ವರ್ಗಾವಣೆಗೆ 1.50 ಕೋಟಿ ಲಂಚ; ಗಲ್‌ಪೇಟೆ ಪ್ರಕರಣ ಪ್ರಬಲ ಅಸ್ತ್ರವಾಗಿದ್ದರೂ ಜೆಡಿಎಸ್‌ ಪ್ರಯೋಗಿಸಿಲ್ಲವೇಕೆ?

ಬೆಂಗಳೂರು; ಅಧಿಕಾರಿಯೊಬ್ಬರ ವರ್ಗಾವಣೆ ಮಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಅವರ ಹೆಸರಿನಲ್ಲಿ  1.50 ಕೋಟಿ ಲಂಚ ಪಡೆಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್‍‌ನ್ನು ಪೊಲೀಸ್‌ ಇಲಾಖೆಯು ಮುಚ್ಚಿಟ್ಟು ಕಾಂಗ್ರೆಸ್‌ ಸರ್ಕಾರದ ರಕ್ಷಣೆಗೆ ನಿಂತಿದ್ದರೂ ಬಿಜೆಪಿ ಮತ್ತು ಜೆಡಿಎಸ್‌ ಈ ಬಗ್ಗೆ ತುಟಿ ಬಿಚ್ಚಿಲ್ಲ.

 

ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಕೇಳಿ ಬಂದಿದ್ದ ಲಂಚದ ಆರೋಪ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಶಾಸಕ ಎಚ್‌ ಡಿ ಕುಮಾರಸ್ವಾಮಿ ಅವರು ಈ ಪ್ರಕರಣದ ಕುರಿತಂತೆ ಇನ್ನೂ ಮೌನ ಮುರಿಯದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಅದೇ ರೀತಿ ಚೆಲುವರಾಯಸ್ವಾಮಿ ಅವರು ಲಂಚ ಕೇಳಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ರಾಜ್ಯಪಾಲರು ವರದಿ ಕೇಳಿ ಬರೆದಿದ್ದಾರೆ ಎನ್ನಲಾಗಿರುವ  ಪತ್ರವೊಂದರ ಕುರಿತು ಕಾಂಗ್ರೆಸ್‌ ಸರ್ಕಾರವು ಸಿಐಡಿಗೆ ವಹಿಸಿದೆ. ಆದರೆ ವರ್ಗಾವಣೆ ಮಾಡಿಸಿಕೊಡಲು 1.50 ಕೋಟಿ ರು. ಲಂಚ ಪಡೆಯಲಾಗಿದೆ ಎಂಬ ದೂರು ಮತ್ತು ಎಫ್‌ಐಆರ್‍‌ನ್ನೇ ಮುಚ್ಚಿಟ್ಟಿದ್ದಾರೆ ಎಂಬುದು ದಾಖಲೆ ಸಮೇತ ನಿರೂಪಿತವಾಗಿದ್ದರೂ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.

 

ಇನ್ನು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಅವರ ಹೆಸರನ್ನೂ ಬಳಸಲಾಗಿದೆ ಎಂದು ಎಫ್‌ಐಆರ್‍‌ನಲ್ಲಿ ನಮೂದಿಸಿದ್ದರೂ ಪ್ರತಿಪಕ್ಷಗಳು ಇದುವರೆಗೂ ಚಕಾರ ಎತ್ತಿಲ್ಲ. ಈ ಪ್ರಕರಣ ಕುರಿತಂತೆ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಟ್ವೀಟ್‌ ಮಾಡಿದ್ದು ಹೊರತುಪಡಿಸಿದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಿಜೆಪಿಯ ಯಾವೊಬ್ಬ ಮುಖಂಡರೂ  ಈ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ.

 

ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ವಾಗ್ದಾಳಿಯನ್ನು ಈಗಲೂ ಮುಂದುವರೆಸಿರುವ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ವರ್ಗಾವಣೆ ಮಾಡಿಸಿಕೊಡಲು ಅಧಿಕಾರಿಯೊಬ್ಬರಿಂದ 1.50 ಕೋಟಿ ಲಂಚ ಪಡೆದಿರುವ ಸಂಬಂಧ ಎಫ್‌ಐಆರ್‍‌ ದಾಖಲಾಗಿರುವ  ಕೋಲಾರದ ಗಲ್‌ಪೇಟೆ ಪ್ರಕರಣವು ಪ್ರಬಲ ಅಸ್ತ್ರವಾಗಿತ್ತು. ಆದರೆ  ಇದುವರೆಗೂ ಗಲ್‌ ಪೇಟೆ ಪ್ರಕರಣವನ್ನು ಪ್ರಬಲ ಅಸ್ತ್ರದಂತೆ  ಪ್ರಯೋಗಿಸಲು ಮುಂದಾಗದಿರುವುದು ಹೊಂದಾಣಿಕೆ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾದಂತಿದೆ.

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್‍‌  ಅಹ್ಮದ್‌ ಹೆಸರನ್ನು ಮುಂದಿರಿಸಿ ವರ್ಗಾವಣೆಗಾಗಿ ಹಣದ ಬೇಡಿಕೆ ಇರಿಸಿದ್ದ ದೂರು ಮತ್ತು ಇದನ್ನಾಧರಿಸಿ ದಾಖಲಿಸಿದ್ದ ಎಫ್‌ಐಆರ್‍‌, ನಂತರ ರಾತ್ರೋರಾತ್ರಿ ಎಫ್‌ಐಆರ್‍‌ ಬದಲಿಸಿ ‘ಒಬ್ಬರನ್ನು ವರ್ಗಾವಣೆ ಮಾಡಿಸಿಕೊಡಲು’ ಎಂಬ ಸಾಲನ್ನು ತೆಗೆದು ಹಾಕಿತ್ತು. ಕಾಣದ ಕೈಗಳ ಒತ್ತಡದಿಂದ ಈ ಎಫ್‌ಐಆರ್‍‌ನ್ನು ಪೊಲೀಸರು ಬದಲಾಯಿಸಿದ್ದರು. ತಕ್ಷಣವೇ ದೂರುದಾರನಿಂದ ಮತ್ತೊಂದು ದೂರು ಪಡೆದು ಅದರಲ್ಲಿ ‘ಒಬ್ಬರನ್ನು ವರ್ಗಾವಣೆ ಮಾಡಿಸಿಕೊಡಲು’ ಎಂಬ ಸಾಲು ಇರದಂತೆ   ನೋಡಿಕೊಳ್ಳಲಾಗಿದೆ. ಎರಡನೇ ದೂರನ್ನಾಧರಿಸಿ ಪೊಲೀಸರು ಎರಡನೇ ಎಫ್‌ಐಆರ್‍‌ ದಾಖಲಿಸಿದ್ದು ಬಹಿರಂಗಗೊಂಡಿತ್ತು.

 

 

 

 

ಮೊದಲ ಎಫ್ಐಆರ್‍‌ನಲ್ಲೇನಿತ್ತು?

 

ಇತ್ತೀಚಿಗೆ ಬೆಂಗಳೂರಿನ ಸಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಉಚಿತ ಬಂದೂಕು ತರಬೇತಿ ವೇಳೆಯಲ್ಲಿ ಫೀರ್ ಸೈಯದ್ ಖಾದರ್ ಷಾ ಖಾದ್ರಿ ಮತ್ತು ಸಂಪಿಗೆಹಳ್ಳಿ ಮೂಲದ ಗುತ್ತಿಗೆದಾರ ಬಿ.ಎಂ.ಪ್ರತಾಪ್ ಗೆ ಪರಿಚಯವಾಗಿತ್ತು. ಕೋಲಾರ  ನಗರಸಭೆ ಸದಸ್ಯ ಬಿ. ಮುಬಾರಕ್ ರ ಮೂಲಕ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂಎಲ್ಸಿ ನಜೀರ್ ಅಹ್ಮದ್ ಮೂಲಕ ಮಾಡಿಸುವುದಾಗಿ ಪ್ರತಾಪ್‌ಗೆ  ಭರವಸೆ ನೀಡಿದ್ದರು  ಎಂಬ ಅಂಶವನ್ನು ಉಲ್ಲೇಖಿಸಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ.

 

ಇದಾದ ನಂತರ 2023ರ ಜೂನ್‌ 29ರಂದು  ವಿಧಾನ ಸೌಧದ ಕೂಗಳತೆ ದೂರದಲ್ಲಿರುವ  ರೇಸ್ ಕೋರ್ಸ್‌ ರಸ್ತೆ ಬಳಿ ಅನಾಮಿಕ ಅಧಿಕಾರಿ ಬಳಿ ಮಧ್ಯವರ್ತಿಗಳ ಜೊತೆ ಚರ್ಚೆ ನಡೆದಿತ್ತು.  ದೂರುದಾರ ಪ್ರತಾಪ್‌  ತಮ್ಮ ದೂರಿನಲ್ಲಿ ಉಲ್ಲೇಖಿಸಿರುವಂತೆ ವರ್ಗಾವಣೆಗಾಗಿ ಒಟ್ಟು 1.50 ಕೋಟಿ ರು.ಗೆ ಬೇಡಿಕೆ ಇರಿಸಲಾಗಿತ್ತು. ಮುಂಗಡವಾಗಿ ಅಂದೇ 25.ಲಕ್ಷ ರು.ಗಳನ್ನು  ಹಿರಿಯ ಅಧಿಕಾರಿಯಿಂದ ಕೋಲಾರದ ನಗರ ಸಭಾ ಸದಸ್ಯ ಬಿ.ಮುಬಾರಕ್ ಗೆ ಸಂದಾಯ ಮಾಡಲಾಗಿತ್ತು ಎಂಬ ಅಂಶವು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿತ್ತು.

 

25 ಲಕ್ಷ ರು.ಗಳನ್ನು ಮೊದಲು ಮುಂಗಡವಾಗಿ ನೀಡಿದ ನಾಲ್ಕೇ ನಾಲ್ಕು ದಿನದಲ್ಲಿ ಅಂದರೆ 2023ರ ಜುಲೈ 2ರಂದು 25 ಲಕ್ಷ ರು., 2023ರ ಜುಲೈ 22ರಂದು  ಕೋಲಾರದ ಹೊರ ವಲಯದ ಜಾಲಪ್ಪ ಮೆಡಿಕಲ್ ಕಾಲೇಜ್ ಬಳಿ ಇರುವ ನಾಗಾರ್ಜುನ ಹೋಟೆಲ್ ನಲ್ಲಿ 50 ಲಕ್ಷ ರು. ಮಧ್ಯವರ್ತಿ ಎಂದು ಹೇಳಲಾಗಿರುವ ಖಾದ್ರಿ ಎಂಬುವರಿಗೂ ಕಮಿಷನ್ ರೂಪದಲ್ಲಿ 9 ಲಕ್ಷ ರು ಹೀಗೆ ಒಟ್ಟು 1.09 ಕೋಟಿ ರು.ಹಣ ಸಂದಾಯ ಮಾಡಲಾಗಿತ್ತು. ಎಂದು ಎಫ್‌ಐಆರ್‍‌ನಲ್ಲಿ ನಮೂದಿಸಲಾಗಿದೆ.

 

ಹಣ ಕೊಟ್ಟರೂ ವರ್ಗಾವಣೆ  ತಡ ಆಗುತ್ತಿರುವುದರಿಂದ ಹಣ ವಾಪಸ್ಸು ಮಾಡುವಂತೆ ಒತ್ತಡ ಹೇರಲಾಗಿತ್ತು. ಹೀಗಾಗಿ 2023ರ ಜುಲೈ 31ರಂದು ಕೋಲಾರದ ಗಲ್‌ ಪೇಟೆ ಪೊಲೀಸ್‌ ಠಾಣೆಗೆ ದೂರು ಸಲ್ಲಿಕೆಯಾಗಿತ್ತು. ಇದನ್ನಾಧರಿಸಿ ಠಾಣಾ ಅಪರಾಧ ಸಂಖ್ಯೆ 64/2023 ipc 1830u/s 419,420,465,471,504,506,34 itAct 66c,66d ಅಡಿ  ಪ್ರಕರಣ ದಾಖಲಾಗಿತ್ತು. ಆರೋಪಿತ ಬಿ.ಮುಬಾರಕ್ ನನ್ನು ದಸ್ತಗಿರಿ ಮಾಡಲಾಗಿತ್ತು. ಈ ಮಾಹಿತಿಯು ಶರವೇಗದಲ್ಲಿ ಹಬ್ಬಿದ್ದರಿಂದಾಗಿ   ಹಿರಿಯ ಪೋಲೀಸ್ ಅಧಿಕಾರಿಗಳ ಮೇಲೆ ಕೆಲ ಪ್ರಭಾವಿಗಳು  ಒತ್ತಡ ಹೇರಿದ್ದರು. ಪುನಃ ದೂರುದಾರನನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು   ಮತ್ತೊಂದು ದೂರು ಪಡೆದು ಮತ್ತೊಂದು ಎಫ್‌ ಐ ಆರ್ ದಾಖಲಿಸಿದ್ದರು ಎಂಬ ಆರೋಪವಿದೆ.

 

ಅಲ್ಲದೇ ಮೊದಲ ಎಫ್‌ಐಆರ್‍‌ ಆಧರಿಸಿ ಸಂಯುಕ್ತ ಕರ್ನಾಟಕದಲ್ಲಿ ವರದಿ ಪ್ರಕಟವಾಗಿತ್ತು.

ವರ್ಗಾವಣೆಗಾಗಿ ಹಣ ಪಡೆದು ವಂಚಿಸಲಾಗಿದೆ ಎಂಬ ಅಂಶವನ್ನು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದ್ದ ವರದಿ

 

ಮತ್ತು ಪ್ರಜಾವಾಣಿ ದಿನಪತ್ರಿಕೆಯು ಸ್ಥಳೀಯ ಜಿಲ್ಲಾ ಅವೃತ್ತಿಯಲ್ಲಿಯೂ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿಯೂ ಆರೋಪಿ ಮುಬಾರಕ್‌ ಎಂಬಾತನು ವರ್ಗಾವಣೆ ಮಾಡಿಸಿಕೊಡುವುದಾಗಿ ಹೇಳಿ ಹಣ ವಂಚಿಸಿದ್ದ ಎಂದೇ ಉಲ್ಲೇಖಿಸಲಾಗಿದೆ.

 

ವರ್ಗಾವಣೆಗಾಗಿ ಹಣ ಪಡೆದು ವಂಚಿಸಲಾಗಿದೆ ಎಂಬ ಅಂಶವುಳ್ಳ ಪ್ರಜಾವಾಣಿ ವರದಿ

 

ಮೊದಲ ದೂರಿನಲ್ಲಿ ಪ್ರಸ್ತಾಪಿಸಿದ್ದ ‘ವರ್ಗಾವಣೆಗಾಗಿ’ ಎಂಬ  ಅಂಶಗಳನ್ನೇ ಎಫ್‌ಐಆರ್‍‌ನಲ್ಲಿಯೂ ದಾಖಲಿಸಿ ಅಧಿಕೃತಗೊಳಿಸಲಾಗಿತ್ತು. ಆದರೆ ಈ ಎಫ್‌ಐಆರ್‍‌ ಬಹಿರಂಗವಾದರೇ  ಇಡೀ ಸರ್ಕಾರಕ್ಕೆ ಕಂಟಕವಾಗಬಹುದು, ಕಡೆಗೆ ತಮಗೇ ಮುಳುವಾಗಬಹುದು  ಎಂಬ ಲೆಕ್ಕಾಚಾರ ನಡೆಸಿದ್ದ ಪೊಲೀಸರು ದೂರುದಾರನನ್ನೇ ಕರೆಸಿಕೊಂಡು ‘ವರ್ಗಾವಣೆಗಾಗಿ’ ಎಂಬ ಪದವನ್ನೇ ತೆಗೆಸಿದ್ದರು ಎಂದು ಗೊತ್ತಾಗಿದೆ.

 

 

ಆರೋಪಿತರಿಗೆ ಸಂಶಯದ ಲಾಭ?

 

ಒಂದು ಮೂಲದ ಪ್ರಕಾರ ಎರಡನೇ ಎಫ್ ಐ ಆರ್ ನ್ನು ಮಾತ್ರ ಪೊಲೀಸರು ನ್ಯಾಯಾಲಯಕ್ಕೆ ರವಾನೆ ಮಾಡಿದ್ದರು ಎನ್ನಲಾಗಿದೆ .ಈ ದೂರೇ ಪ್ರಶ್ನಾರ್ಥಕ, ಸಂಶಯದಿಂದ
ಕೂಡಿದೆ. ಏಕೆಂದರೆ,ಕೋಲಾರ ನಗರಸಭೆಗೆ 500 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಎಲ್ಲಿಯೂ ಭರವಸೆ ನೀಡಿಲ್ಲ.ತುಂಡು ಗುತ್ತಿಗೆ ಪಡೆಯಲು ಮುಂಗಡವಾಗಿ ಗುತ್ತಿಗೆದಾರ ಕೋಟ್ಯಂತರ ರು.ಹಣ ನೀಡುವ ಪ್ರಶ್ನೆ ಉದ್ಬವಾಗುವುದಿಲ್ಲ. ದೂರಿನಲ್ಲಿ ಉಲ್ಲೇಖವಾಗಿರುವ ಅಂಶಗಳು ಊಹಾತ್ಮಕ ವಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.

 

 

ಈ ಪ್ರಕರಣದಲ್ಲಿ ಎರಡೂ ಎಫ್ಐಆರಗಳನ್ನು ದಾಖಲಿಸಿದ್ದಾರೆ. ಇವು ಪೋಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್‌ನಲ್ಲಿ ದಾಖಲಾಗಿವೆ. ವರ್ಗಾವಣೆಗಾಗಿ ಆರೋಪಿತರು ಹಣ ಪಡೆದ ಬಗ್ಗೆ ಈಗಾಗಲೇ ಮಾಧ್ಯಮ, ಇನ್ನಿತರ ಕಡೆ ವರದಿಗಳೂ  ಪ್ರಕಟವಾಗಿವೆ. ಎಫ್ ಐ ಆರ್ ನ್ಯಾಯಾಧೀಶರಿಗೆ  ರವಾನೆಯಾದ ಸಮಯವನ್ನು ದಾಖಲಿಸಿರುತ್ತಾರೆ. 31,2023 ರಂದು ಮಧ್ಯಾಹ್ನ 3.00 ಗಂಟೆ ಗೆ ಮೊದಲ ಹಾಗೂ ಎರಡನೇ ಎಫ್ ಐ ಆರ್ ದಾಖಲಾಗಿರುವ ಕುರಿತು ಸಮಯವಿದೆ. ತಡ ರಾತ್ರಿ ಇನ್ನೊಂದು ಎಫ್ ಐ ಆರ್ ದಾಖಲಾಗಿರುವುದರಿಂದ ನ್ಯಾಯಾಲಯಕ್ಕೆ ತಲುಪಲು ವಿಳಂಬವೇಕೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.  ಇದರಿಂದ ಆರೋಪಿತರು ಸಂಶಯದ ಲಾಭ ಪಡೆಯಲು ನ್ಯಾಯಾಲಯದ ಮೊರೆ ಹೋದರೆ ಖಂಡಿತ ಲಾಭ ಸಿಗಲಿದೆ ಎನ್ನುತ್ತಾರೆ ಹಿರಿಯ ವಕೀಲರು.

 

ಇದರಿಂದ, ಇಡೀ ಪ್ರಕರಣದಲ್ಲಿ ಗಲ್ ಪೇಟೆ ಪಿ ಎಸ್ ಐ ಕರ್ತವ್ಯ ಲೋಪವೆಸಗಿರುವುದು  ದೃಢಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.  ತಕ್ಷಣವೇ ಅವರನ್ನು ಅಮಾನತ್ತುಪಡಿಸಿ, ಅವತ್ತಿನ ಇಡೀ ದಿನದ ಠಾಣಾ ಸಿ.ಸಿ. ಕ್ಯಾಮೆರಾ ಹಾಗೂ ಅವರ ಖಾಸಗಿ, ಸರ್ಕಾರಿ ಮೊಬೈಲ್, ದೂರುದಾರನ ಮೊಬೈಲ್ ವಶ ಪಡಿಸಿಕೊಂಡು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

