ಬೆಂಗಳೂರು; ಬೀದರ್‍ನ ಅಲಿಯಾಬಾದ್, ಗುಲ್ಲೇರ್ ಹವೇಲಿ ಸೇರಿದಂತೆ ಇನ್ನಿತರೆಡೆಗಳಲ್ಲಿನ ವಕ್ಫ್ ಆಸ್ತಿಯು ಅಪಾರ ಪ್ರಮಾಣದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದರೂ ಸಹ ಉಪ ಲೋಕಾಯುಕ್ತ ಎನ್ ಆನಂದ್ ಅವರಿಗೇ ಜಿಲ್ಲಾ ವಕ್ಫ್ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ನೀಡಿರಲಿಲ್ಲ.
ಅಲ್ಲದೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಸಹ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಕ್ಫ್ ಆಸ್ತಿಯ ಅತಿಕ್ರಮಣ ಅಥವಾ ಅಕ್ರಮ ಒತ್ತುವರಿ ಬಗ್ಗೆ ತಿಳಿಸಲು ತಲೆಕೆಡಿಸಿಕೊಂಡಿರಲಿಲ್ಲ. ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪರಿಹಾರವನ್ನು ಪಾವತಿಸಿರುವ ಬಗ್ಗೆಯೂ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂಬುದನ್ನೂ ಸಹ ಉಪ ಲೋಕಾಯುಕ್ತರ ತನಿಖಾ ವರದಿಯು ಬಯಲಿಗೆಳೆದಿದೆ.
ಬೀದರ್ ತಾಲೂಕಿನ ಹಲವು ಗ್ರಾಮಗಳಲ್ಲಿರುವ ವಕ್ಫ್ ಆಸ್ತಿಯನ್ನು ಸಂರಕ್ಷಿಸಬೇಕಿದ್ದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯೂ ಸಹ ಕೆಲವು ವ್ಯಕ್ತಿಗಳಿಗೆ ಅನಗತ್ಯವಾಗಿ ರಿಯಾಯಿತಿ ನೀಡಿದೆ. ಮತ್ತು ನಿಯಮಬಾಹಿರವಾಗಿ ವಕ್ಫ್ ಆಸ್ತಿಯನ್ನು ಧಾರೆಯೆರೆದು ಕೊಟ್ಟಿರುವುದನ್ನೂ ಉಪ ಲೋಕಾಯುಕ್ತರ ತನಿಖಾ ತಂಡವು ಪತ್ತೆ ಹಚ್ಚಿದೆ.
2016ರಲ್ಲೇ ಉಪ ಲೋಕಾಯುಕ್ತ ಎನ್ ಅನಂದ್ ಅವರು ಬೀದರ್ ಜಿಲ್ಲೆಯ ಹಲವು ಪ್ರಕರಣಗಳ ಬಗ್ಗೆ ಭೂ ದಾಖಲಾತಿಗಳನ್ನೂ ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಅಲಿಯಾಬಾದ್ ಗ್ರಾಮದಲ್ಲಿರುವ ಸರ್ವೆ ನಂಬರ್ 59ರಲ್ಲಿನ ಜಮೀನನ್ನು ಮುತವಲ್ಲಿಯಾಗಿದ್ದ ಸಯೀದಾ ಖಾತೂನ್ ಅವರ ಪರವಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಅನಗತ್ಯವಾಗಿ ರಿಯಾಯಿತಿ ನೀಡಿದನ್ನು ತನಿಖಾ ತಂಡವು ಪತ್ತೆ ಹಚ್ಚಿದೆ.
‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು 24 ಎಕರೆ ವಕ್ಫ್ ಭೂಮಿಗೆ ಸಂಬಂಧಿಸಿದಂತೆ ಸಯೀದಾ ಖಾತೂನ್ ಪರವಾಗಿ ಅನಗತ್ಯ ರಿಯಾಯಿತಿ ನೀಡಿದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸೈದಾ ಖಾತೂನ್ ಪರವಾಗಿ ಅಪಾರ ಪ್ರಮಾಣದ ವಕ್ಫ್ ಭೂಮಿಯನ್ನು ವಿಭಜಿಸಲು ಯಾವುದೇ ಸಮರ್ಥನೀಯ ಕಾರಣವನ್ನು ನೀಡಿಲ್ಲ. ಸಯೀದಾ ಖಾತೂನ್ ಎಂಬುವರು ಮುತವಲ್ಲಿ ಆಗಿದ್ದರೂ ಅವರು ಬಾಡಿಗೆದಾರರಲ್ಲ. ಹೀಗಾಗಿ ಸ್ವಾಧೀನದ ಹಕ್ಕುಗಳನ್ನು ಪಡೆಯಲು ಯಾವುದೇ ಹಕ್ಕೂ ಇಲ್ಲ,’ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ತನ್ನ ಆದೇಶವನ್ನು ಪರಿಶೀಲಿಸಬೇಕು. ಮತ್ತು ವಕ್ಫ್ ಆಸ್ತಿ ಎಂದು ಮರುಸ್ಥಾಪಿಸಲು ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪ ಲೋಕಾಯುಕ್ತ ಎನ್ ಆನಂದ್ ಅವರು ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.
