ಬೆಂಗಳೂರು; ಹದಿನೈದು ಲಕ್ಷ ರುಪಾಯಿ ಮುಂಗಡ ಹಣದಲ್ಲಿ ಮೋಟಾರ್ ಕಾರು ಖರೀದಿಸಿದ್ದ ವಿಧಾನಪರಿಷತ್ ಸದಸ್ಯೆ ಡಾ ತೇಜಸ್ವಿನಿ ಗೌಡ ಅವರು ಕಾರು ಖರೀದಿಸಿದ್ದ ಬಿಲ್‌ಗಳನ್ನು ಪರಿಷತ್‌ಗೆ ಸಲ್ಲಿಸಿಲ್ಲ ಎಂಬುದನ್ನು ಪ್ರಧಾನ ಮಹಾಲೇಖಪಾಲರು (ಸಿಎಜಿ) ಹೊರಗೆಡವಿದ್ದಾರೆ.
ಕರ್ನಾಟಕ ವಿಧಾನ ಪರಿಷತ್‌ಗೆ ಸಂಬಂಧಿಸಿದಂತೆ 2018-22ರವರೆಗಿನ ಹಣಕಾಸು ಆಡಳಿತವನ್ನು ತಪಾಸಣೆ ನಡೆಸಿರುವ ಪ್ರಧಾನ ಮಹಾಲೇಖಪಾಲರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ 2023ರ ಫೆ.7ರಂದು ವರದಿ ಸಲ್ಲಿಸಿದ್ದಾರೆ. ಈ ವರದಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದ ಅಧಿಸೂಚನೆ (NO 1/LA/LC/ 6(3) Bangalore dated 01.01.1986) ಪ್ರಕಾರ ವಿಧಾನ ಪರಿಷತ್‌ನ ಸದಸ್ಯರು ಮುಂಗಡ ಹಣ ಪಡೆದು 2 ತಿಂಗಳೊಳಗೆ ಮೋಟಾರು ಕಾರು ಖರೀದಿಸಿ ಅದರ ಬಿಲ್‌ಗಳನ್ನು ಸಚಿವಾಲಯಕ್ಕೆ ಸಲ್ಲಿಸಬೇಕು.
ಆದರೆ ‘ಡಾ ತೇಜಸ್ವಿನಿ ಗೌಡ ಅವರು ಮೋಟಾರು ಕಾರು ಖರೀದಿಸಲು 2018ರ ಅಕ್ಟೋಬರ್ 17ರಂದು 15 ಲಕ್ಷ ರು.ಗಳನ್ನು ಮುಂಗಡವಾಗಿ ಹಣ ಪಡೆದಿದ್ದರು. ಇದಾದ 38 ತಿಂಗಳ ನಂತರ ಪುನಃ ಮೋಟಾರು ವಾಹನ ಖರೀದಿಸಲು 2022ರ ಜನವರಿ 24ರಂದು ಮುಂಗಡ ಹಣ ಪಡೆದಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ತೇಜಸ್ವಿನಿ ಗೌಡ ಅವರು ಮೋಟಾರು ಕಾರು ಖರೀದಿಗೆ ಸಂಬಂಧಿಸಿದಂತೆ ಬಿಲ್‌ಗಳನ್ನು ಸಲ್ಲಿಸಿರಲಿಲ್ಲ. ಅಲ್ಲದೆ ಇವರ ವಿರುದ್ಧ ಯಾವುದೇ ಕ್ರಮವನ್ನೂ ವಿಧಾನಪರಿಷತ್ ಸಚಿವಾಲಯವು ಕೈಗೊಂಡಿರಲಿಲ್ಲ,’ ಎಂಬ ಅಂಶವನ್ನು ಪ್ರಧಾನ ಮಹಾಲೇಖಪಾಲರ ತಪಾಸಣೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆಯೇ 96.47 ಲಕ್ಷ ರು. ಮೌಲ್ಯದ 5 ಇನ್ನೋವಾ ಮತ್ತು 5 ಟೊಯೊಟಾ ಇಟಾಯಿಸ್ ಕಾರ್ ಗಳನ್ನು 2018ರ ಮಾರ್ಚ್‌ನಿಂದ 2018ರ ಮೇ ತಿಂಗಳ ಖರೀದಿಸಲಾಗಿತ್ತು. ಅಲ್ಲದೇ ಆರ್ಥಿಕ ಇಲಾಖೆಯು ನಿಗದಿಪಡಿಸಿರುವ ಮೊತ್ತದೊಳಗೇ ಕಾರು ಖರೀದಿಸಬೇಕಿತ್ತು. ಆದರೆ ವಿಧಾನ ಪರಿಷತ್‌ನ ಸಚಿವಾಲಯವು ಆರ್ಥಿಕ ಇಲಾಖೆಯ ಅನುಮತಿ ಇಲ್ಲದೆಯೇ ಕಾರುಗಳನ್ನು ಖರೀದಿಸಿತ್ತು ಎಂದು ಪ್ರಧಾನ ಮಹಾಲೇಖಪಾಲರ ತಪಾಸಣೆ ವರದಿಯಿಂದ ತಿಳಿದು ಬಂದಿದೆ.
ಪ್ರಧಾನ ಮಹಾಲೇಖಪಾಲರು ಈ ಕುರಿತು ವಿವರಣೆಯನ್ನು ಬಯಸಿತ್ತಾದರೂ ಈ ಸಂಬಂಧ ವಿಧಾನ ಪರಿಷತ್‌ನ ಸಚಿವಾಲಯವು ಯಾವುದೇ ಸ್ಪಷ್ಟೀಕರಣ, ಸಮಜಾಯಿಷಿಯನ್ನೂ ಒದಗಿಸಿಲ್ಲ ಎಂದು ಗೊತ್ತಾಗಿದೆ.
ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸೇರಿರುವ ಅನುಪಯುಕ್ತ ಪೀಠೋಪಕರಣಗಳು ಮತ್ತು ಉಪಕರಣಗಳನ್ನು ವಿಲೇವಾರಿ ಮಾಡುವ ಮುನ್ನ ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಲೆಕ್ಕಪರಿಶೋಧಕರು ಬೆಳಕಿಗೆ ತಂದಿದ್ದರು.
ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸಂಬಂಧಿಸಿದಂತೆ 2013-14ರಿಂದ 2014-15ರ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಿರುವ ಲೆಕ್ಕಪರಿಶೋಧಕರು ಸರ್ಕಾರದ ಆದೇಶ ಪಡೆಯದೆ ಪೀಠೋಪಕರಣಗಳು ಮತ್ತು ಇತರೆ ಉಪಕರಣಗಳನ್ನು ಚಾರಿಟಬಲ್ ಸಂಸ್ಥೆಗಳಿಗೆ ನೀಡಿರುವುದನ್ನೂ ಪತ್ತೆ ಹಚ್ಚಿದ್ದರು. ಈ ಕುರಿತು 2023ರ ಏಪ್ರಿಲ್ 26ರಂದು ‘ದಿ ಫೈಲ್’ ವರದಿಯನ್ನು ಪ್ರಕಟಿಸಿತ್ತು.
ಆರ್ಥಿಕ ಇಲಾಖೆ ಅನುಮತಿಯಿಲ್ಲದೇ ಪೀಠೋಪಕರಣ ವಿಲೇವಾರಿ; ಸಚಿವಾಲಯದಿಂದ ನಿಯಮ ಉಲ್ಲಂಘನೆ
‘ಉಪಕರಣಗಳ ವಿಲೇವಾರಿಯಿಂದ ಬಂದ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಬೇಕಾದ್ದರಿಂದ ಈ ವಿಷಯದಲ್ಲಿ ಅಗತ್ಯವಿದ್ದ ಆರ್ಥಿಕ ಇಲಾಖೆಯ ಅನುಮತಿಯನ್ನು ಹೊಂದಿರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ದುರಸ್ತಿಗೆ ಅರ್ಹವಿದ್ದ ಉಪಕರಣಗಳನ್ನು ವಿಲೇವಾರಿಗೂ ಪೂರ್ವದಲ್ಲಿ ಇಲಾಖಾ ಮುಖ್ಯಸ್ಥರು 34ಬಿ ನಮೂನೆಯಲ್ಲಿ ದಾಖಲಿಸಿರುವುದಿಲ್ಲ. ದಾಸ್ತಾನಿನ ಮೌಲ್ಯವನ್ನು ನಮೂದಿಸಿರುವುದಿಲ್ಲ ಎಂದು ಆಕ್ಷೇಪಿಸಿತ್ತು.
ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮ 168(b)(ii)ರ ರೀತ್ಯಾ 34ಬಿ ನಮೂನೆಯನ್ನು ಲೆಕ್ಕಪರಿಶೋಧಕರಿಗೆ ಒದದಗಿಸಿರುವುದಿಲ್ಲ. ರಾಜ್ಯದಲ್ಲಿ ಹಲವಾರು ಚಾರಿಟಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದರೂ, ಎರಡೂ ಬಾರಿ ಒಂದೇ ಸಂಸ್ಥೆಗೆ ಅನುಪಯುಕ್ತ ಸಾಮಗ್ರಿಗಳನ್ನು ನೀಡಿರುವ ಹಿನ್ನಲೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
ಅದೇ ರೀತಿ ಕರ್ನಾಟಕ ವಿಧಾನಪರಿಷತ್ ಸಚಿವಾಲಯು ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಹೋಟೆಲ್ ನಿಸರ್ಗ ದವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ ಇವರಿಂದ ವಿದ್ಯುಚ್ಛಕ್ತಿ ಬಿಲ್‌ನಲ್ಲಿನ ಮೊತ್ತಕ್ಕಿಂತಲೂ ಕಡಿಮೆ ವಸೂಲಾತಿ ಮಾಡಿತ್ತು. ಈ ಹೋಟೆಲ್‌ಗೆ ಬಾಡಿಗೆಗೆ ನೀಡಿದ್ದ ಜಾಗಕ್ಕೆ ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಬಾಡಿಗೆಯೊಂದಿಗೇ ವಿದ್ಯುಚ್ಛಕ್ತಿ ಮತ್ತು ನೀರಿನ ಬಿಲ್‌ನ್ನು ಪ್ರತಿ ತಿಂಗಳೂ ಪಾವತಿಸಬೇಕಿತ್ತು. ಆದರೆ ಸಚಿವಾಲಯವು ವಿದ್ಯುಚ್ಛಕ್ತಿ ಬಿಲ್‌ನ್ನು ಮೀಟರಿಗನುಣವಾಗಿ ವಸೂಲಾತಿ ಮಾಡದೆಯೇ ಪ್ರತಿ ಯೂನಿಟ್‌ಗೆ 2,500 ರು.ನಂತೆ ನಿಗದಿಪಡಿಸಿ ವಸೂಲಾತಿ ಮಾಡಲಾಗಿದೆ ಎಂದು ವರದಿಯು ವಿವರಿಸಿತ್ತು.
ಕರ್ನಾಟಕ ವಿಧಾನಪರಿಷತ್ ಸಚಿವಾಲಯದ ಕೊಠಡಿಗಳ ನವೀಕರಣ ಕಾಮಗಾರಿಯನ್ನು ವಿಭಜಿಸಿ ನೀಡಿದ್ದರೂ ಕೆಟಿಪಿಪಿ ಕಾಯ್ದೆ ಪಾಲನೆ ಮಾಡಿಲ್ಲದಿರುವುದು ಕೆ.ಆರ್.ಐ.ಡಿ.ಎಲ್ ನಿಂದ ಬಳಕೆ ಪ್ರಮಾಣ ಪತ್ರವನ್ನು ಪಡೆದಿರಲಿಲ್ಲ. ಕಾರ್ಯಾದೇಶದಲ್ಲಿ ಉಲ್ಲೇಖಿಸಲಾದ ದಾಸ್ತಾನು/ ಪೀಠೋಪಕರಣಗಳನ್ನು ಭೌತಿಕವಾಗಿ ದಾಸ್ತಾನಿಗೆ ತೆಗೆದುಕೊಂಡಿರುವುದಿಲ್ಲ ಎಂಬುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದನ್ನು ಸ್ಮರಿಸಬಹುದು.
ಈ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ವಿಧಾನಪರಿಷತ್‌ನ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಪರಿಷತ್‌ನ ಕಾರ್ಯದರ್ಶಿ ಚರ್ಚೆಯನ್ನು ನಡೆಸಿಲ್ಲ ಮತ್ತು ಯಾವುದೇ ಉತ್ತರವನ್ನೂ ನೀಡಿಲ್ಲ ಎಂದು ಗೊತ್ತಾಗಿದೆ.