ಬೆಂಗಳೂರು; ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ೧೦.೦೦ ಕೋಟಿ ರು. ವೆಚ್ಚದಲ್ಲಿ ನೀಟ್, ಜೆಇಇ, ಸಿಇಟಿ ಪರೀಕ್ಷೆ ತರಬೇತಿ ನೀಡುವುದಕ್ಕೆ ಸಂಬಂಧಿಸಿದಂತೆ ಖಾಸಗಿ ತರಬೇತಿ ಕೇಂದ್ರಗಳ ಆಯ್ಕೆ ಮಾಡಲು ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅಕ್ರಮಗಳು ನಡೆದಿವೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಗುಂಪೊಂದು ನಿರ್ದಿಷ್ಟ ಕಂಪನಿಗಳಿಗೆ ಟೆಂಡರ್ ನೀಡುವ ಉದ್ದೇಶದಿಂದ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾತ್ರವಲ್ಲದೇ ಟೆಂಡರ್‍ನ್ನು ಪದೇಪದೇ ತಿದ್ದುಪಡಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಈ ಸಂಬಂಧ ಗೈನ್ ಅಪ್ ಖಾಸಗಿ ಕಂಪನಿಯು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಸೇರಿದಂತೆ ಇಲಾಖೆಯ ಆಯುಕ್ತರು, ಕಾರ್ಯನಿರ್ವಾಹಕ ನಿರ್ದೇಶಕರಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ಮತ್ತು ಟೆಂಡರ್ ದಾಖಲಾತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಟೆಂಡರ್‍ನಲ್ಲಿ ಭಾಗವಹಿಸಿರುವ ಕೆಲ ಕಂಪನಿಗಳು ಟೆಂಡರ್‍ಗಿಟ್ಟ ಮೂಲ ಮೊತ್ತಕ್ಕಿಂತಲೂ ಶೇ.40 ಕ್ಕಿಂತಲೂ ಕಡಿಮೆ ನಮೂದಿಸಿದೆ. ಅಲ್ಲದೇ ಒಂದೇ ಟೆಂಡರ್‍ನ್ನು ಹಲವು ಕಂಪನಿಗಳಿಗೆ ವಿಭಜಿಸುವ ಮೂಲಕ ಟೆಂಡರ್ ನಿಯಮಾವಳಿಗಳನ್ನು ನೇರಾನೇರ ಉಲ್ಲಂಘನೆ ಮಾಡಿರುವುದು ದೂರಿನಿಂದ ತಿಳಿದು ಬಂದಿದೆ.
ಈಗಾಗಲೇ ಆಹ್ವಾನಿಸಿರುವ ಟೆಂಡರ್‍ನಲ್ಲಿ ಸ್ಪಷ್ಟ ಮಾಹಿತಿ, ಮಾನದಂಡಗಳು, ನಿಯಮಗಳ ಉಲ್ಲೇಖವಾಗಿಲ್ಲ. ನೀಟ್ ಪರೀಕ್ಷೆ ಇದೇ ಮೇ 7 ಕ್ಕೆ ನಿಗದಿಯಾಗಿದ್ದರೂ ವಿಳಂಬವಾಗಿ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ನಿಯಮಾವಳಿಗಳ ಪ್ರಕಾರ 60 ದಿನದೊಳಗೆ ತರಬೇತಿ ನೀಡಬೇಕಿತ್ತು. ಆದರೀಗ ವಿಳಂಬವಾಗಿ ಟೆಂಡರ್ ಆಹ್ವಾನಿಸಿರುವುದರಿಂದ ತರಬೇತಿ ದಿನದ ಅವಧಿಯೂ ಇಳಿಕೆಯಾಗಿದೆ. ಇದರ ಪ್ರಕಾರ ಕೇವಲ 15 ದಿನದೊಳಗೇ ತರಬೇತಿ ಪೂರ್ಣಗೊಳಿಸುವ ಅನಿವಾರ್ಯತೆ ಇದೆ. ಅತ್ಯಲ್ಪ ದಿನದಲ್ಲಿ ತರಬೇತಿ ನೀಡಲು ಹೇಗೆ ಸಾಧ್ಯ, ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಹೇಗೆ ಸಜ್ಜುಗೊಳಿಸಲಾಗುತ್ತದೆ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.
‘ಆರ್ಥಿಕ ಬಿಡ್‌ನಲ್ಲಿ ಸಲ್ಲಿಸಿರುವ ಎಲ್-೧ ಕಂಪನಿ ಸಲ್ಲಿಸಿರುವ ಮೊತ್ತಕ್ಕೆ ಎಲ್ 1 , ಎಲ್ 2 , ಎಲ್ 3 ಅವರಿಗೂ ಕಾರ್ಯಾದೇಶ ನೀಡಲು ಇಲಾಖೆಯ ಅಧಿಕಾರಿಗಳ ಗುಂಪೊಂದು ಮುಂದಾಗಿದೆ. ಆದರೇ ಇದು ಒಂದೇ ಟೆಂಡರ್ ಆಗಿದೆ. ಈ ಟೆಂಡರ್‍ನಲ್ಲಿ ಕೆಲಸವನ್ನು ಇನ್ನಿತರೆ 2 ಬಿಡ್‌ದಾರರಿಗೆ ಎಲ್ 1 ಸಲ್ಲಿಸಿರುವ ಮೊತ್ತಕ್ಕೆ ಹಂಚಲು ಬರುವುದಿಲ್ಲ. ಇದು ಟೆಂಡರ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ,’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿಯುಸಿಯ 10,364 ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಇ, ಸಿಇಟಿ ಪರೀಕ್ಷೆ ತರಬೇತಿ ನೀಡಲು 2023 ರ ಮಾರ್ಚ್ 14 ರಂದು ಟೆಂಡರ್ ಆಹ್ವಾನಿಸಿತ್ತು.60 ದಿನಗಳ ಅವಧಿಯೊಳಗೆ ತರಬೇತಿ ನೀಡಲು ಸುಮಾರು 10 ಕೋಟಿ ರು ವೆಚ್ಚದಲ್ಲಿ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಒಟ್ಟು 8 ಕಂಪನಿಗಳು ಭಾಗವಹಿಸಿದ್ದವು.
ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ
ಈ ಟೆಂಡರ್ ನಲ್ಲಿ ಒಟ್ಟು 12 ಕೇಂದ್ರಗಳು ಎಂದು ನಮೂದಿಸಿ ಆಹ್ವಾನಿಸಲಾಗಿತ್ತು. ಪ್ರತಿ ಬಿಡ್‌ದಾರರಿಗೆ 4 ಕೇಂದ್ರಗಳನ್ನು ನೀಡಲಾಗುವುದು ಎಂದು ಟೆಂಡರ್ ತಿದ್ದುಪಡಿ ಮಾಡಲಾಗಿತ್ತು. ಅಲ್ಲದೇ ಎಲ್‌ಸಿಎಸ್ ನಿಯಮಾನುಸಾರ ಮೂಲಕ ಟೆಂಡರ್ ಕರೆದಿದ್ದು, 12 ಸೆಂಟರ್‍ಗಳಿಗೆ ಲಂಪ್‌ಸಮ್ ದರವನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಯಾವ ನಿಯಮಾವಳಿಗಳ ಪ್ರಕಾರ ಬಿಡ್‌ದಾರರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದಿರುವುದು ಶಂಕೆಗೆ ದಾರಿಮಾಡಿಕೊಟ್ಟಿದೆ.
ಪ್ರತಿ ಬಿಡ್‌ದಾರರಿಗೆ 4 ಕೇಂದ್ರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದರೂ ಸಹ ಈ ಕೇಂದ್ರಗಳನ್ನು ಯಾವ ಬಿಡ್‌ದಾರರಿಗೆ ಹೇಗೆ ಹಂಚಿಕೆ ಮಾಡಲಾಗುತ್ತದೆ, ಈ ಕೇಂದ್ರಗಳ ಮ್ಯಾಪಿಂಗ್, ಆನ್‌ಲೈನ್, ಆಫ್‌ಲೈನ್ ವಿದ್ಯಾರ್ಥಿಗಳ ಸಂಖ್ಯೆ, ತರಬೇತಿ ಹೇಗೆ ನೀಡಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.
ಅದೇ ರೀತಿ 12 ಕೇಂದ್ರಗಳಿಗೆ ಇಎಂಡಿ ಹಣವನ್ನು ಸಂದಾಯ ಮಾಡಿಕೊಂಡಿರುವ ಇಲಾಖೆಯು ಕೇವಲ 4 ಕೇಂದ್ರಗಳನ್ನು ಎಲ್ 1 , ಎಲ್ 2 ಎಲ್ 3 ಆಗಿ ಹೊರಹೊಮ್ಮಿರುವ ಬಿಡ್‌ದಾರರಿಗೆ ನೀಡಲು ಸಿದ್ಧತೆ ನಡೆಸಲಾಗಿದೆ. ಕೆಟಿಪಿಪಿ ನಿಯಮಗಳಲ್ಲಿ ಇದಕ್ಕೆ ಎಳ್ಳಷ್ಟೂ ಅವಕಾಶಗಳಿಲ್ಲ. ಆದರೂ ಅಧಿಕಾರಿಗಳ ಗುಂಪೊಂದು ನಿರ್ದಿಷ್ಟ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂದು ಗೊತ್ತಾಗಿದೆ.
ಇದೇ ಮೇ 7 ಕ್ಕೆ ನೀಟ್ ಪರೀಕ್ಷೆ ಆರಂಭವಾಗಲಿದೆ. 240 ಗಂಟೆಗಳ ಕಾಲ ಆನ್‌ಲೈನ್ ತರಬೇತಿಯನ್ನು ದಿನಕ್ಕೆ ಎಷ್ಟು ಅವಧಿ ಪಾಠ ಮಾಡಬೇಕು, ಎಷ್ಟು ದಿನದಲ್ಲಿ ಪೂರ್ಣಗೊಳಿಸಬೇಕು ಎಂಬುದರ ಬಗ್ಗೆಯೂ ಟೆಂಡರ್‍ನಲ್ಲಿ ಮಾಹಿತಿ ಒದಗಿಸಿಲ್ಲ ಎಂದು ತಿಳಿದು ಬಂದಿದೆ.
‘ಆರ್ಥಿಕ ಬಿಡ್‌ನಲ್ಲಿ ಎಲ್ ೧ ಬಿಡ್‌ದಾರರು ಸಲ್ಲಿಸಿರುವ ಮೊತ್ತಕ್ಕೆ ಎಲ್ 1 , ಎಲ್ 2 ಮತ್ತು ಎಲ್ 3 ಗೂ ಕಾರ್ಯಾದೇಶ ನೀಡಲು ಹೊರಟಿರುವುದೇ ಅಕ್ರಮ ನಡೆದಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಇದು ಒಂದೇ ಟೆಂಡರ್ ನಲ್ಲಿನ ಕೆಲಸವನ್ನು ಇನ್ನಿತರೆ 2 ಬಿಡ್‌ದಾರರಿಗೆ ಎಲ್ 1 ಬಿಡ್‌ದಾರರು ಸಲ್ಲಿಸಿರುವ ಮೊತ್ತಕ್ಕೆ ಹಂಚಿಕೆ ಮಾಡಲು ಅವಕಾಶಗಳೇ ಇಲ್ಲ. ಒಂದೊಮ್ಮೆ ಆ ರೀತಿ ಮಾಡಿದರೆ ಅದು ಟೆಂಡರ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ,’ ಎನ್ನುತ್ತಾರೆ ಕಂಪನಿಯ ನಿರ್ದೇಶಕರೊಬ್ಬರು.