ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅಕ್ರಮ; ಆರೋಪಿತರ ಮನವಿಯಲ್ಲಿ ಉನ್ನತ ಶಿಕ್ಷಣ ಸಚಿವರ ಕಚೇರಿಯ ಪ್ರಸ್ತಾಪ

ಬೆಂಗಳೂರು; ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಈಗಾಗಲೇ ಸಚಿವ ಬಿ ನಾಗೇಂದ್ರ ಅವರ ತಲೆದಂಡವೂ ಆಗಿದೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರ ಹೆಸರೂ ಈ ಪ್ರಕರಣದಲ್ಲಿ ತೇಲಿ ಬಂದಿದೆ.

 

ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಖುದ್ದು ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಏತನ್ಮಧ್ಯೆ ಆರೋಪಿತ ಅಧಿಕಾರಿಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಕಚೇರಿ ಎಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ವಾಸ್ತವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರ ಕಚೇರಿಯೂ ವಿಧಾನಸೌಧದಲ್ಲಿಲ್ಲ. ಬದಲಿಗೆ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರ ಕಚೇರಿಯು ವಿಕಾಸಸೌಧದ ಎರಡನೇ ಮಹಡಿಯಲ್ಲಿದೆ. ಮತ್ತು ಡಾ ಎಂ ಸಿ ಸುಧಾಕರ್‍‌ ಅವರ ಕಚೇರಿಯೂ ಸಹ ವಿಕಾಸಸೌಧದ ಮೂರನೇ ಮಹಡಿ (ಹೈಕೋರ್ಟ್‌ ಎದುರು)ಯಲ್ಲಿದೆ.

 

ಆದರೂ ಆರೋಪಿತ ಅಧಿಕಾರಿಯೊಬ್ಬರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ರಕ್ಷಿಸಿಡಬೇಕು ಮತ್ತು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದಾರೆ.

 

ಆರೋಪಿತ ಅಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ನಮೂದಿಸಿರುವಂತೆ ಸಚಿವರು ಮತ್ತು ಅವರು ಎಲ್ಲಿ ಕಚೇರಿ ಹೊಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಮತ್ತೊಂದು ವಿಶೇಷವೆಂದರೆ ವಿಧಾನಸೌಧ ಮತ್ತು ವಿಕಾಸಸೌಧದ ಕಾರಿಡಾರ್‍‌ನ ನಾಲ್ಕು ಮೂಲೆಯಲ್ಲಿಯೂ ಸಿಸಿಟಿವಿ ಅಳವಡಿಸಲಾಗಿದೆಯೇ ವಿನಃ ಸಚಿವರ ಕೊಠಡಿಯೂ ಸೇರಿದಂತೆ ಯಾವ ಕೊಠಡಿಗಳಿಗೂ ಸಿಸಿಟಿವಿ ಅಳವಡಿಸಿಲ್ಲ.

 

ಇಡೀ ವಿಧಾನಸೌಧದಲ್ಲಿ 89 ಸಿಸಿಟಿವಿ ಕ್ಯಾಮೆರಾಗಳಿವೆ. ಈ ಪೈಕಿ 16 ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಿಧಾನಸೌಧದ ಪ್ರಮುಖ ನಾಲ್ಕು ಪ್ರವೇಶ ದ್ವಾರಗಳ ಕೆಲ ಭಾಗಗಳನ್ನು ಹೊರತುಪಡಿಸಿದರೆ ಹಲವು ತಿಂಗಳುಗಳಿಂದ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.

 

ಆರೋಪಿ ಅಧಿಕಾರಿಯ ಮನವಿಯಲ್ಲೇನಿದೆ?

 

ನಿಗಮದ ಅಧ್ಯಕ್ಷರಾದ ಬಸವರಾಜ್ ದದ್ದಲ್ ಜೊತೆ ನಡೆಸಿರುವ ಸಂಭಾಷಣೆಯನ್ನು ಎಸ್‌ಐಟಿ  ವಶಪಡಿಸಿಕೊಂಡಿದ್ದು ಅದನ್ನು ನಾಶ ಮಾಡುವ ಸಂಭವವಿರುತ್ತದೆ. ಹಾಗಾಗಿ ಅದರ ಒಂದು ಪ್ರತಿಯನ್ನು ನ್ಯಾಯಾಲಯ  ಪಡೆದುಕೊಳ್ಳಬೇಕು. ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಅವರ ಕಾರ್ಯಾಲಯದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಯೂನಿಯನ್ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ನಾಶ ಮಾಡುವ ಸಂಭವವಿದ್ದು ಅವುಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಆರೋಪಿತ ಅಧಿಕಾರಿಯು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

 

ಆರೋಪಿತ ಅಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರವನ್ನಾಧರಿಸಿ ಪ್ರತಿಪಕ್ಷ ಬಿಜೆಪಿಯೂ ಟ್ವೀಟ್‌ ಮಾಡಿದೆ.

 

‘ಕಾಂಗ್ರೆಸ್ಸಿನ ಬಹುತೇಕ ನಾಯಕರು ಸೇರಿಕೊಂಡು ಮಾಡಿರುವ ಮಹಾನ್ ಭ್ರಷ್ಟಾಚಾರ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಭಾಗಿಯಾಗಿರುವ ಈ ಒಂದು ಹಗರಣವನ್ನು ಎಸ್ಐಟಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಸಾಧ್ಯ, ಆದಕಾರಣ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತಾವು ಕೂಡ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು,’ ಎಂದು ಆಗ್ರಹಿಸಿದೆ.

SUPPORT THE FILE

Latest News

Related Posts