ಬೆಂಗಳೂರು; ರಾಜ್ಯದ ಸರ್ಕಾರಿ ಶಾಲೆಗಳಿಗೆ 2ನೇ ಅನುದಾನ ಕಂತಿನ ಅನುದಾನ ಫೆಬ್ರುವರಿ ಪೂರ್ಣಗೊಳ್ಳುತ್ತಿದ್ದರೂ ಬಿಡುಗಡೆಯಾಗಿಲ್ಲ. ಆರ್ಥಿಕ ಸಂಕಷ್ಟದಿಂದ ಹೊರಬರಲು ಬಿಜೆಪಿ ಸರ್ಕಾರ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಪ್ರಾಥಮಿಕ ಶಾಲೆಗಳ ಆರ್ಥಿಕ ಸ್ಥಿತಿಯೂ ಅನಾವರಣಗೊಂಡಿದೆ.
ಅನುದಾನ ಹೊಂದಾಣಿಕೆ ಮಾಡಲು ಕಸರತ್ತು ನಡೆಸುತ್ತಿರುವ ಬಿಜೆಪಿ ಸರ್ಕಾರ ಆರ್ಥಿಕ ಸಂಕಷ್ಟದಿಂದ ಇನ್ನೂ ಪಾರಾಗಿಲ್ಲ ಎಂಬುದಕ್ಕೆ ಸರ್ಕಾರಿ ಶಾಲೆಗಳಿಗೆ 2ನೇ ಕಂತಿನ ಅನುದಾನ ಬಿಡುಗಡೆಯಾಗದಿರುವುದೇ ಇದಕ್ಕೆ ನಿದರ್ಶನ ಒದಗಿಸಿದೆ. 2ನೇ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದ ಸರ್ಕಾರಿ ಶಾಲೆಗಳು ಮತ್ತೊಮ್ಮೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಂತಾಗಿವೆ.
‘ರಾಜ್ಯದ ಸರ್ಕಾರಿ ಶಾಲೆಗಳಿಗೆ, ಫೆಬ್ರವರಿ ತಿಂಗಳು ಮುಗಿಯುತ್ತಾ ಬಂದರೂ ಕೂಡ 2ನೇ ಕಂತಿನ ಶಾಲಾ ಅನುದಾನ ಬಿಡುಗಡೆಯಾಗಿಲ್ಲ. ಈ ಕುರಿತು ಸಚಿವ ಎಸ್ ಸುರೇಶ್‌ಕುಮಾರ್ ಅವರನ್ನು ಶಿಕ್ಷಕರ ಸಂಘ ಗಮನ ಸೆಳೆದಿದ್ದರೂ ಅನುದಾನ ಬಿಡುಗಡೆಯಾಗಿಲ್ಲ.
ಕಳೆದ ವರ್ಷ ಕೂಡ 2ನೇ ಕಂತಿನ ಶಾಲಾ ಅನುದಾನ ದೊರಕದ ಕಾರಣ ರಾಜ್ಯದ ಮುಖ್ಯ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಶಾಲಾ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಿದ್ದರು,’ ಎಂದು ಮುಖ್ಯ ಶಿಕ್ಷಕರು ಅಲವತ್ತುಕೊಂಡಿದ್ದಾರೆ.
ಈ ವರ್ಷವೂ 2ನೇ ಕಂತಿನ ಅನುದಾನ ಇನ್ನೂ ಬಿಡುಗಡೆಯಾಗದೇ ರಾಜ್ಯದ ಎಲ್ಲಾ 46,000 ಪ್ರಾಥಮಿಕ ಶಾಲಾ ಮುಖ್ಯಗುರುಗಳು ನಿರಂತರವಾಗಿ ಈ ಬಗ್ಗೆ ಒತ್ತಡ ಹಾಕುತ್ತಿದ್ದರೂ ಸರ್ಕಾರ ಸೊಪ್ಪು ಹಾಕಿಲ್ಲ.
ಮಾರ್ಚ್ 2 ರಂದು ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದಿನ ಮೈತ್ರಿ ಸರ್ಕಾರ ಅನುಷ್ಠಾನಗೊಳಿಸಿದ್ದ ಯೋಜನೆಗಳನ್ನು ಮುಂದುವರೆಸಬೇಕೇ ಅಥವಾ ಹೊಸ ಯೋಜನೆಗಳನ್ನು ಘೋಷಿಸಬೇಕೆ ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿ ಮುಳುಗಿರುವ ಹೊತ್ತಿನಲ್ಲೇ ಬಿಜೆಪಿ ಸರ್ಕಾರ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟ ಅನಾವರಣವಾದಂತಾಗಿದೆ.