ಬೆಂಗಳೂರು; ವಿಶ್ವವಿದ್ಯಾಲಯಗಳು ಹೊಸ ಹುದ್ದೆಗಳ ಸೃಜಿಸುವ ಸಂಬಂಧ ಸಲ್ಲಿಸುತ್ತಿರುವ ಪ್ರಸ್ತಾವನೆಗಳನ್ನು ಆರ್ಥಿಕ ನಿರ್ಬಂಧಗಳ ಕಾರಣವನ್ನು ಮುಂದಿಟ್ಟು ಸರ್ಕಾರವು ತಿರಸ್ಕರಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ಮಂಗಳೂರು ವಿಶ್ವವಿದ್ಯಾಲಯವು ಸ್ನಾತಕೋತ್ತರ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸೃಜಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗಳನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿಯೂ ತಿರಸ್ಕೃತಗೊಳ್ಳುತ್ತಿವೆ. ಈ ಸಂಬಂಧ ‘ದಿ ಫೈಲ್’ಗೆ ಗೆ ಕಡತದ (ED/6/UDS/2021-ED -COMPUTER NUMBER 492755) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಭಾರತ ಜ್ಞಾನ ಅಡಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿಯಾಗಿ ಬೋಧಕ, ಬೋಧಕೇತರ ಹುದ್ದೆಗಳ ಸೃಜನೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿಯೇ ಅರೋಗ್ಯ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರಗೊಳಿಸಿ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಮತ್ತಿತರ ಮೂಲ ಜ್ಞಾನವನ್ನೂ ನಿರೂಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಯೋಗ ವಿಜ್ಞಾನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಇಬ್ಬರು ಅಸೋಸಿಯೇಟ್ ಪ್ರೊಫೆಸರ್, ಲ್ಯಾಬ್ ಅಸಿಸ್ಟೆಂಟ್, ಟೈಪಿಸ್ಟ್, ಅಟೆಂಡರ್ ಹುದ್ದೆಯನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಅನುಮತಿ ಕೋರಿತ್ತು. ಈ ಪ್ರಸ್ತಾವನೆಯನ್ನು 2020ರಿಂದಲೂ ಪರಿಶೀಲಿಸುತ್ತಿರುವ ಆರ್ಥಿಕ ಇಲಾಖೆಯು 2023ರಲ್ಲಿಯೂ ಆರ್ಥಿಕ ನಿರ್ಬಂಧಗಳನ್ನು ಮುಂದೊಡ್ಡಿ ಸಹಮತಿ ವ್ಯಕ್ತಪಡಿಸಿಲ್ಲ. ಹುದ್ದೆ ಸೃಜನೆಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಅನುಮತಿಗಾಗಿ ಕಡತವನ್ನು ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.
2020ರಲ್ಲಿ ವಿನಾಯಿತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗಳ ಪೈಕಿ ಕೆಲವು ಪ್ರಸ್ತಾವನೆಗಳಿಗೆ ಮುಂದಿನ ಆರ್ಥಿಕ ವರ್ಷ ಎಂದರೆ 2021-22ನೇ ಸಾಲಿನಲ್ಲಿ 2021ರ ಏಪ್ರಿಲ್ 1ರ ನಂತರ ನೇಮಕಾತಿ ಆದೇಶಗಳನ್ನು ನೀಡಲು ಚಿಂತಿಸಿತ್ತು. ಆರ್ಥಿಕ ಇಲಾಖೆಯಿಂದ ಸಹಮತಿ ಪಡೆದಿದ್ದ ಪ್ರಸ್ತಾವನೆಗಳನ್ನೂ ಮತ್ತೊಮ್ಮೆ ಪರಿಶೀಲನೆಗೆ ಸಲ್ಲಿಸಬೇಕು ಎಂದೂ ಆರ್ಥಿಕ ಇಲಾಖೆಯು ಹೇಳಿತ್ತು. ಆರ್ಥಿಕ ಇಲಾಖೆಯು ಸಹಮತಿ ಪಡೆದೇ ನೇಮಕಾತಿ ಆದೇಶ ನೀಡಬೇಕು ಎಂದು 2021ರ ಮಾರ್ಚ್ 30ರಂದು ಸೂಚಿಸಿತ್ತು ಎಂಬುದು ತಿಳಿದು ಬಂದಿದೆ.
ಆದರೆ ಸಂಪೂರ್ಣವಾಗಿ ತಿರಸ್ಕರಿಸಲಾದ ಪ್ರಸ್ತಾವನೆಗಳಿಗೆ ಈ ಸುತ್ತೋಲೆಯು ಅನ್ವಯಿಸುವುದಿಲ್ಲ ಎಂದೂ ಹೇಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಮೇಲಿನ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದನ್ನು ಮರು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಪ್ರಸ್ತುತ ಇರುವ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಹೊಸ ಹುದ್ದೆಗಳನ್ನು ಸೃಜಿಸಲು ಪ್ರಸ್ತಾವನೆಯನ್ನು ಒಪ್ಪಲು ಬರುವುದಿಲ್ಲ ಎಂದು ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು. ಇದೇ ಅಭಿಪ್ರಾಯವನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೂ ತಿಳಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಆದರೂ ಮಂಗಳೂರು ವಿಶ್ವವಿದ್ಯಾಲಯವು ಯೋಗ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ನೀಡುವ ದೇಶದ ಮೊದಲ ವಿಶ್ವವಿದ್ಯಾಲಯವಾಗಿದೆ. ಹಾಗೂ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಏರ್ಪಡಿಸುತ್ತಿರುವುದರಿಂದ ಯೋಗವನ್ನು ವಿಶೇಷವಾಗಿ ಪರಿಗಣಿಸಿ ಸ್ನಾತಕೋತ್ತರ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿ ಮತ್ತು ಬೋಧಕ, ಬೋಧಕೇತರ ಹುದ್ದೆಗಳನ್ನು ಸೃಜಿಸಲು ಮರು ಪ್ರಸ್ತಾವನೆ ಸಲ್ಲಿಸಿತ್ತು.
ಹೊಸದಾಗಿ ಸಲ್ಲಿಕೆಯಾಗಿರುವ ಪ್ರಸ್ತಾವನೆ ಸಂಬಂಧ ಪುನಃ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಉನ್ನತ ಶಿಕ್ಷಣ ಇಲಾಖೆಯು ಕಡತ ರವಾನಿಸಿದೆ ಎಂದು ಗೊತ್ತಾಗಿದೆ.
ಈ ವಿಭಾಗಕ್ಕೆ 2015-16ರಲ್ಲಿ 21, 2016-17ರಲ್ಲಿ 27, 2017-18ರಲ್ಲಿ 20 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಕರಡು ಪರಿನಿಯಮದಲ್ಲಿ ಪ್ರಸ್ತಾಪಿಸಿದ್ದ ಖಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ವಿಶ್ವವಿದ್ಯಾಲಯಕ್ಕೆ 2012ರಿಂದ 2013ರವರಗೆ 59,785 ರು., 2013ರಿಂದ 2014ರವರೆಗೆ 48,335 ರು., 2014ರಿಂದ 2015ರವರೆಗೆ 46,290 ರು., 2015ರಿಂದ 2016ರವರೆಗೆ 52,875 ರು., 2016ರಿಂದ 2017ರವರೆಗೆ 67,100 ರು.ಗಳನ್ನು ವಾರ್ಷಿಕ ಆದಾಯ ದೊರಕಿತ್ತು. ಈ ವಿವರಗಳಿಂದಾಗಿ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗಕ್ಕೆ ಹೆಚ್ಚುವರಿ ಬೋಧಕ, ಬೋಧಕೇತರ ಹುದ್ದೆಗಳ ಸೃಜನೆಗೆ ಅನುಮತಿ ಕೋರಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.