ಆಮ್‌ ಆದ್ಮಿಯನ್ನು ನಾನು ಬಿಡಲಿಲ್ಲ, ಬಿಡಿಸಿದರು., ಕೆಆರ್‌ಎಸ್‌ ಏಕ ವ್ಯಕ್ತಿ ಪಕ್ಷವಲ್ಲ; ಆನ್‌ ದ ರೆಕಾರ್ಡ್‌

ಬೆಂಗಳೂರು; ‘ಆಮ್‌ ಆದ್ಮಿ ಪಕ್ಷದಲ್ಲಿ ಇದ್ದದ್ದು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಷ್ಟೆ, ಆದರೂ ನಾನು ಪಕ್ಷ ಬಿಟ್ಟಿರಲಿಲ್ಲ. ನನ್ನನ್ನು ಪಕ್ಷದಿಂದಲೇ ಬಿಡಿಸಿದರು. ನಾನೇ ಏಕಾಏಕೀ ಪಕ್ಷವನ್ನು ಬಿಡಲಿಲ್ಲ. ಆಮ್‌ ಆದ್ಮಿಯೂ ಹೈಕಮಾಂಡ್‌ ಸಂಸ್ಕೃತಿ ಇರುವ ಪಕ್ಷ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಹೇಳಿದ್ದಾರೆ.

 

‘ದಿ ಫೈಲ್‌’ ಆನ್‌ ದ ರೆಕಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತಾ ನಂಜುಂಡಸ್ವಾಮಿ ಅವರೊಂದಿಗಿನ ಮಾತುಕತೆಯಲ್ಲಿ ತಮ್ಮ ರಾಜಕಾರಣದ ಪಯಣದಲ್ಲಿನ ಹಲವು ಹೆಜ್ಜೆಗುರುತುಗಳನ್ನು ದಾಖಲಿಸಿದ್ದಾರೆ.
ಚುನಾವಣೆ ರಾಜಕಾರಣ, ಪಕ್ಷದ ಕಾರ್ಯಸೂಚಿ, ಮುಂದಿನ ರಾಜಕೀಯ ಹಾದಿ, ಪಕ್ಷದೊಳಗಿನ ಪ್ರಜಾಪ್ರಭುತ್ವದ ಕುರಿತು ರವಿಕೃಷ್ಣಾ ರೆಡ್ಡಿ ಅವರು ಮುಕ್ತವಾಗಿ ಹಂಚಿಕೊಡಿದ್ದಾರೆ.

 

ಈ ಹಿಂದೆ ಬಿಬಿಎಂಪಿಗೆ ನಡೆದಿದ್ದ ಚುನಾವಣೆಯನ್ನು ಆಮ್‌ ಆದ್ಮಿ ಪಕ್ಷವು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಮ್‌ ಆದ್ಮಿಗೆ ಒಳ್ಳೇ ಅವಕಾಶವಿತ್ತು. ನನ್ನನ್ನು ಮುಂದೆ ಹೋಗಲು ಬಿಡಲಿಲ್ಲ. ಸ್ವಲ್ಪ ಹೆಚ್ಚು ಹೋರಾಟ ಮಾಡಿದೆ. ಎಸ್‌ ಆರ್‌ ಹಿರೇಮಠ್‌ ಮತ್ತಿತರು ಪರ್ಯಾಯ ರಾಜಕೀಯ ಕಟ್ಟಲು ನನ್ನನ್ನು ಪ್ರೇರೇಪಿಸಿದರು. ಇದು ಆಮ್‌ ಆದ್ಮಿ ಪಕ್ಷಕ್ಕೆ ಇಷ್ಟವಾಗಲಿಲ್ಲ. ಹೀಗಾಗಿ ನನ್ನನ್ನು ಬಿಡುಗಡೆಗೊಳಿಸಿದರು ಎಂದು ಆಮ್‌ ಆದ್ಮಿ ಪಕ್ಷವನ್ನು ತೊರೆದಿದ್ದರ ಹಿನ್ನೆಲೆಯನ್ನು ವಿವರಿಸಿದರು.

 

ಆಮ್‌ ಆದ್ಮಿ ಪಕ್ಷ ಹುಟ್ಟುವ ಮುನ್ನವೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ರಾಜಕೀಯವಾಗಿ ಬೇರೆ ಪಕ್ಷ ಸೇರಲಿಲ್ಲ. ಲಂಚ ಮುಕ್ತ ಕರ್ನಾಟಕ ವೇದಿಕೆ ಸ್ಥಾಪಿಸಿದೆವು. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಬೇಕು ಮತ್ತು ಈ ನಿಟ್ಟಿನಲ್ಲಿ ಪಕ್ಷವೊಂದನ್ನು ಕಟ್ಟಬೇಕಿತ್ತು. ಆಗ ಹುಟ್ಟಿದ್ದೇ ಕರ್ನಾಟಕ ರಾಷ್ಟ್ರ ಸಮಿತಿ. ಪಕ್ಷಕ್ಕೇ ಕರ್ನಾಟಕ ರಾಷ್ಟ್ರ ಸಮಿತಿ ಹೆಸರೇ ಪ್ರಧಾನವಾಗಿರಲಿಲ್ಲ. ಕರ್ನಾಟಕ ಜನತಾ ರಂಗ ಎಂದು ನೋಂದಾಯಿಸಲು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆವು. ಆದರೆ ಅದಕ್ಕೆ ಅನುಮತಿ ಸಿಗಲಿಲ್ಲ. ಹೀಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಹೆಸರನ್ನು ಇಟ್ಟುಕೊಂಡೆವು ಎಂದು ಹೇಳಿದರು.

 

ನಾವು ರಾಜಕಾರಣಕ್ಕೆ ಅನರ್ಹರು ಎಂದು ಬಿತ್ತನೆ ಮಾಡಲಾಗಿದೆ. ರಾಜಕಾರಣ ಎಂದರೆ ಜನರನ್ನು ಒಲಿಸಿಕೊಳ್ಳಬೇಕು. ಆಮಿಷ ಒಡ್ಡಬೇಕು. ಇದನ್ನು ಹೊರತುಪಡಿಸಿ ಬೇರೆ ವಿಚಾರಗಳನ್ನು ಮಾತನಾಡಿದರೆ ಜನರು ಒಪ್ಪುತ್ತಿಲ್ಲ. ಚುನಾವಣೆ ರಾಜಕಾರಣದಲ್ಲಿ ನಮ್ಮ ಭಾಷೆಯನ್ನು ಒಪ್ಪುತ್ತಿಲ್ಲ. ನಮಗೆ ಠೇವಣಿ ಬಂದಿಲ್ಲ., ನಿಜ. ಜಾತಿ, ಹಣ ಇರಬೇಕು. ಕಾನೂನುಬಾಹಿರವಾಗಿ ಬಳಸಲು ಹಣ ಇರಬೇಕು. ನಿಜ ನಮಗೆ ಹಣದ ಕೊರತೆ ಇದೆ.

 

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ವಿರುದ್ಧ ನಾವು ರಾಜಕಾರಣ ಮಾಡಬೇಕಿದೆ. ಬಿಜೆಪಿ, ಕಾಂಗ್ರೆಸ್‌ ಸಿದ್ಧಪಡಿಸಿರುವ ಕಾರ್ಯಸೂಚಿಯ ಕುರಿತು ನಾವೇಕೆ ಮಾತನಾಡಬೇಕು. ಆ ಮೂವರಿಗೂ ಜನರ ಹಿತ ಮುಖ್ಯವಾಗಿರಲಿಲ್ಲ. ಅವರಂತೆಯೇ ಅವರ ಹಾಗೆಯೇ ಇರಬೇಕೆಂದಿದ್ದರೆ ಕರ್ನಾಟಕ ರಾಷ್ಟ್ರ ಸಮಿತಿಯನ್ನೇಕೆ ಕಟ್ಟಬೇಕು ಎಂದು ಪ್ರಶ್ನಿಸಿದರು.

 

ನಾವು ಭ್ರಷ್ಟಾಚಾರದ ವಿರುದ್ಧ ಮಾತನಾಡಿದೆವು, ಮದ್ಯ ನಿಷೇಧದ ಬಗ್ಗೆ ಗಟ್ಟಿಯಾಗಿ ಮಾತನಾಡಿದೆವು. ಕಡೆಗೆ ನಾವು ವಿಫಲರಾದೆವು. ನಾವಿನ್ನೂ ಮಾಗಬೇಕಿದೆ. ಜನರಿಗೆ ಅರ್ಥ ಮಾಡಿಸಬೇಕಿದೆ. ಭೌಗೋಳಿಕ ಮಿತಿ ಮತ್ತು ಸಂಪನ್ಮೂಲ ಹೊಂದಿಸಲು ನಾವು ನಿಜಕ್ಕೂ ವಿಫಲವಾದೆವು.

 

ನಮ್ಮ ಹೋರಾಟಗಳನ್ನು ಮಾಧ್ಯಮಗಳು ಹೊರಗಿಟ್ಟವು. ಪಕ್ಷಕ್ಕೆ ಮತ್ತು ಕಚೇರಿಗೆ ನಾನೂ ಸಾಲದ ರೂಪದಲ್ಲಿ ಹಣ ನೀಡಿದೆ. ದೇಣಿಗೆ ಕೇಳಿದೆವು. ಸದಸ್ಯತ್ವ ಶುಲ್ಕ, ಮಹಾಭಿಕ್ಷಾ ಯಾತ್ರೆ ಮಾಡಿದೆವು. ಎಲ್ಲವೂ ಪಾರದರ್ಶಕವಾಗಿದೆ. ಪಕ್ಷವು ಯಾವನೊಬ್ಬನ ಹಂಗಿನಲ್ಲಿರಬಾರದು. ತತ್ವ ಸಿದ್ಧಾಂತಗಳಡಿಯಲ್ಲಿ ಪಕ್ಷವನ್ನು ಕಟ್ಟಿದ್ದೇವೆ. ಜನರೇ ಪಕ್ಷವನ್ನು ಬಲಪಡಿಸಬೇಕು. ಪಕ್ಷ ಬೆಳಿಬೇಕು, ಖಂಡಿತಾ ಬೆಳೆಯುತ್ತೆ. ಜನ ಒಂದಲ್ಲ ಒಂದು ದಿನ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

 

ಇದು ಏಕ ವ್ಯಕ್ತಿ ಪಕ್ಷವಲ್ಲ. ಒಂದೇ ಚುನಾವಣೆಯಲ್ಲಿ ಪಕ್ಷದ ಅಳಿವು, ಉಳಿವನ್ನು ನಿರ್ಧರಿಸಲಾಗದು. ನಮ್ಮ ಮಾತುಗಳು, ಜನರ ಆಶಯಗಳು ಮತವಾಗಿ ಪರಿವರ್ತನೆ ಈಗ ಆಗದೇ ಇರಬಹುದು. ಪಕ್ಷವು ಬೇರೂರಬೇಕು. ಅಭ್ಯರ್ಥಿ, ಸ್ಥಳೀಯ ಕಾರ್ಯಕರ್ತರೂ ಮುಖ್ಯ. ಅವರ ಭಾಗವಹಿಸುವಿಕೆಯೂ ಅಷ್ಟೇ ಮುಖ್ಯ.

 

ಚುನಾವಣೆಗೆ ನಿಲ್ಲುವ ಯಾವ ಅಭ್ಯರ್ಥಿಯೂ ಸಾಲ ಮಾಡಬಾರದು. ಚುನಾವಣೆಗೆಂದು ಹೂಡಿಕೆ ಮಾಡಬಾರದು. ಆಸ್ತಿ ಕಳೆದುಕೊಳ್ಳಬಾರದು. ಜನಸಾಮಾನ್ಯರ ದೇಣಿಗೆಯಲ್ಲಿ ಚುನಾವಣೆ ನಡೆಯಬೇಕು. ಇದಕ್ಕಾಗಿ ಕಾರ್ಯಕರ್ತರನ್ನು ನಿರಂತರವಾಗಿ ಸಿದ್ಧಗೊಳಿಸುತ್ತಿದ್ದೇವೆ.

 

ನಾವು ಹತಾಶರಾಗಿಲ್ಲ, ಹತಾಶರಾಗಬೇಕೂ ಇಲ್ಲ. ನ್ಯಾಯ, ನಿಷ್ಠುರ, ಸತ್ಯದ ಪರ ಮಾತನಾಡಿದ್ದೇವೆ. ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಎಂದಿಗೂ ಏನನ್ನೂ ಮಾಡುವುದಿಲ್ಲ. ನಾವು ಪ್ರಜಾಪ್ರಭುತ್ವವಾದಿಗಳು. ಪಕ್ಷದ ಒಳಗೆ ಮತ್ತು ಹೊರಗೆ ಡೆಮಾಕ್ರಟಿಕ್ ಆಗಿ ಇದ್ದೇವೆ. ಬೇರೆ ಯಾವ ಪಕ್ಷದಲ್ಲಿಯೂ ನಮ್ಮಲ್ಲಿರುವ ಡೆಮಾಕ್ರಟಿಕ್‌ ವಾತಾವರಣ ಇಲ್ಲ.

 

ಇದು ನನ್ನೊಬ್ಬನ ಆಸ್ತಿಯಲ್ಲ. ಪಕ್ಷವನ್ನು ನಾನೊಬ್ಬನೇ ಕಟ್ಟಿಲ್ಲ. ಇದು ಹಲವರಿಂದ ಕಟ್ಟಲ್ಪಟ್ಟಿದೆ. ಆಂತರಿಕವಾಗಿ ನಾನು ಗಾಂಧಿ ವಾದಿ, ಕುವೆಂಪು ಮಾರ್ಗದಲ್ಲಿರುವವನು. ಗೌರವಯುತವಾಗಿ ಬದುಕಲು ಏನು ಬೇಕೋ ಅದೆಲ್ಲವೂ ನನ್ನ ಬಳಿ ಇದೆ ಎಂದರು.

the fil favicon

SUPPORT THE FILE

Latest News

Related Posts