ಬೆಂಗಳೂರು; ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಅಭಿವೃದ್ಧಿಪಡಿಸಿರುವ ಕೈಗಾರಿಕೆ ಬಡಾವಣೆಗಳಲ್ಲಿನ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ಅತ್ಯುತ್ಸಾಹ ತೋರಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ವಿಜ್ಞಾನ ನಗರ ಸ್ಥಾಪನೆಗಾಗಿ ಇದುವರೆಗೂ ಜಮೀನು ಹಂಚಿಕೆ ಮಾಡಿಲ್ಲ.
ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಕೈಗಾರಿಕೆ ಪ್ರದೇಶದಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಸೇರಿದಂತೆ ಒಟ್ಟು 40 ಕಂಪನಿಗಳಿಗೆ ನಿವೇಶನ ಹಂಚಿಕೆ ಮಾಡಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿರುವ ಹೊತ್ತಿನಲ್ಲೇ ವಿಜ್ಞಾನ ನಗರ ಸ್ಥಾಪನೆಗೆ ಜಮೀನು ಹಂಚಿಕೆಯಾಗದಿರುವ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಬದಿಗೊತ್ತಿ ಅಗಸ್ತ್ಯ ಫೌಂಡೇಷನ್‌ಗೆ ಮಣೆ ಹಾಕಿತ್ತು. ಈಗಿನ ಕಾಂಗ್ರೆಸ್ ಸರ್ಕಾರವೂ ಸಹ ವಿಜ್ಞಾನ ನಗರ ನಿರ್ಮಾಣಕ್ಕೆ ಜಮೀನು ಹಂಚಿಕೆ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಲಾದ ಕಂಡಿಕೆಗಳ ಅನುಷ್ಠಾನದ ಕುರಿತು 2024ರ ಆಗಸ್ಟ್ 28ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ವಿಜ್ಞಾನ ನಗರ ಸ್ಥಾಪನೆಗಾಗಿ ಜಮೀನಿನ ಕುರಿತು ಪ್ರಸ್ತಾಪವಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 233 ಕೋಟಿ ರು ವೆಚ್ಚದಲ್ಲಿ 2024-25ನೇ ಸಾಲಿನಲ್ಲಿ ವಿಜ್ಞಾನ ನಗರವನ್ನು ರಾಜ್ಯದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯದಲ್ಲಿ ಘೋಷಿಸಿದ್ದರು. ಆದರೆ 9 ತಿಂಗಳಾದರೂ ಸಹ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂಬುದು ತಿಳಿದು ಬಂದಿದೆ.
ಕೆಐಎಡಿಯು ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿ ಎರಡನೇ ಹಂತದ ಕೈಗಾರಿಕೆ ಪ್ರದೇಶದಲ್ಲಿನ ನಿವೇಶನ ಸಂಖ್ಯೆ-1ರಲ್ಲಿ ವಿಜ್ಞಾನ ನಗರ ಸ್ಥಾಪಿಸಲು 25 ಎಕರೆಯನ್ನು ಗುರುತಿಸಿದೆ. ಇದನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸಬೇಕಿದೆ. ಈ ಯೋಜನೆಗೆ ಸಮ್ಮತಿಯೂ ದೊರೆತಿದೆ. ಆದರೆ ವಾಣಿಜ್ಯ ಕೈಗಾರಿಕೆ ಇಲಾಖೆಯು ಇದುವರೆಗೂ ಜಮೀನನ್ನು ಹಂಚಿಕೆ ಮಾಡಿಲ್ಲ ಎಂದು ಗೊತ್ತಾಗಿದೆ. ಈ ಸಂಬಂಧ ದಾಖಲೆಯೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
‘ವಿಜ್ಞಾನ ನಗರ ಸ್ಥಾಪನೆಗಾಗಿ 25 ಎಕರೆ ಭೂಮಿಯನ್ನು ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಸಂಖ್ಯೆ 1ರಲ್ಲಿ ಇಲಾಖೆಗೆ ಒದಗಿಸಲಾಗುವುದು ಎಂದು ವಾಣಿಜ್ಯ ಕೈಗಾರಿಕೆ ಇಲಾಖೆಯಿಂದ ತಿಳಿಸಲಾಗಿದ್ದು ಇದುವರೆಗೂ ಜಮೀನು ಹಂಚಿಕೆಯಾಗಿರುವುದಿಲ್ಲ,’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿರುವುದು ಗೊತ್ತಾಗಿದೆ.
ಜಮೀನು ಹಂಚಿಕೆ ಕುರಿತು ಅಧಿಕಾರಿಗಳೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಆದರೂ ಇದುವರೆಗೂ ಜಮೀನು ಹಂಚಿಕೆ ಮಾಡಿಸಿಕೊಳ್ಳುವ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ದೊರೆತಿಲ್ಲ ಎಂದು ತಿಳಿದು ಬಂದಿದೆ.
ವಿಜ್ಞಾನ ಕಲಿಕೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರವು ಷೇರು ಮಾರುಕಟ್ಟೆಯ ದೈತ್ಯ ರಾಕೇಶ್ ಜುಂಜನ್‌ವಾಲಾ ಅವರು ಪ್ರಮುಖ ಪೋಷಕರಾಗಿರುವ ಅಗಸ್ತ್ಯ ಫೌಂಡೇಷನ್‌ಗೆ ಎರಡು ಬಾರಿ ಮಣೆ ಹಾಕಿತ್ತು. ಈ ಫೌಂಡೇಷನ್‌ನೊಂದಿಗೆ 2010ರಲ್ಲಿ ಮಾಡಿಕೊಂಡಿದ್ದ 10 ವರ್ಷದ ಒಡಂಬಡಿಕೆಯು ಮುಕ್ತಾಯಗೊಂಡಿದ್ದರೂ 2022-23ನೆ ಸಾಲಿನಿಂದ 2026-27ರವರೆಗೆ ಒಟ್ಟು 5 ವರ್ಷಗಳ ಅವಧಿಯವರೆಗೆ ಹಿಂದಿನ ಸರ್ಕಾರವು ನವೀಕರಿಸಿತ್ತು.
ಬಾಗಲಕೋಟೆ, ಬೀದರ್, ಬಿಜಾಪುರ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರಗಳ ನಿರ್ವಹಣೆ ಅವಧಿಯನ್ನು ಅಗಸ್ತ್ಯ ಫೌಂಡೇಷನ್‌ಗೆ ನೀಡಿ ಆದೇಶಿಸಿದೆ. ಇದಕ್ಕೆ ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್ ಅವರು ಅನುಮೋದಿಸಿದ್ದರು.
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗಸ್ತ್ಯ ಫೌಂಡೇಷನ್‌ಗೆ ವಿದೇಶಿ ಹಣ ಹಾಗೂ ಸಿ.ಎಸ್.ಆರ್. ಫಂಡ್‌ನ ನೆರವು ದೊರೆಯುತ್ತಿದೆ. ಆದರೂ ರಾಜ್ಯದಲ್ಲಿ ಕೋರ್ ವಿಜ್ಞಾನ ಕೇಂದ್ರ ಮತ್ತು ಪ್ರಯೋಗಾಲಯಗಳ ಕಾರ್ಯನಿರ್ವಹಣೆಗೆ ಸಮಗ್ರ ಶಿಕ್ಷಣ ಅಭಿಯಾನದ ಅನುದಾನವನ್ನು ಒದಗಿಸಿದೆ.
ಈ 10 ವರ್ಷದ ಅವಧಿಯಲ್ಲಿ ಕೋರ್ ವಿಜ್ಞಾನ ಕೇಂದ್ರಗಳು, ಸಂಚಾರಿ ಪ್ರಯೋಗಾಲಯಗಳ ಮೇಲು ಉಸ್ತುವಾರಿ, ಪರ್ಯಾಯ ವ್ಯವಸ್ಥೆಯನ್ನು ಸರ್ಕಾರವು ಬಲಪಡಿಸಬೇಕಿತ್ತು. ಅಲ್ಲದೆ ಇಂತಹ ಯೋಜನೆಗಳನ್ನು ಇಲಾಖೆಯ ಮಾಲೀಕತ್ವದಡಿಯಲ್ಲಿ ನಿರ್ವಹಿಸುವಲ್ಲಿ ಆಸಕ್ತಿ ವಹಿಸಬೇಕಿತ್ತು. ಆದರೆ ಸರ್ಕಾರವು ವಿಫಲವಾಗಿರುವುದರಿಂದಲೇ ವಿಜ್ಞಾನ ಕಲಿಕೆ ಯೋಜನೆಗಳು ಅಗಸ್ತ್ಯ ಫೌಂಡೇಷನ್ ಪಾಲಾಗಿತ್ತು.
ಅಗಸ್ತ್ಯ ಫೌಂಡೇಷನ್‌ಗೆ 4.23 ಕೋಟಿ ಅನುದಾನ; ಸರ್ಕಾರದಿಂದಲೇ ವಿಜ್ಞಾನ ಸಮಿತಿಗಳ ಕಡೆಗಣನೆ
2021-222ನೇ ಸಾಲಿಗೆ ಕೋರ್ ವಿಜ್ಞಾನ ಕೇಂದ್ರಗಳನ್ನು ಅಗಸ್ತ್ಯ ಫೌಂಡೇಷನ್ ಸಂಸ್ಥೆಯೊಂದಿಗೆ ನಿರ್ವಹಿಸಲು ಒಡಂಬಡಿಕೆ ನವೀಕರಿಸಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಉಳಿಕೆ ಇರುವ 4.23 ಕೋಟಿ ರು. ವೆಚ್ಚ ಮಾಡಲಿದೆ. 2020-21 ಮತ್ತು 2021-22ನೇ ಸಾಲಿನ ಕಾರ್ಯಕ್ರಮದ ವೆಚ್ಚಗಳಿಗೆ 4.43 ಕೋಟಿ ಅನುದಾನದ ಅವಶ್ಯಕತೆಯನ್ನು ಪ್ರಸ್ತುತ ಸಮಗ್ರ ಶಿಕ್ಷಣ ಕರ್ನಾಟಕ ಸಂಸ್ಥೆಯಲ್ಲಿ ಐಡಿಎಫ್ ಕಾರ್ಯಕ್ರಮದದ ಅನುದಾನದಲ್ಲಿ ಉಳಿಕೆ ಇರುವ ಒಟ್ಟು 4.23 ಕೋಟಿ ರು.ಗಳನ್ನು ಅನುದಾನದಿಂದ ಬಳಸಿಕೊಳ್ಳಲು ಚಾಲ್ತಿ ವರ್ಷಕ್ಕೆ ಅನುಮತಿ ನೀಡಿದ್ದನ್ನು ಸ್ಮರಿಸಬಹುದು.