ಬೆಂಗಳೂರು; ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಮುರುಘಾ ಶರಣರನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಮಾದಾರಾ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರು ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯು ಸಂತ್ರಸ್ತೆ ಎಂಬುದನ್ನೇ ಮರೆತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ನಿಕಟಪೂರ್ವ ಸದಸ್ಯ ಎನ್ ರವಿಕುಮಾರ್ ಅವರು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ‘ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸುವ ಬಹಿರಂಗ ಹೇಳಿಕೆ ನೀಡುವ ನೀವು ತಮ್ಮದೆ ಆದ ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ,’ ಎಂದು ಪ್ರಶ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಆ ಹೆಣ್ಣು ಮಗು, ಮತ್ತವರ ಕುಟುಂಬ ಆರೋಪಿಯ ಬಲಿಷ್ಠ ಪ್ರಭಾವದ ಕಾವಿನಲ್ಲಿ ಹೇಗೆಲ್ಲಾ ನರಳಿ ನಲುಗುತ್ತಿರಬಹುದು ಎಂಬುದನ್ನು ನಿಸ್ಸಂಸಾರಿಯಾದ ನೀವು ಅರ್ಥಮಾಡಿಕೊಳ್ಳಲು ಸಾಧ್ಯವೇ ಎಂದೂ ಪ್ರಶ್ನಿಸಿರುವ ರವಿಕುಮಾರ್ ಅವರು ನ್ಯಾಯಪ್ರಜ್ಞೆಯನ್ನು ವ್ಯಕ್ತಪಡಿಸದೆ ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸ ಹೊರಟಿರುವುದು ದೌಭಾರ್ಗ್ಯದ ಸಂಗತಿ ಎಂದಿದ್ದಾರೆ.
ಬಹಿರಂಗ ಪತ್ರದಲ್ಲೇನಿದೆ?
ಪ್ರಕರಣ ತನಿಖೆಯ ಆರಂಭಿಕ ಹಂತದಲ್ಲಿರುವಾಗ ಯಾರೇ ಆದರೋ ಪ್ರಭಾವಿ ಆರೋಪಿಗೆ ಬೆಂಬಲ ನೀಡುವುದು ಸತ್ಯದ ಮೇಲೆ, ಸಹಜ ನ್ಯಾಯದ ಮೇಲೆ ದುಷ್ಪರಿಣಾಮ ಬೀರುವ ಅಥವಾ ಸಂತ್ರಸ್ತೆಯನ್ನು ಅಸಹಾಯಕಳನ್ನಾಗಿ ಮಾಡುವ ಬೆದರಿಕೆಯೂ ಆಗಿರುತ್ತದೆ.
ಮುರುಘಾಮಠಕ್ಕೆ ’ಲಿಂಗಾಯಿತ ಪರಂಪರೆ’ (ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಬಲಿಷ್ಠವಾದ) ಇದೆ. ಅದು ತೀರ್ಮಾನ ಕೈಗೊಳ್ಳುತ್ತದೆ ಎಂದು ಹೆಮ್ಮೆಯಿಂದ ಹೇಳುವ ನೀವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಮಾದಿಗ ಸಮುದಾಯದ ಅಪ್ರಾಪ್ತ ಹೆಣ್ಣುಮಗಳೊಬ್ಬಳ ಮತ್ತು ಆಕೆಯ ಕುಟುಂಬದ ಆತ್ಮಗೌರವ, ಚಾರಿತ್ರ್ಯವನ್ನು ಕಾಪಾಡುವುದು, ದಿಟ್ಟದನಿಯಲ್ಲಿ ನ್ಯಾಯ ಕೇಳುವುದು ಮತ್ತು ತನ್ನ ದುರ್ಬಲ ಸಮುದಾಯದ ಜೊತೆ ನಿಲ್ಲುವುದು ಧರ್ಮ, ನ್ಯಾಯ ಮತ್ತು ಆತ್ಮಸಾಕ್ಷಿಯ ನಡೆಯಾಗುತ್ತದೆ.
ಮುರುಘಾ ಶರಣರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಬಾಲಕಿಯರು ಹಿಂದುಳಿದ ಮತ್ತು ಮಾದಿಗ ಸಮುದಾಯಕ್ಕೆ ಸೇರಿದವರೆನ್ನೆಲಾಗಿದೆ. ಇಲ್ಲಿ ಜಾತಿ ಅಪ್ರಸ್ತುತ ನಿಜ, ಹೆಣ್ಣು ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಸದಾ ಶೋಷಣೆಗೆ ಒಳಗಾಗುತ್ತಲೇ ಇರುತ್ತಾಳೆ. ಈ ಪ್ರಕರಣದಲ್ಲಿ ಈ ಇಬ್ಬರೂ ಹೆಣ್ಣುಮಕ್ಕಳು ಸಮಾನ ಸಂತ್ರಸ್ತರೆ ಆಗಿರುತ್ತಾರೆ. ಈ ಇಬ್ಬರಲ್ಲೂ ಜಾತಿ ಬಗೆದು ನೋಡಬೇಕಾಗಿಲ್ಲ.
ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಾದಿಗ ಸಮುದಾಯದ ಹೆಣ್ಣುಮಗಳೊಬ್ಬಳ ಮಾನ, ಪ್ರಾಣ, ಆತ್ಮಗೌರವ, ಸಾಮಾಜಿಕ ಗೌರವ ರಕ್ಷಣೆ ಕುರಿತು ನೀವು *’ಉತ್ತರದಾಯಿ’* ಗಳು ಎಂದು ಪತ್ರದಲ್ಲಿ ಹೇಳಿದ್ದಾರೆ.
ಬಸವಣ್ಣ ಯಾವ ವೈದಿಕ ವಿಚಾರಧಾರೆಗಳ ವಿರುದ್ದ ಬಂಡೆದ್ದು ಹೋರಾಡಿದರೂ ಅಂತಹ ವಿಚಾರಧಾರೆಯ ಅನುಯಾಯಿಗಳಿಗಿಂತಲೂ ಮಿಗಿಲಾದ ನಿಮ್ಮ ಸಡಗರ ಬಸವಣ್ಣರಿಗೆ ಬಗೆಯುತ್ತಿರುವ ದ್ರೋಹವೆಂದೆ ಭಾವಿಸಬೇಕಾದ ನಿಷ್ಠುರಕ್ಕೆ ಮಾದಿಗ ಸಮುದಾಯವನ್ನು ದೂಡಿದ್ದೀರಿ ಎಂದು ಪತ್ರದಲ್ಲಿ ರವಿಕುಮಾರ್ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.