ಖಾಸಗಿ ವ್ಯಕ್ತಿಗಳಿಗೆ ಅರಣ್ಯ ಪ್ರದೇಶ ಪರಭಾರೆ ಪ್ರಕರಣ; ಡೀಮ್ಡ್‌ ಅರಣ್ಯವಾಗಿದ್ದರೂ ಗೋಮಾಳವೆಂದು ವರದಿ

ಬೆಂಗಳೂರು; ಕರ್ನಾಟಕ ಅರಣ್ಯ ಇಲಾಖೆಯಿಂದ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರವಾಗಿರುವ ಹೆಕ್ಟೇರ್‌ಗಟ್ಟಲೇ ಅರಣ್ಯ ಪ್ರದೇಶಗಳು ಸದ್ದಿಲ್ಲದೇ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುತ್ತಿರುವುದು ಇದೀಗ ಬಹಿರಂಗವಾಗಿದೆ. ಪರಿಭಾವಿತ ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಕೂಡ ಈ ಭೂಮಿಯು ಗೋಮಾಳ ಎಂದು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

 

ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯವಹಿಸಿದ್ದ ನಿಗಮವು ಇದೀಗ ಅರಣ್ಯ ಪ್ರದೇಶಗಳ ಪರಭಾರೆ, ನೆಡುತೋಪುಗಳ ಕಣ್ಮರೆ ಸೇರಿದಂತೆ ವಿವಿಧ ರೀತಿಯ ಅಕ್ರಮಗಳ ಕುರಿತು ಸಲ್ಲಿಕೆಯಾಗಿರುವ ದೂರಿನ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಿವೃತ್ತ ನ್ಯಾಯಾಧೀಶರರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 2022ರ ನವೆಂಬರ್‌ 16ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಚಿಕ್ಕಮಗಳೂರು ವಿಭಾಗದ ಬ್ಯಾಗಡಿಹಳ್ಳಿ ಸರ್ವೆನಂಬರ್‌ 32ರಲ್ಲಿನ ನಿಗಮಕ್ಕೆ ಹಸ್ತಾಂತರಿಸಿರುವ 192.00 ಎಕರೆ ಒಟ್ಟು ವಿಸ್ತೀರ್ಣದಲ್ಲಿ 52. ಎಕರೆ ವಿಸ್ತೀರ್ಣದ ಭೂಮಿಯನ್ನು ತಲಾ 4 ಎಕರೆಯಂತೆ ಒಟ್ಟು 13 ಮಂದಿಗೆ ಹಂಚಿಕೆ ಮಾಡಲಾಗಿದೆ. ಇದು ಪರಿಭಾವಿತ ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಕೂಡ ಈ ಭೂಮಿಯು ಗೋಮಾಳ ಎಂದು ವರದಿ ನೀಡಲಾಗಿದೆ. ಮತ್ತು ಈ ಪ್ರದೇಶದಲ್ಲಿ ಮರಗಳನ್ನು ಬೆಳೆಸುವುದರಲ್ಲಿ ಅಕ್ರಮ ನಡೆದಿದೆ ಎಂದು ಅರಣ್ಯ ಅಭಿವೃದ್ದಿ ನಿಗಮದ ನೌಕರರಾಗಿದ್ದ ಪಾಪೇಗೌಡ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ ಬೆಂಗಳೂರು ವಿಭಾಗ ಮತ್ತು ಕೋಲಾರ ಪ್ರಾಂತೀಯ ವಿಭಾಗ ವ್ಯಾಪ್ತಿಯ ಶ್ರೀನಿವಾಸಪುರ ಘಟಕದಲ್ಲಿನ ಕದರೀಪುರ ಸರ್ವೆ ನಂಬರ್‌ 270.42 ಹೆಕ್ಟೇರ್‌ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದೆ. ಕದರೀಪುರ ನೆಡುತೋಪಿನ ಬದಿಗಿರಿರುವ ಮದನಹಳ್ಳಿ ಗ್ರಾಮದ ಸರ್ವೆ ನಂಬರ್‌ 124 ಮತ್ತು 125ರಲ್ಲಿ ನಿಗಮದ ವತಿಯಿಂದ ಬೆಳೆಸಲಾಗಿರುವ ನೆಡುತೋಪಿನಲ್ಲಿ 50 ಎಕರೆ ವಿಸ್ತೀರ್ಣ ಪ್ರದೇಶ ಒತ್ತುವರಿಯಾಗಿದೆ ಎಂದು ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ  ಗಮನಕ್ಕೆ ತಂದಿದ್ದಾರೆ.

 

ನಿಗಮಕ್ಕೆ ಹಸ್ತಾಂತರಿಸಿರುವ ಅರಣ್ಯ ಪ್ರದೇಶಗಳಲ್ಲಿ 8,000 ಎಕರೆ ಅರಣ್ಯ ಪ್ರದೇಶ ಕಾಣೆಯಾಗಿದೆ. ಎಂದು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ತಪಾಸಣೆ ನಡೆಸಿದ ಸಿಎಜಿ ವರದಿಯಲ್ಲಿ ಸೇರಿಸಲಾಗಿದೆ. ಇದರ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

 

‘ಈ ಎಲ್ಲಾ ಪ್ರಕರಣಗಳಲ್ಲಿ ನೈಜತೆ ಮತ್ತು ವಾಸ್ತವತೆಯನ್ನು ತಿಳಿಯುವ ಸಲುವಾಗಿ ಕೂಲಂಕುಷ ಮತ್ತು ನಿಷ್ಪಕ್ಷಪಾತ ವಿಚಾರಣೆ ನಡೆಸಿ ಸತ್ಯ ಹೊರಬರಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಒಂದು ಸಮಿತಿಯನ್ನು ನೇಮಕ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅರಣ್ಯ ಪಡೆಯ ಮುಖ್ಯಸ್ಥರೂ ಅಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts