ರಾಜಕೀಯ ಹಸ್ತಕ್ಷೇಪ, ಲಂಚ; ಸಚಿವಾಲಯ, ಇಲಾಖೆಗಳಲ್ಲಿ ವಿಲೇವಾರಿಯಾಗಿಲ್ಲ 1.48 ಲಕ್ಷ ಕಡತಗಳು

photo credit; thehindu

ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ  ತಮ್ಮ ಅವಧಿ ಪೂರ್ಣಗೊಳಿಸುವ ಹಂತಕ್ಕೆ ಬಂದಿದ್ದರೂ ಮುಖ್ಯಮಂತ್ರಿ ಮತ್ತು ವಿವಿಧ ಸಚಿವರೂ ಸೇರಿದಂತೆ ಕರ್ನಾಟಕ ಸರ್ಕಾರದ ಸಚಿವಾಲಯ ಹಾಗೂ  ಇಲಾಖೆಗಳಲ್ಲಿ  2023ರ ಮಾರ್ಚ್‌ 16ರವರೆಗೆ ಒಟ್ಟು 1,48,782 ಕಡತಗಳು ವಿಲೇವಾರಿಗೆ ಬಾಕಿ ಇರುವುದು ಬಹಿರಂಗವಾಗಿದೆ.

 

ಕೇವಲ ಹಣ ಕೊಟ್ಟರಷ್ಟೇ ಕಡತಗಳು ವಿಲೇವಾರಿ ಆಗುತ್ತಿವೆ ಎಂಬ  ಪ್ರತಿಪಕ್ಷಗಳ  ಆರೋಪ ಮತ್ತು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಡತಗಳು ಬಾಕಿ ಇರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2023ರ ಮಾರ್ಚ್‌ 21ರಂದು ನಡೆದ ಸಭೆಯಲ್ಲಿ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ಕುರಿತು ಚರ್ಚೆಯಾಗಿದೆ. ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಚರ್ಚಿಸಲು ನಡೆದಿದ್ದ ಸಭೆಗೆ ಇಲಾಖೆಗಳು ಮಂಡಿಸಿರುವ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಶೇಷವೆಂದರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇರುವ ಅರಣ್ಯ, ಜೀವಿಶಾಸ್ತ್ರ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 2023ರ ಮಾರ್ಚ್‌ 16ರ ಅಂತ್ಯಕ್ಕೆ ಒಟ್ಟಾರೆ 12,598 ಕಡತಗಳು ವಿಲೇವಾರಿ ಆಗದೇ ಬಾಕಿ ಇವೆ.

 

ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದರೂ ಬಹುತೇಕ ಇಲಾಖೆಗಳು ಸಾವಿರಾರು ಸಂಖ್ಯೆಯಲ್ಲಿ ಕಡತಗಳನ್ನು ವಿಲೇವಾರಿಗೆ ಬಾಕಿ ಇಟ್ಟುಕೊಂಡಿವೆ. ನಗರಾಭಿವೃದ್ಧಿ ಇಲಾಖೆಯಲ್ಲಿ 14,906 ಮತ್ತು ಕಂದಾಯ ಇಲಾಖೆಯಲ್ಲಿಯೇ 14,030 ಕಡತಗಳು ಬಾಕಿ ಇರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

2023 ಮಾರ್ಚ್‌ 16ರ ಅಂತ್ಯಕ್ಕೆ ಎಫ್‌ಎಂಎಸ್‌ನಲ್ಲಿ ಒಟ್ಟು 43,376 ಮತ್ತು ಇ ಆಫೀಸ್‌ನಲ್ಲಿ 1,02,425 ಕಡತಗಳಿದ್ದವು. ಒಟ್ಟಾರೆ 1,45,801 ಕಡತಗಳಿದ್ದವು. ಇದೇ ಅವಧಿಯಲ್ಲಿ ಹೊಸದಾಗಿ ಎಫ್‌ಎಂಎಸ್‌ನಲ್ಲಿ 3,200 ಮತ್ತು ಇ ಆಫೀಸ್‌ನಲ್ಲಿ 27,420 ಸೇರಿ ಒಟ್ಟು 30,620 ಕಡತಗಳಿದ್ದವು.

 

ಎಫ್ಎಂಎಸ್‌ನಲ್ಲಿದ್ದ 43,376 ಕಡತಗಳ ಪೈಕಿ ಮುಕ್ತಾಯಗೊಂಡ ಕಡತಗಳ ಸಂಖ್ಯೆ 2,060 ಸಂಖ್ಯೆಯಲ್ಲಿದ್ದರೇ ಈ ಆಫೀಸ್‌ನಲ್ಲಿದ್ದ 1,02,425 ಕಡತಗಳ ಪೈಕಿ 25,639 ಸೇರಿ ಒಟ್ಟಾರೆ 27,699 ಕಡತಗಳು ಮುಕ್ತಾಯಗೊಂಡಿದ್ದವು. ಉಳಿದಂತೆ ವಿಲೇವಾರಿಗೆ ಎಫ್‌ಎಂಎಸ್‌ನಲ್ಲಿ 44,576, ಇ ಅಫೀಸ್‌ನಲ್ಲಿ 104,206 ಸೇರಿ ಒಟ್ಟಾರೆ 1,48,782 ಕಡತಗಳು ಬಾಕಿ ಇರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಅದೇ ರೀತಿ ಕಡತ ವಿಲೇವಾರಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ‘ಡಿ’ (ಶೇ.30ರಿಂದ 50)ವರ್ಗದಲ್ಲಿವೆ.

 

ಡಿ ವರ್ಗದಲ್ಲಿರುವ ಇಲಾಖೆಗಳ ಪಟ್ಟಿ

 

ಕನ್ನಡ ಮತ್ತು ಸಂಸ್ಕೃತಿ 2023ರ ಮಾರ್ಚ್ 16ವರೆಗೆ ವಿಲೇವಾರಿಗೆ ಬಾಕಿ ಇದ್ದ ಕಡತಗಳ ಸಂಖ್ಯೆ 2,261 (ಶೇ.31.37), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ 1,294 (ಶೇ. 43.22) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇರುವ ಅರಣ್ಯ ಮತ್ತು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ 7,418 (ಶೇ. 48.32) ಕಡತಗಳು ವಿಲೇವಾರಿಗೆ ಬಾಕಿ ಇವೆ.

 

ಸಿ ವರ್ಗದಲ್ಲೂ (ಶೇ.50ರಿಂದ 75) 2023ರ ಮಾರ್ಚ್‌ 16ರ ಅಂತ್ಯಕ್ಕೆ 69,135 ಕಡತಗಳು ವಿಲೇವಾರಿಗೆ ಬಾಕಿ ಇವೆ.

 

ಸಿ ವರ್ಗದಲ್ಲಿರುವ ಇಲಾಖೆಗಳ ಪಟ್ಟಿ

 

ಕೃಷಿ-2, 078, ಲೋಕೋಪಯೋಗಿ-6,273, ಆರೋಗ್ಯ ಕುಟುಂಬ ಕಲ್ಯಾಣ-6,265, ನಗರಾಭಿವೃದ್ಧಿ-14,906, ಹಿಂದುಳಿದ ವರ್ಗಗಳ ಕಲ್ಯಾಣ-990, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ-2,813, ಕಾನೂನು-2,583, ಆಹಾರ ಮತ್ತು ನಾಗರಿಕ ಸರಬರಾಜು- 1,269, ಸಿಬ್ಬಂದಿ ಆಡಳಿತ ಸುಧಾರಣೆ- 3,702, ಮೂಲಭೂತ ಸೌಕರ್ಯ, ಅಭಿವೃದ್ಧಿ- 1,174, ಸಹಕಾರ – 1,645, ಅಲ್ಪಸಂಖ್ಯಾತ, ಹಜ್‌ ವಕ್ಫ್‌- 287, ಸಣ್ಣ ನೀರಾವರಿ-1,717, ಇಂಧನ-2,297, ಕಂದಾಯ-14,030, ವಸತಿ-1,289 ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇರುವ ಗ್ರಾಮೀಣಾಭಿವೃದ್ಧಿ ಪಂ.ರಾಜ್‌ಯಲ್ಲಿ 5,180, ಕಡತಗಳು ಬಾಕಿ ಇವೆ.

 

ಇನ್ನು ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರಂತರವಾಗಿ ಸಭೆ ನಡೆಸಿ ಮೇಲ್ವಿಚಾರಣೆ ನಡೆಸುತ್ತಿದ್ದರೂ ಕಳೆದ ಎರಡೂ ವರ್ಷಗಳಿಂದಲೂ ಕಡತಗಳ ವಿಲೇವಾರಿಗೆ ಚಿರತೆ ವೇಗವೇ ಸಿಕ್ಕಿಲ್ಲ.

 

ಕಡತ ವಿಲೇವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೆಷ್ಟೇ ಗಡುವು ನೀಡಿ ಎಚ್ಚರಿಕೆ ನೀಡಿದ್ದರೂ 2021ರ ಅಕ್ಟೋಬರ್‌ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿದ್ದವು. ಇದೇ ಅವಧಿಯಲ್ಲಿ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುವ ಹಣಕಾಸು ಇಲಾಖೆಯಲ್ಲಿಯೇ 2021ರ ಅಕ್ಟೋಬರ್‌ 27ರ ಅಂತ್ಯಕ್ಕೆ 3,351 ಕಡತಗಳು ಬಾಕಿ ಉಳಿದಿದ್ದವು.

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಕಡತ ವಿಲೇವಾರಿಗೆ ಸೂಚಿಸಿದ್ದರಲ್ಲದೆ 15 ದಿನದಲ್ಲಿ ಕಡತಗಳು ವಿಲೇವಾರಿಯಾಗಿರಬೇಕು ಎಂದೂ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು. ಹಿಂದಿನ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಮತ್ತು ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮಾ ಅವರು ಪ್ರತಿ ತಿಂಗಳೂ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರಾದರೂ ಕಡತ ವಿಲೇವಾರಿಯಲ್ಲಿ ಒಂದಿನಿತೂ ಪ್ರಗತಿಯಾಗಿಲ್ಲ.

 

ಹಾಗೆಯೇ 2021ರ ಆಗಸ್ಟ್‌ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.60 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಈ ಪೈಕಿ 31,077 ಕಡತಗಳು ಈ ಆಫೀಸ್‌ನಲ್ಲಿಯೇ ವಿಲೇವಾರಿ ಆಗಿರಲಿಲ್ಲ. ನಗರಾಭಿವೃದ್ಧಿ ಇಲಾಖೆಯಲ್ಲಿ 11,250, ಕಂದಾಯ ಇಲಾಖೆಯಲ್ಲಿ 9,314, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 7,689, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 5,446, ಜಲ ಸಂಪನ್ಮೂಲ ಇಲಾಖೆಯಲ್ಲಿ 5,490 ಕಡತಗಳು ಬಾಕಿ ಇದ್ದವು. ಈ ಕುರಿತು ‘ದಿ ಫೈಲ್‌’ ಸೆ.2ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

 

ಕಡತಗಳ ವಿಲೇವಾರಿಗೆ ಅಧೀನ ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿಗಳನ್ನು ಕಡತ ವಿಲೇವಾರಿ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಲು ಮುಂದಾಗಿದೆ. ಅಲ್ಲದೇ ಕಡತ ವಿಲೇವಾರಿಗೆ ಕಂದಾಯ ಸಚಿವ ಆರ್‌ ಅಶೋಕ್‌ ಕೂಡ ಅಧಿಕಾರಿಗಳಿಗೆ ಸೂಚಿಸಿದ್ದಾರಾದರೂ ಅವರ ಬಳಿಯೇ 60 ದಿನಗಳಿಗೂ ಮೀರಿದ ಕಡತಗಳ ರಾಶಿಯೇ ಇದ್ದವು. ಈ ಕುರಿತು ‘ದಿ ಫೈಲ್‌’ 2022ರ ಏಪ್ರಿಲ್‌ 20ರಂದೇ ವರದಿ ಪ್ರಕಟಿಸಿತ್ತು.

ಕಡತ ವಿಲೇವಾರಿ ಅಭಿಯಾನಕ್ಕೆ ಸೂಚಿಸಿದ ಸಚಿವ ಅಶೋಕ್‌ ಬಳಿ ಇವೆ 60 ದಿನಕ್ಕೂ ಮೀರಿದ ಕಡತಗಳು

ನೋಡೆಲ್ ಅಧಿಕಾರಿಗಳು ಕಾನೂನು ಇಲಾಖೆ ಸಂಯೋಜನೆ ಮಾಡಿ ಎರಡು ತಿಂಗಳೊಳಗೆ ಕಡತ ವಿಲೇವಾರಿ ಮಾಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದನ್ನು ಸ್ಮರಿಸಬಹುದು.

 

ಕಡತಗಳ ವಿಲೇವಾರಿಯಲ್ಲಿನ ವಿಳಂಬಕ್ಕೂ ಭ್ರಷ್ಟಾಚಾರಕ್ಕೂ ನೇರ ಸಂಬಂಧ ಇದೆ. ಸಚಿವಾಲಯದ ವಿವಿಧ ಹಂತಗಳಲ್ಲಿ ಲಂಚ ಕೊಟ್ಟರಷ್ಟೇ ಕಡತಗಳ ಚಲನೆಗೆ ಚಿರತೆ ವೇಗ ದೊರೆಯುತ್ತಿದೆ. ಕೆಲವಡೆ ರಾಜಕೀಯ ಹಸ್ತಕ್ಷೇಪ ಹೆಚ್ಚಿರುವುದರಿಂದ ಕಡತಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ.

SUPPORT THE FILE

Latest News

Related Posts