ಗಡುವು ಮೀರಿದರೂ ವಸೂಲಾಗದ 28.50 ಲಕ್ಷ ರು.; ಕಸದಬುಟ್ಟಿ ಸೇರಿದ ಸಭಾಪತಿಯ ಕಟ್ಟಾಜ್ಞೆ

ಬೆಂಗಳೂರು; ಗಣಕ ಕೇಂದ್ರದ ಹೊರ ಗುತ್ತಿಗೆ ನೌಕರರಿಗೆ ಹೆಚ್ಚುವರಿಯಾಗಿ ಪಾವತಿಸಿರುವ 28.50 ಲಕ್ಷ ರು.ಗಳನ್ನು ವಾರದೊಳಗೆ ವಸೂಲು ಮಾಡಬೇಕು ಎಂದು ನೀಡಿದ್ದ ಗಡುವು ಮೀರಿದರೂ ಬಿಡಿಗಾಸನ್ನೂ ವಸೂಲು ಮಾಡದ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯದ ಅಧಿಕಾರಿಶಾಹಿಯು ಸಭಾಪತಿಗಳ ಕಟ್ಟಾಜ್ಞೆಯನ್ನೂ ಉಲ್ಲಂಘಿಸಿದೆ.

 

ಹೊರಗುತ್ತಿಗೆ ನೌಕರರಿಗೆ ನಿಯಮ ಮೀರಿ ವೇತನ ಪಾವತಿಯಾಗಿದೆ ಎಂದು ತನಿಖಾಧಿಕಾರಿ ನೀಡಿದ್ದ ವರದಿಯನ್ನು ಕಾನೂನು ಇಲಾಖೆಯೂ ಸಹ ಎತ್ತಿ ಹಿಡಿದಿರುವ ಬೆನ್ನಲ್ಲೇ ಹೆಚ್ಚುವರಿ ವೇತನ ವಸೂಲಾಗದಿರುವುದು ಮುನ್ನೆಲೆಗೆ ಬಂದಿದೆ.

 

ಕಳೆದ ಎರಡು ವರ್ಷಗಳ ಹಿಂದೆಯೇ ‘ದಿ ಫೈಲ್‌’ ಹೊರಗೆಳೆದಿದ್ದ ವೇತನ ಹಗರಣದ ಕುರಿತು ತಪಾಸಣೆ ನಡೆಸಿದ್ದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಗೆ ಯಾವ ವಿವರಗಳನ್ನೂ ಒದಗಿಸದ ವಿಧಾನ ಪರಿಷತ್‌ ಸಚಿವಾಲಯದ ಅಧಿಕಾರಶಾಹಿಯು ಕಳ್ಳಾಟವನ್ನು ಮುಂದುವರೆಸಿದೆ.

 

ಹೊರಗುತ್ತಿಗೆ ನೌಕರರಿಗೆ ಪಾವತಿಸಿದ್ದ 48.42 ಲಕ್ಷ ರು ಪೈಕಿ ಒಟ್ಟು 28.50 ಲಕ್ಷ ರು. ಹೆಚ್ಚುವರಿಯಾಗಿ ಪಾವತಿಯಾಗಿತ್ತು. ಈ ಹಣವನ್ನು ವಾರದೊಳಗೆ ವಸೂಲು ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು 2023ರ ಮಾರ್ಚ್‌ 7ರಂದು ಟಿಪ್ಪಣಿ ಹೊರಡಿಸಿದ್ದರು. ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಣ ವಸೂಲು ಮಾಡಬೇಕು ಎಂದು ಕಾರ್ಯದರ್ಶಿ ಕೆ ಆರ್‌ ಮಹಾಲಕ್ಷ್ಮಿ ಅವರಿಗೆ ಸೂಚಿಸಿದ್ದರು. ಆದರೆ ಇದುವರೆಗೂ ಬಿಡಿಗಾಸನ್ನೂ ವಸೂಲು ಮಾಡದೆಯೇ ಸಭಾಪತಿಗಳ ಟಿಪ್ಪಣಿಯನ್ನೂ ಕಸದ ಬುಟ್ಟಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಿತ್ತು. ಇದನ್ನು ಆರ್ಥಿಕ ಇಲಾಖೆಯೂ ಆಕ್ಷೇಪಿಸಿತ್ತು.

 

ಈ ಕುರಿತು ಸತ್ಯಾಸತ್ಯತೆಯನ್ನು ತನಿಖೆ ಮಾಡಲು ನೇಮಿಸಿದ್ದ ಕೆಎಎಸ್‌ ಅಧಿಕಾರಿ ಜಿ ಎನ್‌ ಮಂಜುನಾಥಸ್ವಾಮಿ ಅವರು ವರದಿ ಸಲ್ಲಿಸಿದ್ದರು.  ಹೊರಗುತ್ತಿಗೆ ನೌಕರರಿಗೆ ಪಾವತಿಸಿದ್ದ 48.42 ಲಕ್ಷ ರು ಪೈಕಿ ಒಟ್ಟು 28.50 ಲಕ್ಷ ರು. ಹೆಚ್ಚುವರಿಯಾಗಿ ಪಾವತಿಯಾಗಿತ್ತು. ಇದು ಸರ್ಕಾರಕ್ಕೆ ಆದ ಆರ್ಥಿಕ ನಷ್ಟ ಎಂದು ತನಿಖಾಧಿಕಾರಿ ವರದಿಯಲ್ಲಿ ವಿವರಿಸಿದ್ದರು.  ಇದೀಗ ಕಾನೂನು ಇಲಾಖೆಯು ಈ ವರದಿಯನ್ನು ಎತ್ತಿ ಹಿಡಿದಿದೆಯಲ್ಲದೇ ತನಿಖಾಧಿಕಾರಿಯ ವರದಿಯು ಸಮರ್ಪಕವಾಗಿದೆ ಎಂದು ಸ್ಪಷ್ಟವಾಗಿ ಅಭಿಪ್ರಾಯ (ಸಂಖ್ಯೆ;ಲಾ/141/ಅಭಿಪ್ರಾಯ/2022 ದಿನಾಂಕ 27.06.2022) ನೀಡಿರುವುದು ಸಭಾಪತಿ ಹೊರಟ್ಟಿ ಅವರು ಹೊರಡಿಸಿರುವ ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಿರುವುದು ಗೊತ್ತಾಗಿದೆ. ಈ ಸಂಬಂಧ ತಕರಾರು ತೆಗೆದಿರುವ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

 

 

ಅಲ್ಲದೆ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಂಡಿರುವ ವಿಧಾನಪರಿಷತ್‌ ಸಚಿವಾಲಯದ ಅಧಿಕಾರಿಗಳು ಸ್ವಜನಪಕ್ಷಪಾತ ಎಸಗಿರುವ ಆರೋಪಕ್ಕೂ ಗುರಿಯಾಗಿದ್ದಾರೆ. ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಯಾವುದೇ ಪರೀಕ್ಷೆ ಮತ್ತು ಸಂದರ್ಶನಗಳನ್ನೂ ನಡೆಸಿಲ್ಲ ಎಂದು ತಿಳಿದು ಬಂದಿದೆ.

 

 

 

ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸತೀಶ್‌ ಸಿ, ಶೃತಿ ಎಸ್‌, ಪ್ರತೀಕ್‌ ಶೆಟ್ಟಿ, ಸುಶಾಂತ್‌ ನಾಯಕ್‌, ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಸುಹಾಸ್‌ ಎಂ, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಯೋಗೇಶ್ವರಿ ಬಿ, ಪುಷ್ಪಾ ಎಚ್‌ ಎಂ, ಯೋಗಿತಾ ಪಿ ಆರ್‌, ಜ್ಯೂನಿಯರ್‌ ಆಪರೇಟರ್‌ ಕನ್ಸಲ್ಟೆಂಟ್‌ ಹುದ್ದೆಗೆ ಎಂ ನಿಖಿಲ್‌ ಅವರನ್ನು ಕಿಯೋನಿಕ್ಸ್‌ ಮೂಲಕ ನೇಮಿಸಲಾಗಿದೆ ಎಂದು ಗೊತ್ತಾಗಿದೆ.

 

 

 

ಈ ಅಭ್ಯರ್ಥಿಗಳು ವಿಧಾನಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ನಿಕಟವರ್ತಿಗಳು, ರಕ್ತ ಸಂಬಂಧಿಕರು ಮತ್ತು ಸೋದರ ಸಂಬಂಧಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ನಿಗದಿಗೊಳಿಸಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

 

 

 

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದು 1 ತಿಂಗಳಾದರೂ ಪರಿಷತ್‌ ಸಚಿವಾಲಯವು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಕುರಿತು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈವರೆವಿಗೂ ಮೌನ ಮುರಿದಿಲ್ಲ ಮತ್ತು ವೇತನದಲ್ಲಿ ಪಾವತಿಯಾಗಿರುವ ಹೆಚ್ಚುವರಿ ಮೊತ್ತವನ್ನು ವಸೂಲು ಮಾಡಿಲ್ಲ ಎಂದು ತಿಳಿದು ಬಂದಿದೆ.

 

 

 

ಹೆಚ್ಚುವರಿ ಪಾವತಿಸಿದ್ದೆಷ್ಟು?

 

 

 

ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಕನಿಷ್ಠ ವೇತನ ಕಾಯ್ದೆಯಡಿ ಆರ್ಥಿಕ ಇಲಾಖೆಯು 22,800 ರು. ನಿಗದಿಪಡಿಸಿದೆ. ಆದರೆ ವಿಧಾನಪರಿಷತ್ತಿನ ಸಚಿವಾಲಯವು ನೀಡುತ್ತಿರುವುದು 42,065 ರು. . ಅಂದರೆ ಹೆಚ್ಚುವರಿಯಾಗಿ 19,265 ರು. ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಹೆಚ್ಚುವರಿಯಾಗಿ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 5,58,685 ರು. ಪಾವತಿಯಾಗಿದೆ. ಅದರಂತೆ ಇಬ್ಬರು ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ ಒಟ್ಟು 11,17,370 ರು. ಹೆಚ್ಚುವರಿಯಾಗಿ ಪಾವತಿಯಾದಂತಾಗಿದೆ.

 

 

 

ಅದೇ ರೀತಿ ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು. ಕನಿಷ್ಠ ವೇತನ ನಿಗದಿಪಡಿಸಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 38,266 ರು. ನೀಡುತ್ತಿದೆ. ಹೆಚ್ಚುವರಿ 18,266 ರು. ನಂತೆ ಹೆಚ್ಚುವರಿಯಾಗಿ 5,29,714 ರು. ಪಾವತಿಸಲಾಗಿದೆ. ಅದರಂತೆ ಮೂವರು ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಒಟ್ಟು 15,89,142 ರು. ಪಾವತಿಸಲಾಗಿದೆ.

 

 

 

ಹಾಗೆಯೇ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ 13,284 ರು. ನೀಡಬೇಕಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 18,414.25 ರು.ಗಳನ್ನು ಹೆಚ್ಚುವರಿ ನೀಡಿ ಒಟ್ಟು 31,699 ರು. ನಂತೆ ಒಬ್ಬರಿಗೆ 5,34, 013 ರು ಪಾವತಿಯಾಗಿದೆ. ನೀಡುತ್ತಿದೆ. ಅದರಂತೆ ನಾಲ್ವರು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಹೆಚ್ಚುವರಿಯಾಗಿ 21,36,052 ರು. ರು. ಪಾವತಿಸಿರುವುದು ಆರ್ಥಿಕ ಇಲಾಖೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

 

 

‘ವಿಧಾನ ಪರಿಷತ್‌ನ ಲೆಕ್ಕ ಶೀರ್ಷಿಕೆ (2011-02-103-2-01-034)ಯಂತೆ ಕರ್ನಾಟಕ ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು ವೇತನವನ್ನು 30,350 ರು.ಗಳಿಗೆ ನಿಗದಿಗೊಳಸಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆ ಮೀರಿದ್ದರಿಂದ ಪರಿಷ್ಕರಿಸಿ 22,000 ರು.ಗಳಿಗೆ ನಿಗದಿಪಡಿಸಿ 2021-22ನೇ ಸಾಲಿನ ಅಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಆದ್ದರಿಂದ ಶೀಘ್ರಲಿಪಿಗಾರರ ವೇತನವನ್ನೂ ಮರು ನಿಗದಿಪಡಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನಿರ್ದೇಶಿಸಿತ್ತು.

the fil favicon

SUPPORT THE FILE

Latest News

Related Posts