ವಕ್ಫ್ ಆಸ್ತಿ ದುರ್ಬಳಕೆ, ಒತ್ತುವರಿ; ತನಿಖಾ ವರದಿ ನೀಡಿದ್ದ ದಿನದಂದೇ ತನಿಖೆ ಆದೇಶವೂ ರದ್ದು
ವಿಶೇಷವೆಂದರೇ ಇದೇ ಪ್ರಕರಣದ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿಯೂ ವಿವರಿಸಲಾಗಿದೆ. ‘ಇದೊಂದು ಗಂಭೀರವಾದ ವಿಷಯವಾಗಿದೆ. ಸಿಐಡಿ ಮೂಲಕ ಕೂಲಂಕುಷವಾಗಿ ಹಾಗೂ ಸಮರ್ಪಕವಾಗಿ ವಿಚಾರಣೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಕಂದಾಯ ಮತ್ತು ವಕ್ಫ್ ಮಂಡಳಿಯ ಸಂಬಂಧಿತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು,’ ಎಂದು ಶಿಫಾರಸ್ಸು ಕೂಡ ಮಾಡಿತ್ತು.
ಅಲ್ಲದೇ ಆಲಿಯಾಬಾದ್ ಸರ್ವೆ ನಂಬರ್ 59 ರಲ್ಲಿನ 31.23 ಎಕರೆಗಳ ವಕ್ಫ್ ಆಸ್ತಿಯಲ್ಲಿ 24.37 ಎಕರೆಗೆ ಸಂಬಂಧಿಸಿದಂತೆ ಪೂರ್ವ ಯೋಜಿತ, ಸರಣೀಕೃತ ಒಳ ಪಿತೂರಿ ನಡೆದಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದೂ ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿ ವಿವರಿಸಲಾಗಿತ್ತು.
ಅದೇ ರೀತಿ ಆಲಿಯಾಬಾದ್ ಸರ್ವೆ ನಂಬರ್ 61ರಲ್ಲಿನ 20 ಗುಂಟೆ ಪ್ರಕರಣಕ್ಕೂ ಸಂಬಂಧಿಸಿದಂತೆಯೂ ಉಪ ಲೋಕಾಯುಕ್ತರ ತನಿಖಾ ವರದಿಯಲ್ಲಿ ವಿವರಿಸಲಾಗಿದೆ. ಈ ಕುರಿತೂ ತಕ್ಷಣವೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಬೀದರ್ ತಾಲೂಕಿನ ಗುಲೇರ್ ಹವೇಲಿ ಪ್ರಕರಣವನ್ನು ಉಪ ಲೋಕಾಯುಕ್ತರ ತನಿಖಾ ತಂಡವು ಪರಿಶೀಲಿಸಿದೆ. ಈ ಪ್ರಕರಣದಲ್ಲಿಯೂ ಸೂಕ್ತ ಕ್ರಮ ಜರುಗಿಸಬೇಕು ಮತ್ತು ವಕ್ಫ್ ಆಸ್ತಿಯನ್ನು ಪುನರ್ ಸ್ಥಾಪಿಸಬೇಕು ಎಂದು ಶಿಫಾರಸ್ಸು ಮಾಡಿದೆ.
ಸರ್ವೆ ನಂಬರ್ 62ರಲ್ಲಿನ 46 ಎಕರೆ 09 ಗುಂಟೆ ವಿಸ್ತೀರ್ಣದ ಜಮೀನಿನನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನೂ ಖುದ್ದು ಉಪ ಲೋಕಾಯುಕ್ತರು ಸ್ಥಳ ಪರಿಶೀಲನೆ ಮಾಡಿದ್ದರು.
‘ನಾನು ಬೀದರ್‌ಗೆ ಭೇಟಿ ನೀಡಿದಾಗ, ಜಿಲ್ಲಾ ವಕ್ಫ್ ಸಲಹೆಗಾರ ಸಮಿತಿಯ ಸ್ವಾಧೀನದಲ್ಲಿರುವ ಮತ್ತು ಇತರ ವ್ಯಕ್ತಿಗಳ ಅಕ್ರಮ, ಅನಧಿಕೃತವಾಗಿ ಅನುಭೋಗಿಸುತ್ತಿದ್ದ ಜಮೀನುಗಳ ವಿವರಗಳನ್ನು ನೀಡಲು ಜಿಲ್ಲಾ ವಕ್ಫ್ ಅಧಿಕಾರಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಿಗೆ ಸಾಧ್ಯವಾಗಲಿಲ್ಲ. ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಕ್ಫ್ ಆಸ್ತಿಯ ಅತಿಕ್ರಮಣ ಅಥವಾ ಅಕ್ರಮ ಒತ್ತುವರಿ ಬಗ್ಗೆ ತಿಳಿಸಲು ತಲೆಕೆಡಿಸಿಕೊಂಡಿಲ್ಲ,’ ಎಂದು ಉಪ ಲೋಕಾಯುಕ್ತ ಎನ್ ಆನಂದ್ ಅವರು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸಹ ಅನಧಿಕೃತ ಒತ್ತುವರಿ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವಕ್ಫ್ ಇನ್ಸ್‌ಪೆಕ್ಟರ್ ಸಿದ್ಧಪಡಿಸಿದ ನಕ್ಷೆಯನ್ನು ಉಪ ಲೋಕಾಯುಕ್ತರ ತನಿಖಾ ತಂಡಕ್ಕೆ ಒದಗಿಸಿತ್ತು. ಅಪಾರ ಪ್ರಮಾಣದ ಭೂಮಿ ಅನಧಿಕೃತ ಅಕ್ರಮ ವಶದಲ್ಲಿದೆ ಎಂಬುದನ್ನು ನಕ್ಷೆಯು ಬಹಿರಂಗಪಡಿಸಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಈ ನಕ್ಷೆಯಲ್ಲಿ 48 ಎಕರೆ 29 ಗುಂಟೆ ವಿಸ್ತೀರ್ಣದ ಜಮೀಗಳನ್ನು ಖಬರ್ಸ್ತಾನ್ ಎಂದು ತೋರಿಸಲಾಗಿದೆ. ಆದರೆ ಸ್ಥಳ ಪರಿಶೀಲನೆಯ ಸಮಯದಲ್ಲಿ, 48 ಎಕರೆ 29 ಗುಂಟೆ ವಿಸ್ತೀರ್ಣದ ಭೂಮಿಯನ್ನು ಖಬ್ರಸ್ತಾನ್ ಆಗಿ ಬಳಸುತ್ತಿರುವುದನ್ನು ನಾನು ಗಮನಿಸಲಿಲ್ಲ,’ ಎಂದೂ ಉಲ್ಲೇಖಿಸಿದ್ದಾರೆ.
ಪೊಲೀಸ್ ಕ್ವಾಟರ್ಸ್‌ಗಳಿಗಾಗಿ 6 ಎಕರೆ 4 ಗುಂಟೆ ವಿಸ್ತೀರ್ಣದ ಜಮೀನಿನ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಜಿಲ್ಲಾ ವಕ್ಫ್ ಅಧಿಕಾರಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪರಿಹಾರವನ್ನು ಪಾವತಿಸುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಪೊಲೀಸ್ ಕ್ವಾಟ್ರರ್ಸ್‌ಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಮತ್ತು ಪರಿಹಾರದ ಪಾವತಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತು. ಇದುವರೆಗೆ ಅನಧಿಕೃತವಾಗಿ ಒತ್ತುವರಿ ಮಾಡದೇ ಉಳಿದಿರುವ ಖಾಲಿ ಜಾಗವನ್ನು ಸಂರಕ್ಷಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿಗಳು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪತ್ರ ಬರೆದಿದ್ದರು. ಆದರೂ ಒತ್ತುವರಿಗಳಾಗಿದ್ದವು.
‘ವೈಯಕ್ತಿಕ ಹಿತಾಸಕ್ತಿ, ಶೋಕಿ, ಹುಚ್ಚಾಟ’ದಿಂದ ವಕ್ಫ್ ಆಸ್ತಿ ದುರ್ಬಳಕೆ; ಮುಚ್ಚಿಟ್ಟಿದ್ದ ಲೋಕಾ ತನಿಖಾ ವರದಿ ಬಹಿರಂಗ
‘ಈ ವ್ಯಕ್ತಿಗಳಿಗೆ ಹೇಗೆ ಕಟ್ಟಡ ನಿರ್ಮಾಣ ಮಾಡಲು ಮತ್ತು ಇಷ್ಟು ವಿಸ್ತಾರವಾದ ಭೂಮಿಯನ್ನು ಒತ್ತುವರಿ ಮಾಡಲು ಅವಕಾಶ ನೀಡಿದರು ಎಂಬುದನ್ನು ಜಿಲ್ಲಾ ವಕ್ಫ್ ಅಧಿಕಾರಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ವಿವರಿಸುವ ಸ್ಥಿತಿಯಲ್ಲಿರಲಿಲ್ಲ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.