ಜನಸೇವಾ ಟ್ರಸ್ಟ್‌ಗೆ 35 ಎಕರೆ ಗೋಮಾಳ; ಕ್ಯಾಬಿನೆಟ್‌ ಅನುಮೋದನೆಗೂ ಮುನ್ನ ತಿರಸ್ಕೃತಗೊಂಡಿದ್ದ ಪ್ರಸ್ತಾವನೆ

ಬೆಂಗಳೂರು; ಎಪ್ಪತ್ತು ಕೋಟಿ ರು. ಬೆಲೆಬಾಳುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೇ ತಿರಸ್ಕೃತಗೊಂಡಿತ್ತು. ಆದರೂ ಕಂದಾಯ ಸಚಿವ ಆರ್‌ ಅಶೋಕ್‌ ಅವರು  ಸಚಿವ ಸಂಪುಟದ ಮುಂದಿರಿಸುವ ಮೂಲಕ ಜನಸೇವಾ ಟ್ರಸ್ಟ್‌ ಗೋಮಾಳ ಜಮೀನನ್ನು ಮಂಜೂರು ಮಾಡಿಸಿಕೊಂಡಿರುವುದು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

 

ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್‌ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಹಂಚಿಕೆ ಸಂಬಂಧದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್‌ ಅವರು ತಿರಸ್ಕರಿಸಿದ್ದರು. ಈ ಸಂಬಂಧ 2022ರ ಮೇ 4  ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆದರೂ ಸಂಘ ಪರಿವಾರದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರವು ಈಗಾಗಲೇ ತಿರಸ್ಕೃತಗೊಂಡಿದ್ದ ಪ್ರಸ್ತಾವನೆಯನ್ನೇ 2 ತಿಂಗಳ ನಂತರ ಸಚಿವ ಸಂಪುಟದ ಮುಂದಿರಿಸಿ 70 ಕೋಟಿ ರು. ಬೆಲೆಬಾಳುವ ಜಮೀನನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 

ಪತ್ರದಲ್ಲೇನಿತ್ತು?

 

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂ 89ರಲ್ಲಿ ಲಭ್ಯವಿರುವ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಈ ಭೂಮಿಯು ಅತಿ ಅಮೂಲ್ಯವಾದ ಭೂಮಿಯಾಗಿರುವುದರಿಂದ ಈ ಸಂಸ್ಥೆಗೆ ನೀಡುವುದು ಸರಿಯಲ್ಲ. ಆದ್ದರಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ತಿಳಿಸಲು ನಿರ್ದೇಶಿತನಾಗಿದ್ದೇನೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್‌ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದಾರೆ.

 

ಕಂದಾಯ ಇಲಾಖೆಯು ಪ್ರಸ್ತಾವನೆ ತಿರಸ್ಕರಿಸಿದ್ದ ಪ್ರತಿ

 

ಅಲ್ಲದೆ ಅಮೂಲ್ಯವಾದ ಜಮೀನನ್ನು ಮಂಜೂರು ಮಾಡುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್‌ ಅವರು ಪ್ರಾದೇಶಿಕ ಆಯುಕ್ತರ ಮೂಲಕ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಬದಲಿಗೆ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಸಂಬಂಧವೂ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು 2022ರ ಮಾರ್ಚ್‌ 14ರಂದೇ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳಿಗೆ ಸರ್ಕಾರಿ ಜಮೀನುಗಳನ್ನು ಭೂ ಮಂಜೂರಾತಿ, ಗುತ್ತಿಗೆ ನೀಡುವ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಚೆಕ್‌ಲಿಸ್ಟ್‌ನೊಂದಿಗೆ ಪ್ರಾದೇಶಿಕ ಆಯುಕ್ತರ ಮುಖಾಂತರ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿರುತ್ತದೆ. ಆದರೆ ಪ್ರಾದೇಶಿಕ ಆಯುಕ್ತರ ಮುಖಾಂತರ ಸಲ್ಲಲಿಸದೇ ನೇರವಾಗಿ ಸಲ್ಲಿಸಲಾಗಿರುತ್ತದೆ. ಹೀಗಾಗಿ ಈ ಪ್ರಸ್ತಾವನೆಯನ್ನು ನಿಯಮಾನುಸಾರ ಪ್ರಾದೇಶಿಕ ಆಯುಕ್ತರ ಮುಖಾಂತರವೇ ಸಲ್ಲಿಸಬೇಕಕು,’ ಎಂದು ಪತ್ರದಲ್ಲಿ ಸೂಚಿಸಿದ್ದರು.

 

ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರಾಷ್ಟ್ರೋತ್ಥಾನ ಪರಿಷತ್‌, ರಾಷ್ಟ್ರೋತ್ಥಾನ ಟ್ರಸ್ಟ್‌ಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಮೀಸಲಿರಿಸಿರುವ ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿರುವುದನ್ನು ಸ್ಮರಿಸಬಹುದು.

 

ಜನಸೇವಾ ಟ್ರಸ್ಟ್‌ಗೆ ಮಂಜೂರಾಗಿರುವ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಕೃಷಿ ಜಮೀನು ಎಕರೆಯೊಂದಕ್ಕೆ ಸರ್ಕಾರಿ ಮಾರ್ಗಸೂಚಿ ಬೆಲೆಯು 1.20 ಕೋಟಿ ರು. ಇದೆ. ಇದರ ಪ್ರಕಾರ 35.33 ಎಕರೆಗೆ 42.09 ಕೋಟಿ ರು. ಆಗಲಿದೆ. ಹಾಗೆಯೇ ಮುಕ್ತ ಮಾರುಕಟ್ಟೆಯಲ್ಲಿ ಎಕರೆಯೊಂದಕ್ಕೆ 2 ಕೋಟಿ ರು. ಎಂದು ಅಂದಾಜಿಸಿದರೂ 35.33 ಗುಂಟೆಗೆ 70.66 ಕೋಟಿ ರು. ಮೌಲ್ಯವಿದೆ.

 

40 ಎಕರೆ ವಿಸ್ತೀರ್ಣದ ಗೋಮಾಳದಲ್ಲಿ ಆಶ್ರಯ ಯೋಜನೆಗಾಗಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಶಾಶ್ವತ ಪುನರ್‌ ವಸತಿ ಉದ್ದೇಶಕ್ಕೆ ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿಗೂ ಜಮೀನು ಕಾಯ್ದಿರಿಸಿದೆ. ಅಲ್ಲದೆ ಈ ಎರಡೂ ನಿಗಮಗಳು ಈ ಜಮೀನಿನಲ್ಲಿ ಸ್ವಾಧೀನ ಹೊಂದಿದೆ.

the fil favicon

SUPPORT THE FILE

Latest News

Related Posts