ಆದರೆ ಎರಡನೇ ಎಫ್‌ಐಆರ್‍‌ನಲ್ಲಿ ‘ಒಬ್ಬರನ್ನು ವರ್ಗಾವಣೆ ಮಾಡಿಸಿಕೊಡಲು ‘ ಎಂಬ ಸಾಲುಗಳೇ ಇಲ್ಲ.  ಬೆಂಗಳೂರಿನ  ಪ್ರತಾಪ್‌ ಬಿ ಎನ್‌ ಎಂಬುವರು ಸಲ್ಲಿಸಿದ್ದ ದೂರಿನ ಆಧಾರದ ಮೇರೆಗೆ ಈಗಾಗಲೇ ಕೋಲಾರ ಜಿಲ್ಲೆಯ ಗಲ್‌ ಪೇಟೆ ಸರ್ಕಲ್‌ ಪೊಲೀಸ್‌ ಠಾಣೆಯಲ್ಲಿ ಮುಬಾರಕ್‌ ಮತ್ತು ಪೀರ್‍‌ ಸೈಯದ್‌ ಖಾದರ್‍‌ ಆಲಿ ಷಾ ಖಾದ್ರಿ ಎಂಬುವರ ವಿರುದ್ಧ ಎಫ್‌ಐಆರ್‍‌ ಕೂಡ ದಾಖಲಾಗಿತ್ತು.ಈ ಎಫ್‌ಐಆರ್‍‌ನಲ್ಲಿ ‘ವರ್ಗಾವಣೆ ಮಾಡಿಸಿಕೊಡಲು’ ಎಂಬ ಸಾಲು ಇಲ್ಲ. ಬದಲಿಗೆ ‘ಕಾಮಗಾರಿ ಸಂಬಂಧ ಬಾಕಿ ಇರುವ ಬಿಲ್‌ಗಳ ಹಣವನ್ನು ವರ್ಗಾವಣೆ ಮಾಡಿಸಿಕೊಡಬೇಕೆಂದು ಕೇಳಿದ್ದು,’ ಎಂಬ ಸಾಲು ಇದೆ.

 

 

 

ಆರೋಪಿ ಪೀರ್‍‌ ಸೈಯದ್‌ ಖಾದರ್‍‌ ಆಲ ಷಾ ಖಾದ್ರಿ ಎಂಬುವರ ಮೂಲಕ ದೂರುದಾರ ಪ್ರತಾಪ್‌ಗೆ ಪರಿಚಿತವಾಗಿದ್ದ ಮುಬಾರಕ್‌ ಎಂಬಾತ ಎಂ ಎಲ್‌ ಸಿ ನಸೀರ್‍‌ ಅಹ್ಮದ್‌ ಅವರ ಹೆಸರನ್ನು ಮುಂದಿರಿಸಿ ಹಣ ಪಡೆದಿರುವುದು ಎಫ್‌ಐಆರ್‍‌ನಿಂದ ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್‌’ 2023ರ ಆಗಸ್ಟ್‌ 2ರಂದು ವರದಿ ಪ್ರಕಟಿಸಿತ್ತು.

 

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‍‌ ಅಹ್ಮದ್‌ ಹೆಸರು ಬಳಕೆ; ಗುತ್ತಿಗೆ, ಬಾಕಿ ಬಿಲ್‌ ಬಿಡುಗಡೆಗೆ 1 ಕೋಟಿ ವಸೂಲು

‘ಎಂಎಲ್‌ಸಿ ನಜೀರ್‍‌ ಅಹ್ಮದ್‌ ಹೆಸರಿನಲ್ಲಿ ಮೆಸೇಜ್‌ಗಳು ಬಂದಿದ್ದು ದೂರುದಾರ ಅದನ್ನು ನಂಬಿದ್ದ. ತದ ನಂತರ ಅವರ ನಡವಳಿಕೆ ಬಗ್ಗೆ ಅನುಮಾನಗೊಂದು ವಿಚಾರಿಸಿದಾಗ ಮುಬಾರಕ್‌ ಬೇರೊಂದು ಮೊಬೈಲ್‌ನಲ್ಲಿ ಎಂಎಲ್‌ಸಿ ನಜೀರ್‍‌ ಅಹ್ಮದ್‌ ಎಂದು ಸೇವ್ ಮಾಡಿಕೊಂಡು ದೂರುದಾರನಿಗೆ ಮೊಬೈಲ್‌ನಲ್ಲಿ ಮುಬಾರಕ್‌ ಮತ್ತು ನಜೀರ್‍‌ ಅಹ್ಮದ್‌ ಅವರು ಚಾಟಿಂಗ್‌ ಮಾಡಿರುವಂತೆ ಮೆಸೇಜ್‌ ಚಾಟ್‌ ಮಾಡಿಕೊಂಡು ಆ ಚಾಟಿಂಗ್‌ ಮೆಸೇಜ್‌ಗಳನ್ನು ದೂರುದಾರ ನಂಬುವಂತೆ ಅವರಿಗೆ ಕಳಿಸಿದ್ದ, ‘ ಎಂದು ಎಫ್‌ಐಆರ್‍‌ನಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts