ಅಗಸ್ತ್ಯ ಫೌಂಡೇಷನ್‌ಗೆ 4.23 ಕೋಟಿ ಅನುದಾನ; ಸರ್ಕಾರದಿಂದಲೇ ವಿಜ್ಞಾನ ಸಮಿತಿಗಳ ಕಡೆಗಣನೆ

ಬೆಂಗಳೂರು; ರಾಜ್ಯದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ಭಾರತ ಜನ ವಿಜ್ಞಾನ ಸಮಿತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗಳು ವಿಶೇಷವಾಗಿ ಗ್ರಾಮೀಣ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ವಿಜ್ಞಾನ ಕಲಿಕೆಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಅಗಸ್ತ್ಯ ಫೌಂಡೇಷನ್‌ಗೆ ಮತ್ತೊಮ್ಮೆ ಮಣೆ ಹಾಕಿದೆ.

ಕಳೆದ ಹತ್ತಾರು ವರ್ಷಗಳಿಂದಲೂ ವಿಜ್ಞಾನ ಕಲಿಕೆ, ಶಿಕ್ಷಣದಲ್ಲಿ ಕ್ರಿಯಾಶೀಲವಾಗಿರುವ ವಿಜ್ಞಾನ ಸಮಿತಿಗಳನ್ನು ಕಡೆಗಣಿಸುವ ಮೂಲಕ ವಿಜ್ಞಾನ ಯೋಜನೆಗಳ ಅನುಷ್ಠಾನದಲ್ಲಿ ಅಗಸ್ತ್ಯ ಫೌಂಡೇಷನ್‌ನ ಏಕಸ್ವಾಮ್ಯತೆಯನ್ನು ಮುಂದುವರೆಸುವ ಮೂಲಕ ಬಲಪಡಿಸಿದಂತಾಗಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗಸ್ತ್ಯ ಫೌಂಡೇಷನ್‌ಗೆ ವಿದೇಶಿ ಹಣ ಹಾಗೂ ಸಿ.ಎಸ್.ಆರ್. ಫಂಡ್‌ನ ನೆರವು ದೊರೆಯುತ್ತಿದೆ. ಆದರೂ ರಾಜ್ಯದಲ್ಲಿ ಕೋರ್‌ ವಿಜ್ಞಾನ ಕೇಂದ್ರ ಮತ್ತು ಪ್ರಯೋಗಾಲಯಗಳ ಕಾರ್ಯನಿರ್ವಹಣೆಗೆ ಸಮಗ್ರ ಶಿಕ್ಷಣ ಅಭಿಯಾನದ ಅನುದಾನವನ್ನು ಒದಗಿಸಿದೆ. ಈ ಫೌಂಡೇಷನ್‌ನೊಂದಿಗೆ 2010ರಲ್ಲಿ ಮಾಡಿಕೊಂಡಿದ್ದ 10 ವರ್ಷದ ಒಡಂಬಡಿಕೆಯು ಮುಕ್ತಾಯಗೊಂಡಿದೆ.

ಈ 10 ವರ್ಷದ ಅವಧಿಯಲ್ಲಿ ಕೋರ್‌ ವಿಜ್ಞಾನ ಕೇಂದ್ರಗಳು, ಸಂಚಾರಿ ಪ್ರಯೋಗಾಲಯಗಳ ಮೇಲು ಉಸ್ತುವಾರಿ, ಪರ್ಯಾಯ ವ್ಯವಸ್ಥೆಯನ್ನು ಸರ್ಕಾರವು ಬಲಪಡಿಸಬೇಕಿತ್ತು. ಅಲ್ಲದೆ ಇಂತಹ ಯೋಜನೆಗಳನ್ನು ಇಲಾಖೆಯ ಮಾಲೀಕತ್ವದಡಿಯಲ್ಲಿ ನಿರ್ವಹಿಸುವಲ್ಲಿ ಆಸಕ್ತಿ ವಹಿಸಬೇಕಿತ್ತು. ಆದರೆ ಸರ್ಕಾರವು ವಿಫಲವಾಗಿರುವುದರಿಂದಲೇ ವಿಜ್ಞಾನ ಕಲಿಕೆ ಯೋಜನೆಗಳು ಅಗಸ್ತ್ಯ ಫೌಂಡೇಷನ್‌ ಪಾಲಾಗಿದೆ. ಈ ಮೂಲಕ ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನದ ಸಂಪನ್ಮೂಲವನ್ನು ಅಗಸ್ತ್ಯ ಫೌಂಡೇಷನ್‌ಗೆ ಧಾರೆಯೆರೆದಂತಾಗಿದೆ ಎಂಬ ಮಾತು ಶಿಕ್ಷಣ ತಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ.

2021-222ನೇ ಸಾಲಿಗೆ ಕೋರ್‌ ವಿಜ್ಞಾನ ಕೇಂದ್ರಗಳನ್ನು ಅಗಸ್ತ್ಯ ಫೌಂಡೇಷನ್‌ ಸಂಸ್ಥೆಯೊಂದಿಗೆ ನಿರ್ವಹಿಸಲು ಒಡಂಬಡಿಕೆ ನವೀಕರಿಸಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ಉಳಿಕೆ ಇರುವ 4.23 ಕೋಟಿ ರು. ವೆಚ್ಚ ಮಾಡಲಿದೆ.

‘ 2020-21 ಮತ್ತು 2021-22ನೇ ಸಾಲಿನ ಕಾರ್ಯಕ್ರಮದ ವೆಚ್ಚಗಳಿಗೆ 4.43 ಕೋಟಿ ಅನುದಾನದ ಅವಶ್ಯಕತೆಯನ್ನು ಪ್ರಸ್ತುತ ಸಮಗ್ರ ಶಿಕ್ಷಣ ಕರ್ನಾಟಕ ಸಂಸ್ಥೆಯಲ್ಲಿ ಐಡಿಎಫ್‌ ಕಾರ್ಯಕ್ರಮದದ ಅನುದಾನದಲ್ಲಿ ಉಳಿಕೆ ಇರುವ ಒಟ್ಟು 4.23 ಕೋಟಿ ರು.ಗಳನ್ನು ಅನುದಾನದಿಂದ ಬಳಸಿಕೊಳ್ಳಲು ಚಾಲ್ತಿ ವರ್ಷಕ್ಕೆ ಅನುಮತಿ ನೀಡಲಾಗಿದೆ,’ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಮಗ್ರ ಶಿಕ್ಷಣ ಕರ್ನಾಟಕ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರಿಗೆ 2021ರ ಅಕ್ಟೋಬರ್‌ 22ರಂದು ಪತ್ರ ಬರೆದಿದ್ದಾರೆ. ಇದಕ್ಕೆ ಸಚಿವ ಬಿ ಸಿ ನಾಗೇಶ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಸಂಪನ್ಮೂಲ ಶಿಕ್ಷಕರಿದ್ದರೂ ಅವರಿಂದಲೇ ವಿಜ್ಞಾನ ಪ್ರಯೋಗಾಲಯ, ಸಂಚಾರಿ ವಿಜ್ಞಾನ ಪ್ರಯೋಗಾಲಯಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಆರಂಭಿಸಲು ಅವಕಾಶಗಳಿವೆ.

ಷೇರು ಮಾರುಕಟ್ಟೆಯ ದೈತ್ಯ ಎಂದೇ ಹೇಳಲಾಗಿರುವ ರಾಕೇಶ್‌ ಜುಂಜನ್‌ವಾಲಾ ಅವರು ಈ ಫೌಂಡೇಷನ್‌ಗೆ ಪ್ರಮುಖ ಪೋಷಕರು. ಅಲ್ಲದೆ ದೇಶ ವಿದೇಶಗಳಿಂದಲೂ ದೇಣಿಗೆ ಪಡೆಯುತ್ತಿರುವ ಈ ಫೌಂಡೇಷನ್‌ಗೆ ಒಡಂಬಡಿಕೆಯನ್ನು ನವೀಕರಿಸಿ ಕೋಟ್ಯಂತರ ರುಪಾಯಿ ನೀಡುತ್ತಿರುವುದಕ್ಕೆ ಕ್ರಿಯಾಶೀಲ ವಿಜ್ಞಾನ ಸಮಿತಿಗಳಿಂದಲೇ ಆಕ್ಷೇಪ ಕೇಳಿ ಬಂದಿದೆ.

ಸುಮಾರು ಹದಿನೈದು ವರ್ಷಗಳ ಹಿಂದೆ ವಿದೇಶಿ ಹಣ ಹಾಗೂ ಸಿ.ಎಸ್.ಆರ್. ಫಂಡ್‌ನಿಂದ ತನ್ನ ಕೆಲಸ ಪ್ರಾರಂಭಿಸಿದ ಅಗಸ್ತ್ಯ ಇಂಟರ್ ನ್ಯಾಷನಲ್ ಸಂಸ್ಥೆಯು ಕಳೆದ ಹತ್ತು ವರ್ಷದಿಂದಲೂ ಸಮಗ್ರ ಶಿಕ್ಷಣ ಅಭಿಯಾನದಿಂದ ನಿರಾಯಾಸವಾಗಿ ಹಣ ಪಡೆಯುತ್ತಿದೆ. ಇತರ ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಂಸ್ಥೆಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ಕಡೆಗಣಿಸುವ ಈ ಸಮಗ್ರ ಶಿಕ್ಷಣ ಅಭಿಯಾನ ಯಾವ ಮಾನದಂಡಗಳನ್ನು ಅನುಸರಿಸಿ ಈ ರೀತಿಯಲ್ಲಿ ಹಣ ನೀಡುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಬಗ್ಗೆ ಮಾತನಾಡದೇ ಸುಮ್ಮನಿರುವುದೇ ಲೇಸು. ಅಲ್ಲಿರುವ ಸಂಪನ್ಮೂಲ ವ್ಯಕ್ತಿಯನ್ನು ಶಾಲೆಗಳಿಂದ ಮಾಹಿತಿ ತರುವುದಷ್ಟಕ್ಕೇ ಉಪಯೋಗಿಸಿಕೊಳ್ಳಲಾಗುತ್ತಿದೆ. ಖಾಸಗಿ ಫೌಂಡೇಷನ್‌ಗಳಿಗೆ ಶಿಕ್ಷಣ ಅಭಿಯಾನದ ಸಂಪನ್ಮೂಲವನ್ನು ಹರಿಸುವುದಕ್ಕಿಂತ ಸರ್ಕಾರಿ ಸ್ವಾಮ್ಯದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕ್ರಿಯಾಶೀಲ ವಿಜ್ಞಾನ ಸಂಘಟನೆಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು.

ಈ ಬಸವರಾಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ಒಂದು ಸಂಸ್ಥೆಗೆ ಹಣ ನೀಡಬೇಕಾದರೆ ಒಂದು ನಿಯಮ ಅನುಸರಿಸಬೇಕು. ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ವಿವಿಧ ವಿಜ್ಞಾನ ಸಂಸ್ಥೆಗಳನ್ನು ಆಹ್ವಾನಿಸಿ ಅವಕಾಶಗಳನ್ನು ನೀಡಬೇಕು. ಆದರೆ ಅಂಥ ಯಾವುದೇ ಪ್ರಯತ್ನಗಳಾದಂತೆ ಕಾಣುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

2004-05 ರಲ್ಲಿ ಸಾಫ್ಟ್‌ವೇರ್‌ ಸಂಸ್ಥೆಗಳಿಂದ ವಾಹನಗಳನ್ನು ಹಾಗೂ ವಿಜ್ಞಾನ ಬೋಧಿಸುವ ಕಲಿಕೋಪಕರಣಗಳನ್ನು ಹೊಂದಿಸಿಕೊಂಡಿರುವ ಅಗಸ್ತ್ಯ ಸಂಸ್ಥೆಯು ಕ್ರಿಯಾಶೀಲವಾಗಿರುವ ವಿಜ್ಞಾನ ಸಂಘಟನೆಗಳ ನೆರವಿನೊಂದಿಗೆ ಶಾಲೆಗಳನ್ನು ತಲುಪಿದೆ. ಅಂದಿನಿಂದಲೂ ಈ ಫೌಂಡೇಷನ್‌ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕೋರ್‌ ವಿಜ್ಞಾನ ಕೇಂದ್ರಗಳ ಮೇಲೆ ಏಕಸ್ವಾಮ್ಯತೆಯನ್ನು ಪಡೆದಿದೆ.

ರಾಜ್ಯದಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಗಳನ್ನು ನಡೆಸುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿವೆ ಮತ್ತು ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳಿವೆ. ಇವುಗಳ ನಿರ್ವಹಣೆಗೆ ಸಾಕಷ್ಟು ಮಾನವ ಸಂಪನ್ಮೂಲವೂ ಇದೆ. ಆದರೆ ಈ ಕೇಂದ್ರಗಳು ಕೊಠಡಿಗಳಿಗಷ್ಟೇ ಮೀಸಲಾಗಿದೆಯಲ್ಲದೆ ಶಿಕ್ಷಕರಿಗೆ ತರಬೇತಿ ನೀಡುವುದಕ್ಕಷ್ಟೇ ಸೀಮಿತಗೊಂಡಿವೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts