ಬೆಂಗಳೂರು; ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ಗೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಂಜೂರಾಗಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿರುವ ಸಾಲವನ್ನು ತೀರಿಸದೇ ಅನುತ್ಪಾದಕ ಸಾಲಗಾರರ ಪಟ್ಟಿಗೆ ಸೇರ್ಪಡೆಯಾಗಿರುವ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ನ ರಮೇಶ್ ಜಾರಕಿಹೊಳಿ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ಮೊದಲ ಅವಧಿಯಲ್ಲಿಯೇ ಅತೀ ಹೆಚ್ಚಿನ ಪ್ರಮಾಣದ ಸಾಲವು ಮಂಜೂರಾಗಿತ್ತು ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಎಫ್‌ಐಆರ್‌ನಲ್ಲೇನಿದೆ?
ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಕಂಪನಿ ಸ್ಥಾಪನೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಅವಧಿ ಸಾಲ ಮತ್ತು ದುಡಿಯುವ ಬಂಡವಾಳ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅಪೆಕ್ಸ್ ಬ್ಯಾಂಕ್ ನ ಸಮೂಹ ಬ್ಯಾಂಕ್‌ಗಳಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ 2013ರ ಜುಲೈ 12ರಿಂದ 2017ರ ಮಾರ್ಚ್ 31ವರೆಗೆ ಹಂತ ಹಂತವಾಗಿ ಒಟ್ಟು 232 ಕೋಟಿ 88 ಲಕ್ಷ ರು. ಸಾಲ ಮಂಜೂರು ಮಾಡಿಸಿಕೊಂಡಿತ್ತು. ಆರೋಪಿತರು ಸಾಲದ ಹಣವನ್ನು ಕಟ್ಟದೇ 2023ರ ಆಗಸ್ಟ್ 31ರವರೆಗೆ ಒಟ್ಟು 439.07 ಕೋಟಿ ರು. ಸಾಲವನ್ನು ಬಾಕಿ ಉಳಿಸಿಕೊಂಡಿರುತ್ತಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿತರು ಬ್ಯಾಂಕ್‌ನಿಂದ ಸಾಲ ಪಡೆಯುವ ಸಮಯದಲ್ಲಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ಅಧ್ಯಕ್ಷರು ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ನಿರ್ದೇಶಕರಾಗಿದ್ದರು. ಬ್ಯಾಂಕ್ ಸಾಲವನ್ನು ಮಂಜೂರು ಮಾಡುವ ಸಮಯದಲ್ಲಿ ಸಾಲ ಮರು ಪಾವತಿ ಆಗುವವರೆಗೂ ಬ್ಯಾಂಕ್‌ನ ಅನುಮತಿ ಇಲ್ಲದೆಯೇ ಕಂಪನಿಯ ಎಂಡಿ ಯನ್ನಾಗಲೀ ನಿರ್ದೇಶಕರನ್ನಾಗಲೀ ಬದಲಾಯಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು.
ಆದರೂ ಆರೋಪಿತರು ಸಾಲವನ್ನು ಪಡೆದು ಬ್ಯಾಂಕ್ ಗೆ ಮರು ಪಾವತಿ ಮಾಡುವುದರಿಂದ ತಪ್ಪಿಸಿಕೊಂಡು ಬ್ಯಾಂಕ್ ಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ತಮ್ಮ ಹುದ್ದೆಗಳಿಂದ ಹೊರಬಂದಿದ್ದಾರೆ. ಸಂಬಂಧವಿಲ್ಲದ ವ್ಯಕ್ತಿಗಳನ್ನು ಕಂಪನಿಗೆ ನಿರ್ದೇಶಕರನ್ನಾಗಿ ನೇಮಿಸಿ ಬ್ಯಾಂಕ್‌ಗೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ್ದಾರೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಈ ಕಾರ್ಖಾನೆ ವಿವಿಧ ಉದ್ದೇಶಗಳ ಹೆಸರಿನಲ್ಲಿ ಪಡೆದಿರುವ ಸಾಲಗಳಲ್ಲಿ 2019ರ ಮಾರ್ಚ್ 31ರ ಅಂತ್ಯಕ್ಕೆ ಅಸಲು ಒಟ್ಟು 74.48 ಕೋಟಿ ರು., 29.05 ಕೋಟಿ ರು. ಬಡ್ಡಿ ಸೇರಿ ಒಟ್ಟು 103.54 ಕೋಟಿ ರು.ಬಾಕಿ ಇದೆ. ಆದರೆ ಈ ಸಾಲ ಸುಸ್ತಿಯಾಗಿದೆಯಲ್ಲದೆ 2017ರ ಏಪ್ರಿಲ್ 16ರಂದೇ ಇದು ವಸೂಲಾಗದ ಆಸ್ತಿ(ಎನ್‌ಪಿಎ) ಎಂದು ಬ್ಯಾಂಕ್ ಪರಿಗಣಿಸಿತ್ತು.
ಕೇವಲ ರಮೇಶ್ ಜಾರಕಿಹೊಳಿ ಮಾತ್ರವಲ್ಲ ಕಾಂಗ್ರೆಸ್‌ನ ಪ್ರಭಾವಿ ಮುಖಂಡರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳೂ ಇದೇ ಪಟ್ಟಿಗೆ ಸೇರಿವೆ. ಇವರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳು ಅಪೆಕ್ಸ್ ಬ್ಯಾಂಕ್‌ನಿಂದ ವಿವಿಧ ಉದ್ದೇಶಗಳಿಗಾಗಿ ಪಡೆದಿದ್ದ ಸಾಲ ಮರುಪಾವತಿಯಾಗದ ಕಾರಣ ವಸೂಲಾದ ಆಸ್ತಿ ಎಂದು ಪರಿಗಣಿಸಿದೆ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ ಡಿ ನರಸಿಂಹಮೂರ್ತಿ ನೇತೃತ್ವದ ತನಿಖಾ ತಂಡ ಬಯಲು ಮಾಡಿತ್ತು.
ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ಗೆ ಸಕ್ಕರೆ ದಾಸ್ತಾನು ಆಧಾರದ ಮೇಲೆ ದುಡಿಯುವ ಬಂಡವಾಳವಾಗಿ ಸಾಲ ಮಂಜೂರಾಗಿತ್ತು. ಆದರೆ ಮಂಜೂರಾತಿ ಮಾಡುವ ಮುನ್ನ ಅಥವಾ ಆ ನಂತರವಾಗಲಿ ಸಕ್ಕರೆ ದಾಸ್ತಾನು ಇರುವ ಬಗ್ಗೆ ಯಾವುದೇ ದಾಖಲೆಗಳು ಬ್ಯಾಂಕ್ ಅಧಿಕಾರಿಗಳ ಬಳಿ ಇರಲಿಲ್ಲ ಎಂಬುದನ್ನು ತನಿಖಾ ತಂಡ ಹೊರಗೆಡವಿತ್ತು.
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್‌ಗೆ ಅಪೆಕ್ಸ್ ಬ್ಯಾಂಕ್ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟು 122.38 ಕೋಟಿ ರು.ಸಾಲ ನೀಡಿತ್ತು.
ಇದರಲ್ಲಿ ಅವಧಿ ಸಾಲದ ರೂಪದಲ್ಲಿ 10.00 ಕೋಟಿ ರು.(2014ರ ಏಪ್ರಿಲ್ 15), 2014ರ ನವೆಂಬರ್ 12ರಂದು 35 ಕೋಟಿ ರು., 2013ರ ಜುಲೈ 12ರಂದು ದುಡಿಯುವ ಬಂಡವಾಳ ರೂಪದಲ್ಲಿ 60.00 ಕೋಟಿ ರು., 2017ರ ಮಾರ್ಚ್ 2017ರಂದು 9.50 ಕೋಟಿ ರು., 2016ರ ಮಾರ್ಚ್ 31ರಂದು ಬ್ರಿಡ್ಜ್ ಲೋನ್ ರೂಪದಲ್ಲಿ 7.88 ಕೋಟಿ ರು., ಸಾಲ ಮಂಜೂರಾಗಿತ್ತು ಎಂಬ ವಿಚಾರ ತನಿಖಾ ವರದಿಯಿಂದ ತಿಳಿದು ಬಂದಿತ್ತು.
ಅಪೆಕ್ಸ್ ಬ್ಯಾಂಕ್ ಅಕ್ರಮಗಳು; ‘ದಿ ಫೈಲ್’ನ 16 ಸರಣಿ ವರದಿಗಳನ್ನು ವಿಸ್ತರಿಸಿದ ಪ್ರಜಾವಾಣಿ
ಈ ಪೈಕಿ ಕಾರ್ಖಾನೆ ವಿಸ್ತರಣೆಗೆಂದು 10.00 ಕೋಟಿ ರು., ಎಥೆನಾಲ್ ಘಟಕ ಸ್ಥಾಪಿಸಲು 35.00 ಕೋಟಿ ರು., ಮತ್ತು ಬಾಕಿ ಇರುವ ಎಥೆನಾಲ್ ಘಟಕಕ ಹಾಕಲು 7.88 ಕೋಟಿ ರು ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಬ್ಯಾಂಕ್‌ನ ಅಧಿಕಾರಿಗಳು ಕಾರ್ಖಾನೆಯಿಂದ ದೃಢೀಕರಣ ಪತ್ರವನ್ನು ಪಡೆದಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದಾಖಲಾತಿಗಳು ಲಭ್ಯವಿರಲಿಲ್ಲ ಎಂಬುದನ್ನು ತನಿಖಾ ತಂಡ ಬಹಿರಂಗಗೊಳಿಸಿತ್ತು.
ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮ ಸಿಬಿಐ ತನಿಖೆಗೆ ಒಳಪಡಿಸಿ, ಅಪೆಕ್ಸ್ ಬ್ಯಾಂಕ್ ಹಗರಣ ಮರೆತಿತೇ?
ಮತ್ತೊಂದು ವಿಶೇಷವೆಂದರೆ ಕಾರ್ಖಾನೆ ಹೊಂದಿರುವ 16.00 ಕೋಟಿ ರು ಮತ್ತು 21.10 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಬ್ಯಾಂಕ್ ಅಡಮಾನ ಇರಿಸಿಕೊಂಡಿತ್ತಾದರೂ ಸ್ಥಿರಾಸ್ತಿಯ ಮೌಲ್ಯವು ನೀಡಿರುವ ಸಾಲದ ಮೊತ್ತಕ್ಕಿಂತ ಕಡಿಮೆ ಇತ್ತು. ಅದೇ ರೀತಿ ಸಕ್ಕರೆ ದಾಸ್ತಾನು ಆಧಾರದ ಮೇಲೆ ದುಡಿಯುವ ಬಂಡವಾಳ 60.00 ಕೋಟಿ ಮತ್ತು 9.50 ಕೋಟಿ ರು. ಬಿಡುಗಡೆ ಮಾಡಿದ್ದ ಅಪೆಕ್ಸ್ ಬ್ಯಾಂಕ್, ಹಣ ಬಿಡುಗಡೆ ಸಂದರ್ಭದಲ್ಲಿ ಸಕ್ಕರೆ ದಾಸ್ತಾನು ಇರುವ ಬಗ್ಗೆ ಖಾತರಿಪಡಿಸಿಕೊಂಡಿರಲಿಲ್ಲ ಎಂಬ ಸಂಗತಿ ತನಿಖಾ ವರದಿಯಲ್ಲಿ ವಿವರಿಸಲಾಗಿತ್ತು.
ಒಟ್ಟು 103.54 ಕೋಟಿ ರು.ವಸೂಲಾಗದ ಆಸ್ತಿ ಎಂದು ಪರಿಗಣಿಸಿರುವ ಅಪೆಕ್ಸ್ ಬ್ಯಾಂಕ್, ಸುಸ್ತಿ ಸಾಲದ ವಸೂಲಾತಿಗಾಗಿ ಸರ್‌ಫೇಸಿಯಾ ಕಾಯ್ದೆ 2002ರ ರೀತಿ ವಸೂಲಾತಿಗೆ ನೋಟಿಸ್ ನೀಡಿದ್ದನ್ನು ಸ್ಮರಿಸಬಹುದು.