ಕೋವಿಡ್‌; ಅಧಿಕ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆಗಳ ವಿವರ ಮುಚ್ಚಿಡಲಾಗಿದೆಯೇ?

ಬೆಂಗಳೂರು; ಕೋವಿಡ್‌ ಸಂದರ್ಭದಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಕುರಿತು ವಿಧಾನಪರಿಷತ್‌ ಸದಸ್ಯ ಯು ಬಿ ವೆಂಕಟೇಶ್‌ ಅವರು ಡಿಸೆಂಬರ್‌ 13ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ ಕೆ ಸುಧಾಕರ್‌ ಅವರು ಅಧಿವೇಶನ ಪೂರ್ಣಗೊಂಡರೂ ಉತ್ತರ ನೀಡಿಲ್ಲ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಹಣವನ್ನು ವಸೂಲು ಮಾಡಿವೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದರೂ ಉತ್ತರವನ್ನು ಒದಗಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್‌ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಿರುವ ಕುರಿತು ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿಯೂ ಅಲ್ಲಿನ ಸದಸ್ಯರೊಬ್ಗರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರವು ಕೋವಿಡ್‌ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದ ಆಸ್ಪತ್ರೆಗಳಿಂದ 36 ಕೋಟಿ ರು.ಗಳನ್ನುರೋಗಿಗಳಿಗೆ ಮರು ಪಾವತಿ ಮಾಡಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಡಿಸೆಂಬರ್‌ 24, 2021ರಂದು ಉತ್ತರಿಸಿದೆ.

ಇದೇ ರೀತಿಯ ಪ್ರಶ್ನೆಯನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ದಿನದಂದೇ (ಡಿಸೆಂಬರ್‌ 13) ಕರ್ನಾಟಕ ವಿಧಾನ ಪರಿಷ್‌ನ ಸದಸ್ಯ ಯು ಬಿ ವೆಂಕಟೇಶ್‌ ಅವರು ಕೇಳಿದ್ದರು.

ಯು ಬಿ ವೆಂಕಟೇಶ್‌ ಕೇಳಿದ್ದ ಪ್ರಶ್ನೆಗಳಿವು

ಕೋವಿಡ್‌ ಸಂದರ್ಭದಲ್ಲಿ ನಿಗದಿತಗಿಂತ ಅಧಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳ ಬಗ್ಗೆ ದೂರುಗಳು ಬಂದಿವೆಯೇ, ಬಂದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿವರಗಳನ್ನು ಒದಗಿಸುವುದು

ಈವರೆಗೆ ಎಷ್ಟು ಜನ ಕೊರೊನಾ ಪೀಡಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಎಷ್ಟು ಜನರಿಗೆ ಸರ್ಕಾರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ, ಯಾವ ಯಾವ ಆಸ್ಪತ್ರೆಗಳಿಗೆ ಎಷ್ಟು ಮೊತ್ತದ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗಿದೆ?
ನಿಗದಿಗಿಂತ ಅಧಿಕ ಶುಲ್ಕ ವಸೂಲು ಮಾಡಿದ ಆಸ್ಪತ್ರೆಗಳ ಮೇಲೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಅಧಿವೇಶನ ಪೂರ್ಣಗೊಂಡರೂ ಈ ಯಾವ ಪ್ರಶ್ನೆಗಳಿಗೂ ಸಚಿವ ಸುಧಾಕರ್‌ ಅವರು ಉತ್ತರವನ್ನು ನೀಡಿಲ್ಲ. ಅಲ್ಲದೆ ಕರ್ನಾಟಕ ವಿಧಾನಪರಿಷತ್‌ನ ಅಧಿಕೃತ ಜಾಲತಾಣದಲ್ಲಿಯೂ ಉತ್ತರವನ್ನು ಅಪ್‌ಲೋಡ್‌ ಮಾಡಿಲ್ಲ.

ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಿದ್ದಾರೆ ಎಂದು ಬಲವಾದ ಆರೋಪಗಳು ಕೇಳಿ ಬಂದಿದ್ದವು. ಈ ನಡುವೆಯೇ ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರು. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿತ್ತು.

ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರು.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಈಗಾಗಲೇ ಅನುಮೋದಿಸಿದೆ. ಹಾಗೆಯೇ 36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ.

ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್‌ ಕೋರೆ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ, ಧರ್ಮಸ್ಥಳ ಮಂಜುನಾಥ ಎಜುಕೇಷನ್‌ ಸೊಸೈಟಿ, ಆದಿಚುಂಚನಗಿರಿ, ಜಗದ್ಗುರು ಶಿವರಾತ್ರೀಶ್ವರ ಸೇರಿದಂತೆ ರಾಜಕೀಯ ನಂಟು ಹೊಂದಿರುವ ಖಾಸಗಿ ಆಸ್ಪತ್ರೆಗಳು ಈ ಪಟ್ಟಿಯಲ್ಲಿವೆ.

ರೋಗಿಗಳಿಗೆ ಚಿಕಿತ್ಸೆ ನೀಡಿರುವ ಕಾರ್ಪೋರೇಟ್‌ ಸೇರಿದಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 145 ಕೋಟಿ ರು. ಈಗಾಗಲೇ ಪಾವತಿ ಆಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿರುವ ಖಾಸಗಿ ಅಸ್ಪತ್ರೆಗಳು ಸಿಂಹಪಾಲು ಪಡೆದಿವೆ.
ಮಾಜಿ ಸಚಿವ ಎಂ ಆರ್‌ ಸೀತಾರಾಮ್‌ ಕುಟುಂಬ ಒಡೆತನದ ಆಸ್ಪತ್ರೆ, ಡಾ ದೇವಿಶೆಟ್ಟಿ ಅವರ ನಾರಾಯಣ ಹೃದಯಾಲಯ, ಡಾ ಶರಣ್‌ ಪಾಟೀಲ್‌ ಅವರ ಸ್ಪರ್ಶ್, ಭಗವಾನ್‌ ಮಹಾವೀರ್‌ ಜೈನ್‌, ಕೊಲಂಬಿಯಾ ಏಷ್ಯಾ, ಫೋರ್ಟೀಸ್‌ ಸಮೂಹ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಒಟ್ಟಾರೆ 115.79 ಕೋಟಿ ರು. ಪಾವತಿಯಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಆಗಲು ಅನುಮತಿಗೆ 2,183.34 ಲಕ್ಷ ಬಾಕಿ ಇದ್ದರೆ, ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ 7,581.09 ಲಕ್ಷ ರು. ಮೊತ್ತದ ಬಿಲ್‌ಗಳಿವೆ. ಇದೆಲ್ಲ ಸೇರಿದಂತೆ ಒಟ್ಟಾರೆ 21,343.87 ಲಕ್ಷ ರು. ಈಗಾಗಲೇ ಪಾವತಿಯಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿರುವ ವಿವರ ; ಕೆಎಲ್‌ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ – 23.18 ಲಕ್ಷ, ಕೆಎಲ್‌ಇ ಆಸ್ಪತ್ರೆ (ಐಸಿಯು) ಗೋಕಾಕ್‌ – 5.24 ಲಕ್ಷ , ಜಿಂದಾಲ್‌ ಸಂಜೀವಿನಿ ಆಸ್ಪತ್ರೆ (ಬಳ್ಳಾರಿ)- 79.46 ಲಕ್ಷ , ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು (ದಕ್ಷಿಣ ಕನ್ನಡ) – 85.91 ಲಕ್ಷ , ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಚಾರಿಟಬಲ್‌ ಆಸ್ಪತ್ರೆ- 79.51ಲಕ್ಷ , ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ- 85.91 ಲಕ್ಷ , ಯೇನಪೋವ ಮೆಡಿಕಲ್‌ ಕಾಲೇಜು – 315.40 ಲಕ್ಷ , ಕೆಎಂಸಿ ಆಸ್ಪತ್ರೆ ಅತ್ತಾವರ – 78.24 ಲಕ್ಷ , ಕೆವಿಜೆ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ- 41.45 ಲಕ್ಷ , ಶ್ರೀನಿವಾಸ ಮೆಡಿಕಲ್‌ ಕಾಲೇಜು – 25.38 ಲಕ್ಷ , ಸಿಟಿ ಸೆಂಟ್ರಲ್‌ ಆಸ್ಪತ್ರೆ ದಾವಣಗೆರೆ- 11.80 ಲಕ್ಷ , ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜು- 53.17 ಲಕ್ಷ , ಬಾಪೂಜಿ ಆಸ್ಪತ್ರೆ ದಾವಣಗೆರೆ- 36.55 ಲಕ್ಷ ರು. ಪಾವತಿಯಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

ಅದೇ ರೀತಿ ತಟವದರ್ಷ ಆಸ್ಪತ್ರೆ ಧಾರವಾಡ – 20.68 ಲಕ್ಷ , ಎಸ್‌ಡಿಎಂ ಮೆಡಿಕಲ್ ಸೈನ್ಸ್‌ ಕಾಲೇಜು – 165.84 ಲಕ್ಷ , ಬಸವೇಶ್ವರ ಬೋಧನಾ ಮತ್ತು ಆಸ್ಪತ್ರೆ ಕಲ್ಬುರ್ಗಿ- 56.09 ಲಕ್ಷ, ಆರ್‌ ಎಲ್‌ ಜಾಲಪ್ಪ ಆಸ್ಪತ್ರೆ ಕೋಲಾರ- 244.47 ಲಕ್ಷ , ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ- 44.73 ಲಕ್ಷ , ಸಂಜೋ ಆಸ್ಪತ್ರೆ ಮಂಡ್ಯ- 80.51 ಲಕ್ಷ , ಜಗದ್ಗುರು ಶಿವರಾತ್ರೀಶ್ವರ ಆಸ್ಪತ್ರೆ- 28.78 ಲಕ್ಷ , ವಿವೇಕಾನಂದ ಮೆಮೋರಿಯಲ್‌ ಆಸ್ಪತ್ರೆ ಮೈಸೂರು – 24.44 ಲಕ್ಷ , ಕೃಷ್ಣ ಆಸ್ಪತ್ರೆ ಮೈಸೂರು – 137.46 ಲಕ್ಷ , ನವೋದಯ ಮೆಡಿಕಲ್‌ ಕಾಲೇಜು ರಾಯಚೂರು- 26.39 ಲಕ್ಷ , ಡಾ ಚಂದ್ರಮ್ಮ ದಯಾನಂದ ಸಾಗರ್‌ ಇನ್ಸಿಟಿಟ್ಯೂಟ್‌ ಮೆಡಿಕಲ್‌ ಸೈನ್ಸ್‌ ರಾಮನಗರ- 53.75 ಲಕ್ಷ , ರಾಮಕೃಷ್ಣ ಆಸ್ಪತ್ರೆ ರಾಮನಗರ- 45.62 ಲಕ್ಷ , ನಂಜಪ್ಪ ಅಸ್ಪತ್ರೆ ಶಿವಮೊಗ್ಗ – 32.51 ಲಕ್ಷ , ಸುಬ್ಬಯ್ಯ ಮೆಡಿಕಲ್‌ ಕಾಲೇಜು ಶಿವಮೊಗ್ಗ – 328.27 ಲಕ್ಷ , ಶ್ರೀದೇವಿ ಮೆಡಿಕಲ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ತುಮಕೂರು- 76.40 ಲಕ್ಷ , ಅಶ್ವಿನಿ ಆಯುರ್ವೇದಿಕ್‌ ಮೆಡಿಕಲ್‌ಕಾಲೇಜು ತುಮಕೂರು- 43.43 ಲಕ್ಷ, ಕಸ್ತೂರಬಾ ಆಸ್ಪತ್ರೆ ಉಡುಪಿ- 166.76 ಲಕ್ಷ ಮಹೇಶ್‌ ಆಸ್ಪತ್ರೆ ಉಡುಪಿ – 49.05 ಲಕ್ಷ , ಡಾ ಟಿಎಂಎ ಪೈ ಆಸ್ಪತ್ರೆ ಉಡುಪಿ – 260.53 ಲಕ್ಷ ರು ಪಾವತಿಯಾಗಿದೆ.

ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿರುವ ವಿವರ ; (ನವೆಂಬರ್‌ 23ರ ಅಂತ್ಯಕ್ಕೆ) ; ವೈದೇಹಿ ಆಸ್ಪತ್ರೆ – 480.10 ಲಕ್ಷ , ಸಪ್ತಗಿರಿ ಸೂಪರ್‌ ಸ್ಪೆಷಾಲಿಟಿ- 409.06 ಲಕ್ಷ, ಎಂ ಎಸ್‌ ರಾಮಯ್ಯ ಆಸ್ಪತ್ರೆ – 847.64 ಲಕ್ಷ , ಭಗವಾನ್‌ ಮಹಾವೀರ್‌ ಜೈನ್‌ – 255.43 ಲಕ್ಷ , ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು – 338.34 ಲಕ್ಷ, ಆಸ್ತರ್‌ ಸಿಎಂಐ ಆಸ್ಪತ್ರೆ – 317.04 ಲಕ್ಷ , ಈಸ್ಟ್‌ ಪಾಯಿಂಟ್‌ ಆಸ್ಪತ್ರೆ – 572.83 ಲಕ್ಷ , ಕಿಮ್ಸ್‌ ಆಸ್ಪತ್ರೆ – 149.17 ಲಕ್ಷ , ಫೋರ್ಟೀಸ್‌ ಆಸ್ಪತ್ರೆ ಬನ್ನೇರುಘಟ್ಟ – 58.11 ಲಕ್ಷ , ಫೋರ್ಟೀಸ್‌ ಆಸ್ಪತ್ರೆ, ಕನ್ನಿಂಗ್‌ಹ್ಯಾಂ ರಸ್ತೆ – 18.17 ಲಕ್ಷ , ಅಪೋಲೋ ಆಸ್ಪತ್ರೆ – 149.32 ಲಕ್ಷ , ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ – 517.28 ಲಕ್ಷ, ಸ್ಪರ್ಶ ಆಸ್ಪತ್ರೆ – 324.23 ಲಕ್ಷ, ಸೇಂಟ್‌ ತೆರೇಸಾ ಆಸ್ಪತ್ರೆ – 129.74 ಲಕ್ಷ , ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್ಸ್‌ – 325.27 ಲಕ್ಷ , ಅಪೊಲೋ ಆಸ್ಪತ್ರೆ ಎಂಟರ್‌ಪ್ರೈಸ್‌ ಲಿಮಿಟೆಡ್‌ – 45.67 ಲಕ್ಷ , ನಾಗಪ್ಪ ಹಾಡ್ಲಿ ಆಸ್ಪತ್ರೆ – 143.83 ಲಕ್ಷ ರು. ಪಾವತಿಯಾಗಿದೆ.

ಹಾಗೆಯೇ ಪ್ರಶಾಂತ್‌ ಆಸ್ಪತ್ರೆ – 120.35 ಲಕ್ಷ , ಸೇಂಟ್‌ ಫಿಲೋಮಿನಾ ಆಸ್ಪತ್ರೆ- 211.57 ಲಕ್ಷ , ಮಣಿಪಾಲ್‌ ನಾರ್ತ್‌ ಆಸ್ಪತ್ರೆ- 251.35 ಲಕ್ಷ , ಭಗವಾನ್‌ ಮಹಾವೀರ್‌ ಜೈನ್‌- 58.67 ಲಕ್ಷ , ಸೇಂಟ್‌ ಮಾರ್ಥಾಸ್‌ -141.59 ಲಕ್ಷ , ಮಣಿಪಾಲ್‌ ಆಸ್ಪತ್ರೆಗಳು – 133.37 ಲಕ್ಷ , ಚಿನ್ಮಯ ಮಿಷನ್‌ ಆಸ್ಪತ್ರೆ – 274.31 ಲಕ್ಷ , ಆಸ್ತರ್‌ ಆರ್‌ ವಿ ಆಸ್ಪತ್ರೆ – 118.64 ಲಕ್ಷ , ಬೆಂಗಳೂರ್‌ ಬ್ಯಾಪಿಸ್ಟ್‌ – 278.24 ಲಕ್ಷ , ಸಕ್ರಾ ಆಸ್ಪತ್ರೆ – 177.07 ಲಕ್ಷ , ಕೊಲಂಬಿಯಾ ಏಷ್ಯಾ (ವೈಟ್‌ಫೀಲ್ಡ್‌) – 31.49 ಲಕ್ಷ , ಅಗಡಿ ಆಸ್ಪತ್ರೆ- 58.90 ಲಕ್ಷ , ಅತ್ರೇಯ ಅಸ್ಪತ್ರೆ – 94.05 ಲಕ್ಷ , ಸತ್ಯ ಸಾಯಿ ಆರ್ಥೋಪೆಡಿಕ್‌ – 86.75 ಲಕ್ಷ , ಕೊಲಂಬಿಯಾ ಏಷ್ಯಾ ರೆಫರಲ್‌ (ಯಶವಂತಪುರ) – 186.35 ಲಕ್ಷ , ಕೊಲಂಬಿಯಾ ಏಷ್ಯಾ (ಹೆಬ್ಬಾಳ) 23.93 ಲಕ್ಷ ರು. ಪಾವತಿಯಾಗಿದೆ.

ಇನ್ನು ಕೊಲಂಬಿಯಾ ಎಷ್ಯಾ – 27.95 ಲಕ್ಷ , 35. ಅನನ್ಯ ಆಸ್ಪತ್ರೆ ಪ್ರೈವೈಟ್‌ ಲಿಮಿಟೆಡ್‌ ರಾಜಾಜಿನಗರ- 61.04 ಲಕ್ಷ , ಶ್ರೀ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ- 45.85 ಲಕ್ಷ , ಅಸ್ತ್ರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ – 85.01 ಲಕ್ಷ , ಗಂಗಾ ಸ್ಪೆಷಾಲಿಟಿ ಆಸ್ಪತ್ರೆ – 234.57 ಲಕ್ಷ , ನಾರಾಯಣ ಹೃದಯಾಲಯ ಪ್ರೈವೈಟ್‌ ಲಿಮಿಟೆಡ್‌- 511.26 ಲಕ್ಷ , ಆಕಾಶ್‌ ಆಸ್ಪತ್ರೆ- 1,006.01 ಲಕ್ಷ , ದಿ ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ- 557.54 ಲಕ್ಷ , ರಾಮಯ್ಯ ಹರ್ಷ ಆಸ್ಪತ್ರೆ- 19.71 ಲಕ್ಷ ರು. ಪಾವತಿಯಾಗಿರುವುದು ತಿಳಿದು ಬಂದಿದೆ.

ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿರಲಿಲ್ಲ. ಕೇವಲ ಕೋವಿಡ್ ಚಿಕಿತ್ಸೆ ನೀಡುತ್ತಾರೆ ಇತರೆ ಅನಾರೋಗ್ಯ ಸಮಸ್ಯೆಗಳು (ಹೃದ್ರೋಗ, ಮೂತ್ರಪಿಂಡ ಸಮಸ್ಯೆ) ಇದ್ದರೆ ಮತ್ತೆ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಹೆಚ್ಚುವರಿ ಹಣ ನೀಡಬೇಕಿದೆ. ಜತೆಗೆ ಆಹಾರ ಪೂರೈಕೆ, ಸಿಬ್ಬಂದಿ ನೆರವು, ಮಾನಸಿಕ ಆರೋಗ್ಯ ಕಾಪಾಡುವ ಕೌನ್ಸೆಲಿಂಗ್, ಸೋಂಕಿತರ ಆರೋಗ್ಯ ಸ್ಥಿತಿ ಕುರಿತು ಸಂಬಂಧಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts