ಬೆಂಗಳೂರು; ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆಯೇ 26.07 ಲಕ್ಷ ರು.ಗಳನ್ನು ಸ್ಥಾನಪಲ್ಲಟಗೊಳಿಸಿದ್ದ ಆರೋಪಕ್ಕೆ ಗುರಿಯಾಗಿರುವ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನಿಯರ್ ವಿರುದ್ಧ ಲೋಕಾಯುಕ್ತ ವಿಚಾರಣೆಗೆ ಹೊರಡಿಸಿದ್ದ ಆದೇಶವನ್ನೇ ಸರ್ಕಾರವು ಹಿಂಪಡೆದುಕೊಂಡಿದೆ. ಇದೇ ಇಲಾಖೆಯ ಮತ್ತೊಬ್ಬ ಸಹಾಯಕ ಇಂಜಿನಿಯರ್ ಗುತ್ತಿಗೆದಾರರಿಂದ 1,000 ಅಕ್ರಮ ಸಂಭಾವನೆ ಪಡೆದ ಆರೋಪದಡಿಯಲ್ಲಿ ತನಿಖೆ ನಡೆಸಲು ಉಪ ಲೋಕಾಯುಕ್ತರಿಗೆ ವಹಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಹರಪನಹಳ್ಳಿ ಉಪ ವಿಭಾಗದ ಎಇಇ ಲಷ್ಕರಿ ನಾಯ್ಕ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಸಂಬಂಧ 2016ರ ಅಕ್ಟೋಬರ್ 25ರಂದು ಆದೇಶ ಹೊರಡಿಸಿತ್ತು. ಆದರೀಗ 6 ವರ್ಷಗಳ ನಂತರ ಆಪಾದಿತ ಅಧಿಕಾರಿಯು ಮೇಲಾಧಿಕಾರಿಯ ನಿರ್ದೇಶನದ ಮೇರೆಗೆ ಕ್ರಮವಹಿಸಲಾಗಿದೆ ಎಂದು ನೀಡಿದ್ದ ಸಮಜಾಯಿಷಿಗೆ ಮಣೆ ಹಾಕಿ ಲೋಕಾಯುಕ್ತ ವಿಚಾರಣೆಗೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಹೀಗಾಗಿ ಪ್ರಕರಣವು ಮುಕ್ತಾಯಗೊಂಡಂತಾಗಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಘುನಾಥಗೌಡ ಎಸ್ ಪಾಟೀಲ ಅವರು 2023ರ ಜನವರಿ 31ರಂದು ಲೋಕಾಯುಕ್ತ ನಿಬಂಧಕರಿಗೆ ಪತ್ರ(ಸಂಖ್ಯೆ; ಗ್ರಾಅಪ 8 ಇಎನ್‌ಕ್ಯೂ 2023) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
26.07 ಲಕ್ಷ ಸ್ಥಾನಪಲ್ಲಟ ಪ್ರಕರಣ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಉಪ ವಿಭಾಗಕ್ಕೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2003ರಲ್ಲಿ 1735 ಲಕ್ಷ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ 26.07 ಲಕ್ಷ ರು.ಗಳನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಸ್ಥಾನಪಲ್ಲಟ ಮಾಡಿ ವೆಚ್ಚ ಮಾಡಿದ್ದರು. ಈ ಸಂಬಂಧ ಎಇಇ ಲಷ್ಕರಿ ನಾಯ್ಕ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು 2016ರ ಅಕ್ಟೋಬರ್ 25ರಂದು ಆದೇಶ ಹೊರಡಿಸಲಾಗಿತ್ತು.
ಲಷ್ಕರಿ ನಾಯ್ಕ ಅವರು ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಕೆಎಟಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು 3 ವರ್ಷಗಳವರೆಗೆ ವಿಚಾರಣೆ ನಡೆಸಿದ್ದ ಕೆಎಟಿಯು 2019ರ ಅಕ್ಟೋಬರ್ 25ರಂದು ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಲು ಅರ್ಹವಲ್ಲವೆಂದು ಸರ್ಕಾರಿ ವಕೀಲರು ಅಭಿಪ್ರಾಯ ನೀಡಿದ್ದರು.
‘ಈ ಪ್ರಕರಣದಲ್ಲಿ ಯಾವುದೇ ಆರ್ಥಿಕ ನಷ್ಟ ಆಗದೇ ಇರುವುದು ಮತ್ತು ಆಪಾದಿತ ಅಧಿಕಾರಿಯು ತಮ್ಮ ಮೇಲಾಧಿಕಾರಿಯವರ ನಿರ್ದೇಶನದ ಅನುಸಾರ ಕ್ರಮವಹಿಸಿರುವುದು ಇತ್ಯಾದಿ ಅಂಶಗಳು ದಾಖಲೆಗಳಿಂದ ಕಂಡುಬಂದಿದ್ದರಿಂದ ನ್ಯಾಯ ಮಂಡಳಿಯ ಆದೇಶವನ್ನು ಒಪ್ಪಿ ಲಷ್ಕರಿ ನಾಯ್ಕ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಉಪಲೋಕಾಯುಕ್ತರಿಗೆ ವಹಿಸಿದ್ದ ಆದೇಶವನ್ನು ರದ್ದುಪಡಿಸಿ ಮತ್ತು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ತೀರ್ಮಾನಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ,’ ಎಂದು ಲೋಕಾಯುಕ್ತ ನಿಬಂಧಕರಿಗೆ ಬರೆದ ಪತ್ರದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ವಿವರಿಸಿದ್ದಾರೆ.
1,000 ಅಕ್ರಮ ಸಂಭಾವನೆ ಪ್ರಕರಣ
ಶಿವಮೊಗ್ಗದಲ್ಲಿರುವ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಸಹಾಯಕ ಇಂಜಿನಿಯರ್ ಹೆಚ್ ಬಸವರಾಜ್ ಅವರು ಗುತ್ತಿಗೆದಾರರ ಸಹಾಯಕ ಪರಮೇಶ್ ಎಂಬುವರಿಂದ 1,000 ರು. ಅಕ್ರಮ ಸಂಭಾವನೆ ಸ್ವೀಕರಿಸುವ ವೇಳೆಯಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದ ಕುರಿತು ಇಲಾಖೆ ವಿಚಾರಣೆ ನಡೆಸಲು ಕರ್ನಾಟಕ ನಾಗರಿಕ ಸೇವಾ ನಿಯಮ (ಸಸಿಎ) 14ಎ ಅನ್ವಯ ಉಪ ಲೋಕಾಯುಕ್ತರಿಗೆ ವಹಿಸಲಾಗಿತ್ತು.
ಈ ಕುರಿತು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 2023ರ ಫೆಬ್ರುವರಿ 1ರಂದು (ಸಂಖ್ಯೆ ಗ್ರಾಅಪ 29 ಇಎನ್‌ಕ್ಯೂ 2022) ಪತ್ರ ಬರೆದಿರುವುದು ಗೊತ್ತಾಗಿದೆ.
‘1,000 ಅಕ್ರಮ ಸಂಭಾವನೆ ಪಡೆದಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಹೆಚ್ ಬಸವರಾಜ್ ಅವರ ಮಾತೃ ಇಲಾಖೆಯು ಲೋಕೋಪಯೋಗಿ ಇಲಾಖೆಯಾಗಿರುತ್ತದೆ. ಆದ್ದರಿಂದ ಅವರ ವಿರುದ್ಧ ಇಲಾಖೆ ವಿಚಾರಣೆ ಪ್ರಕರಣವನ್ನು ಲೋಕೋಪಯೋಗಿ ಇಲಾಖೆಯು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.