಗಾಗಿ ಅರ್ಜಿಗಳನ್ನು ಮುತವಲ್ಲಿಗಳೇ ಬರೆದುಕೊಟ್ಟಿದ್ದಾರೆ. ಹಾಗೆಯೇ ಮತ್ತಷ್ಟು ಪ್ರಕರಣಗಳಲ್ಲಿ ಮುತವಲ್ಲಿಗಳು ಮತ್ತು ಜಿಲ್ಲಾ ವಕ್ಫ್ ಸಮಿತಿಯ ಕಾನೂನುಬಾಹಿರ ಚಟುವಟಿಕೆಗಳನ್ನು, ರಾಜ್ಯ ವಕ್ಫ್ ಮಂಡಳಿಯು ಕಾನೂನುಬಾಹಿರವಾಗಿಯೇ ಅನುಮೋದಿಸಿದೆ,’ ಎಂಬ ಸಂಗತಿಯನ್ನು ಬಯಲಿಗೆಳೆದಿರುವುದು ತಿಳಿದು ಬಂದಿದೆ.
ರಾಜ್ಯ ವಕ್ಫ್ ಮಂಡಳಿಯು ವಕ್ಫ್ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಬಗೆಹರಿಸಿದ್ದಲ್ಲದೇ ಅದರ ಹಕ್ಕುಗಳನ್ನೂ ಅವರಿಗೆ ಬಿಟ್ಟುಕೊಟ್ಟಿದೆ. ವಕ್ಫ್ ನ ಉದ್ದೇಶ ಹಾಗೂ ಫಲಾನುಭವಿಗಳ ಹಿತಾಸಕ್ತಿಯನ್ನು ಕಾಪಾಡದೇ ವಕ್ಫ್ ಕಾಯ್ದೆಯಲ್ಲಿನ ಉದ್ದೇಶಿತ ಶಾಸನಬದ್ಧ ಅವಕಾಶಗಳನ್ನೂ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಶಾಸನಬದ್ಧ ಅಧಿಕಾರವಿದ್ದರೂ ಸಹ ರಾಜ್ಯ ಸರ್ಕಾರವು ಅದನ್ನು ನಿರ್ಲಕ್ಷ್ಯಿಸಿದೆ. ಅಲ್ಲದೇ ಅಸಂಖ್ಯಾತ ವಕ್ಫ್ ಆಸ್ತಿಯನ್ನು ಕಳೆದುಕೊಳ್ಳಲು ತನ್ನ ಶಾಸನಬದ್ಧ ಅಧಿಕಾರವನ್ನೂ ಉಲ್ಲಂಘಿಸಿರುವುದು ಅಥವಾ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.
ರಾಜ್ಯ ವಕ್ಫ್ ಮಂಡಳಿಯ ಆಸ್ತಿಯನ್ನು ರಕ್ಷಣೆ ಮಾಡುವ ಹೊಣೆಗಾರಿಕೆಯಿಂದ ರಾಜ್ಯ ಸರ್ಕಾರವು ನುಣುಚಿಕೊಂಡಿದೆ. ರಾಜ್ಯ ವಕ್ಪ್ ಮಂಡಳಿಯು ಸಹ ಜಿಲ್ಲಾ ವಕ್ಫ್ ಸಮಿತಿಯ ಆಸ್ತಿಯನ್ನು ಕಾಪಾಡಬೇಕಿದ್ದರೂ ಸಹ ತನ್ನ ಜವಾಬ್ದಾರಿಯನ್ನು ಕೈಬಿಟ್ಟಿದೆ. ವಕ್ಫ್ ಆಸ್ತಿಯನ್ನು ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ, ರಾಜ್ಯ ಮತ್ತು ಜಿಲ್ಲಾ ವಕ್ಫ್ ಸಮಿತಿ, ಮಂಡಳಿ, ಮುತವಲ್ಲಿ, ಸಜ್ಜಾದೆ ಅವರುಗಳು ಸಾಮೂಹಿಕ ಹೊಣೆಗಾರಿಕೆಯನ್ನೂ ನಿಭಾಯಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
‘ರಾಜ್ಯ ವಕ್ಫ್ ಮಂಡಳಿಯ ಮಂಜೂರಾತಿಯಿಲ್ಲದೇ ಹಲವು ಜಿಲ್ಲೆಯ ವಕ್ಫ್ ಸಮಿತಿಗಳು ತಮ್ಮ ಅಧಿಕಾರವನ್ನೇ ಬಳಸಿ ವಕ್ಫ್ ಆಸ್ತಿ ವಹಿವಾಟು ನಡೆಸಿವೆ. ಈ ರೀತಿಯ ವಹಿವಾಟುಗಳನ್ನು ರಾಜ್ಯ ವಕ್ಫ್ ಮಂಡಳಿಯ ಗಮನಕ್ಕೂ ತಂದಿಲ್ಲ. ಈ ರೀತಿಯ ಚಟುವಟಿಕೆಗಳನ್ನು ರಾಜ್ಯ ವಕ್ಫ್ ಮಂಡಳಿಯು ತಪಾಸಣೆ ಮಾಡಿಲ್ಲದಿರುವುದರಿಂದಾಗಿ ವಕ್ಫ್ ಆಸ್ತಿಯು ಖಾಸಗಿ ವ್ಯಕ್ತಿಗಳ ವೈಯಕ್ತಿಕ ಲಾಭಕ್ಕೆ ಅನುವು ಮಾಡಿಕೊಟ್ಟಿದೆ,’ ಎಂದು ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.