ಅಮೃತ್‌ ನಗರೋತ್ಥಾನ; ವರ್ಷ ಕಳೆದರೂ ಟೆಂಡರ್‌ ಆಹ್ವಾನಿಸುವುದರಲ್ಲೇ ಕಾಲಹರಣ

photo credit;basavarajbommai twitter account

ಬೆಂಗಳೂರು; ಬೆಂಗಳೂರು ಜಲಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವುದು ಸೇರಿದಂತೆ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಘೋಷಿಸಿದ್ದ ಮುಂದುವರೆದ ಯೋಜನೆಗಳು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

 

2023-24ನೇ ಸಾಲಿನ ಆಯವ್ಯಯವನ್ನು ಇದೇ 10ರಂದು ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಜ್ಜಾಗುತ್ತಿರುವ ಹೊತ್ತಿನಲ್ಲಿಯೇ 2022-23ನೇ ಸಾಲಿನ ಆಯವ್ಯಯ ಕಂಡಿಕೆಗಳ ವಿವರ ಮತ್ತು ವಸ್ತುಸ್ಥಿತಿ ಕುರಿತು ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿರುವ ವಿವರಗಳು ಮುನ್ನೆಲೆಗೆ ಬಂದಿವೆ. ಇದರ ವಿವರಗಳನ್ನೊಳಗೊಂಡ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 6,000 ಕೋಟಿ ರು. ವೆಚ್ಚದಲ್ಲಿ ಅಮೃತ್‌ ನಗರೋತ್ಥಾನ ಯೋಜನೆ ಭಾಗವಾಗಿ ರಸ್ತೆ ಅಭಿವೃದ್ಧಿ, ಗ್ರೇಡ್‌ ಸೆಪರೇಟರ್‌, ಕೆರೆ ಅಭಿವೃದ್ಧಿ, ಬೃಹತ್‌ ನೀರುಗಾಲುವೆ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿ ಚಟುವಟಿಕೆ, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ಕೊಳಚೆಪ್ರದೇಶ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಿಂದಿನ ಬಜೆಟ್‌ನಲ್ಲಿ ಹೊಸ ಯೋಜನೆ ಎಂದು ಘೋಷಿಸಲಾಗಿತ್ತು.

 

ಆದರೀಗ ಬಿಬಿಎಂಪಿಯಿಂದ ಇನ್ನೂ ಟೆಂಡರ್‌ಗಳನ್ನು ಆಹ್ವಾನಿಸುವ ಹಂತದಲ್ಲೇ ಇದೆ. ಎಲ್ಲಾ ವಿಧಾನಸಭಾ ಕ್ಷೇತ್ರವಾರು ಟೆಂಡರ್‌ಗಳನ್ನು ಆಹ್ವಾನಿಸುತ್ತಿದೆ ಎಂದು ವಿವರಣೆ ನೀಡಿರುವ ನಗರಾಭಿವೃದ್ಧಿ ಇಲಾಖೆಯು ಹಲವು ಟೆಂಡರ್‌ಗಳಿಗೆ ಸರ್ಕಾರವು ಇನ್ನು ಅನುಮೋದನೆಯನ್ನೇ ನೀಡಿಲ್ಲ ಎಂಬುದು ತಿಳಿದು ಬಂದಿದೆ.

 

ಬೆಂಗಳೂರು ನಗರದ ರಾಜಕಾಲುವೆಗಳಲ್ಲಿ ಕೊಲಚೆ ನೀರನ್ನು ಬೇರ್ಪಡಿಸಿ ಪುನರುಜ್ಜೀವನಗೊಳಿಸಿ ನಾಗರೀಕರಿಗೆ ವಿಹಾರ ತಾಣವಾಗಿ ಅಭಿವೃದ್ಧಿಪಡಿಸಲು 195.00 ಕೋಟಿ ರು. ವೆಚ್ಚದ ಮುಂದುವರೆದ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಶೇ.60ರಷ್ಟು ಪ್ರಗತಿ ಸಾಧಿಸಿದೆ. ಇದೇ ಮಾರ್ಚ್‌ 2023ರೊಳಗಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆಯಾದರೂ ಅದಕ್ಕೆ ಬದ್ಧತೆಯನ್ನು ಪ್ರದರ್ಶಿಸದಿರುವುದು ವಿವರಣೆ ಪಟ್ಟಿಯಿಂದ ಗೊತ್ತಾಗಿದೆ.

 

ಮನೆಗಳು ಹಾಗೂ ವಸತಿ ಬಡಾವಣೆಗಳನ್ನು ನಿರ್ಮಿಸಲು ಅವಶ್ಯಕವಿರುವ ಹಲವು ಇಲಾಖೆಗಳ ಅನುಮತಿ ಪಡೆಯುವ ವಿಧಾನದಲ್ಲಿ ಸರಳೀಕರಣಗೊಳಿಸಲು ಉದ್ದೇಶಿಸಿದೆ ಎಂದು ಘೋಷಣೆ ಮಾಡಿದ್ದ ಇಲಾಖೆಯು, ಇನ್ನೂ ಅಂತರ್ಜಾಲ ತಂತ್ರಾಂಶದಲ್ಲಿ ಸಂಯೋಜನೆಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿಲ್ಲ.

 

ಬೆಂಗಳೂರು ನಗರದ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 2006ರಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೇ ಮದ್ರಾಸ್‌ ರಸ್ತೆಯನ್ನು ಹಾದು ಹೋಗಿ ಹೊಸೂರು ರಸ್ತೆ ಸೇರುವ 73.0 ಕಿ ಮೀ ಉದ್ದ ಹಾಗೂ 100 ಮೀ ಅಗಲದ ಫೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರು.ಅನುಮೋದಿಸಿತ್ತು.

 

ಪ್ರಸಕ್ತ ವರ್ಷದಲ್ಲೇ ಕಾಮಗಾರಿ ನಿರ್ವಹಿಸಲು DBFOT ಮಾದರಿಯಲ್ಲಿ ಗುತ್ತಿಗೆದಾರರೇ ಭೂ ಸ್ವಾಧೀನ ಮತ್ತು ನಿರ್ಮಾಣ ವೆಚ್ಚವನ್ನು ಭರಿಸುವುದರೊಂದಿಗೆ ಟೆಂಡರ್‌ ಕರೆದು ಕಾಮಗಾರಿ ಚಾಲನೆಗೊಳಿಸಲಾಗುವುದು ಎಂದು ಹೇಳಿತ್ತು. ಈ ಸಂಬಂಧ ಬಿಡಿಎಯು ಟೆಂಡರ್‌ ಕರೆದಿತ್ತಾದರೂ ಇದುವರೆಗೂ ಈ ಪ್ರಕ್ರಿಯೆಯು ಅಂತಿಮಗೊಂಡಿಲ್ಲ.

 

2022ರ ಜುಲೈ 16ರಂದು ಎರಡನೇ ಬಾರಿ ಟೆಂಡರ್‌ ಕರೆದಿತ್ತು. ಆದರೆ ಯಾವುದೇ ಬಿಡ್‌ದಾರರು ಭಾಗವಹಿಸಿಲ್ಲ. ಹೀಗಾಗಿ ಮೂರನೇ ಬಾರಿಗೆ ಟೆಂಡರ್‌ ಆಹ್ವಾನಿಸಲು ಕ್ರಮಕೈಗೊಂಡಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಹೇಳಿದೆ.

 

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿದ್ದ 2,671 ಎಕರೆ ಜಮೀನಿನ ಪೈಕಿ 1,297 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಆಧುನಿಕ ಸ್ಮಾರ್ಟ್‌ ಸಿಟಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕಳೆದ ಆಯವ್ಯಯದಲ್ಲಿ ಹೇಳಿತ್ತು.

 

ಆದರೆ ಈ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ. ಭೂ ಸ್ವಾಧೀನವಾಗಿರುವ ಜಮೀನಿನ ಪೈಕಿ 294 ಎಕರೆ 14 ಗುಂಟೆ ಜಮೀನಿನ ಭೂ ಮಾಲೀಕರ ತಕರಾರು ಮತ್ತು ಜಮೀನುಗಳ ಮೇಲೆ ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಾಗಿದೆ. ಇದರಿಂದಾಗಿ ಬಡಾವಣೆ ರಚನೆಯಲ್ಲಿ ವಿಳಂಬವಾಗಿದೆ ಎಂದು ಇಲಾಖೆಯು ಸಮಜಾಯಿಷಿ ನೀಡಿದೆ.

 

ಇದೇ ಬಡಾವಣೆಗೆ ಸಂಬಂಧಿಸಿದಂತೆ ವಿವಿಧ ಬ್ಲಾಕ್‌ಗಳ ನಡುವೆ ಸಂಪರ್ಕ ಏರ್ಪಡಿಸಲು ಅತ್ಯವಶ್ಯಕವಾಗಿರುವ 35 ಸೇತುವೆಗಳ ನಿರ್ಮಾಣ ಕಾಮಗಾರಿಗಳಿಗಾಗಿ ಅಂದಾಜು 3,217.00 ಲಕ್ಷ ರು.ಗಳಲ್ಲಿ ಟೆಂಡರ್‌ ಆಹ್ವಾನಿಸಲು ಪ್ರಸ್ತಾವನೆ ಸಲ್ಲಿಸಿದೆ. ನೀರು ಸರಬರಾಜು, ಒಳಚರಂಡಿ ಹಾಗೂ ಯುಟಿಲಿಟಿ ಡಕ್ಟ್‌ ಕಾಮಗಾರಿಗಳಿಗಾಗಿ 1,169 ಕೋಟಿ ರು. ವ್ಯಯಿಸಿರುವ ಬಿಡಿಎಯು ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 450.42 ಕೋಟಿ ರು. ಮತ್ತು ಸಿವಿಲ್‌ ಕಾಮಗಾರಿಗಾಗಿ 721.11 ಕೋಟಿ ವ್ಯಯಿಸಿದ್ದು ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 239.43 ಕೋಟಿ ಅನುದಾನಕ್ಕಾಗಿ ಸರ್ಕಾರವನ್ನು ಬಿಡಿಎಯು ಎದುರುನೋಡುತ್ತಿದೆ.

 

ಬನಶಂಕರಿ ಜಂಕ್ಷನ್‌ನಲ್ಲಿ 45 ಕೋಟಿ ರು. ವೆಚ್ಚದಲ್ಲಿ ಸ್ಕೈವಾಕ್ಗ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿತ್ತಾದರೂ ಈ ಸಂಬಂಧದ ಪ್ರಸ್ತಾವನೆಯು ಸರ್ಕಾರದ ಹಂತದಲ್ಲೇ ಇದೆ. ಕಡತವು ಆರ್ಥಿಕ ಇಲಾಖೆ ಸಹಮತಿಗಾಗಿ ಸಲ್ಲಿಕೆಯಾಗಿದೆಯೇ ವಿನಃ ವರ್ಷ ಕಳೆದರೂ ಸ್ಕೈವಾಕ್‌ ನಿರ್ಮಾಣವಾಗಿಲ್ಲ.

 

3,885 ಕೋಟಿ ರು. ವೆಚ್ಚದಲ್ಲಿ 2022-23ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯಲ್ಲಿ ಮುಖ್ಯಮಂತ್ರಿಗಳ ಅಮೃತ್‌ ನಗರೋತ್ಥಾನ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದ ಸರ್ಕಾರವು ಈ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳ ಕ್ರಿಯಾ ಯೋಜನೆಯು ಇನ್ನೂ ಅನುಮೋದನೆ ಹಂತದಲ್ಲೇ ಇದೆ. ಒಟ್ಟು 288 ನಗರ ಸ್ಥಳೀಯ ಸಂಸ್ಥೆಗಳ ಟೆಂಡರ್‌ ಕರೆದಿದೆಯೇ ವಿನಃ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 5,878 ಕೋಟಿ ರು.ಗಳ ಅಂದಾಜು ವೆಚ್ಚದಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಯಲ್ಲಿ 2021-22ನೇ ಸಾಲಿನಲ್ಲಿ 18 ಮತ್ತು 2022-23ನೇ ಸಾಲಿನಲ್ಲಿ 38 ಯೋಜನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಿಲಾಗಿದೆ ಎಂದು ಸರ್ಕಾರವು ಹೇಳಿತ್ತು. ಆದರೆ ಇನ್ನು 28 ಯೋಜನೆಗಳು ಪ್ರಗತಿಯಲ್ಲಿವೆಯೇ ವಿನಃ ಪೂರ್ಣಗೊಂಡಿಲ್ಲ.

the fil favicon

SUPPORT THE FILE

Latest News

Related Posts