ಮತಾಂತರ ನಿಷೇಧ ಮಸೂದೆ ಮಂಡಿಸಲು ತೋರುವ ತರಾತುರಿ ಪೌಷ್ಠಿಕಾಂಶ ನೀತಿ ರೂಪಿಸಲು ಏಕಿಲ್ಲ?

ಬೆಂಗಳೂರು; ಮತಾಂತರಗೊಂಡಿರುವ ನಿಖರ ಸಂಖ್ಯೆ ಇಲ್ಲದಿದ್ದರೂ ಮತಾಂತರ ನಿಷೇಧ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿರುವ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಕ್ರಮವನ್ನೂ ವಹಿಸಿಲ್ಲ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯು ತಮಿಳುನಾಡು ಮತ್ತು ಹರ್ಯಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸುವ ಸಂಬಂಧ ಮಾಡಿದ್ದ ಶಿಫಾರಸ್ಸು ಕಸದ ಬುಟ್ಟಿಗೆ ಎಸೆದಿದೆ.

ತಮಿಳುನಾಡು ಮತ್ತು ಹರ್ಯಾಣ ರಾಜ್ಯದ ಮಾದರಿಯಲ್ಲಿ ರಾಜ್ಯದಲ್ಲಿಯೂ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯು ಪೌಷ್ಠಿಕಾಂಶದ ಪುನರ್ವಸತಿ ಕೇಂದ್ರದ ಕಾರ್ಯನಿರ್ವಹಣೆ- ಕರ್ನಾಟಕದ ಪ್ರದೇಶಗಳಲ್ಲಿ ಒಂದು ತುಲನಾತ್ಮಕ ಅಧ್ಯಯನ ವರದಿಯನ್ನು 2020ರ ಮೇ ತಿಂಗಳಿನಲ್ಲಿ ಸಲ್ಲಿಸಿತ್ತು. ವರದಿ ಸಲ್ಲಿಸಿದ ನಂತರ ಮೂರ್ನಾಲ್ಕು ಅಧಿವೇಶನಗಳು ನಡೆದಿವೆ. ಈ ಅಧಿವೇಶನಗಳಲ್ಲಿ ಪೌಷ್ಟಿಕಾಂಶ ನೀತಿ ಕುರಿತು ಯಾವುದೇ ಅಧಿನಿಯಮವನ್ನು ಮಂಡಿಸಿಲ್ಲ. ಆದರೆ ಮತಾಂತರ ನಿಷೇಧ ಮಸೂದೆಯನ್ನು ಅತ್ಯಲ್ಪ ಅವಧಿಯಲ್ಲಿ ಮಂಡಿಸಿದೆ.

ರಾಜ್ಯವು ಕುಟುಂಬದ ಮಟ್ಟದಲ್ಲಿ ಆಹಾರ ಸುರಕ್ಷತೆಯ ಜತೆಗೆ ಪೌಷ್ಠಿಕಾಂಶ ಸುರಕ್ಷತೆಯನ್ನು ಖಾತ್ರಿಪಡಿಸುವ ಪೌಷ್ಠಿಕಾಂಶ ನೀತಿಯನ್ನು ಜಾರಿಗೊಳಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯು ಪ್ರಮುಖವಾಗಿ ಶಿಫಾರಸ್ಸು ಮಾಡಿತ್ತು. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವರದಿ ಸಲ್ಲಿಕೆಯಾದ ನಂತರ ವಿಧಾನಸಭೆ ಮತ್ತು ವಿಧಾನಪರಿಷತ್‌ ಅಧಿವೇಶನ ನಡೆದಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೌಷ್ಠಿಕಾಂಶ ನೀತಿ ಕುರಿತು ವಿಧಾನಮಂಡಲಕ್ಕೆ ಮಂಡಿಸುವ ಕುರಿತು ಇದುವರೆಗೂ ಮುಂದಾಗಿಲ್ಲ. ಈ ಕುರಿತು ಹಿಂದಿನ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡ ಗಮನಹರಿಸಿರಲಿಲ್ಲ. ಅದೇ ರೀತಿ ಹಾಲಿ ಸಚಿವ ಹಾಲಪ್ಪ ಆಚಾರ್‌ ಕೂಡ ಯಾವುದೇ ಗಮನಹರಿಸಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳಾದ ನಂತರವೂ ಪೌಷ್ಠಿಕಾಂಶ ನೀತಿ ಜಾರಿಗೊಳಿಸಲು ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

ವರದಿಯಲ್ಲೇನಿದೆ?

ಚಿತ್ರದುರ್ಗ, ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಧಾರವಾಡ, ಗದಗ್‌, ಕೊಪ್ಪಳ,ರಾಯಚೂರು ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ್ದ ಆರೋಗ್ಯ ನಿರ್ವಹಣಾ ಸಂಸ್ಥೆಯು ತೀವ್ರವಾದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆ, ಫಲಾನುಭವಿಗಳಲ್ಲಿ ಸ್ವೀಕರಿಸಿದ ಸೇವೆಯ ತೃಪ್ತಿ ಮಟ್ಟ, ತೀವ್ರವಾದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಚಿಕಿತ್ಸೆ ಪರಿಣಾಮ ಮತ್ತು ಮನೆಯ ಆಹಾರ ಪದ್ಧತಿ ಕುರಿತು ಅಧ್ಯಯನ ನಡೆಸಿತ್ತು.

ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆಯನ್ನು ತಡೆಗಟ್ಟುವಿಕೆಗೆ ಮತ್ತು ನಿರ್ವಹಣಾ ಅಂಶಗಳಿಗೆ ಪ್ರಾಮುಖ್ಯತೆ ನೀಡಿ ಹರಿಯಾಣ ಮತ್ತು ತಮಿಳುನಾಡಿನಲ್ಲಿ ಅನುಷ್ಠಾನಗೊಳಿಸಿರುವ ಪೌಷ್ಠಿಕತೆ ನೀತಿಯನ್ನು ಮಾದರಿಯಾಗಿಸಿ ಸಾಧ್ಯವಾದಷ್ಟು ಬೇಗ ರಾಜ್ಯದಲ್ಲಿ ಜಾರಿಗೊಳಿಸಬೇಕು. ಈ ನೀತಿಯು ದೀರ್ಘಾವಧಿಯಲ್ಲಿ ಕುಟುಂಬದ ಹಂತದಲ್ಲಿ ಆಹಾರ ಭದ್ರತೆಯಿಂದ ಪೌಷ್ಠಿಕಾಂಶ ಭದ್ರತೆಯಡೆಗೆ ಸಾಗುವುದರಿಂದ ಪೌಷ್ಠಿಕತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ನೀತಿಯು ಮತ್ತು ಯೋಜನಾ ಅನುಷ್ಠಾನವು ದುರ್ಬಲ ಜನಾಂಗದವರ ಕಡೆಗೆ (ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ) ಹೆಚ್ಚು ಗಮನವಹಿಸಬೇಕು ಎಂದು ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯು ಶಿಫಾರಸ್ಸು ಮಾಡಿತ್ತು.

4ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ನಂತರದಲ್ಲಿ ಕರ್ನಾಟಕದಲ್ಲಿ ಮಕ್ಕಳ ಪೌಷ್ಠಿಕಾಂಶದ ಸ್ಥಿತಿಯು ಕೆಲವು ಕ್ರಮಗಳಿಂದ ಸುಧಾರಿಸಿದೆ ಎಂದು ತೋರಿಸಿದರೂ ಎಲ್ಲಾ ಕ್ರಮಗಳಿಂದ ಹೀಗಾಗಿರುವುದಿಲ್ಲ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಕುಂಠಿತ ಬೆಳವಣಿಗೆ (ಸ್ನಾಯು ಮತ್ತು ಕೊಬ್ಬನ್ನು ಹೊಂದದಿರುವುದು) ಮತ್ತು ಕಡಿಮೆ ತೂಕ ಹೊಂದಿರುವ ಸಾಧ್ಯತೆ ಕಡಿಮೆ ಎಂದೆನಿಸಿದರೂ ಅವರು ತಮ್ಮ ವಯಸ್ಸಿಗೆ ತೀರಾ ಕಡಿಮೆ ಎತ್ತರ ಅಥವಾ ತೀವ್ರವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮಕ್ಕಳಲ್ಲಿ (ಶೇ.71.43ರಷ್ಟು) ವಯಸ್ಸಿಗೆ ತಕ್ಕ ತೂಕಕ್ಕಿಂತ ಕಡಿಮೆ ತೂಕವಿರುವ ಮಕ್ಕಳ ಪ್ರಮಾಣವು ಇತರರಿಗೆ (ಶೇ.63.04) ಹೋಲಿಸಿದರೆ ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.

ಹಾಗೆಯೇ ಧರ್ಮದ ಆಧಾರದಲ್ಲಿ ವಯಸ್ಸಿಗೆ ತಕ್ಕ ತೂಕಕ್ಕಿಂತ ಕಡಿಮೆ ತೂಕ ಹೊಂದಿರುವ ಮಕ್ಕಳ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರ ಪ್ರಕಾರ ಮುಸ್ಲಿಂ ಧರ್ಮಕ್ಕೆ ಸೇರಿರುವ ಮಕ್ಕಳ ಪೈಕಿ ಶೇ.68.52ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ನಡೆದಿರುವ ಇತ್ತೀಚಿನ ಅಧ್ಯಯನಗಳಲ್ಲಿ ಅಪೌಷ್ಠಿಕತೆ ಪ್ರಮಾಣವು ಮಂಗಳೂರಿನಲ್ಲಿ ಶೇ.43, ಬೆಂಗಳೂರು ಗ್ರಾಮೀಣದಲ್ಲಿ ಶೇ.42, ಬಿಜಾಪುರದಲ್ಲಿ ಶೇ 43 ಮತ್ತು ಮೈಸೂರಿನಲ್ಲಿ ಶೇ.39ರಷ್ಟಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ವರದಿ ಆಧಾರದ ಮೇಲೆ ಕರ್ನಾಟಕದಲ್ಲಿ ಕಡಿಮೆ ತೂಕ, ಕಡಿಮೆ ಎತ್ತರ ಮತ್ತು ಕುಂಠಿತ ಬೆಳವಣಿಗೆಯ ಪ್ರಮಾಣವು ನೆರೆ ರಾಜ್ಯಕ್ಕಿಂತ ಹೆಚ್ಚಾಗಿದೆ.

ತಮಿಳುನಾಡಿನಲ್ಲಿ ಕಡಿಮೆ ತೂಕ, ಕಡಿಮೆ ಎತ್ತರ ಮತ್ತು ಕುಂಠಿತ ಬೆಳವಣಿಗೆಯ ಅಂದಾಜು ಕ್ರಮವಾಗಿ ಶೇ.24, ಶೆ.27 ಮತ್ತು ಶೇ.28, ಕೇರಳದಲ್ಲಿ ಶೇ.16, ಶೇ.20 ಮತ್ತು ಶೇ.22 ಆಂಧ್ರಪ್ರದೇಶದಲ್ಲಿ ಕ್ರಮವಾಗಿ ಶೇ.31.9, ಶೇ.31 ಮತ್ತು ಶೇ.22, ದಕ್ಷಿಣ ಭಾರತದಲ್ಲಿ ನೆರೆಹೊರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಶೇಕಡವಾರು ಅಪೌಷ್ಠಿಕತೆ ಪ್ರಮಾಣವು ಹೆಚ್ಚಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಕರ್ನಾಟಕದಲ್ಲಿ ಕಡಿಮೆ ತೂಕ ಮಕ್ಕಳು ಇರುವ ಪ್ರಮಾಣ ಶೇ.35.2ರಷ್ಟಿದೆ. ಆಂಧ್ರದಲ್ಲಿ ಶೇ.31.9, ತೆಲಂಗಾಣದಲ್ಲಿ ಶೇ.28.3, ತಮಿಳುನಾಡು ಶೇ.23.8, ಕೇರಳ ಶೇ.16.1ರಷ್ಟಿದೆ. ಅದೇ ರೀತಿ ಕುಂಠಿತ ಮಕ್ಕಳು ಕರ್ನಾಟಕದಲ್ಲಿ ಶೇ.36ರಷ್ಟಿದ್ದರೆ ಆಂಧ್ರದಲ್ಲಿ ಶೇ.31,ತೆಲಂಗಾಣದಲ್ಲಿ ಶೇ.28, ತಮಿಳುನಾಡು ಶೇ.27, ಕೇರಳ ಶೇ.20ರಷ್ಟಿದ್ದಾರೆ. ರಕ್ತ ಹೀನತೆ ಮಕ್ಕಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಶೇ.60.9ರಷ್ಟಿದ್ದಾರೆ. ಆಂಧ್ರದಲ್ಲಿ ಶೇ.60.7, ತೆಲಂಗಾಣದಲ್ಲಿ ಶೇ.58.6, ತಮಿಳುನಾಡು ಶೆ.50.7, ಕೇರಳ ಶೇ.35.7,ರಷ್ಟಿರುವುದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಗಳ ಸಮೀಕ್ಷೆ ಸಂದರ್ಭದಲ್ಲಿ ಅಧ್ಯಯನ ತಂಡವು ವಿಭಾಗವಾರು ಅಂತರಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ ಬೆಂಗಳೂರು ವಿಭಾಗದ ಚಿತ್ರದುರ್ಗ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಬೌರಿಂಗ್‌ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳಿಗೆ ಸೊಳ್ಳೆ ಮತ್ತು ನೊಣಗಳ ಪರದೆ ಲಭ್ಯವಿಲ್ಲ ಎಂದು ವರದಿ ಮಾಡಿದೆ. ಅಲ್ಲದೆ ಬೌರಿಂಗ್‌ ಆಸ್ಪತ್ರೆ ಹೊರತುಪಡಿಸಿ ಬೆಂಗಳೂರು ವಿಭಾಗದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರತಿ ಹಾಸಿಗೆಗೆ ಐವಿ ಸ್ಟ್ಯಾಂಡ್‌, ವಾಟರ್‌ ಫಿಲ್ಟರ್‌, ರೆಫ್ರಿಜರೇಟರ್‌ ಕೂಡ ಇಲ್ಲ. ಮಾತ್ರವಲ್ಲದೆ ಅಡಿಗೆ ಮನೆಗೆ ಜಾಗವೂ ಲಭ್ಯವಿಲ್ಲ ಎಂದು ಹೇಳಿದೆ.

ಮೈಸೂರು ವಿಭಾಗದ ಕೊಡಗು ಜಿಲ್ಲೆಯಲ್ಲಿ ಐದು ಹಾಸಿಗೆಗಳಿಗೆ ಸೊಳ್ಳೆ ಪರದೆಗಳು ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೆಟ್ರಾಸೈಕ್ಲಿನ್‌ ಅಥವಾ ಕ್ಲೋರಂಫೆನಿಕಲ್‌ ಕಣ್ಣಿನ ಹನಿಗಳು ಲಭ್ಯವಿಲ್ಲ. ಅಲ್ಲದೆ ಇದೇ ಜಿಲ್ಲೆಯಲ್ಲಿ ಐರನ್‌ ಸಿರಪ್‌, ಮಲ್ಟಿ ವಿಟಮಿನ್‌, ಪೊಲಿಕ್‌ ಮತ್ತು ವಿಟಮಿನ್‌ ಎ ಸಿರಪ್‌ ಮತ್ತು ಸತು ಸಲ್ಫೈಟ್‌ ಸಂಗ್ರಹವಿಲ್ಲ ಎಂದು ಬೆಳಕು ಚೆಲ್ಲಿದೆ.
ಬೆಳಗಾವಿ ವಿಭಾಗದ ಹುಬ್ಬಳ್ಳಿ, ಧಾರವಾಡದಲ್ಲಿಯೂ ಎಲ್ಲಾ ಹಾಸಿಗೆಗಳಿಗೆ ಸೊಳ್ಳೆ, ಮತ್ತು ನೊಣದ ಪರದೆ ಲಭ್ಯವಿಲ್ಲ. ಗದಗ್‌ನಲ್ಲಿ ಪ್ರತಿ ಹಾಸಿಗೆಗೆ ಐವಿ ಸ್ಟ್ಯಾಂಡ್‌ ಲಭ್ಯವಿಲ್ಲ. ಹುಬ್ಬಳ್ಳಿಯಲ್ಲಿ ಯಾವುದೇ ವಾರ್ಡಿಗೂ ಪ್ರತ್ಯೇಕವಾದ ಶೌಚಾಲಯವಿಲ್ಲ ಮತ್ತು ಇರುವ ಶೌಚಾಲಯಗಳು ಸ್ವಚ್ಛವಾಗಿರುವುದಿಲ್ಲ. ಕಲ್ಬುರ್ಗಿ ವಿಭಾಗದ ರಾಯಚೂರು ಜಿಲ್ಲೆಯಲ್ಲಿ ಹಾಸಿಗೆಗಳು ಅಸಮರ್ಪಕವಾಗಿವೆ.

ಹೆಚ್ಚಿನ ಒಳರೋಗಿಗಳು ಇದ್ದಾಗಲೆಲ್ಲಾ ಹೆಚ್ಚುವರಿ ಮಕ್ಕಳನ್ನು ಹತ್ತಿರದ ಸಾಮಾನ್ಯ ವಾರ್ಡ್‌ಗೆ ಸೇರಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

SUPPORT THE FILE

Latest News

Related Posts