ವ್ಯಕ್ತಿತ್ವ ಪರೀಕ್ಷೆಗೆ ಹೆಚ್ಚಿನ ಅಂಕ ನಿಗದಿಗೆ ಪ್ರಸ್ತಾವ; ಹೋಟಾ ಶಿಫಾರಸ್ಸು ಉಲ್ಲಂಘನೆ, ಭ್ರಷ್ಟಾಚಾರಕ್ಕೆ ದಾರಿ

ಬೆಂಗಳೂರು; ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಹುದ್ದೆಗಳಿಗೆ ನಡೆಸುವ ವ್ಯಕ್ತಿತ್ವ ಪರೀಕ್ಷೆಗೆ ನಿಗದಿಪಡಿಸಿದ್ದ ಅಂಕಗಳನ್ನು ಹೆಚ್ಚಳ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ಇನ್ನಿಲ್ಲದ ಒತ್ತಡವನ್ನು ಸರ್ಕಾರದ ಮೇಲೆ ಹೇರುತ್ತಿದೆ. ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ನೀಡುವ ಹುನ್ನಾರವನ್ನೂ ನಡೆಸಿದೆ.

 

ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರ್ಸ್‌ ವೃಂದಲ್ಲಿ ಖಾಲಿ ಇದ್ದ ಒಟ್ಟು ಹುದ್ದೆಗಳ ಪೈಕಿ 384 ಹುದ್ದೆಗಳನ್ನು ಭರ್ತಿ ಮಾಡಲು 2024ರ ಫೆ.26ರಂದು ಅಧಿಸೂಚನೆ ಹೊರಡಿಸಿತ್ತು. ಇದೇ ಅಧಿಸೂಚನೆಯಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅಂಕಗಳನ್ನೂ ನಿಗದಿಪಡಿಸಿತ್ತು. ಆದರೀಗ ಆಯೋಗವು ದಿಢೀರ್‍‌ ಎಂದು ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು ಹೆಚ್ಚಳ ಮಾಡಲು ಹೊರಟಿದೆ.

 

ಈ ಮೂಲಕ ಪಿ ಸಿ ಹೋಟಾ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನೂ ಉಲ್ಲಂಘಿಸಿದಂತಾಗುತ್ತದೆ. ಹೋಟಾ ಸಮಿತಿ ಶಿಫಾರಸ್ಸುಗಳಿಗೆ ವಿರುದ್ಧವಾಗಿ ವ್ಯಕ್ತಿತ್ವ ಪರೀಕ್ಷೆಯ ಅಂಕಗಳಲ್ಲಿ ಮಾರ್ಪಾಡು ಮಾಡಲು ಹೊರಟಿದೆ.

 

ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು ಹೆಚ್ಚಳ ಮಾಡಲು ಆಯೋಗವು ಸಲ್ಲಿಸಿರುವ ಪ್ರಸ್ತಾವನೆಯನ್ನು ಒಂದೊಮ್ಮೆ ಸರ್ಕಾರವು ಒಪ್ಪಿಕೊಂಡಿದ್ದೇ ಆದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ.
ಆಯೋಗವು ಸಲ್ಲಿಸಿರುವ ಈ ಪ್ರಸ್ತಾವನೆಗೆ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಕೆಎಎಸ್‌ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯೋಗವು ನಡೆಸುವ ವ್ಯಕ್ತಿತ್ವ ಪರೀಕ್ಷೆಗೆ 25 ಅಂಕಗಳನ್ನು 2022ರಲ್ಲೇ (ಅಧಿಸೂಚನೆ ಸಂಖ್ಯೆ; ಡಿಪಿಎಆರ್‍‌ 20 ಎಸ್‌ಎಸ್‌ಸಿ 2022) ನಿಗದಿಪಡಿಸಿತ್ತು. ಆದರೀಗ ಆಯೋಗವು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 25ರಿಂದ ಹಠಾತ್‌  100ಕ್ಕೆ  ಏರಿಸಲು ಮುಂದಾಗಿದೆ. ಈ ನಡೆಯು ಪ್ರಾಮಾಣಿಕ ಅಭ್ಯರ್ಥಿಗಳಲ್ಲಿ ನಿರಾಶೆ ಮೂಡಿಸಿದೆ.

 

ಈಗಾಗಲೇ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಪದೇಪದೇ ಬದಲಿಸಿ ಅಭ್ಯರ್ಥಿಗಳ ವಯೋಮಿತಿಯನ್ನೂ ಸಡಿಲಿಸಲಾಗಿದೆ. ಹೀಗಾಗಿ ಇಡೀ ಪರೀಕ್ಷೆಯ ವ್ಯವಸ್ಥೆಯನ್ನೇ ಗೊಂದಲದ ಗೂಡಾಗಿಸಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಗೆಜೆಟೆಡ್‌ ಪ್ರೊಬೇಷನರ್ಸ್‌ ಸ್ಪರ್ಧಾರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಮುಖ್ಯ ಲಿಖಿತ ಪರೀಕ್ಷೆಗೆ 1,250 ಅಂಕಗಳಿಗೆ ಮುಖ್ಯ ಲಿಖಿತ ಪರೀಕ್ಷೆಯನ್ನು ಬರೆಯುತ್ತಾರೆ. ಮುಖ್ಯ ಪರೀಕ್ಷೆಯ ಅಂಕಗಳು ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಒಟ್ಟು ಅಂಕಗಳ ಆಧಾರದ ಮೇಲೆ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ಗಳನ್ನು ಒಳಗೊಂಡಂತೆ ಎಲ್ಲಾ ಹುದ್ದೆಗಳಿಗೆ ಪೋಸ್ಟಿಂಗ್‌ಗಳನ್ನು ನಿಗದಿಪಡಿಸಲಾಗುತ್ತದೆ.

