ಬೆಂಗಳೂರು; ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೌಕರ್ಯ, ಪೌಷ್ಠಿಕಾಂಶ, ನೀರು ಸರಬರಾಜು ಮತ್ತು ವಸತಿ ವಲಯಗಳಿಗೆ ರಾಜ್ಯ ನೀಡುತ್ತಿರುವ ಹಣದ ಪಾಲು ಕಡಿಮೆಯಾಗುತ್ತ ಬಂದಿದೆ ಎಂಬ ಸಂಗತಿಯನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯು ಬಹಿರಂಗಪಡಿಸಿದೆ.
ವೆಚ್ಚ ಮತ್ತು ಬಜೆಟ್ ಹಂಚಿಕೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ವಿಶ್ಲೇಷಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಕೃಷಿ, ಗ್ರಾಮೀಣಾಭಿವೃದ್ಧಿ ವಲಯಕ್ಕೆ ಮಾಡಿರುವ ವೆಚ್ಚ ಮತ್ತು ಸಾಮಾಜಿಕ ವಲಯಗಳಿಗೆ ಮಾಡಿರುವ ವೆಚ್ಚದೊಂದಿಗೆ ತುಲನೆ ಮಾಡಿದೆ.
‘ರಾಜ್ಯವು ಶಿಕ್ಷಣ ಮತ್ತು ಆರೋಗ್ಯದ ವಲಯದಲ್ಲಿ ಇನ್ನೂ ಹೆಚ್ಚಿನ ಬಂಡವಾಳವನ್ನು ಹೂಡುವ ಅಗತ್ಯವಿದೆ. ರಾಜ್ಯದ ಎಲ್ಲಾ ಜನರಿಗೆ ಆರೋಗ್ಯ ಸೇವೆಗಳನ್ನು ಪೂರೈಸಲು, ವೃದ್ಧಾಪ್ಯವನ್ನು ತಲುಪಿರುವವರಿಗೆ ಆರೈಕೆ ಮತ್ತು ಅವರ ಆರೋಗ್ಯವನ್ನು ಜೋಪಾನಿಸಬೇಕೆಂದರೆ ಆರೋಗ್ಯ ವಲಯದ ಮೇಲೆ ಹೆಚ್ಚಿನ ಬಂಡವಾಳವನ್ನು ತೊಡಗಿಸಬೇಕಾಗಿದೆ,’ ಎಂದು ಸಮೀಕ್ಷೆ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
2012ರಲ್ಲಿ ಆರೋಗ್ಯ ವಲಯಕ್ಕೆ ರಾಜ್ಯಗಳ ವೆಚ್ಚ ಶೇ.4.2ರಷ್ಟಿತ್ತು. 2022ರ ಬಜೆಟ್‌ನಲ್ಲಿ ಶೇ. 5.5ಕ್ಕೆ ಏರಿಕೆಯಾಗಿದೆ. ಆದರೆ ಕರ್ನಾಟಕದ ವೆಚ್ಚವು 2012ರಲ್ಲಿ ಶೇ. 3.9ರಷ್ಟಿದ್ದರೆ 2022ರಲ್ಲಿ ಶೇ.5 ಮಾತ್ರ ಇದೆ. ಅದೇ ಸಮಯದಲ್ಲಿ ಶಿಕ್ಷಣದ ಮೇಲಿನ ವೆಚ್ಚವೂ ಪ್ರತೀ ವರ್ಷ ಕುಗ್ಗುತ್ತಲೇ ಬಂದಿದೆ. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ರಾಜ್ಯಗಳ ಸರಾಸರಿ 2012ರಲ್ಲಿ ಶೇ.16.3ರಷ್ಟಿ ದ್ದರೆ 2022ರಲ್ಲಿ ಶೆ.13.9ಕ್ಕೆ ಇಳಿಯುತ್ತದೆ. ಆದರೆ ಕರ್ನಾಟಕ ಇದೇ ಅವಧಿಯಲ್ಲಿ ಇನ್ನೂ ಕಡಿಮೆ ಮೊತ್ತವನ್ನು ಹಂಚಿಕೆ ಮಾಡಿರುತ್ತದೆ ಎಂದು ಸಮೀಕ್ಷೆ ವರದಿಯು ಬಹಿರಂಗಗೊಳಿಸಿದೆ.
‘2012ರಲ್ಲಿ ಶೇ.14.7ರಷ್ಟು ಮತ್ತು 2022ರಲ್ಲಿ ಶೇ.11.8ರಷ್ಟಾಗಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಸ್ಥಿರವಾಗಿ ಉಳಿದಿದೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ ಎನ್ನುವುದು ಸತ್ಯವಾದರೂ ಉತ್ತಮ ಗುಣಮಟ್ಟದ ದುಡಿಯುವ ವರ್ಗವನ್ನು ಸೃಷ್ಟಿಸುವ ಉದ್ದೇಶದಿಂದ ಉನ್ನತ ಶಿಕ್ಷಣದಲ್ಲಿ ಇನ್ನು ಹೆಚ್ಚಿನ ಬಂಡವಾಳವನ್ನು ಹೂಡುವ ಅಗತ್ಯವಿದೆ, ‘ ಎಂದು ಸಮಿಕ್ಷೆ ವರದಿಯು ಒತ್ತಿ ಹೇಳಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳನ್ನು ಅವಲಂಬಿಸಿರುವರ ಮೇಲಿನ ತಲಾ ವೆಚ್ಚಕ್ಕೂ ಇತರೆ ವಲಯಗಳನ್ನು ಅವಲಂಬಿಸಿರುವರ ಮೇಲಿನ ತಲಾ ವೆಚ್ಚಕ್ಕೂ ಸಾಕಷ್ಟು ವ್ಯತ್ಯಾಸದ ಮೇಲೆ ಸಮೀಕ್ಷೆ ವರದಿಯು ಬೆಳಕು ಚೆಲ್ಲಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ವಲಯಕ್ಕೆ (ತಲಾ ವೆಚ್ಚ) 2017-18ರಿಂದ 2021-22ರವರೆಗೆ 1,46,786 ರು. ವೆಚ್ಚ ಮಾಡಿದೆ. ಅದೇ ರೀತಿ ಇತರೆ ವಲಯಗಳ ಮೇಲೆ ಇದೇ ಅವಧಿಯಲ್ಲಿ 86, 003 ರು. ವೆಚ್ಚ ಮಾಡಿದೆ. ಅಂದರೆ 60,783 ರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಕ್ಕೆ ವೆಚ್ಚ ಮಾಡಿದಂತಾಗಿದೆ.
2017-18ರಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಕ್ಕೆ ತಲಾ ವೆಚ್ಚದ ರೂಪದಲ್ಲಿ 25,472 ರು. ಖರ್ಚಾದರೆ ಇತರೆ ವಲಯಗಳ ಮೇಲಿನ ತಲಾ ವೆಚ್ಚವು 16,093 ರು. ಆಗಿದೆ. 2022ರ ವರ್ಷಕ್ಕೆ ಇದು 29,772 ಕೋಟಿ ಮತ್ತು 18,371 ಕೋಟಿ ರು. ಆಗುತ್ತದೆ. ‘ಕೈಗಾರಿಕೆ, ಸೇವೆ ಮತ್ತು ನಗರಾಭಿವೃದ್ಧಿ ವಲಯಗಳಿಗೆ ಅಸಮರ್ಪಕವಾಗಿ ಹಂಚಿಕೆಯಾಗುತ್ತಿದೆ,’ ಎಂದೂ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳು ನಿರೀಕ್ಷಿತ ಬೆಳವಣಿಗೆ ಸಾಧಿಸಲು ಇಷ್ಟು ಬೃಹತ್ ಪ್ರಮಾಣದಲ್ಲಿ ಹೂಡಿಕೆ ನಿರೀಕ್ಷಿಸಬೇಕು. ಆದರೆ ಇಂತಹುದೇ ಹೂಡಿಕೆಯು ಇತರೆ ವಲಯಗಳ ಅಭಿವೃದ್ಧಿ ದೃಷ್ಟಿಯಿಂದಲೂ ಬೇಕಾಗುತ್ತದೆ. ಶೇ.41ರಷ್ಟು ಜನರು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅವಲಂಬಿಸಿದ್ದು ಶೇ. 59ರಷ್ಟು ಜನಸಂಖ್ಯೆ ಇತರೆ ವಲಯಗಳನ್ನು ಅವಲಂಬಿಸಿದೆ. ಕರ್ನಾಟಕವು ತುರ್ತಾಗಿ ಲಭ್ಯವಿರುವ ಕಾರ್ಮಿಕರನ್ನು ಹೆಚ್ಚಿನ ಮೌಲ್ಯವನ್ನು ಒದಗಿಸುವ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಬೇಕಿದೆ ಎಂದು ಸಮೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ.
‘ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹಾಲಿ ನೀಡುತ್ತಿರುವ ಹಣದ ಹಂಚಿಕೆಯನ್ನು ಕಾಪಾಡಿಕೊಳ್ಳುತ್ತಲೇ ಕೈಗಾರಿಕೆ ಮತ್ತು ಸೇವಾ ವಲಯಕ್ಕೆ ಹಣದ ಹಂಚಿಕೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಏಕೆಂದರೆ ಈ ವಲಯಗಳಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಅಗತ್ಯವಿದೆ,’ ಎಂದು ಸಮೀಕ್ಷೆ ವರದಿಯು ಅಭಿಪ್ರಾಯಪಟ್ಟಿದೆ.