ಕೇಂದ್ರದ ವೆಚ್ಚ ದಿನೇ ದಿನೇ ಕಡಿತ, ರಾಜ್ಯದ ವೆಚ್ಚದಲ್ಲಿ ಹೆಚ್ಚಳ; ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗ

Photo Credit; KhanlishNews

ಬೆಂಗಳೂರು; ಕೋವಿಡ್‌ 19ರ ಸಾಂಕ್ರಾಮಿಕ ಪರಿಸ್ಥಿತಿ ವರ್ಷಗಳನ್ನು ಹೊರತುಪಡಿಸಿದರೆ ಕೇಂದ್ರವು ಮಾಡುತ್ತಿರುವ ವೆಚ್ಚವು ದಿನೇ ದಿನೇ ಕಡಿತಗೊಳ್ಳುತ್ತಿದ್ದರೆ ರಾಜ್ಯದ ವೆಚ್ಚವು ಹೆಚ್ಚುತ್ತಿದೆ ಎಂಬ ಅಂಶವನ್ನು ಕರ್ನಾಟಕ ಆರ್ಥಿಕ ಸಮೀಕ್ಷೆ (2021-22) ಹೊರಗೆಡವಿದೆ.

 

ವೆಚ್ಚ ಮತ್ತು ಬಜೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ವಿಶ್ಲೇಷಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ದುಡಿಯುವ ವರ್ಗವನ್ನು ಕಡಿಮೆ ಆದಾಯ ನೀಡುವ ಕೃಷಿ ವಲಯದಿಂದ ಹೆಚ್ಚಿನ ಆದಾಯ ನೀಡುವ ಕೈಗಾರಿಕೆ, ಸೇವಾ ವಲಯಕ್ಕೆ ಹೋಗುವಂತೆ ಮಾಡಲು ಸಾಕಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಯ ದರದ ಅಗತ್ಯವಿರುತ್ತದೆ ಎಂದು ಹೇಳಿದೆ.

 

‘ಕೇಂದ್ರವು ಮಾಡುತ್ತಿರುವ ವೆಚ್ಚವು ಕಡಿತಗೊಳ್ಳುತ್ತಿದ್ದು ರಾಜ್ಯದ ವೆಚ್ಚವು ಹೆಚ್ಚುತ್ತಿದೆ. ಆದ್ದರಿಂದ ರಾಜ್ಯದ ಬಜೆಟ್‌ನಲ್ಲಿ ಮೀಸಲಿಡುವ ಹಣದಿಂದ ರಾಜ್ಯದ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರಿ ಅವರ ಈಗಿನ ಭವಿಷ್ಯದ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಅವಕಾಶ ಮಾಡುತ್ತದೆ,’ ಎಂದು ಸಮೀಕ್ಷೆಯಲ್ಲಿ ವಿವರಿಸಿದೆ.

 

2016ರಲ್ಲಿ ರಾಜ್ಯದ ಪಾಲು 23 ಲಕ್ಷ ಕೋಟಿಗಳಿದ್ದರೆ 2022ರಲ್ಲಿ 43 ಲಕ್ಷ ಕೋಟಿಗಳಿರುತ್ತವೆ. ಇದೇ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವೆಚ್ಚದ ಪ್ರಮಾಣವು 32.7 ಲಕ್ಷ ಕೋಟಿಗಳಿಂದ 62.1 ಲಕ್ಷ ಕೋಟಿಗೆ ಬಂದು ತಲುಪಿರುವುದು ಸಮೀಕ್ಷೆ ವರದಿಯಿಂದ ತಿಳಿದು ಬಂದಿದೆ.

 

ರಾಜ್ಯ ಸರ್ಕಾರದ ವೆಚ್ಚವು 2016ರ ವೇಳೆಗಾಗಲೇ ಎರಡು ಪಟ್ಟು ಹೆಚ್ಚಾಗಿತ್ತು. ಕೇಂದ್ರದ ವೆಚ್ಚ ಶೇ. 29.6ರಷ್ಟಿದ್ದರೆ ರಾಜ್ಯದ ಖರ್ಚು ಶೇ. 70.4ರಷ್ಟಿತ್ತು. 2019ರಲ್ಲಿ ಇದು ಶೇ. 73.4ಕ್ಕೆ ಏರಿದರೆ 2020ರಲ್ಲಿ ಇದು ಶೇಕಡ 68.4ಕ್ಕೆ ಇಳಿಕೆಯಾಗಿ ಮತ್ತೆ 2021ರಲ್ಲಿ ಶೇ.63.3ಕ್ಕೆ ಇಳಿಕೆ ಕಂಡಿದೆ.

 

2015-16ರಲ್ಲಿ ಕೇಂದ್ರದ ಶೇಕಡವಾರು ಪಾಲು 29.6ರಷ್ಟಿತ್ತು. 2016-17ರಲ್ಲಿ 28.4, 2017-18ರಲ್ಲಿ 29.1, 2018-19ರಲ್ಲಿ 26.6, 2019-20ರಲ್ಲಿ 31.6, 2020-21ರಲ್ಲಿ 36.7, 2021-22ರಲ್ಲಿ ಶೇ. 30.8ಕ್ಕೆ ಇಳಿದಿದೆ. ಅದೇ ರೀತಿ ರಾಜ್ಯದ ವೆಚ್ಚವು 2015-16ರಲ್ಲಿ ಶೇ. 70.4, 2016-17ರಲ್ಲಿ 71.6, 2017-18ರಲ್ಲಿ 70.9, 2018-19ರಲ್ಲಿ 73.4, 2019-20ರಲ್ಲಿ 68.4, 2020-21ರಲ್ಲಿ 63.3, 2021-22ರಲ್ಲಿ ಶೇ. 69.2ರಷ್ಟಿತ್ತು ಎಂಬುದು ಸಮೀಕ್ಷೆಯ ವರದಿಯಿಂದ ಗೊತ್ತಾಗಿದೆ.

 

‘ಬಹುಶಃ ಕೋವಿಡ್‌ 19 ಸಾಂಕ್ರಾಮಿಕ ಕಾರಣದಿಂದ ಕೇಂದ್ರ ಸರ್ಕಾರವು ಜನರ ಜೀವ ರಕ್ಷಣೆ ಮಾಡಲು ಅನೇಕ ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯನ್ನು ಹೊಂದಿತ್ತು. 2022ರ ಅಂಕಿ ಸಂಖ್ಯೆಯ ಪ್ರಕಾರ ರಾಜ್ಯ ಸರ್ಕಾರ ಮತ್ತೆ ಒಟ್ಟಾರೆ ವೆಚ್ಚದ ಶೇ.70ರಷ್ಟನ್ನು ತಾನೇ ಭರಿಸಿಕೊಂಡಿದೆ. ಹೀಗೆ ಕೇಂದ್ರ ಸರ್ಕಾರದ ವೆಚ್ಚ ಕಡಿತಗೊಂಡು ಈ ದಿನಗಳಲ್ಲಿ ರಾಜ್ಯ ಸರ್ಕಾರದ ವೆಚ್ಚ ಬಾಬ್ತು ಹೆಚ್ಚುತ್ತಿರುವ ರಾಜ್ಯದ ಬಜೆಟ್‌ ಹಂಚಿಕೆ ಜನಸಾಮಾನ್ಯರ ಬದುಕನ್ನು ಮತ್ತು ಅವರ ಉದ್ಯೋಗದ ಸಾಧ್ಯತೆಗಳನ್ನು ಹೆಚ್ಚು ಪ್ರಭಾವಿಸುತ್ತದೆ,’ ಎಂದು ವಿಶ್ಲೇಷಿಸಿದೆ.

 

ಕೇಂದ್ರದ ವೆಚ್ಚ ಕಡಿತಗೊಂಡಿರುವುದು ಮತ್ತು ರಾಜ್ಯದ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಬಜೆಟ್‌ ಹಂಚಿಕೆ ತನ್ನ ನಾಗರಿಕರ ಸಾಮಾಜಿಕ, ಆರ್ಥಿಕ ಬದುಕಿನ ಮೇಲೆ ನಿರೀಕ್ಷಿತ ಪ್ರಭಾವವನ್ನು ಬೀರುತ್ತಿದೆಯೇ ಇಲ್ಲವೇ ಎಂದು ಪರೀಕ್ಷಿಸಿ ನೋಡಿಕೊಳ್ಳಬೇಕಾಗುವುದು ಅನಿವಾರ್ಯವಾಗಿದೆ ಎಂದು ಸಮೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ.

 

ಕಳೆದ 5 ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿ ವೆಚ್ಚಗಳ ಮಾಹಿತಿಯನ್ನು ಒದಗಿಸಿರುವ ಸಮೀಕ್ಷೆ ವರದಿಯಲ್ಲಿ ಕೃಷಿ, ಗ್ರಾಮೀಣ ವಲಯ, ಕೃಷಿ ಮತ್ತು ಸಹ ಚಟುವಟಿಕೆಗಳು, ನೀರಾವರಿ, ಪ್ರವಾಹ ನಿಯಂತ್ರಣ, ವಿದ್ಯುತ್‌, ವಸತಿ, ನಗರಾಭಿವೃದ್ದಿ, ಕಾರ್ಮಿಕರು ಮತ್ತು ಉದ್ಯೋಗ, ಕೈಗಾರಿಕೆ, ಸಾರಿಗೆ, ಸಂವಹನ, ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಕ್ರೀಡೆ, ಆರೋಗ್ಯ, ನೀರು ಪೂರೈಕೆ , ಸಾಮಾಜಿಕ ಸುರಕ್ಷತೆ, ಸಮಾಜ ಕಲ್ಯಾಣದ ಮೇಲಿನ ವೆಚ್ಚವನ್ನೂ ವಿಶ್ಲೇಷಿಸಲಾಗಿದೆ.

 

ಕೃಷಿ ಮತ್ತು ಗ್ರಾಮೀಣ ವಲಯಕ್ಕೆ 2017-18ರಲ್ಲಿ 19, 186ಕೋಟಿ ರು., 2018-19ರಲ್ಲಿ 18,559 ಕೋಟಿ, 2019-20ರಲ್ಲಿ 23,258 ಕೋಟಿ, 2020-21ರಲ್ಲಿ 18,537 ಕೋಟಿ ಮತ್ತು 2021-22ರಲ್ಲಿ 17, 247 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಕಾರ್ಮಿಕರು ಮತ್ತು ಉದ್ಯೋಗ ವಲಯಕ್ಕೆ ಸಂಬಂಧಿಸಿದಂತೆ 2017-18ರಲ್ಲಿ 56.7 ಕೋಟಿ, 2018-19ರಲ್ಲಿ 769 ಕೋಟಿ, 2019-20ರಲ್ಲಿ 9,951 ಕೋಟಿ, 2020-21ರಲ್ಲಿ 10,232 ಕೋಟಿ, 2021-22ರಲ್ಲಿ 10,480 ಕೋಟಿ ರು. ಖರ್ಚಾಗಿದೆ.

 

ಸಾಮಾಜಿಕ ಸುರಕ್ಷತೆ ಮತ್ತು ಸಮಾಜ ಕಲ್ಯಾಣ ವಲಯದಲ್ಲಿ 2017-18ರಲ್ಲಿ 17,872 ಕೋಟಿ, 2018-19ರಲ್ಲಿ 19,727 ಕೋಟಿ, 2019-20ರಲ್ಲಿ 10,031 ಕೋಟಿ, 2020-21ರಲ್ಲಿ 7,681 ಕೋಟಿ, 2021-22ರಲ್ಲಿ 8,762 ಕೋಟಿ ರು. ವೆಚ್ಚವಾಗಿದೆ.

the fil favicon

SUPPORT THE FILE

Latest News

Related Posts