 

‘ಈ ಮಧ್ಯೆ ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ಆಯಕಟ್ಟಿನ ಹುದ್ದೆಗಳಾದ ಸಹಾಯಕ ಆಯುಕ್ತರು, ಪೊಲೀಸ್‌ ಉಪ ಅಧೀಕ್ಷಕರು ಮತ್ತು ತಹಶೀಲ್ದಾರ್‌ ಹುದ್ದೆಗಳಿಗೆ ಅಂತಿಮ ಪಟ್ಟಿಯಲ್ಲಿ ಆಯ್ಕೆಗೊಳಿಸುವ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ,’ ಎಂದು ಪತ್ರದಲ್ಲಿ ಅನುಮಾನ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

 

ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಪಿ ಸಿ ಹೋಟಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ನೀಡಿರುವ ಶಿಫಾರಸ್ಸುಗಳ ಪ್ರಕಾರ ಈಗಾಗಲೇ ನಿಗದಿಗೊಳಿಸಿರುವ ವ್ಯಕ್ತಿತ್ವ ಪರೀಕ್ಷೆಯ ಅಂಕ(25)ಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಆದರೂ ಆಯೋಗವು ಈ ಮಾನದಂಡಗಳನ್ನೇ ಬದಲಾಯಿಸಲು ಹೊರಟಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಕೆ. ಮಂಜುಶ್ರೀ v/s ಆಂಧ್ರ ಪ್ರದೇಶ ಸರ್ಕಾರ(2008) ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಂತೆ ಯಾವುದೇ ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸುವಂತಿಲ್ಲ. ಆದ್ದರಿಂದ ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿರುವ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅಂಕಗಳ ಅನ್ವಯವೇ 25 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸಬೇಕು.

 

ನಾಗರಿಕ ಸೇವೆಗೆ ನಡೆಸಲಾಗುವ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಪಿ.ಸಿ ಹೋಟಾ ಸಮಿತಿಯು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿಗಾಗಿ ಸೂಕ್ತ ಹೆಸರುಗಳ ಪಟ್ಟಿಯನ್ನು ತಯಾರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಶಿಫಾರಸ್ಸು ಮಾಡಿತ್ತು.

 

ಆದರೆ, ಸರ್ಕಾರವು ಇದುವರೆಗೂ ಈ ಶಿಫಾರಸ್ಸನ್ನೂ ಜಾರಿಗೊಳಿಸಿಲ್ಲ. ಹೀಗಿರುವಾಗ, ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯಲ್ಲಿ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಈ ಹಂತದಲ್ಲಿ ಹೆಚ್ಚಿಸಿದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಅಭ್ಯರ್ಥಿಗಳಿಗೆ ನ್ಯಾಯ ದೊರಕಿದಂತಾಗುವುದಿಲ್ಲ. ಅಲ್ಲದೇ, ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ತೀವ್ರ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಪ್ರಸ್ತಾಪಿಸಿರುವುದು ಗೊತ್ತಾಗಿದೆ.

ಕೆಪಿಎಸ್ಸಿ ಅಕ್ರಮ ಬಹಿರಂಗ; ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯಲ್ಲಿಯೇ ಭ್ರಷ್ಟಾಚಾರ ಒಪ್ಪಿಕೊಂಡ ಸರ್ಕಾರ

ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೆರಿಟ್ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಾಗೂ ಪಕ್ಷಪಾತದಿಂದ ವರ್ತಿಸುವ ಕೆಪಿಎಸ್‌ಸಿ ಸದಸ್ಯರ ವಿವೇಚನಾ ಅಧಿಕಾರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 25ಕ್ಕೆ ನಿಗದಿಪಡಿಸಿತ್ತು.

 

ಗ್ರೂಪ್‌ ಎ ಮತ್ತು ಬಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಕೇವಲ 10 ಅಂಕಗಳನ್ನು ಸಂದರ್ಶನಕ್ಕಾಗಿ ನಿಗದಿಗೊಳಿಸಿದೆ. ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ನಿಯಮಗಳು, 1997 ಗೆ (ದಿನಾಂಕ:30-05-2019) ರಂದು (DPAR 67 SeloAa 2017 ) ರ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದೆ.

 

ನಿಯಮಗಳ 4 (4) ರಲ್ಲಿ “and shall complete the entire process preferably within one ‘year from the date of notification” ಎಂದು ಆದೇಶಿಸಿದೆ. ಈಗಾಗಲೇ ಅಧಿಸೂಚನೆ ಹೊರಡಿಸಿ ನಾಲ್ಕು ತಿಂಗಳಾಗಿದೆ. ಹೀಗಾಗಿ ಪರೀಕ್ಷಾ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯ್ಕೆ ಪ್ರಾಧಿಕಾರವಾದ ಕೆ.ಪಿ.ಎಸ್‌.ಸಿ ಗೆ ಸೂಚಿಸಬೇಕು,’ ಎಂದು ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts