ಬೆಂಗಳೂರು; 2013-14ನೇ ಸಾಲಿನಿಂದ ಇದುವರೆಗೆ ಎಸ್‌ಡಿಪಿಐ, ಪಿಎಫ್‌ಐ ವಿರುದ್ಧ ಪ್ರಕರಣಗಳನ್ನು ಹಿಂಪಡೆದುಕೊಂಡಿರುವ ಕುರಿತು ಸರ್ಕಾರದ ಆದೇಶಗಳು, ನಡವಳಿಗಳನ್ನು ಒದಗಿಸಬೇಕು ಎಂದು ಆರ್‌ಟಿಐ ಅಡಿಯಲ್ಲಿ ನಿರ್ದಿಷ್ಟವಾಗಿ ಮಾಹಿತಿ ಕೋರಿದ್ದರೂ ಒಳಾಡಳಿತ ಇಲಾಖೆಯು ಸ್ಪಷ್ಟ ಉತ್ತರ ನೀಡಿಲ್ಲ.
ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧದ ಮೊಕದ್ದಮೆಗಳನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂಪಡೆದುಕೊಂಡಿತ್ತು ಎಂದು ಬಿಜೆಪಿಯು ವಾಗ್ದಾಳಿ ನಡೆಸಿತ್ತು. ಆದರೆ ಈ ಕುರಿತು ಆರ್‌ಟಿಐ ಅಡಿ ನಿರ್ದಿಷ್ಟವಾಗಿ ಸಂಘಟನೆಗಳನ್ನು ಹೆಸರಿಸಿ ಮಾಹಿತಿ ಕೋರಿದ್ದರೂ ಉತ್ತರ ನೀಡದೇ ಸರ್ಕಾರವು ನುಣುಚಿಕೊಂಡಿದೆ.
ವಿಶೇಷವೆಂದರೆ ಈ ಮಾಹಿತಿಯನ್ನು ಕೋರಿ ‘ದಿ ಫೈಲ್’ 2022ರ ಅಕ್ಟೋಬರ್ 6ರಂದು ಸಲ್ಲಿಸಿದ್ದ ಅರ್ಜಿಯನ್ನು ಒಂದು ತಿಂಗಳವರೆಗೂ ತನ್ನ ಬಳಿಯೇ ಇರಿಸಿಕೊಂಡಿದ್ದ ಒಳಾಡಳಿತ ಇಲಾಖೆಯು ತಿಂಗಳ ನಂತರ ಅಂದರೆ 2022ರ ನವೆಂಬರ್ 7ರಂದು ಕಡತ, ಪ್ರಕರಣ, ಆದೇಶದ ಸಂಖ್ಯೆಯನ್ನು ನಮೂದಿಸಿ ಕೋರಬೇಕು ಎಂದು ಅರ್ಜಿದಾರರಿಗೇ ಹಿಂಬರಹ ನೀಡಿದೆ.
‘ಎಸ್‌ಡಿಪಿಐ, ಪಿಎಫ್‌ಐ ವಿರುದ್ಧದ ಮೊಕದ್ದಮೆಗಳನ್ನು ಹಿಂಪಡೆದುಕೊಂಡಿರುವ ನಿರ್ದಿಷ್ಟವಾದ ಸಮಗ್ರ ಮಾಹಿತಿಯನ್ನು (ವರ್ಷವಾರು) ಮೊಕದ್ದಮೆ ಹಿಂಪಡೆದಿರುವ ಸಂಬಂಧ ಹೊರಡಿಸಿರುವ ಕರ್ನಾಟಕ ಸರ್ಕಾರದ ನಡವಳೀ, ಆದೇಶಗಳ ಪ್ರತಿಗಳನ್ನು ಒದಗಿಸುವಂತೆ ಕೋರಿರುತ್ತೀರಿ. ಈ ಬಗ್ಗೆ ಪರಿಶೀಲಿಸಲಾಗಿ ಮೊಕದ್ದಮೆಗಳನ್ನು ಹಿಂಪಡೆದುಕೊಂಡಿರುವ ನಿರ್ದಿಷ್ಟವಾದ ಕಡತ/ಪ್ರಕರಣ/ಆದೇಶದ ಸಂಖ್ಯೆಯನ್ನು ನಮೂದಿಸಿ ಕೋರಿದ್ದಲ್ಲಿ ಮಾಹಿತಿ ನೀಡಲು ಪರಿಶೀಲಿಸಲಾಗುವುದು,’ ಎಂದು 2022ರ ನವೆಂಬರ್ 7ರಂದು ಹಿಂಬರಹದಲ್ಲಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಪಿ ಎಫ್ ಐ ವಿರುದ್ಧದ ಕೇಸ್ ವಾಪಸ್ ಪಡೆಯಲಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸುನೀಲ್‌ಕುಮಾರ್ ಆದಿಯಾಗಿ ಸರ್ಕಾರದ ಬಹುತೇಕ ಸಚಿವರುಗಳು ಪಿಎಫ್‌ಐ ಭಾಗ್ಯ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದರು. ಆದರೆ ಇದೆಲ್ಲಾ ಸುಳ್ಳು ಎಂದು ಹೇಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಿಎಫ್‌ಐ ಸಂಘಟನೆ ನನ್ನಿಂದಲೇ ಬೆಳೆದಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಸಾವಿರ ಸುಳ್ಳುಗಳನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ಸುಳ್ಳು ಉದುರಿಸಿಕೊಳ್ಳುತ್ತಾ ತಿರುಗುತ್ತಿದ್ದಾರೆ ಎಂದು ಕಿಡಿಕಾರಿದ್ದರು.
‘ಬಿಜೆಪಿ ಸರ್ಕಾರಕ್ಕೆ ಈ ಬಗ್ಗೆ ನಾಲ್ಕು ಪತ್ರಗಳನ್ನು ಬರೆದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆಯೇ? ಯಾವುದೇ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತೇ ಎನ್ನುವ ಪ್ರಶ್ನೆ ಕೇಳಿದ್ದೆ. ನನ್ನ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಪಿಎಫ್‌ಐ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದರ ಬಗ್ಗೆ ಉಲ್ಲೇಖಗಳೇ ಇಲ್ಲ ಎಂದಿತ್ತು,’ ಎಂದು ಪತ್ರಿಕಾ ಹೇಳಿಕೆಗಳಲ್ಲಿ ವಿವರಿಸಿದ್ದರು.
ಯಾವ ಪಿಎಫ್‌ಐ ಕಾರ್ಯಕರ್ತರ ಮೇಲಿನ ಯಾವ ಪ್ರಕರಣವನ್ನು ಕಾಂಗ್ರೆಸ್ ಅವಧಿಯಲ್ಲಿ ಹಿಂದಕ್ಕೆ ಪಡೆಯಲಾಗಿತ್ತು ಎನ್ನುವುದನ್ನು ಬಿಜೆಪಿ ಹೇಳಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು, ಕಾರ್ಮಿಕರು, ದಲಿತರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದೇ ಹೆಚ್ಚು. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದಾರೆ. ಅವರೆಲ್ಲರನ್ನೂ ಪಿಎಫ್‌ಐ ಎಂದು ಬಿಂಬಿಸಿ ತಮ್ಮ ಸುಳ್ಳಿನ ಭಜನೆ ಮಾಡಿದರೆ ಜನ ನಂಬುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದನ್ನು ಸ್ಮರಿಸಬಹುದು.