ಬೆಂಗಳೂರು; ಕೋಟಿ ರು. ವೆಚ್ಚದಲ್ಲಿ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಸರ್ಕಾರವು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಹಣ ಬಿಡುಗಡೆ ಮಾಡಿದ್ದರ ಕುರಿತು ‘ದಿ ಫೈಲ್’ ಪ್ರಕಟಿಸಿದ್ದ ವರದಿಯು ತೀವ್ರ ಸಂಚಲನ ಎಬ್ಬಿಸಿತ್ತು. ಫಲಾನುಭವಿ ಆಧರಿತ ಯೋಜನೆಗಳ ಕುರಿತು ತರಾತುರಿಯಲ್ಲಿ ಸಮೀಕ್ಷೆ ನಡೆಸಲು ಮಾಧ್ಯಮ ಸಂಸ್ಥೆಗೆ ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿ ನೀಡಿದ್ದರ ಕುರಿತು ಚರ್ಚೆಗೆ ಗ್ರಾಸವಾಗಿತ್ತು.
ಈ ವರದಿಯು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ಬರುತ್ತಿದ್ದಂತೆ ಎಂ2ಎಂ ಕಂಪನಿಯ ಅಂಗಸಂಸ್ಥೆಯಾಗಿರುವ ಈದಿನ.ಕಾಮ್ ತಂಡದ ಹೆಸರಿನಲ್ಲಿ ಮತ್ತು ಯಾರೊಬ್ಬರ ಸಹಿಯೂ ಇಲ್ಲದ ಸಾರ್ವಜನಿಕ ಪ್ರಕಟಣೆ ಹೊರಬಿದ್ದಿತ್ತು. ‘ದಿ ಫೈಲ್’ ಪ್ರಕಟಿಸಿದ್ದ ವರದಿಯು ಅರ್ಧಸತ್ಯ, ಫೇಕ್ ನ್ಯೂಸ್, ತಪ್ಪು ಮಾಹಿತಿ, ತಪ್ಪು ಗ್ರಹಿಕೆ, ಊಹಾಪೋಹಗಳು, ಅರೆಬರೆ ತಿಳಿವಳಿಕೆಗಳು ಎಂದು ಎಂ2ಎಂ ನೆಟ್‌ವರ್ಕ್ ಕಂಪನಿಯು ಸಮರ್ಥಿಸಿಕೊಂಡಿತ್ತು.
ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ಸಂಬಂಧಿಸಿದಂತೆ ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪ್ರಾಥಮಿಕ ದಾಖಲೆಗಳನ್ನು ಪಡೆದುಕೊಂಡಿದೆ. ಇದೀಗ ಆರ್‍ಟಿಐ ದಾಖಲೆಗಳು ಹೊಸ ಸಂಗತಿಗಳನ್ನು ಬಹಿರಂಗಗೊಳಿಸಿವೆ.
ಆರ್‍ಟಿಐ ಅಡಿಯಲ್ಲಿ ಸರ್ಕಾರವು ನೀಡಿರುವ ದಾಖಲೆಗಳ ಪ್ರಕಾರ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯೇ ನೇರವಾಗಿ ಮುಖ್ಯಮಂತ್ರಿಗೆ 2023ರ ಆಗಸ್ಟ್ 31ರಂದು ನಾಲ್ಕು ಪುಟಗಳ ಪ್ರಸ್ತಾವನೆ ಸಲ್ಲಿಸಿತ್ತು.
ಅಷ್ಟೇ ಅಲ್ಲ, ಇದೇ ಪ್ರಸ್ತಾವನೆಯೊಂದಿಗೆ ಕಂಪನಿಯು ಆರ್ಥಿಕ ಪ್ರಸ್ತಾವನೆಯನ್ನೂ ಲಗತ್ತಿಸಿದೆ.
‘ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ಸರ್ವೆ ನಡೆಸಲಾಗುತ್ತದೆ. ಪ್ರತಿ ಸರ್ವೆಗೆ 25 ಲಕ್ಷ ರು. ವೆಚ್ಚವಾಗಲಿದೆ. ಹೀಗಾಗಿ ಇಲಾಖೆಗಳು ಶೇ.75ರಷ್ಟು ಅನುದಾನವನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕು. ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಬಾಕಿ ಶೇ.25ರಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕು,’ ಎಂದು ಡಾ ಎಚ್ ವಿ ವಾಸು ಅವರು ಪ್ರಸ್ತಾವನೆಯಲ್ಲಿ ಕೋರಿರುವುದು ತಿಳಿದು ಬಂದಿದೆ.
ಅದೇ ರೀತಿ ಪ್ರವಾಹ, ನೆರೆಯಂತಹ ನೈಸರ್ಗಿಕ ವಿಕೋಪದ ಸಂದರ್ಭಗಳು ಎದುರಾದರೇ ಸಮೀಕ್ಷೆ ನಡೆಸಲು ಉದ್ಭವಿಸಬಹುದಾದ ಹೆಚ್ಚುವರಿ ವೆಚ್ಚವನ್ನೂ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಕೋರಿರುವುದು ಗೊತ್ತಾಗಿದೆ.
ಅಸಲಿಗೆ ಸರ್ಕಾರಕ್ಕೆ ಈ ಸಮೀಕ್ಷೆ ಬೇಕಾಗಿತ್ತು ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ನ ಈದಿನ.ಕಾಮ್ ತಂಡವೇ ಸ್ಪಷ್ಟೀಕರಣದಲ್ಲಿ ಹೇಳಿತ್ತು.
ಆದರೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕಂಪನಿಯ ಯೋಜನಾ ಮುಖ್ಯಸ್ಥ ಡಾ ಹೆಚ್ ವಿ ವಾಸು ಅವರೇ ನೇರವಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಅಂದರೆ ಈ ಸಮೀಕ್ಷೆಯು ಸರ್ಕಾರಕ್ಕೆ ಬೇಕಿರಲಿಲ್ಲ, ಬದಲಿಗೆ ಸಮೀಕ್ಷೆ ಕಾರ್ಯ ನಡೆಸುತ್ತೇವೆ ಎಂದು ಇದೇ ಕಂಪನಿಯು ಸರ್ಕಾರದ ಬೆನ್ನು ಬಿದ್ದಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಚುನಾವಣೆ ಪೂರ್ವ ಸಮೀಕ್ಷೆಯನ್ನು ನಡೆಸಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಿರುವ ಕಂಪನಿಯು, ಅದನ್ನು ಯಾವ ವೃತ್ತಿಪರ ಸಂಸ್ಥೆ ನೆರವಿನೊಂದಿಗೆ ನಡೆಸಿತ್ತು ಎಂಬ ಮಾಹಿತಿಯನ್ನು ಒದಗಿಸಿರುವುದು ಕಂಡುಬಂದಿಲ್ಲ. ಹೀಗಿರುವಾಗ ಫಲಾನುಭವಿ ಆಧರಿತ ಯೋಜನೆಗಳ ಸಮೀಕ್ಷೆ ನಡೆಸಲು ಈ ಕಂಪನಿಗೆ ಇರುವ ಅರ್ಹತೆಯಾದರೂ ಏನು ಎಂಬುದನ್ನು ಸರ್ಕಾರವು ಖಚಿತಪಡಿಸಿಕೊಂಡಿದೆಯೇ, ಸರ್ಕಾರವು ಈ ಪ್ರಸ್ತಾವನೆಯನ್ನು ಹೇಗೆ ಪರಿಶೀಲಿಸಿದೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬಂದಿದೆ.
ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಬಹುಮತ ಗಳಿಸಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಗ್ಯಾರಂಟಿಗಳ ಸಮೀಕ್ಷೆ ನಡೆಸಲು ಕೋಟಿ ರು. ನೀಡಿರುವುದು ಬಳುವಳಿ ನೀಡಿದಂತಾಗಿದೆ.
ಮೀಡಿಯಾ ವಾಲಿಂಟಿಯರ್ಸ್‌ಗಳಿಂದಲೇ ಸಮೀಕ್ಷೆ?
ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆ ಮತ್ತು ಆಗಸ್ಟ್‌ನಲ್ಲಿ ಸರ್ಕಾರಿ ಆಸ್ಪತ್ರೆಗಳ ಕುರಿತಾಗಿ ನಡೆಸಿರುವ ಸಮೀಕ್ಷೆ ಕುರಿತು ಪ್ರಸ್ತಾಪಿಸಿರುವ ಕಂಪನಿಯು, ಸರ್ಕಾರಗಳು ಜಾರಿಗೊಳಿಸಿರುವ ಫಲಾನುಭವಿ ಆಧರಿತ ಯೋಜನೆಗಳು ಮತ್ತು ಬೇರೆ ವಲಯಗಳಲ್ಲಿನ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿರುವ ಕುರಿತಾದ ಯಾವುದೇ ಸಮೀಕ್ಷೆ ವರದಿ ಮತ್ತು ಇತರೆ ಮಾಹಿತಿಯು ಪ್ರಸ್ತಾವನೆಯಲ್ಲಿ ಕಂಡು ಬರುವುದಿಲ್ಲ.
ಫಲಾನುಭವಿ ಆಧರಿತ ಯೋಜನೆಗಳ ಸಮೀಕ್ಷೆ ನಡೆಸಲು ಸಾಮಾಜಿಕ ಮತ್ತು ಆರ್ಥಿಕ ತಜ್ಞರನ್ನೊಳಗೊಂಡಿರುವ ಬಗ್ಗೆ ಎಲ್ಲಿಯೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿಲ್ಲ. ಬದಲಿಗೆ ತಮ್ಮ ಕಂಪನಿಯಲ್ಲಿ 5,000 ಮೀಡಿಯಾ ವಾಲಂಟಿಯರ್ಸ್‌ಗಳಿದ್ದಾರೆ, ನಾಗರಿಕ ಪತ್ರಕರ್ತರಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಹೇಳಿಕೊಂಡಿದೆ.
ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಮೀಡಿಯಾ ವಾಲಂಟಿಯರ್ಸ್ ಮತ್ತು ನಾಗರಿಕ ಪತ್ರಕರ್ತರು ತರಬೇತಿ ಹೊಂದಿದ್ದಾರೆಯೇ, ಯಾವ ಸಾಮಾಜಿಕ, ಆರ್ಥಿಕ ಸಂಸ್ಥೆಗಳಿಂದ ತರಬೇತಿ ಪಡೆದಿದ್ದಾರೆ, ಯಾವ ಯಾವ ಸಾಮಾಜಿಕ, ಆರ್ಥಿಕ ಯೋಜನೆಗಳ ಕುರಿತಾಗಿ ಸಮೀಕ್ಷೆ ನಡೆಸಿ ಅನುಭವ ಹೊಂದಿದ್ದಾರೆ, ಆ ಸಮೀಕ್ಷೆ ವರದಿಗಳು ಎಲ್ಲಿ ಪ್ರಕಟವಾಗಿವೆ, ಈ ವರದಿಗಳನ್ನು ಯಾವ ಸಂಸ್ಥೆಯು ಪ್ರಮಾಣೀಕರಿಸಿದೆ, ಮೀಡಿಯಾ ವಾಲಂಟಿಯರ್ಸ್‌ಗಳಿಗೆ ಇರುವ ಅರ್ಹತೆಗಳೇನು, ಅಸಲಿಗೆ ಮೀಡಿಯಾ ವಾಲಂಟಿಯರ್ಸ್‌ಗಳು ಎಂದರೆ ಯಾರು ಎಂಬ ಬಗ್ಗೆ ಪ್ರಸ್ತಾವನೆಯಲ್ಲಿ ವಿವರಿಸಿಲ್ಲ.
ಅಲ್ಲದೇ ಮೀಡಿಯಾ ವಾಲಯಂಟರ್ಸ್‌ಗಳಿಗೆ ವೃತ್ತಿಪರ ಮಾಧ್ಯಮಗಳಲ್ಲಿ ಮಾನ್ಯತೆ ಇಲ್ಲ. ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೀಡಿಯಾ ವಾಲಂಟಿಯರ್ಸ್‌ಗಳು ಎಂದರೆ ಕಂಪನಿಯ ಸೈದ್ಧಾಂತಿಕತೆಯ ಸಹಚರರೇ, ಕೋಟ್ಯಂತರ ರುಪಾಯಿ ಬಂಡವಾಳ ಹೂಡಿರುವ ದೊಡ್ಡದೊಡ್ಡ ಮಾಧ್ಯಮ ಸಂಸ್ಥೆಗಳು ಇರುವಾಗ ನಿರ್ದಿಷ್ಟವಾಗಿ ಇದೇ ಕಂಪನಿಗೆ ಸಮೀಕ್ಷೆ ನಡೆಸಲು ಕೋಟಿ ರುಪಾಯಿ ನೀಡಿರುವುದಾದರೂ ಏತಕ್ಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ.
‘ದಿ ಫೈಲ್’ ಮೊದಲು ಪ್ರಕಟಿಸಿದ್ದ ವರದಿಗೆ ಎಂ2ಎಂ ಕಂಪನಿಯ ಅಂಗಸಂಸ್ಥೆ ಈದಿನ.ಕಾಮ್ ತಂಡದ ಹೆಸರಿನಲ್ಲಿ ಹೊರಡಿಸಿದ್ದ ಸಾರ್ವಜನಿಕ ಪ್ರಕಟಣೆಯಲ್ಲಿ ಹೀಗೆ ಹೇಳಿತ್ತು.
‘ಸದರಿ ಸಮೀಕ್ಷೆಯನ್ನು ತಳಮಟ್ಟದಲ್ಲಿ ಸಾವಿರಾರು ಜನರು ನಡೆಸುತ್ತಾರೆ. ಪೂರ್ಣಾವಧಿ ಸಿಬ್ಬಂದಿಗಳು ಉಸ್ತುವಾರಿ ನಡೆಸುತ್ತಾರೆ. ಸದರಿ ಸಮೀಕ್ಷೆಯ ಪ್ರಶ್ನಾವಳಿ ತಯಾರಿ, ಸಮೀಕ್ಷೆ ಪ್ರಕ್ರಿಯೆ ಮೇಲುಸ್ತುವಾರಿ ಮತ್ತು ಡೇಟಾ ಅನಾಲಿಸಿಸ್ ನಡೆಸಲು ತಜ್ಞರು ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ ಅಗತ್ಯ ಸಾಫ್ಟ್‌ವೇರ್ ಬಳಕೆ ಮಾಡಲಾಗುತ್ತದೆ. ಸರ್ಕಾರಕ್ಕೆ ಬೇಕಾದ ಈ ಸಮೀಕ್ಷೆಯ ವೆಚ್ಚವನ್ನು ನಮ್ಮ ಸಂಸ್ಥೆ ಭರಿಸುವ ಪರಿಸ್ಥಿತಿಯಲ್ಲಿಲ್ಲ,’ ಎಂದಿತ್ತು.
ಕೇವಲ ಮೀಡಿಯಾ ವಾಲಿಂಟಿಯರ್ಸ್ ಮತ್ತು ಸಿಟಿಜನ್ ಜರ್ನಲಿಸ್ಟ್‌ಗಳಿದ್ದಾರೆ ಎಂದಷ್ಟೇ ಪ್ರಸ್ತಾವನೆಯಲ್ಲಿ ಹೇಳಿಕೊಂಡಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯು, ಗ್ಯಾರಂಟಿಗಳ ಸಮೀಕ್ಷೆ ನಡೆಸಲು ಯಾವ ಸಂಸ್ಥೆ, ಯಾವ ಕಂಪನಿಯಿಂದ ಡೇಟಾ ಅನಾಲಿಸ್ ತಜ್ಞರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ, ಸಾಫ್ಟ್‌ವೇರ್ ಸೇವೆಯನ್ನು ಯಾವ ಕಂಪನಿಯಿಂದ ನೆರವು ಪಡೆಯಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಕಂಡು ಬರುವುದಿಲ್ಲ.
ಈದಿನ.ಕಾಮ್ ತಂಡದ ಯಾರೊಬ್ಬರ ಸಹಿ ಇಲ್ಲದಿದ್ದರೂ ಸಹ ಸಾರ್ವಜನಿಕ ಪ್ರಕಟಣೆಯನ್ನು ‘ದಿ ಫೈಲ್’ ಪರಿಶೀಲಿಸಿತ್ತು.
ಎಂ2ಎಂ ಮೀಡಿಯಾ ಕಂಪನಿಗೇ 1 ಕೋಟಿ ರು. ವೆಚ್ಚದಲ್ಲಿ ಸಮೀಕ್ಷೆ ನಡೆಸಲು 4(ಜಿ) ವಿನಾಯಿತಿ ನೀಡಿತ್ತು.
ಆರ್ಥಿಕ ಇಲಾಖೆಯು ಹೊರಡಿಸಿದ್ದ ಅಧಿಸೂಚನೆಯಂತೆ 2023ರ ಸೆಪ್ಟಂಬರ್‍ನಲ್ಲಿ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆಗೊಳಿಸಲು ತಿಳಿಸಿತ್ತು. ಆದರೆ ಈ ಕಂಪನಿಗೆ ನೇರವಾಗಿ 25 ಲಕ್ಷ ರು. ಅನುದಾನ ಪಾವತಿಸಲು ಸಾಧ್ಯವಿರಲಿಲ್ಲ.
ಹೀಗಾಗಿ ಈ ಅನುದಾನವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬಿಡುಗಡೆಗೊಳಿಸಿತ್ತು. ಈ ಪೈಕಿ ಶೇ.80ರಷ್ಟು ಅನುದಾನವನ್ನು ಕಂಪನಿಗೆ ಬಿಡುಗಡೆಗೊಳಿಸಲು ಸರ್ಕಾರವು ಆದೇಶಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.