ಸರ್ಕಾರಕ್ಕೆ ಮೋಸ; 199 ಎಕರೆ, ಕೋಟ್ಯಂತರ ರುಪಾಯಿ ಮೌಲ್ಯದ ಕಟ್ಟಡ, ಕಡಿಮೆ ಬೆಲೆಗೆ ಮಾರಾಟ ಆರೋಪ

photo credit;rashokofficial twitter account

ಬೆಂಗಳೂರು; ಸರ್ಕಾರಕ್ಕೆ ಸೇರಿದ 199 ಎಕರೆ ವಿಸ್ತೀರ್ಣದ ಕೈಗಾರಿಕೆ ಭೂಮಿ ಮತ್ತು ಕೋಟ್ಯಂತರ ರುಪಾಯಿ ಮೌಲ್ಯದ ಕಟ್ಟಡಗಳನ್ನು ಮೋಸದಿಂದ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ದೂರು ಸಲ್ಲಿಕೆಯಾಗಿ ತಿಂಗಳಾದರೂ ಕಂದಾಯ ಇಲಾಖೆಯು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಇದೀಗ ಬಹಿರಂಗವಾಗಿದೆ.

 

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕಂಪನಿ ನಡುವಿನ ಮೂಲ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದರೂ ಕಂದಾಯ, ಕೈಗಾರಿಕೆ ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತವು ಯಾವುದೇ ಕ್ರಮಕೈಗೊಳ್ಳದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

ಕಡಿಮೆ ಬೆಲೆಗೆ ಮಾರಾಟ ಮಾಡಿ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ಜೀಕೆ ಅಸೋಸಿಯೇಟ್ಸ್‌ ಅವರು ಸಲ್ಲಿಸಿದ್ದ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಾಗಿದ್ದ ಆರ್‍‌ ಅಶೋಕ್‌ ಅವರು ಎರಡು ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ಕಂದಾಯ ಇಲಾಖೆಯು ಇದುವರೆಗೂ ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜೀಕೆ ಅಸೋಸಿಯೇಟ್ಸ್‌ ಅವರು ನೀಡಿದ್ದ ದೂರಿನ ಮೇಲೆಯೇ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಯು ‘ ಮನವಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವರು ನಿರ್ದೇಶಿಸಿದ್ದಾರೆ,’ ಎಂದು ಇಲಾಖೆಯ ಕಾರ್ಯದರ್ಶಿಗೆ ಟಿಪ್ಪಣಿ ಹಾಕಿರುವುದು ದೂರಿನಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

1941-42ರಲ್ಲಿ ಅಂದಿನ ಮೈಸೂರು ಸರ್ಕಾರವು 1894ರ ಭೂ ಸ್ವಾಧೀನ ಕಾಯ್ದೆಯ ಸಾರ್ವಜನಿಕ ಉದ್ದೇಶದ ಷರತ್ತಿನಡಿಯಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ 500 ಎಕರೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಸಾರ್ವಜನಿಕರಿಂದ ಭೂ ಸ್ವಾಧೀನಪಡಿಸಿ ಮೈಸೂರು ಕಿರ್ಲೋಸ್ಕರ್‍‌ ಕಂಪನಿಗೆ ನೀಡಿತ್ತು. ಅಲ್ಲದೆ ಉದ್ಯಮ ಮುಚ್ಚಿದ ನಂತರ ಭೂಮಿ ಮತ್ತು ಕಟ್ಟಡಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂಬ ಷರತ್ತಿನೊಂದಿಗೆ 500 ಎಕರೆ ಭೂಮಿಯನ್ನು ನೀಡಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಕಿರ್ಲೋಸ್ಕರ್‍‌ ಕಂಪನಿಯು 2001ರಲ್ಲಿ ತನ್ನ ಉತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಿತ್ತು. ಆದರೆ ಇಲ್ಲಿಯವರೆಗೆ ಷರತ್ತಿನ ಪ್ರಕಾರ ಜಮೀನು, ಕಟ್ಟಡಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿಲ್ಲ. ಇದರಲ್ಲಿ ಸರ್ಕಾರಕ್ಕೆ ಸೇರಿದ ಸುಮಾರು 199 ಎಕರೆ ಕೈಗಾರಿಕೆ ಭೂಮಿಯೂ ಇದೆ. ‘ ಕೈಗಾರಿಕೆ ಭೂಮಿ ಹಾಗೂ ಕೋಟ್ಯಂತರ ರು ಬೆಲೆಬಾಳುವ ಕಟ್ಟಡಗಳನ್ನು ಮೋಸ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಸರ್ಕಾರದೊಂದಿಗಿನ ಮೂಲ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಮತ್ತು ಇದು ಅಪರಾಧ ಕೃತ್ಯವಾಗಿದೆ,’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಈ ಮಧ್ಯೆ ನಗರಾಭಿವೃದ್ದಿ ಸಚಿವಾಲಯ ಹಾಗೂ ಪುನರುಜ್ಜೀವನ ವಿಭಾಗದ ಕಾರ್ಯದರ್ಶಿಯ ಅನುಮತಿ ಪಡೆಯದೇ ಕೈಗಾರಿಕೆ ಭೂಮಿಯಲ್ಲಿ ಕಾನೂನುಬಾಹಿರವಾಗಿ ವಸತಿ ತಾಣಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬುದು ದೂರಿನಿಂದ ತಿಳಿದು ಬಂದಿದೆ.

 

ಸುಮಾರು 210 ಎಕರೆ ವಿಸ್ತೀರ್ಣದ ಕೈಗಾರಿಕೆ ಜಮೀನುಗಳನ್ನು ಮೋಸದಿಂದ ಮಾರಾಟ ಮಾಡಿ ಸರ್ಕಾರಕ್ಕೆ 1,000 ಕೋಟಿ ರು. ನಷ್ಟವುಂಟು ಮಾಡಲಾಗಿದೆ ಎಂಬ ದೂರಿನ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಿದ್ದರು.

 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಮೈಸೂರು ಕಿರ್ಲೋಸ್ಕರ್‌ ಕಂಪನಿಗೆ 1950ರಲ್ಲಿ 210 ಎಕರೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿತ್ತು. ಆದರೆ ಆ ಜಮೀನುಗಳನ್ನು 2008ರಲ್ಲಿ ಮೋಸದಿಂದ ಮಾರಾಟ ಮಾಡಲಾಗಿದೆ ಎಂದು ಮಲ್ಲಾರಿ ಆರ್‌ ಎನ್‌ ಎಂಬುವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

 

ಈ ದೂರನ್ನಾಧರಿಸಿ ತನಿಖೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು 2022ರ ಸೆ.21ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು.

 

‘ಸುಮಾರು 210 ಎಕರೆ ವಿಸ್ತೀರ್ಣದ ಕೈಗಾರಿಕೆ ಜಮೀನುಗಳನ್ನು 2008ರಲ್ಲಿ ಮೋಸದಿಂದ ಮಾರಿ ಸರ್ಕಾರಕ್ಕೆ ಸುಮಾರು 1,000 ಕೋಟಿ ನಷ್ಟ ಮಾಡಲಾಗಿದೆ. ಇದು 1894 ಭೂಸ್ವಾಧೀನ ಕಾಯ್ದೆ ಹಾಗೂ ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಉಲ್ಲಂಘನೆ ಆಗಿದೆ. ಇದು ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು , ದಾವಣಗೆರೆ ಜಿಲ್ಲಾಧಿಕಾರಿ, ಉಪ ಆಯುಕ್ತರು, ಹರಿಹರ ನಗರದ ತಹಶೀಲ್ದಾರ್‌ ಇವರ ಕರ್ತವ್ಯಲೋಪ, ನಿರ್ಲಕ್ಷ್ಯತೆ ಕಂಡು ಬಂದಿದೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದೇ ದೂರನ್ನು ಕಂದಾಯ ಸಚಿವ ಆರ್‌ ಅಶೋಕ್‌ ಅವರಿಗೂ ಖುದ್ದು ನೀಡಿದ್ದರು.

 

210 ಎಕರೆ ಸರ್ಕಾರಿ ಜಮೀನು ಮಾರಾಟ, 1,000 ಕೋಟಿ ನಷ್ಟ; ವರದಿ ಸಲ್ಲಿಸಲು ನಿರ್ದೇಶನ

2005 ರಲ್ಲಿ ಪ್ರಕರಣವೊಂದರಲ್ಲಿ ಅಧಿಕೃತ ಲಿಕ್ವಿಡೇಟರ್ ಇಲ್ಲದಿದ್ದರೆ ಎಲ್ಲಾ ನೋಂದಣಿಗಳು ಕಾನೂನುಬಾಹಿರ ಎಂದು ಹೈಕೋರ್ಟ್‌ ಹೇಳಿದ್ದರೂ ನೇರಾನೇರ ಉಲ್ಲಂಘಿಸಲಾಗಿದೆ. ಹರಿಹರ ಪುರಸಭೆಯು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯದೆ ಕಾನೂನುಬಾಹಿರವಾಗಿ 156 ಎಕರೆ ಭೂಮಿಗೆ ಖಾತೆಗಳನ್ನುಮಾಡಿದೆ.

 

ಅದೇ ರೀತಿ ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ಸರ್ವೆ ನಂಬರ್‌ 50ರಲ್ಲಿ ವಸತಿ ಬಡಾವಣೆ ವಿನ್ಯಾಸಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಿದೆ.ನಗರಾಭಿವೃದ್ಧಿ ಸಚಿವಾಲಯದಿಂದ ಅನುಮೋದನೆ ಇರದಿದ್ದರೂ ಕೈಗಾರಿಕಾ ಭೂಮಿಯಲ್ಲಿ  36 ಗುಂಟೆಯಲ್ಲಿ ವಸತಿ ಬಡಾವಣೆ ಕೆಲಸಗಳು ಪ್ರಾರಂಭವಾಗಿವೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

the fil favicon

SUPPORT THE FILE

Latest News

Related Posts