ನೀಟ್‌, ಜೆಇಇ, ಸಿಇಟಿ ತರಬೇತಿ ನೀಡುವ ಸಂಸ್ಥೆ ಆಯ್ಕೆಯಲ್ಲಿ ಅಕ್ರಮ ವಾಸನೆ; ನಿರ್ದಿಷ್ಟ ಸಂಸ್ಥೆಯ ಪಾಲಾದ 12 ಕೋಟಿ?

ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌)ದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ, ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ  ನೀಟ್‌, ಜೆಇಇ ಮತ್ತು ಸಿಇಟಿ ಪರೀಕ್ಷೆ ಸಂಬಂಧ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆ ಮಾಡುವ   ಕರೆದಿದ್ದ ಟೆಂಡರ್‍‌ನಲ್ಲಿಯೇ ಅಕ್ರಮದ ವಾಸನೆ ಬಡಿದಿದೆ.

 

ನೀಟ್‌ ಫಲಿತಾಂಶದಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಇದಕ್ಕೆ ಕೇಂದ್ರದ ಮೋದಿ ಸರ್ಕಾರವಾಗಲೀ ಉತ್ತರಿಸದೇ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಕ್ರೈಸ್‌ ವ್ಯಾಪ್ತಿಯ ವಸತಿ ಶಾಲೆ, ಕಾಲೇಜುಗಳಲ್ಲಿ ನೀಟ್‌ ಸೇರಿದಂತೆ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆಯ ಟೆಂಡರ್‍‌ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿದೆ ಎಂದು ಕೇಳಿ ಬಂದಿರುವ  ಆರೋಪಗಳೂ ಮುನ್ನೆಲೆಗೆ ಬಂದಿವೆ.

 

ಇದಕ್ಕೆ ಸಂಬಂಧಿಸಿದಂತೆ ಟೆಂಡರ್‍‌ ದಾಖಲಾತಿಗಳೂ ಸೇರಿದಂತೆ ಹಲವು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಶೇಷವೆಂದರೇ ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಬೇತಿಗಾಗಿ  ಟೆಂಡರ್‍‌ ಕರೆದಿದ್ದ ಅರಂಭದಲ್ಲಿಯೇ 2023ರ ಡಿಸೆಂಬರ್‍‌ 29ರಂದು ಸಮಾಜ ಕಲ್ಯಾಣ ಇಲಾಖೆಗೆ ದಾಖಲೆ ಸಹಿತ ದೂರೊಂದು ಸಲ್ಲಿಕೆಯಾಗಿತ್ತು. ಇದೇ ದೂರಿನ ಮೇಲೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಮರು ಟೆಂಡರ್‍‌ ಕರೆಯಬೇಕು ಎಂದು ಆದೇಶ ಹೊರಡಿಸಿದ್ದರು.

 

ಇಲಾಖೆ ಅಧಿಕಾರಿಗಳು ಮರು ಟೆಂಡರ್‍‌ ಕರೆಯದೇ ಕಾನೂನು ಪ್ರಕಾರ ಟೆಂಡರ್‍‌ ಪ್ರಕ್ರಿಯೆ ತಡೆಹಿಡಿಯಲು ಅವಕಾಶವಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಟೆಂಡರ್‍‌ ಪ್ರಕ್ರಿಯೆ ಮುಂದುವರೆಸಲು ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದ್ದರು. ವಿಶೇಷವೆಂದರೇ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಸಹ ಅನುಮೋದಿಸಿದ್ದರು.

 

ದೂರಿನಲ್ಲೇನಿತ್ತು?

 

ಕ್ರೈಸ್‌ ವ್ಯಾಪ್ತಿಯಲ್ಲಿನ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಮತ್ತು ಜೆಇಇ ಪರೀಕ್ಷೆಗೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ಮೂಲಕ  ಅಂದಾಜು 12 ಕೋಟಿ ರು. ವೆಚ್ಚದಲ್ಲಿ ತರಬೇತಿ ನೀಡಲು ಸಂಸ್ಥೆಗಳ ಆಯ್ಕೆಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿತ್ತು. ಮೊದಲ ಹಂತದಲ್ಲಿ 7.15 ಕೋಟಿ ರು. ವೆಚ್ಚದಲ್ಲಿ ಆನ್‌ ಲೈನ್‌ ಮೂಲಕ ತರಬೇತಿ ನೀಡಲು   2023ರ ಡಿಸೆಂಬರ್‍‌ 21ರಂದು  ಟೆಂಡರ್‍‌ ಕರೆಯಲಾಗಿತ್ತು.

 

ಈ  ಟೆಂಡರ್‍‌ನಲ್ಲಿನ ಷರತ್ತುಗಳನ್ನು ದುರುದ್ದೇಶಪೂರ್ವಕವಾಗಿ ರಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಂಸ್ಥೆಯೊಂದು  ಟೆಂಡರ್‍‌ನಲ್ಲಿದ್ದ ಷರತ್ತುಗಳಲ್ಲಿನ ಲೋಪಗಳನ್ನು ಪ್ರಿ ಬಿಡ್‌ ಸಭೆಯಲ್ಲಿಯೇ  ಗಮನಕ್ಕೆ ತಂದಿತ್ತು ಎಂಬುದು ತಿಳಿದು ಬಂದಿದೆ.

 

 

 

ಆದರೆ ಜಂಟಿ ನಿರ್ದೇಶಕ ನಾಗೇಶ್‌ ಎಂಬುವರು ನಿರ್ದಿಷ್ಟ ಕಂಪನಿಯನ್ನು ಗಮನದಲ್ಲಿಟ್ಟುಕೊಂಡು ಟೆಂಡರ್‍‌ ಷರತ್ತುಗಳನ್ನು ನಿಗದಿಪಡಿಸಿದ್ದರು. ಈ ಷರತ್ತುಗಳು  ಟೆಂಡರ್‍‌ ಕ್ಯೂಸಿಬಿಎಸ್‌ನ ನಿಯಮಗಳ ಪ್ರಕಾರ ಇರುವುದಿಲ್ಲ ಎಂದು ವಿವರಿಸಿದ್ದರು.

 

ನಿಯಮಗಳಲ್ಲೇನಿದೆ?

 

ಕ್ಯುಸಿಬಿಎಸ್‌ನ ನಿಯಮಗಳ  ಪ್ರಕಾರ ತರಬೇತುದಾರ ಸಂಸ್ಥೆಗೆ ವಿಶೇಷ ಮತ್ತು ನುರಿತ ಪರಿಣಿತಿ ಇರಬೇಕು. ಕಾರ್ಯ ಯೋಜನೆ, ಅನುಷ್ಠಾನ, ಅರ್ಹತೆ, ಪ್ರಾದೇಶಿಕ ಭಾಷೆಯಲ್ಲಿ ಬೋಧನಾ ಅನುಭವ ಇರಬೇಕು. ಇದಕ್ಕೆ ತಕ್ಕಂತೆ ಅಂಕಗಳನ್ನು ನೀಡಬೇಕು. ಈ ಅಂಶಗಳನ್ನು ಒಳಗೊಂಡು ಟೆಂಡರ್‍‌ ದಾಖಲಾತಿಯನ್ನು ಸಿದ್ಧಪಡಿಸಬೇಕಿತ್ತು. ಆದರೆ ಈ ಯಾವ ಅಂಶಗಳನ್ನೂ ಟೆಂಡರ್‍‌ ದಾಖಲಾತಿಯಲ್ಲಿ ಸಿದ್ಧಪಡಿಸದೇ ಪೂರ್ವ ನಿರ್ಧರಿತ ಸಂಸ್ಥೆಗೆ ಟೆಂಡರ್‍‌ ನೀಡಲಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

 

 

 

 

 

ಅಲ್ಲದೇ ಆರ್ಥಿಕ ಇಲಾಖೆಯು ಹೊರಡಿಸಿದ್ದ ಆದೇಶದ ಪ್ರಕಾರ (FD 18 EXP-12/2021 BENGALURU DATED 01/09/2021 GOVT NOTIFICATION NO FD 218/EXP-12/20221) ಸ್ಟಾರ್ಟ್‌ ಅಪ್‌ ಗಳಿಗೆ ಈ ಹಿಂದೆ ಕರೆದಿದ್ದ ಟೆಂಡರ್‍‌ಗಳಲ್ಲಿ ಅವಕಾಶ ಕಲ್ಪಿಸಿತ್ತು. ಆದರೆ ಕ್ರೈಸ್‌ ಕರೆದಿದ್ದ ಟೆಂಡರ್‍‌ನಲ್ಲಿ ಸ್ಟಾರ್ಟ್‌ ಅಪ್‌ಗಳಿಗೆ ಅವಕಾಶ ನೀಡಿರುವುದಿಲ್ಲ ಎಂದು ದೂರಿನಲ್ಲಿ  ಸಂಸ್ಥೆಯು ಆರೋಪಿಸಿತ್ತು.

 

‘ಪ್ರಸ್ತಾವಿತ ಟೆಂಡರ್‍‌ನಲ್ಲಿ ಬಹುತೇಕ ಷರತ್ತುಗಳು ದುರುದ್ದೇಶವಾಗಿ ಕರಾರವಕ್ಕಾಗಿ ನಿರ್ವಹಿಸಲು ಸಾಧ್ಯವಾಗದ ರೀತಿ ಮಾಡಿ ಯಾರೂ ಮುಕ್ತವಾಗಿ ಭಾಗವಹಿಸಬಾರದು ಎಂಬ ರೀತಿಯಲ್ಲಿ ಷರತ್ತುಗಳನ್ನು ರೂಪಿಸಲಾಗಿದೆ. ಕೇವಲ ಸ್ವಾರ್ಥ ಸಾಧನೆಗಾಗಿ ಒಬ್ಬ ವ್ಯಕ್ತಿಗೆ ನೀಡುವ ಮೂಲಕ ಟೆಂಡರ್‍‌ ದಾಖಲಾತಿಯನ್ನು ರಚಿಸಿದ್ದಾರೆ,’ ಎಂದು ದೂರಿನಲ್ಲಿ ಆಪಾದಿಸಿತ್ತು.

 

ಈ ಹಿಂದೆಯೂ ಸಹ ಉದ್ದೇಶಪೂರ್ವಕವಾಗಿ ತರಬೇತಿಗೆ ನಿಗದಿತ ಸಮಯ ಅವಕಾಶ ನೀಡಿರಲಿಲ್ಲ. ಆಧರೂ ಟೆಂಡರ್‍‌ ಕರೆದಿದ್ದ ಕ್ರೈಸ್‌ ಸಂಸ್ಥೆಯು ತಮಗೆ ಬೇಕಾದವರಿಗೆ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಯಶಸ್ವಿಯಾಗಿರಲಿಲ್ಲ. ಜಂಟಿ ನಿರ್ದೇಶಕರ ಈ ನಡೆಯಿಂದ ಬಡ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಅನ್ಯಾಯವಾಗಿತ್ತು ಎಂದು ದೂರಿತ್ತು.

 

‘ಕಾನೂನಿನ ಪ್ರಕಾರ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ತರಬೇತಿ ನೀಡಲು ಪ್ರಾಮಾಣಿಕ ಸೂಕ್ತ ಟೆಂಡರ್‍‌ ನಿಯಮಗಳನ್ನು ರಚಿಸಬೇಕು ಮತ್ತು ಸರ್ಕಾರದ ಉದ್ದೇಶ ಹಾಗೂ ಸಂಬಂಧಿತ ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಾಯ ಮಾಡಬೇಕು,’ ಎಂದು ಕೋರಿತ್ತು.

 

ಈ ದೂರನ್ನು ಪರಿಶೀಲಿಸಿದ್ದ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಮರು ಟೆಂಡರ್‍‌ ಕರೆಯಬೇಕು ಎಂದು ಸೂಚಿಸಿದ್ದರು. ಆದರೆ ಇಲಾಖೆಯ ಅಧಿಕಾರಿಗಳು ಮರು ಟೆಂಡರ್‍‌ ಕರೆದಿರಲಿಲ್ಲ.

 

 

 

ಈ ದೂರನ್ನಾಧರಿಸಿ ಇಲಾಖೆಯ ಶಾಖಾಧಿಕಾರಿ ಸುಭಾಸ ಚಲವಾದಿ ಅವರು  2024ರ ಜನವರಿ 19ರಂದು ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ‘ ಕ್ರೈಸ್‌ ವಸತಿ ಶಾಲೆ, ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೆಸಿಇಟಿ, ನೀಟ್‌, ಜೆಇಇ ಆನ್‌ಲೈನ್‌ ತರಬೇತಿಗಾಗಿ ಪ್ರಸ್ತಾವಿತ ಟೆಂಡರ್‍‌ ಷರತ್ತುಗಳನ್ನು ದುರುದ್ದೇಶವಾಗಿ ರಚಿಸಲಾಗಿದೆ ಎಂಬ ದೂರು ಸಲ್ಲಿಕೆಯಾಗಿರುತ್ತದೆ. ಇದೇ ಪತ್ರದ ಮೇಲೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಷರಾ ನಮೂದಿಸಿರುವಂತೆ ಅಗತ್ಯ ಕ್ರಮ ವಹಿಸಬೇಕು,’ ಎಂದು ನಿರ್ದೇಶಿಸಿದ್ದರು.

 

ಆದರೆ ವಸತಿ ಶಿಕ್ಷಣ ಸಂಘವು ಇದರಲ್ಲಿ ಯಾವುದೇ ಲೋಪ ದೋಷಗಳು ನಡೆದಿಲ್ಲ ಎಂದು ಪ್ರತಿಪಾದಿಸಿತ್ತು.  ಸಂಘದ ಪ್ರತಿಪಾದನೆಗೆ ಒತ್ತು ನೀಡಿದ್ದ ಇಲಾಖೆಯೂ ಸಹ   ಈಗಾಗಲೇ ಕರೆದಿದ್ದ ಟೆಂಡರ್‍‌ ಪ್ರಕ್ರಿಯೆ ಮುಂದುವರೆಸಬೇಕು ಎಂದು 2024ರ ಫೆ.15ರಂದು ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದ್ದರು.

 

ಇಲಾಖೆಯ ಪತ್ರದಲ್ಲೇನಿದೆ?

 

ಕ್ರೈಸ್‌ ವಸತಿ ಶಾಲೆ, ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಮತ್ತು ಜೆಇಇ ಆನ್‌ಲೈನ್‌ ತರಬೇತಿ ನೀಡಲು ಪಾರದರ್ಶಕವಾಗಿ ಟೆಂಡರ್‍‌ ಆಹ್ವಾನಿಸಿದೆ. ಇದರಲ್ಲಿ ಯಾವುದೇ ಲೋಪದೋಷಗಳಾಗಿರುವುದಿಲ್ಲ. ಯಾವುದೇ ನಿಯಮಗಳು ಉಲ್ಲಂಘನೆಯಾಗಿರುವುದಿಲ್ಲ. ಮುಂದಿನ ಟೆಂಡರ್‍‌ ಪ್ರಕ್ರಿಯೆಯಲ್ಲಿ ಹೆಚ್ಚಿನ ಟೆಂಡರ್‍‌ದಾರರು ಭಾಗವಹಿಸಲು ಅನುಕೂಲವಾಗುವಂತೆ ವಿನಾಯಿತಿ ಷರತ್ತುಗಳನ್ನು ಅಳವಡಿಸಿಕೊಳ್ಳಲು ಸಂಘಕ್ಕೆ ಅನುಕೂಲವಾಗಬಹುದು ಎಂದು ಹೇಳಿತ್ತು.

 

 

 

ಅಲ್ಲದೇ ಕಾನೂನು ಪ್ರಕಾರ ಟೆಂಡರ್‍‌ ಪ್ರಕ್ರಿಯೆ ತಡೆಹಿಡಿಯಲು ಅವಕಾಶವಿರುವುದಿಲ್ಲ. ಆದ ಕಾರಣ ಸಂಘದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಿಇಟಿ, ಜೆಇಇ, ನೀಟ್‌ ಆನ್‌ ಲೈನ್‌ ತರಬೇತಿ ನೀಡಲು ಟೆಂಡರ್‍‌ ಪ್ರಕ್ರಿಯೆ ಮುಂದುವರೆಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಶಾಖಾಧಿಕಾರಿ ಸುಭಾಸ ಚಲವಾದಿ ಅವರು ಕ್ರೈಸ್‌ನ ಕಾರ್ಯನಿರ್ವಾಹ ನಿರ್ದೇಶಕರಿಗೆ ಸೂಚಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಈ ಕುರಿತು ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರನ್ನೂ ಅಧಿಕಾರಿಗಳು ಕತ್ತಲಲ್ಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

the fil favicon

SUPPORT THE FILE

Latest News

Related Posts