ಬನ್ನಂಜೆ ರಾಜ ಸಹಚರರ ವಿರುದ್ಧದ ಪ್ರಕರಣ; ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನ

ಬೆಂಗಳೂರು; ಉದ್ಯಮಿಯೊಬ್ಬರಿಂದ ಹಣಕ್ಕಾಗಿ ಬೇಡಿಕೆ ಮತ್ತು ಸುಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರೊಲ್ಲೊಬ್ಬರು ಎನ್ನಲಾದ ಧನರಾಜ್‌ ಸಾಲಿಯಾನ್‌ ಎಂಬ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವು ನ್ಯಾಯಸಮ್ಮತವಲ್ಲ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ಅಭಿಪ್ರಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಹೀಗಾಗಿ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯು ನಿರ್ಣಯಿಸಿದೆ.

 

ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಬೇಕಾಗಿರುವ ಮತ್ತು ಈಗಾಗಲೇ ಸಲ್ಲಿಸಿರುವ ಮೇಲ್ಮನವಿ (ಎಸ್‌ಎಲ್‌ಪಿ) ಪ್ರಕರಣಗಳ ಕುರಿತು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ 2023ರ ಡಿಸೆಂಬರ್‍‌ 18ರಂದು ನಡೆದಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ ಎಂದು ಗೊತ್ತಾಗಿದೆ.

 

ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ಹಿನ್ನೆಲೆ

 

ಉಡುಪಿ ತಾಲೂಕು ಉಪ್ಪೂರು ಗ್ರಾಮದ ರಾಯಲ್‌ ಸೋಡ ಫ್ಯಾಕ್ಟರಿ ಮಾಲೀಕ ರತ್ನಾಕರ ಶೆಟ್ಟಿ ಎಂಬುವರಿಗೆ 2019ರ ಮಾರ್ಚ್‌ 13ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಹಣ ಕೊಡದಿದ್ದರೇ ಕೊಲೆ ಮಾಡುವುದಾಗಿ ತುಳು ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದರು. ಈ ಕುರಿತು ರತ್ನಾಕರ ಶೆಟ್ಟಿ ಎಂಬುವರು ದೂರು ನೀಡಿದ್ದರು.

 

ಇದನ್ನಾಧರಿಸಿ ಉಡುಪಿ ಪೊಲೀಸರು ಐಪಿಸಿ 1860 (384,385, 387 507, 504, 506, 201, 109, 120(ಬಿ) 364 ಎ, 397, ) ಮತ್ತು ಕೋಕಾ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.

 

ಈ ಪ್ರಕರಣದಲ್ಲಿ ಶಶಿ ಪೂಜಾರಿ ಅಲಿಯಾಸ್ ಶ್ಯಾಡೋ (28), ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ (30), ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಅಲಿಯಾಸ್ ರಾಕ್ (26), ಧನರಾಜ್ ಸಾಲಿಯಾನ್ ಅಲಿಯಾಸ್ ಧನು ಕೋಲಾ (30) ಮತ್ತು ಉಲ್ಲಾಸ್ ಶೆಣೈ ಅಲಿಯಾಸ್ ಉಲ್ಲಾಸ್ (27) ಬಂಧಿಸಲಾಗಿತ್ತು. ಈ ಕುರಿತು 6 ಮಂದಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು.

 

ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಧನರಾಜ್‌ ಸಾಲಿಯಾನ್‌ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

 

ಈ ಕುರಿತು ಅರ್ಜಿಯನ್ನು ಆಲಿಸಿದ್ದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ಚದ ಪೀಠವು 2023ರ ಅಕ್ಟೋಬರ್‍‌ 13ರಂದು ಐದನೆ ಆರೋಪಿಯಾಗಿರುವ ಧನರಾಜ್‌ ಸಾಲಿಯಾನ್‌ ಎಂಬಾತನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿತ್ತು.

 

‘ಉಚ್ಛ ನ್ಯಾಯಾಲಯವು ತನ್ನ ಆದೇಶದಲ್ಲಿ ಅಭಿಯೋಜನಯು ಒಡ್ಡಿದ ಎಲ್ಲಾ ಸಂಗತಿಗಳನ್ನು ಪರಿಗಣಿಸದೇ ಆದೇಶ ಹೊರಡಿಸಿರುವುದು ನ್ಯಾಯಸಮ್ಮತವಲ್ಲದ ಕಾರಣ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ,’ ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ಅಭಿಪ್ರಾಯಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಇದೇ ಪ್ರಕರಣದಲ್ಲಿ 6ನೇ ಆರೋಪಿ ಮತ್ತು 4ನೇ ಆರೋಪಿಯ ಸೋದರನಾದ 2ನೇ ಆರೋಪಿಯು ಸಲ್ಲಿಸಿದ್ದ ಜಾಮೀನು ಅರ್ಜಿಗಳು ವಜಾಗೊಂಡಿದ್ದವು. ಅರ್ಜಿದಾರ ಮತ್ತು ಇತರೆ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ದೋಷಾರೋಪಿಸಲಾಗಿತ್ತು ಎಂದು ಗೊತ್ತಾಗಿದೆ.

 

ಇದು ಗಂಭೀರ ಸ್ವರೂಪದ ಆರೋಪಗಳಾಗಿರುವುದರಿಂದ ಉಚ್ಛನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರುವ ಅವಶ್ಯಕತೆ ಇದೆ,’ ಎಂದು ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಬ್ರಹ್ಮಾವರ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪಣೆ ಮತ್ತು ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರ ಮತ್ತು ಇತರೆ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ದೋಷಾರೋಪಿಸಿರುವುದು ಗೊತ್ತಾಗಿದೆ.

 

‘ಇದು ಗಂಭೀರ ಸ್ವರೂಪವಾಗಿದ್ದು ಆರೋಪಿತ ಅರ್ಜಿದಾರನಿಗೆ ಜಾಮೀನು ನೀಡಿರುವುದು ಸಮಂಜಸವಲ್ಲ ಎಂದು ಸಮಿತಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸೂಕ್ತ,’ ಎಂದು ಸಮಿತಿ ಸಭೆಯಲ್ಲಿ ತೀರ್ಮಾನಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts