ಆರ್ಥಿಕ ಇಲಾಖೆ ಅನುಮತಿಯಿಲ್ಲದೇ ಪೀಠೋಪಕರಣ ವಿಲೇವಾರಿ; ಸಚಿವಾಲಯದಿಂದ ನಿಯಮ ಉಲ್ಲಂಘನೆ

ಬೆಂಗಳೂರು; ಕರ್ನಾಟಕ ವಿಧಾನಪರಿಷತ್‌ ಸಚಿವಾಲಯಕ್ಕೆ ಸೇರಿರುವ ಅನುಪಯುಕ್ತ ಪೀಠೋಪಕರಣಗಳು ಮತ್ತು ಉಪಕರಣಗಳನ್ನು ವಿಲೇವಾರಿ ಮಾಡುವ ಮುನ್ನ ಆರ್ಥಿಕ ಇಲಾಖೆಯ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಲೆಕ್ಕಪರಿಶೋಧಕರು ಬೆಳಕಿಗೆ ತಂದಿದ್ದಾರೆ.

 

ಕರ್ನಾಟಕ ವಿಧಾನಪರಿಷತ್ ಸಚಿವಾಲಯಕ್ಕೆ ಸಂಬಂಧಿಸಿದಂತೆ 2013-14ರಿಂದ 2014-15ರ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಿರುವ ಲೆಕ್ಕಪರಿಶೋಧಕರು ಸರ್ಕಾರದ ಆದೇಶ ಪಡೆಯದೆ ಪೀಠೋಪಕರಣಗಳು ಮತ್ತು ಇತರೆ ಉಪಕರಣಗಳನ್ನು ಚಾರಿಟಬಲ್ ಸಂಸ್ಥೆಗಳಿಗೆ ನೀಡಿರುವುದನ್ನೂ ಪತ್ತೆ ಹಚ್ಚಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಉಪಕರಣಗಳ ವಿಲೇವಾರಿಯಿಂದ ಬಂದ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಬೇಕಾದ್ದರಿಂದ ಈ ವಿಷಯದಲ್ಲಿ ಅಗತ್ಯವಿದ್ದ ಆರ್ಥಿಕ ಇಲಾಖೆಯ ಅನುಮತಿಯನ್ನು ಹೊಂದಿರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ದುರಸ್ತಿಗೆ ಅರ್ಹವಿದ್ದ ಉಪಕರಣಗಳನ್ನು ವಿಲೇವಾರಿಗೂ ಪೂರ್ವದಲ್ಲಿ ಇಲಾಖಾ ಮುಖ್ಯಸ್ಥರು 34ಬಿ ನಮೂನೆಯಲ್ಲಿ ದಾಖಲಿಸಿರುವುದಿಲ್ಲ. ದಾಸ್ತಾನಿನ ಮೌಲ್ಯವನ್ನು ನಮೂದಿಸಿರುವುದಿಲ್ಲ ಎಂದು ಆಕ್ಷೇಪಿಸಿದೆ.

 

ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮ 168(b)(ii)ರ ರೀತ್ಯಾ 34ಬಿ ನಮೂನೆಯನ್ನು ಲೆಕ್ಕಪರಿಶೋಧಕರಿಗೆ ಒದದಗಿಸಿರುವುದಿಲ್ಲ. ರಾಜ್ಯದಲ್ಲಿ ಹಲವಾರು ಚಾರಿಟಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದರೂ, ಎರಡೂ ಬಾರಿ ಒಂದೇ ಸಂಸ್ಥೆಗೆ ಅನುಪಯುಕ್ತ ಸಾಮಗ್ರಿಗಳನ್ನು ನೀಡಿರುವ ಹಿನ್ನಲೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಅದೇ ರೀತಿ ಕರ್ನಾಟಕ ವಿಧಾನಪರಿಷತ್ ಸಚಿವಾಲಯು ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಹೋಟೆಲ್ ನಿಸರ್ಗ ದವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ ಇವರಿಂದ ವಿದ್ಯುಚ್ಛಕ್ತಿ ಬಿಲ್‌ನಲ್ಲಿನ ಮೊತ್ತಕ್ಕಿಂತಲೂ ಕಡಿಮೆ ವಸೂಲಾತಿ ಮಾಡಿತ್ತು. ಈ ಹೋಟೆಲ್‌ಗೆ ಬಾಡಿಗೆಗೆ ನೀಡಿದ್ದ ಜಾಗಕ್ಕೆ ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿರುವ ಬಾಡಿಗೆಯೊಂದಿಗೇ ವಿದ್ಯುಚ್ಛಕ್ತಿ ಮತ್ತು ನೀರಿನ ಬಿಲ್‌ನ್ನು ಪ್ರತಿ ತಿಂಗಳೂ ಪಾವತಿಸಬೇಕಿತ್ತು. ಆದರೆ ಸಚಿವಾಲಯವು ವಿದ್ಯುಚ್ಛಕ್ತಿ ಬಿಲ್‌ನ್ನು ಮೀಟರಿಗನುಣವಾಗಿ ವಸೂಲಾತಿ ಮಾಡದೆಯೇ ಪ್ರತಿ ಯೂನಿಟ್‌ಗೆ 2,500 ರು.ನಂತೆ ನಿಗದಿಪಡಿಸಿ ವಸೂಲಾತಿ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ವಿಧಾನಪರಿಷತ್‌ ಸಚಿವಾಲಯದ ಕೊಠಡಿಗಳ ನವೀಕರಣ ಕಾಮಗಾರಿಯನ್ನು ವಿಭಜಿಸಿ ನೀಡಿದ್ದರೂ ಕೆಟಿಪಿಪಿ ಕಾಯ್ದೆ ಪಾಲನೆ ಮಾಡಿಲ್ಲದಿರುವುದು ಕೆ.ಆರ್.ಐ.ಡಿ.ಎಲ್ ನಿಂದ ಬಳಕೆ ಪ್ರಮಾಣ ಪತ್ರವನ್ನು ಪಡೆದಿರಲಿಲ್ಲ. ಕಾರ್ಯಾದೇಶದಲ್ಲಿ ಉಲ್ಲೇಖಿಸಲಾದ ದಾಸ್ತಾನು/ ಪೀಠೋಪಕರಣಗಳನ್ನು ಭೌತಿಕವಾಗಿ ದಾಸ್ತಾನಿಗೆ ತೆಗೆದುಕೊಂಡಿರುವುದಿಲ್ಲ ಎಂಬುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದನ್ನು ಸ್ಮರಿಸಬಹುದು.

 

ಈ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ  ವಿಧಾನಪರಿಷತ್‌ನ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಪರಿಷತ್‌ನ ಕಾರ್ಯದರ್ಶಿ ಚರ್ಚೆಯನ್ನು ನಡೆಸಿಲ್ಲ ಮತ್ತು ಯಾವುದೇ ಉತ್ತರವನ್ನೂ ನೀಡಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts