ಪ್ರಗತಿ ಪ್ರತಿಮೆ ಅನಾವರಣ; ಮೋದಿ ಕಾರ್ಯಕ್ರಮ, ಕಾಮಗಾರಿ, ವ್ಯವಸ್ಥೆಗೆ 48.44 ಕೋಟಿ ವೆಚ್ಚ!

ಬೆಂಗಳೂರು; ಕೆಂ‍‍ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮ, ಮೂರು ಕಾಮಗಾರಿಗಳು, ವ್ಯವಸ್ಥೆ ಹಾಗೂ ಪ್ರಧಾನಿ ಮೋದಿ ಅವರು ಭಾಗವಹಿಸಲಿರುವ ಈ ಕಾರ್ಯಕ್ರಮದ ಆಯೋಜನೆಗೆ ಒಟ್ಟಾರೆ 48.44 ಕೋಟಿ ರು. ವೆಚ್ಚವಾಗಲಿದೆ!

 

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಪ್ರಶ್ನಿಸಿರುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಮಾಡಲಿರುವ ವೆಚ್ಚದ ವಿವರಗಳು ಮುನ್ನೆಲೆಗೆ ಬಂದಿವೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೂರು ಕಾಮಗಾರಿಗಳು ಮತ್ತು ವ್ಯವಸ್ಥೆಗೆ ಅಂದಾಜು 45.73 ಕೋಟಿ ರು. ವೆಚ್ಚವಾಗಲಿದೆ. ಅಲ್ಲದೇ ಪ್ರಧಾನಿ ಮೋದಿ ಅವರು ಭಾಗವಹಿಸಲಿರುವ ಈ ಕಾರ್ಯಕ್ರಮದ ಆಯೋಜನೆಗೆ 2.75 ಕೋಟಿ ರು ವೆಚ್ಚವಾಗಲಿದೆ ಎಂಬುದು ಲಭ್ಯವಿರುವ ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

 

‘ಮೂರು ಕಾಮಗಾರಿಗಳು/ವ್ಯವಸ್ಥೆಗೆ ತಗಲುವ ಅಂದಾಜು ಮೊತ್ತ 45.73 ಕೋಟಿ ರು. ವೆಚ್ಚವನ್ನು ಲೆಕ್ಕ ಶೀರ್ಷಿಕೆ (8443-00-117-0-18-542) ಅನುದಾನ ಬಿಡುಗಡೆ ಮಾಡಲು ಹಾಗೂ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯಿಂದ ತ್ವರಿತವಾಗಿ ಅನುಷ್ಠಾನಗೊಳಿಸಲು ಕೆಟಿಪಿಪಿ ಕಾಯ್ದೆಯಡಿ 4(ಜಿ) ಅಡಿ ಲೋಕೋಪಯೋಗಿ ಇಲಾಖೆಗೆ ವಿನಾಯಿತಿ ನೀಡಬೇಕು. ಹಾಗೂ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಉದ್ಘಾಟಿಸುವ ಕಾರ್ಯಕ್ರಮಕ್ಕೆ ತಗಲುವ 2.71 ಕೋಟಿ ರು. ವೆಚ್ಚವನ್ನು ಬಿಡುಗಡೆಗೊಳಿಸಬೇಕು. ಹಾಗೂ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಕಾರ್ಯಗತಗೊಳಿಸಲು ಕೆಟಿಪಿಪಿ ಕಾಯ್ದೆಯ 4 (ಜಿ) ವಿನಾಯಿತಿ ನೀಡಬೇಕು,’ ಎಂದು ಆರ್ಥಿಕ ಇಲಾಖೆಯ ಸಹಮತಿ ಕೋರಿ ಕಡತ ಮಂಡಿಸಲಾಗಿದೆ ಎಂಬುದು ಗೊತ್ತಾಗಿದೆ.

 

 

‘ಕೆಂಪೇಗೌಡ ಪ್ರತಿ ಅನಾವರಣ ಕಾರ್ಯಕ್ರಮವು ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಕಂಡಿಕೆ 9ರಲ್ಲಿ ಕಾಣಿಸಿರುವಂತೆ ಈ ಕಾರ್ಯಕ್ರಮದ ವಿವಿದ ವೆಚ್ಚಗಳಿಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲು ಮತ್ತು ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ನೀಡಲು ಕೋರಿದೆ. ಹಣ ಬಿಡುಗಡೆ ಮಾಡುವಾಗ ಟಿಪ್ಪಣಿ 9ರ ಕ್ರಮ ಸಂಖ್ಯೆ 1ರಲ್ಲಿ ಕಾಣಿಸಿರುವ ಮೊತ್ತವನ್ನು ಪಿಡಬ್ಲ್ಯೂಡಿ ಇಲಾಖೆಗೆ, ಕ್ರಮ ಸಂಖ್ಯೆ 2-3ರಲ್ಲಿ ತೋರಿಸಿರುವ ಹಣವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಲು ಅನುವಾಗುವಂತೆ ಕಂದಾಯ ಇಲಾಖೆಗೆ ನೀಡಲು ಕಡತವನ್ನು ಸಲ್ಲಿಸಿದೆ. ಕಾರ್ಯಕ್ರಮವು ಕೇವಲ ಇನ್ನು 2 ದಿವಸ ಇರುವುದರಿಂದ ಪೂರ್ವಸಿದ್ಧತೆಗಾಗಿ ಹಣದ ಅವಶ್ಯತೆ ಇರುವುದೆಂಬ ತುರ್ತು ಸಂದರ್ಭವನ್ನು ತಮ್ಮ ಅವಗಾಹನೆಗೆ ತರಲಾಗಿದೆ,’ ಎಂದು 2022ರ ನವೆಂಬರ್‌ 8ರಂದು ಆರ್ಥಿಕ ಇಲಾಖೆಗೆ ಕಡತ ಮಂಡಿಸಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಈ ಸಂಬಂಧ ಕಡತವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರು ಮುಖ್ಯಮಂತ್ರಿ, ಮತ್ತು ಪಿಡಬ್ಲ್ಯೂಡಿ ಪ್ರಧಾನ ಕಾರ್ಯದರ್ಶಿ ಜತೆ ಚರ್ಚಿಸಿ. ಮತ್ತು ಅಂದಾಜು ವೆಚ್ಚವನ್ನು ಪರಿಷ್ಕರಿಸಿ ಎಂದು ಸೂಚಿಸಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಈ ಯೋಜನೆಯು ಪ್ರತಿಮೆಯ ಜೊತೆಗೆ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 84 ಕೋಟಿ ರೂ .ವೆಚ್ಚ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದರು.

 

“ಸರ್ಕಾರದ ಹಣವನ್ನು ಬಳಸಿ (ಪ್ರತಿಮೆ ಸ್ಥಾಪಿಸುವುದು) ಮಾಡುವುದು ದೊಡ್ಡ ಅಪರಾಧ, ನಾವು (ಕರ್ನಾಟಕ ಸರ್ಕಾರ) ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ ಭೂಮಿ ಮತ್ತು ಹಣವನ್ನು ನೀಡಿದ್ದೇವೆ. 4,200 ಎಕರೆ ಭೂಮಿಯಲ್ಲಿ 2,000 ಎಕರೆಯನ್ನು ಎಕರೆಗೆ ಕೇವಲ 6 ಲಕ್ಷ ರೂ. ಹಣದ ಜೊತೆಗೆ ಷೇರುಗಳೂ ಇವೆ. ಅದು (ಬಿಐಎಎಲ್) ತನ್ನ ಹಣವನ್ನು ಬಳಸಬೇಕಿತ್ತು, ಸರ್ಕಾರದ ಹಣವನ್ನು ಏಕೆ ಬಳಸಬೇಕು,’ ಎಂದು ಶಿವಕುಮಾರ್ ಅವರು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts