ಶಾಲಾ ಶೌಚಾಲಯಗಳ ನಿರ್ವಹಣೆಗೆ 241 ಕೋಟಿ ರು., ಕೃತಕ ಬುದ್ಧಿಮತ್ತೆ ಆ್ಯಪ್ ಬಳಕೆ; ಬಜೆಟ್‌ನಲ್ಲಿ ಘೋಷಣೆ?

ಬೆಂಗಳೂರು; ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಶುಚಿಗೊಳಿಸುತ್ತಿರುವ ಪ್ರಕರಣಗಳ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಯೋಗಿಸಿ ಆ್ಯಪ್  ಮೂಲಕ ಸರ್ಕಾರಿ ಶಾಲೆಗಳ ಶೌಚಾಲಯ ನಿರ್ವಹಿಸಲು ರಾಜ್ಯ ಸರ್ಕಾರವು ಮುಂದಾಗಿದೆ.

 

ಅದೇ ರೀತಿ ಖಾಸಗಿ ಶಾಲೆಗಳತ್ತ ಒಲವು ತೋರಿಸುವ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ರಾಜ್ಯದ 2000 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಅನುಷ್ಠಾನಗೊಳಿಸಲು ಚಿಂತಿಸಿದೆ.

 

2024-25ನೇ ಸಾಲಿನ ಆಯವ್ಯಯದಲ್ಲಿ ಇದನ್ನು ಘೋಷಣೆ ಮಾಡುವುದು ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಶುಚಿಗೊಳಿಸುತ್ತಿರುವ ಕುರಿತು ಬಹಿರಂಗಗೊಂಡಿರುವ ಪ್ರಕರಣಗಳನ್ನೇ ಪ್ರತಿಪಕ್ಷಗಳು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದವು. ಇದರಿಂದ ತೀವ್ರವಾಗಿ ಮುಜುಗರಕ್ಕೊಳಗಾಗಿದ್ದ ಸರ್ಕಾರವು ಇದೀಗ ಕೃತಕ ಬುದ್ಧಿಮತ್ತೆಯ ಆಪ್‌ ಮೂಲಕ ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆಯ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ.

 

ರಾಜ್ಯದ ಸರ್ಕಾರಿ ಶಾಲೆಗಳ ಶೌಚಾಲಯ ಒಳಗೊಂಡಂತೆ ಒಟ್ಟಾರೆ ನಿರ್ವಹಣೆಗಾಗಿ 241 ಕೋಟಿ ರು. ಅನುದಾನವನ್ನು 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಿದೆ ಎಂದು ಗೊತ್ತಾಗಿದೆ.

 

ಇನ್ನುಳಿದಂತೆ ಸರ್ಕಾರಿ ಶಾಲಾ ಕಾಲೇಜುಗಳ ಕೊಠಡಿ ಹಾಗೂ ಶೌಚಾಲಯಗಳ ನಿರ್ಮಾಣ, ದುರಸ್ತಿಗಾಗಿ ಒಟ್ಟಾರೆಯಾಗಿ 1,388 ಕೋಟಿ ರು. ಅನುದಾನ ಕೋರಿದೆ. ಬೆಂಚ್‌, ಡೆಸ್ಕ್‌ ಒಳಗೊಂಡಂತೆ ಪೀಠೋಪಕರಣಗಳಿಗಾಗಿ 417 ಕೋಟಿ ರು ಕೋರಿರುವುದು ಗೊತ್ತಾಗಿದೆ.

 

ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅಂದಾಜು 20,000 ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ, ಸಿಇಟಿ ತರಬೇತಿ ನೀಡಲು 20 ಕೋಟಿ ರು., 74 ಆದರ್ಶ ವಿದ್ಯಾಲಯಗಳನ್ನು ಪದವಿಪೂರ್ವ ಕಾಲೇಜುಗಳ ಉನ್ನತೀಕರಣಕ್ಕೆ 74 ಕೋಟಿ ರು., 200 ಪದವಿ ಪೂರ್ವ ಕಾಲೇಜುಗಳಲ್ಲಿ ಗಣಕ ವಿಜ್ಞಾನ ಸಂಯೋಜನೆಗೆ 20 ಕೋಟಿ ರು. ಅನುದಾನವನ್ನು ಆಯವ್ಯಯದಲ್ಲಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

 

ಆಯ್ದ 200 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಹಾಗೂ 100 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು 352 ಕೋಟಿ ರು., ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿಗೆ 10 ಸಾವಿರ ಶಿಕ್ಷಕರು, 2 ಸಾವಿರ ಉಪನ್ಯಾಸಕರ ನೇಮಕ ಮಾಡಿಕೊಳ್ಳುವ ಕುರಿತು ಘೋಷಣೆ ಮಾಡಲಿದೆ. ಇದಕ್ಕಾಗಿ ಒಟ್ಟಾರೆಯಾಗಿ 723 ಕೋಟಿ ರು. ಅನುದಾನವನ್ನು ಹಂತ ಹಂತವಾಗಿ ಒದಗಿಸಲಿದೆ ಎಂದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಯೋಗಾಲಯಗಳಿಗೆ 10.30 ಕೋಟಿ ರು. ವೆಚ್ಚದಲ್ಲಿ ಪ್ರಯೋಗಾಲಯ ಪರಿಕರಗಳನ್ನು ಒದಗಿಸಲಿದೆ. ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳ ಬುನಾದಿ ಸಾಮರ್ಥ್ಯ, ಕಲಿಕಾ ಸಾಮರ್ಥ್ಯ ಸುಧಾರಣೆಗಾಗಿ ಮರು ಸಿಂಚನ ಕಾರ್ಯಕ್ರಮಕ್ಕೆ 10 ಕೋಟಿ ರು. ಅನುದಾನ ಘೋಷಿಸಲಿದೆ ಎಂದು ತಿಳಿದು ಬಂದಿದೆ.

 

ರಾಜ್ಯದ 500 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಗುರುತಿಸಲಿದೆ. ಈ ಶಾಲೆಗಳಿಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಡಿಯಲ್ಲಿ ಪ್ರತಿ ಶಾಲೆಗೆ 3.50 ಕೋಟಿ ರು. ಘಟಕ ವೆಚ್ಚ, ಕಲಿಕಾ ಉಪಕರಣಗಳು, ಪ್ರಯೋಗಾಲಯ ಮತ್ತು ಆಟೋಪಕರಣಗಳನ್ನು ಪ್ರತಿ ಶಾಲೆಗೆ ಘಟಕ ವೆಚ್ಚ 1.50 ಕೋಟಿ ರು. ಒಟ್ಟಾರೆಯಾಗಿ 5 ಕೋಟಿ ಘಟಕ ವೆಚ್ಚದಂತೆ 500 ಶಾಲೆಗಳಿಗೆ 2,500 ಕೋಟಿ ರು. ಅನುದಾನವನ್ನು ಸಿ ಎಸ್‌ ಆರ್ ಫಂಡ್‌ ಮೂಲಕ ಒದಗಿಸಲು ಘೋಷಣೆ ಮಾಡಲಿದೆ ಎಮದು ಗೊತ್ತಾಗಿದೆ.

 

ಕೆಕೆಜಿಬಿವಿ ವಸತಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ 32 ಕೋಟಿ ರು., ಸರ್ಕಾರಿ ಪ್ರೌಢಶಾಲೆಗಳ ಸಬಲೀಕರಣಕ್ಕೆ 121 ಕೋಟಿ, ಮಧ್ಯಾಹ್ನ ಉಪಹಾರ ಯೋಜನೆಗೆ 663 ಕೋಟಿ ರು., ಅಡುಗೆ ಸಿಬ್ಬಂದಿಗಳಿಗೆ 33.92 ಕೋಟಿ ರು. ಇಡುಗಂಟು, ಬೈಸಿಕಲ್‌ ವಿತರಣೆಗಾಗಿ 325 ಕೋಟಿ ರು., ರಾಜ್ಯದ 2000 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಅನುಷ್ಠಾನಗೊಳಿಸಲು 22.27 ಕೋಟಿ ರು. ಅನುದಾನ ಘೋಷಿಸಲಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts