ಎಕ್ಸ್‌ ರೇ ಉಪಕರಣ; ಆಸ್ಪತ್ರೆಗಳಲ್ಲಿ ಬೇಡಿಕೆಯಿರದಿದ್ದರೂ ಖರೀದಿ, ದೃಢೀಕರೀಸದಿದ್ದರೂ ಬಿಲ್‌ ಪಾವತಿ

ಬೆಂಗಳೂರು; ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ  ಅವಧಿಯಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬೇಡಿಕೆ ಇರದಿದ್ದರೂ ಸಹ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ಎಕ್ಸ್‌ ರೇ ಯಂತ್ರೋಪಕರಣಗಳನ್ನು ಖರೀದಿ ಮಾಡಲಾಗಿತ್ತು. ಒದಗಿಸಿದ್ದ ಅನುದಾನವನ್ನು ಖರ್ಚು ಮಾಡುವ ಉದ್ದೇಶದಿಂದ ವಿನಾಕಾರಣ ಖರೀದಿಸಿತ್ತು ಎಂದು ಲೋಕಾಯುಕ್ತ ತನಿಖಾ ತಂಡವು ಬಯಲಿಗೆಳೆದಿದೆ.

 

2019ನೇ ಸಾಲಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಎಕ್ಸ್‌ ರೇ ಯಂತ್ರೋಪಕರಣಗಳ ಖರೀದಿಯಲ್ಲಿ ಹಲವು ಲೋಪ ಮತ್ತು ಅಕ್ರಮಗಳನ್ನು ನಡೆಸಿದೆ ಎಂದು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ 2020ರಲ್ಲಿ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ವಿಭಾಗವು ತನಿಖೆ ನಡೆಸಿತ್ತು. ಸತತ ನಾಲ್ಕು ವರ್ಷಗಳ ನಂತರ ಅಂದರೇ  2024ರ ಜನವರಿಯಲ್ಲಿಯೇ ಈ ಸಂಬಂಧ ತನಿಖಾ ವರದಿಯನ್ನು ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಶಿವಾನಂದ ಪಾಟೀಲ್‌ ಅವರು ಈಗಿನ ಕಾಂಗ್ರೆಸ್‌ ಸರ್ಕಾರದಲ್ಲೂ ಸಚಿವರಾಗಿದ್ದಾರೆ.

 

ಟೆಂಡರ್‍‌ ನಿಯಮದಂತೆ ಯಶಸ್ವಿ ಬಿಡ್‌ದಾರರು ಸಲ್ಲಿಸಿರುವ ಅನುಭವ ದೃಢೀಕರಣ ಪತ್ರವು ನಕಲಿಯಾಗಿದೆ. C-ARM, 500, mA-HF X-Ray and 100ma X-RAY ಗಳನ್ನು ಟೆಂಡರ್‍‌ ನಿಯಮಗಳಂತೆ ಅಳವಡಿಸಿಲ್ಲ. ಡೆಮೋ ಮತ್ತು ತಪಾಸಣೆಗೆ ಇರಿಸಲಾದ ಮಾದರಿಯಲ್ಲಿ ಇರುವಂತೆ ಉಪಕರಣಗಳನ್ನು ಸರಬರಾಜು ಮಾಡದೇ ಕಳಪೆ ಗುಣಮಟ್ಟದ ಉಪಕರಣಗಳನ್ನು ಸರಬರಾಜು ಮಾಡಲಾಗಿದೆ ಎಂದು ದೂರಿದ್ದರು.

 

ಕೆಲವು ಉಪಕರಣಗಳನ್ನು ಮಾರುಕಟ್ಟೆ ದರಗಳಿಗಿಂತ ಹೆಚ್ಚಿನ ಬೆಲೆಗೆ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಗುತ್ತಿಗೆದಾರರು/ಸರಬರಾಜುದಾರರು, ಸರಬರಾಜು ಮಾಡಲಾದ ಉಪಕರಣಗಳ ದಾಸ್ತಾನು ದೃಢೀಕರಣ ಪತ್ರ ಪಡೆಯದೇ ಹಣ ಪಾವತಿ ಮಾಡಲಾಗಿದೆ ಎಂದು ಡಾ ಸಾರ್ವಭೌಮ ಬಗಲಿ ಅವರು ದಾಖಲೆ ಸಮೇತ ನೀಡಿದ್ದ  ದೂರಿನಲ್ಲಿ ವಿವರಿಸಿದ್ದರು.

 

ಈ ದೂರಿನ ಕುರಿತು ಲೋಕಾಯುಕ್ತ ತಾಂತ್ರಿಕ ತಂಡವು ತನಿಖೆ ನಡೆಸಿತ್ತು ಎಕ್ಸ್‌ ರೇ ಉಪಕರಣಗಳನ್ನು ಸರಬರಾಜು ಮಾಡಿದ್ದ ಕಂಪನಿಯ ಅನುಭವ ದೃಢೀಕರಣ ಪತ್ರಗಳನ್ನು ಲೋಕಾಯುಕ್ತ ತನಿಖಾ ತಂಡವು ಪರಿಶೀಲಿಸಿತ್ತು. ಈ ಸಂಬಂಧ ನಿಗಮವು ಸಂಬಂಧಪಟ್ಟ ಕಚೇರಿ, ಸಂಸ್ಥೆ, ಕಂಪನಿ, ಇಲಾಖೆ ಇತ್ಯಾದಿಗಳಿಗೆ ಪತ್ರ ಬರೆದು ಅನುಭವ ದೃಢೀಕರಣ ಪತ್ರದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿರುವ ಬಗ್ಗೆ ವಿವರಗಳನ್ನು ಪ್ರತ್ಯೇಕವಾಗಿ ನಮೂದಿಸಿಲ್ಲ ಎಂಬ ಅಂಶವನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

‘ಭಾಗವಹಿಸಿದ್ದ ಬಿಡ್‌ದಾರರಲ್ಲಿ ತಾಂತ್ರಿಕವಾಗಿ ಯಶಸ್ವಿ ಬಿಡ್‌ದಾರರು ಆಗಿರುವ ವಿವರಗಳನ್ನು ಮಾತ್ರ ನಮೂದಿಸಲಾಗಿದೆ. ಆದ್ದರಿಂದ ಸದರಿ ಸರಬರಾಜುದಾರರು ಸಲ್ಲಿಸಿರುವ ಅನುಭವ ದೃಢೀಕೃತ ಪ್ರತಿ ಮತ್ತು ಅದರ ನೈಜತೆಯನ್ನು ತಿಳಿಯಲು ಪೂರಕವಾದ ದಾಖಲೆಗಳು ತನಿಖೆಗೆ ಲಭ್ಯವಿರುವುದಿಲ್ಲ,’ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

500, mA-HF X-Rಆ್ಯ and 100ma X-RAY ಯಂತ್ರಗಳ ಖರೀದಿಯಲ್ಲಿಯೂ ಸಹಾ ಟೆಂಡರ್‍‌ ಪರಿಶೀಲನಾ ಸಮಿತಿಯು 2019ರ ಮಾರ್ಚ್‌ 18ರಂದು ಟೆಂಡರ್‍‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಡ್‌ದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಲಸಿ ತಾಂತ್ರಿಕವಾಗಿ ಯಶಸ್ವಿಯಾದ ಬಿಡ್‌ದಾರರನ್ನು ಅಂತಿಮಗೊಳಿಸಿತ್ತು. ಒಟ್ಟಾರೆ ವಿವಿಧ ಸರಬರಾಜುದಾರರು ಸಲ್ಲಿಸಿರುವ ದಾಖಲೆಗಳ ಅನ್ವಯ ತಾಂತ್ರಿಕ ಪರಿಶೀಲನಾ ಸಮಿತಿಯಲ್ಲಿ ಭಾಗವಹಿಸಿದ ಸರಬರಾಜುದಾರರ ತಾಂತ್ರಿಕವಾಗಿ ಯಶಸ್ವಿಯಾಗಿರುವ ಬಗ್ಗೆ ಮಾತ್ರ ಅನುಮೋದಿಸಿತ್ತು ಎಂಬುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

ಟೆಂಡರ್‍‌ ನಿಯಮಗಳಂತೆ ಅಳವಡಿಸಿಲ್ಲ

 

ಟ್ರಿವಿಟ್ರಾನ್‌ ಹೆಲ್ತ್‌ ಕೇರ್‍‌ ಪ್ರೈ ಲಿ ಅವರೊಂದಿಗೆ 2019ರ ಮೇ 28ರಂದು 23 ಉಪಕರಣಗಳನ್ನು ವಿವಿಧ ಆಸ್ಪತ್ರೆಗಳಿಗೆ ಅಳವಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ 2019ರ ಜೂನ್‌ 12ರಂದು ಸದರಿ ಸರಬರಾಜುದಾರರಿಗೆ ಆದೇಶ ನೀಡಲಾಗಿದೆ. ಈ ಸರಬರಾಜು ಆದೇಶದ ಅನ್ವಯ 30 ದಿನದೊಳಗಾಗಿ ಸದರಿ ಸರಬರಾಜುದಾರರು ಈ ಉಪಕರಣಗಳನ್ನು ಖರೀದಿಸಿ ಅಳವಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು.

 

ನಂತರದ ದಿನಗಳಲ್ಲಿ ಕೆಲವು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರಬರಾಜುಗೊಂಡಿರುವ ಕೆಲವು ಸಿ -ಎಆರ್‍‌ಎಂ ಯಂತ್ರಗಳು ತಮ್ಮ ಆಸ್ಪತ್ರೆಗೆ ಅವಶ್ಯಕವಿರುವುದಿಲ್ಲವೆಂದು ಅವುಗಳನ್ನು ಸ್ಥಳಾಂತರಿಸಬೇಕು ಎಂದು ಕೋರಿದ್ದರು.

 

‘ಈ ಮೇಲಿನ ವಿವರಗಳನ್ನು ಗಮನಿಸಿದಾಗ ಸದರಿ ಖರೀದಿ ಪ್ರಕ್ರಿಯೆ ಪೂರ್ವದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ಉಪಕರಣಗಳ ಅವಶ್ಯಕತೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅಥವಾ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಂದ ಬೇಡಿಕೆ ಪತ್ರಗಳನ್ನು ಪಡೆದು ಖರೀದಿ ಪ್ರಕ್ರಿಯೆ ನಡೆಸಿರುವುದಿಲ್ಲ. ಬದಲಿಗೆ ಅನುದಾನ ಇರುವದನ್ನು ಬಳಕೆ ಮಾಡುವ ದೃಷ್ಟಿಯಿಂದ ವಿನಾಕಾರಣ ಖರೀದಿ ಪ್ರಕ್ರಿಯೆ ನಡೆಸಿರುವುದು ಕಂಡುಬಂದಿರುತ್ತದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಸರಬರಾಜುದಾರರು ವಿವಿಧ ಆಸ್ಪತ್ರೆಗಳಿಗೆ ಉಪಕರಣಗಳನ್ನು ಸರಬರಾಜು ಮಾಡಿ ಟೆಂಡರ್‍‌ ಷರತ್ತುಗಳನ್ವಯ ಅಳವಡಿಸಿರುತ್ತಾರೆ ಎಂದು ಸಂಬಂಧಪಟ್ಟ ವೈದ್ಯಾಧಿಕಾರಿಗಳು ದೃಢೀಕರಿಸಿರುವ ವಿವರಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಸಲ್ಲಿಸಿರುವ ದಾಖಲೆಗಳಲ್ಲಿಯೂ ಸಹಾ ಸಂಬಂಧಪಟ್ಟ ಜಿಲ್ಲಾ, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಸದರಿ ಉಪಕರಣಗಳ ಸರಬರಾಜು ಮತ್ತು ಅಳವಡಿಕೆಗೆ ಸಂಬಂಧಿಸಿದ ದೃಢೀಕರಣಗಳು ಇರಲಿಲ್ಲ.

 

‘ಇದರಿಂದ ಸಂಬಂಧಪಟ್ಟ ಉಪಕರಣಗಳು ಟೆಂಡರ್‍‌ ಷರತ್ತುಗಳಿಗೆ ಅನುಗುಣವಾಗಿ ಅಥವಾ ಬೇಡಿಕೆ ಪತ್ರಗಳಿಗೆ ಅನುಗುಣವಾಗಿ ನಿಗದಿತ ದಿನಾಂಕದೊಳಗೆ ಅಳವಡಿಸಲಾಗಿರುತ್ತದೆ ಮತ್ತು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಆಗಿರುವುದಿಲ್ಲ,’ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

 

ಅದೇ ರೀತಿ ಟೆಂಡರ್‍‌ (ಸಂಖ್ಯೆ KDL/EQPT/TND/60/2018-19 (IND-560) ಮೂಲಕ ಆಯ್ಕೆಯಾದ ಜನರಲ್‌ ಮೆಡಿಕಲ್‌ ಇಕ್ವೂಪ್‌ಮೆಂಟ್‌ ಅವರಿಂದ 2 ಸಂಖ್ಯೆಗಳ 500, mA-HF X-Ray ಮತ್ತು 26 ಸಂಖ್ಯೆಗಳ 100 ಎಂ ಎ ಎಕ್ಸ್‌ ಯಂತ್ರಗಳನ್ನು ಹಾಗೂ ಅಲೆಂಜರ್ಸ್‌ ಮೆಡಿಕಲ್ಸ್‌ ಸಿಸ್ಟಮ್ಸ್‌ ನಿಂದ 23 ಸಂಖ್ಯೆಗಳ 300 ಎಂ ಎ ಎಕ್ಸ್‌ ರೇ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿತ್ತು.

 

ಆದರೆ ಈ ಉಪಕರಣಗಳ ಖರೀದಿಯ ಪೂರ್ವದಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಒಟ್ಟು ಉಪಕರಣಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಖರೀದಿ ಪ್ರಕ್ರಿಯೆ ನಡೆಸಿರುವುದು ಕಂಡು ಬಂದಿರುವುದಿಲ್ಲ. 2019ರ ಜೂನ್‌ 12ರಂದು ನೀಡಿರುವ ಸರಬರಾಜು ಆದೇಶದೊಂದಿಗೆ ಲಗತ್ತಿಸಿರುವ ಆಸ್ಪತ್ರೆಯ ವಿವರಗಳನ್ನು ನಂತರದ ದಿನಗಳಲ್ಲಿ ತಿದ್ದುಪಡಿ ಮಾಡಿ ಹೊರಡಿಸಿರುವ ಆದೇಶಗಳೇ ಸಾಕ್ಷಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಅಲ್ಲದೇ ಈ ಉಪಕರಣಗಳನ್ನು ಸಹಾ ಟೆಂಡರ್‍‌ ನಿಯಮಗಳಂತೆ ಅಳವಡಿಸಲಾಗಿರುತ್ತದೆ ಎಂದು ಸಂಬಂಧಪಟ್ಟ ಜಿಲ್ಲಾ, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಂದಲೂ ಸಹಾ ಯಾವುದೇ ದೃಢೀಕರಣ ಪಡೆದಿದ್ದರ ವಿವರಗಳು ತನಿಖೆ ತಂಡಕ್ಕೆ ಒದಗಿಸಿರಲಿಲ್ಲ. ‘ಈ ಹಿನ್ನಲೆಯೆಲ್ಲಿ ಸದರಿ ಖರೀದಿ ಪ್ರಕ್ರಿಯೆಗಳು ವಾಸ್ತವವಾಗಿ ಇದ್ದ ಅಗತ್ಯಕ್ಕೆ ತಕ್ಕಂತೆ ಖರೀದಿಸಿ ಅಳವಡಿಸಲಾಗಿರುತ್ತದೆ ಎಂದು ತನಿಖೆಗೆ ಒದಗಿಸಲಾದ ದಾಖಲೆಗಳಿಂದ ಸ್ಪಷ್ಟವಾಗಿರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಸರಬರಾಜು ಮಾಡಿದ್ದ ಯಂತ್ರೋಪಕರಣಗಳು ಡೆಮೋ ಮತ್ತು ತಪಾಸಣೆಗೆ ಇರಿಸಲಾದ ಮಾದರಿಯಲ್ಲಿ ಸರಬರಾಜುಗೊಂಡು ಅಳವಡಿಸಲಾಗಿದೆ ಎಂದು ತಾಂತ್ರಿಕ ತಜ್ಞರು, ತಪಾಸಣೆ ವರದಿಗಳೇ ಇಲ್ಲ. ಹೀಗಾಗಿ ಈ ಹಂತದಲ್ಲಿ ನಿಖರವಾಗಿ ಹೇಳಲು ತನಿಖೆಗೆ ಸಾಧ್ಯವಾಗಿರುವುದಿಲ್ಲ. ಅಲ್ಲದೇ ಈ ಯಂತ್ರೋಪಕರಣಗಳ ಅಳವಡಿಕೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂಬಂಧ ತಜ್ಞರಿಂದ ಭೌತಿಕ ಪರಿಶೀಲನೆಯನ್ನು ನಡೆಸಿದಲ್ಲಿ ಸತ್ಯಾಂಶವನ್ನು ತಿಳಿಯಬಹುದು ಎಂದು ತನಿಖೆಯಲ್ಲಿ ಅಭಿಪ್ರಾಯಿಸಲಾಗಿದೆ.

 

ಕೆಲವು ಉಪಕರಣಗಳನ್ನು ಮಾರುಕಟ್ಟೆ ದರಗಳಿಗಿಂತ ಹೆಚ್ಚಿನ ಬೆಲೆಗೆ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಸಂಬಂಧವೂ ತನಿಖಾ ತಂಡವು ದಾಖಲೆಗಳನ್ನು ಪರಿಶೀಲಿಸಿದೆ.

 

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಸಲ್ಲಿಸಿರುವ ದಾಖಲೆಗಳಲ್ಲಿ ಸರಬರಾಜುದಾರರಿಗೆ ಅವರುಗಳ ಇನ್‌ವಾಯ್ಸ್‌ ಎದುರಾಗಿ ಮೊತ್ತವನ್ನು ಸೆಳೆಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದಾಸ್ತಾನು ದೃಢೀಕರಣಗಳನ್ನು ಪಡೆದಿತ್ತು. ಕೆಲವು ಪ್ರಕರಣಗಳಲ್ಲಿ ಈ ದೃಢೀಕರಣವು ಇಲ್ಲದಿದ್ದರೂ ಪಾವತಿಸಲಾಗಿದೆ. ಮತ್ತು ಪಾವತಿಗಾಗಿ ಬಿಲ್‌ಗಳನ್ನು ಅಂಗೀಕರಿಸಿದೆ ಎಂದು ಕೆಲವು ಪಾವತಿ ದಾಖಲೆಗಳಿಂದ ತಿಳಿದು ಬಂದಿರುತ್ತದೆ. ದೂರುದಾರರ ಈ ಆಪಾದನೆಯು ಭಾಗಶಃ ಸತ್ಯವಾಗಿರುತ್ತದೆ ಎಂದು ತನಿಖೆಯಲ್ಲಿ ಕಂಡುಬಂದಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ತನಿಖಾ ಅಭಿಪ್ರಾಯ

 

ದಾಖಲೆಗಳ ಪರಿಶೀಲನೆಯ ಪ್ರಕಾರ ಕೆಲವು ನ್ಯೂನತೆಗಳನ್ನು ದಾಖಲೆಗಳ ನಿರ್ವಹಣೆಯಲ್ಲಿ ಆಗಿರುವ ಲೋಪಗಳನ್ನು ತನಿಖೆಯಲ್ಲಿ ಗಮನಿಸಿದೆ. ಉಳಿದಂತೆ ಸದರಿ ಉಪಕರಣಗಳ ಕಾರ್ಯಕ್ಷಮತೆ, ಟೆಂಡರ್‍‌ ನಿಯಮಗಳಂತೆ ಅಳವಡಿಕೆ ಮಾಡಿರುವ ಕುರಿತು ಸಂಬಂಧಪಟ್ಟ ತಜ್ಞರೊಂದಿಗೆ ರಾಜ್ಯಾದ್ಯಂತ ತನಿಖೆ ನಡೆಸಬೇಕು. ಆಗಷಟೇ ನಿಖರ ಮಾಹಿತಿ ವರದಿ ಪಡೆಯಬಹುದು ಎಂದು ತನಿಖಾ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts