ಮಾಹಿತಿ ನೀಡಲು ವಿಳಂಬ, ನಿರಾಕರಣೆ; 36.85 ಲಕ್ಷ ರು. ದಂಡ ಪಾವತಿಸದ ಕಂದಾಯ ಇಲಾಖೆ ಅಧಿಕಾರಿಗಳು

ಬೆಂಗಳೂರು; ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ವಿಧಿಸಿದ್ದ ದಂಡ ಮೊತ್ತದ ಪೈಕಿ ಇದುವರೆಗೂ 36.85 ಲಕ್ಷ ರು. ಪಾವತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಮಾಹಿತಿ ಹಕ್ಕು ಕಾಯ್ದೆಯಡಿ ವಿಧಿಸಿರುವ ದಂಡದ ಮೊತ್ತವನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ ವಸೂಲು ಮಾಡಿ ಮಾಹಿತಿ ಹಕ್ಕು ಆಯೋಗಕ್ಕೆ ಪಾವತಿಸಬೇಕಿತ್ತು. ಆದರೆ ಕಂದಾಯ ಇಲಾಖೆಯೊಂದರಿಂದಲೇ 402 ಪ್ರಕರಣಗಳಲ್ಲಿ ವಿಧಿಸಿದ್ದ ದಂಡದ ಮೊತ್ತ ಇದುವರೆಗೂ ಪಾವತಿಯಾಗಿಲ್ಲ.

 

ದಂಡದ ಮೊತ್ತವನ್ನು ಪಾವತಿಸದ ಕಾರಣ ಪ್ರಕರಣಗಳು ಮುಕ್ತಾಯಗೊಂಡಿಲ್ಲ. ಅಲ್ಲದೇ ಅನಾವಶ್ಯಕವಾಗಿ ಮುಂದೂಡಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು  ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಹೆಚ್‌ ಪಿ ಸುಧಾಮ್‌ ದಾಸ್‌ ಅವರು ಬರೆದಿದ್ದ ಪತ್ರಕ್ಕೂ ಕಂದಾಯ ಇಲಾಖೆಯು ಯಾವುದೇ ಕಿಮ್ಮತ್ತು ನೀಡಿಲ್ಲ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.

 

ಕರ್ನಾಟಕ ಮಾಹಿತಿ ಆಯೋಗದಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕಲಂ 20(1)ರ ಡಿ ವಿಧಿಸಿರುವ ದಂಡದ ಮೊತ್ತವನ್ನು ವಸೂಲು ಮಾಡಬೇಕು ಎಂದು ಹೆಚ್‌ ಪಿ ಸುಧಾಮ್‌ ದಾಸ್‌ ಅವರು 2023ರ ಜನವರಿ 19ರಂದೇ ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರ ಬರೆದ ನಾಲ್ಕು ತಿಂಗಳ ನಂತರ ಕಾರ್ಯದರ್ಶಿಗಳು ಇದೀಗ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.

 

 

‘ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಈವರೆವಿಗೂ ಒಟ್ಟು 405 ಪ್ರಕರಣಗಳಲ್ಲಿ ವಿಧಿಸಲಾದ ದಂಡದ ಮೊತ್ತ 36,85,500 ರು.ಗಳು ಪಾವತಿಯಾಗಿರುವುದಿಲ್ಲ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ವೇತನದಿಂದ ಕಟಾವಣೆ ಮಾಡಲು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಹಲವು ಬಾರಿ ಪತ್ರಗಳ ಮೂಲಕ ಕೋರಲಾಗಿತ್ತು. ಆದರೆ ಇಲ್ಲಿಯವರೆಗೂ ಪೂರ್ಣ ಮೊತ್ತದ ದಂಡ ಪಾವತಿಯಾಗಿಲ್ಲ,’ ಎಂದು ಮಾಹಿತಿ ಆಯೋಗದ ಆಯುಕ್ತ ಹೆಚ್‌ ಪಿ ಸುಧಾಮ್‌ ದಾಸ್‌ ಅವರು 2023ರ ಜನವರಿ 19ರಂದು ಪತ್ರದಲ್ಲಿ ವಿವರಿಸಿದ್ದರು.

 

ಈ ಪತ್ರವನ್ನಾಧರಿಸಿ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಯರಾಮ್‌ ಅವರು 2023ರ ಏಪ್ರಿಲ್‌ 29ರಂದು ಎಲ್ಲಾ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. 36.85 ಲಕ್ಷ ರು.ದಂಡದ ಮೊತ್ತವನ್ನು ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯ ವೇತನದಲ್ಲಿ ಕಟಾಯಿಸಿ ದಾಖಲೆ ಸಹಿತ ಮಾಹಿತಿ ಆಯೋಗಕ್ಕೆ ತಿಳಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

 

 

ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 19ರಡಿ ಸಲ್ಲಿಕೆಯಾಗುವ ದ್ವಿತೀಯ ಮೇಲ್ಮನವಿ ಪ್ರಕರಣಗಳ ವಿಚಾರಣೆ ನಡೆಸಿ ನಿಗದಿಪಡಿಸಿದ್ದ ಕಾಲಮಿತಿ ನಂತರವೂ ಅಧಿಕಾರಿಗಳು ಮಾಹಿತಿ ನೀಡದೇ ವಿಳಂಬ ಧೋರಣೆ ಪ್ರದರ್ಶಿಸಿದ್ದರು. ಮಾಹಿತಿಯನ್ನು ವಿಳಂಬವಾಗಿ ಒದಗಿಸಿದ ಪ್ರಕರಣಗಳಿಗೆ ಮತ್ತು ಮಾಹಿತಿ ನೀಡದೇ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಗವು ಆಯಾ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಾರಣ ಕೇಳುವ ನೋಟೀಸ್‌ ನೀಡಲಾಗಿತ್ತು.

 

ಈ ನೋಟಿಸ್‌ಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನೀಡಿದ್ದ ಕಾರಣಗಳನ್ನು ಪರಿಶೀಲಿಸಿದ ನಂತರ ಮಾಹಿತಿ ಹಕ್ಕು ಅಧಿನಿಯಮದ ಕಲಂ 20(1)ರಂತೆ ದಂಡವನ್ನು ವಿಧಿಸಿತ್ತು. ಅಲ್ಲದೇ ಹಲವು ಪ್ರಕರಣಗಳಲ್ಲಿ ವಿಧಿಸಲಾದ ದಂಡದ ಮೊತ್ತವನ್ನು ಸಂಬಂಧಿಸಿದ ಬಟವಾಡೆ ಅಧಿಕಾರಿ/ ಮೇಲಾಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಯ ವೇತನದಿಂದ ಕಟಾಯಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕಿತ್ತು. ಆದರೆ ಆಯೋಗದ ನಿರ್ದೇಶನವನ್ನು ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪಾಲಿಸದೇ ಉಲ್ಲಂಘಿಸಿದ್ದರು ಎಂಬ ಸಂಗತಿಯು ಮಾಹಿತಿ ಆಯೋಗದ ಆಯುಕ್ತರು ಮತ್ತು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯ ಪತ್ರದಿಂದ ತಿಳಿದು ಬಂದಿದೆ.

 

‘ಹಲವು ಪ್ರಕರಣಗಳಲ್ಲಿ ವಿಧಿಸಲಾದ ದಂಡದ ಮೊತ್ತವನ್ನು ಸಂಬಂಧಿಸಿದ ಬಟವಾಡೆ ಅಧಿಕಾರಿ/ಮೇಲಾಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಯ ವೇತನದಿಂದ ಕಟಾಯಿಸಿ ಆಯೋಗಕ್ಕೆ ವರದಿಯನ್ನು ಕಳಿಸದೇ ಇರುವುದರಿಂದ ಇಂತಹ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸಾಧ್ಯವಾಗದೇ ಪದೇ ಪದೇ ಪ್ರಕರಣಗಳನ್ನು ಅನಾವಶ್ಯಕವಾಗಿ ಮುಂದೂಡುವ ಸಂದರ್ಭ ಉದ್ಭವವಾಗುತ್ತಿದೆ,’ ಎಂದು ಮಾಹಿತಿ ಆಯೋಗದ ಆಯುಕ್ತರು ಪತ್ರದಲ್ಲಿ ವಿವರಿಸಿದ್ದರು.

the fil favicon

SUPPORT THE FILE

Latest News

Related Posts