ಬೆಂಗಳೂರು; ಎರಡನೇ ಸ್ನಾತಕೋತ್ತರ ಪದವಿಯ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಅವಕಾಶ ನೀಡಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸುತ್ತೋಲೆ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಒದಗಿಸಲು ಅನುದಾನವಿಲ್ಲ ಎಂದು ಸರ್ಕಾರವು ಕೈ ಚೆಲ್ಲಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ 2022ರ ಡಿಸೆಂಬರ್ 2ರಂದು ಸುತ್ತೊಲೆ ಹೊರಡಿಸಿರುವ ಸುತ್ತೋಲೆಯು ಚರ್ಚೆಗೆ ಗ್ರಾಸವಾಗಿದೆ.
ಸುತ್ತೋಲೆಯಲ್ಲೇನಿದೆ?
2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಹಾಸ್ಟೆಲ್ ಪ್ರವೇಶ ನೀಡುವ ಸಂದರ್ಭದಲ್ಲಿ ಎರಡನೇ ಸ್ನಾತಕೋತ್ತರ ಪದವಿಗೆ ಕಡ್ಡಾಯವಾಗಿ ಅವಕಾಶ ನೀಡಬಾರದೆಂದು ತಿಳಿಸಲಾಗಿದೆ. ಕಾರಣ ಸರ್ಕಾರದ ಆದೇಶದನ್ವಯ ಒಂದು ಬಾರಿ ಸರ್ಕಾರಿ ಅಥವಾ ವಿಶ್ವವಿದ್ಯಾಲಯದ ಸೌಲಭ್ಯಗಲನ್ನು ಪಡೆದಿರುವವರಿಗೆ ಮತ್ತೊಮ್ಮೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ. ಇದನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ಪ್ರವೇಶ ನೀಡುವ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.
ಆದ್ದರಿಂದ ಎಲ್ಲಾ ಪ್ರಧಾನ ಕ್ಷೇಮ ಪಾಲಕರುಗಲೂ ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಮುಚ್ಚಳಿಕೆಯನ್ನು ಪಡೆದು ಹಾಸ್ಟೆಲ್ ಪ್ರವೇಶ ನೀಡುವುದು. ವಿಭಾಗಗಳಿಗೆ ಪ್ರವೇಶ ನೀಡುವ ಸಂದಭ್ದಲ್ಲಿ ವಿದ್ಯಾರ್ಥಿಗಳ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬೇಕು. ಮತ್ತು ಮೊದಲ ಪಿ ಜಿ ಮತ್ತು ಎರಡನೇ ಪಿ ಜಿ ಎಂಬುದನ್ನು ಪರಿಶೀಲಿಸಿಕೊಂಡು ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶದ ಅರ್ಜಿಗಳನ್ನು ದೃಢೀಕರಿಸಬೇಕು ಎಂದು ನಿರ್ದೇಶನ ನೀಡಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.
‘ಬೆಂಗಳೂರು ವಿಶ್ವವಿದ್ಯಾಲಯವು ದಲಿತ ವಿರೋಧಿ ನೀತಿಯನ್ನು ಪದೇ ಪದೇ ಜಾಹೀರು ಮಾಡಿದೆ. ಬಿಜೆಪಿಯ ರಹಸ್ಯ ಕಾರ್ಯಸೂಚಿ ಬೆತ್ತಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಎರಡನೇ ಸ್ನಾತಕೋತ್ತರ ಪದವಿಗೆ ಹಾಸ್ಟೆಲ್‌ಗೆ ಅವಕಾಶ ನೀಡದಂತೆ ಸುತ್ತೋಲೆ ನೀಡಿ ಅವರ ಹಕ್ಕು ಕಸಿಯಲು ಶಿಕ್ಷಣ ವಂಚಿತ ಮಾಡಲು ಹೊರಟಿದೆ,’ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಕಾಂಗ್ರೆಸ್‌ನ ರಮೇಶ್‌ಬಾಬು ಅವರು ಟ್ವೀಟ್ ಮಾಡಿದ್ದಾರೆ.