ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ ಒಟ್ಟು 21 ಇಲಾಖೆಗಳು ತಮಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ಬಳಕೆ ಮಾಡದೇ ಉಳಿತಾಯ ಮಾಡಿದ್ದ 10,546.42 ಕೋಟಿ ರು.ಗಳನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ. ಮತ್ತು 2025ರ ಮಾರ್ಚ್ ಕೊನೆಯ ದಿನದಂದು 10,447.77 ಕೋಟಿಯನ್ನು ಸರ್ಕಾರಕ್ಕೆ ಮರಳಿಸಿತ್ತು ಎಂಬ ಸಂಗತಿಯನ್ನು ಮಹಾಲೆಕ್ಕಪರಿಶೋಧಕರು ಮತ್ತು ಭಾರತದ ಲೆಕ್ಕ ನಿಯಂತ್ರಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಒಟ್ಟು ಅನುದಾನಗಳ ಹಂಚಿಕೆ, ಬಳಕೆ ಮತ್ತು ಉಳಿತಾಯ ಮಾಡಿರುವುದು ಮತ್ತು ಉಳಿತಾಯ ಮಾಡಿರುವ ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಮಾಡದೇ ತನ್ನ ಬಳಿಯೇ ಇಟ್ಟುಕೊಂಡಿರುವ ಪ್ರವೃತ್ತಿಯನ್ನು ವಿಶ್ಲೇಷಿಸಿದೆ.

2022-23ರಿಂದ 2024-25ನೇ ಅವಧಿಯಲ್ಲಿ 8 ಅನುದಾನಗಳ ಅಡಿಯಲ್ಲಿ ಒಟ್ಟು 10 ಪ್ರಕರಣಗಳಿದ್ದವು. ಈ ಪ್ರತಿ ಪ್ರಕರಣದಲ್ಲಿ ಒಂದು ಕೋಟಿಗಿಂತ ಹೆಚ್ಚಿನ ನಿರಂತರ ಉಳಿತಾಯ ಮಾಡಿರುವುದನ್ನು ಸಿಎಜಿ ಪರಿಶೋಧನೆ ವೇಳೆ ಕಂಡು ಬಂದಿದೆ.

ಈ ಪೈಕಿ ನಗರಾಭಿವೃದ್ಧಿ ಇಲಾಖೆಯಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ನಿರಂತರವಾಗಿ ಉಳಿತಾಯ ಮಾಡುತ್ತಿರುವುದನ್ನು ಸಹ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ನಗರಾಭಿವೃದ್ಧಿ ಇಲಾಖೆಗೆ ನೀಡಿದ್ದ 2022-23ರಲ್ಲಿ ಎರಡು ಲೆಕ್ಕ ಶೀರ್ಷಿಕೆಯಲ್ಲಿ ( 2217-05-191-1, 2217-80-797-04) ರಲ್ಲಿ ಒಟ್ಟಾರೆ 1,606.13 ಕೋಟಿ ರುಪಾಯಿ ಅವಕಾಶ ಕಲ್ಪಿಸಿತ್ತು. ಈ ಪೈಕಿ ಈ ಎರಡೂ ಲೆಕ್ಕ ಶೀರ್ಷಿಕೆಗಳಲ್ಲಿ 798.51 ಕೋಟಿ ರುಪಾಯಿ ವೆಚ್ಚ ಮಾಡಿತ್ತು. ಖರ್ಚು ಮಾಡಲು 807.62 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಆದರೆ ಈ ಉಳಿತಾಯಕ್ಕೆ ಕಾರಣಗಳೇನು ಎಂಬ ಬಗ್ಗೆ ಸಿಎಜಿ ವರದಿಯಲ್ಲಿ ವಿವರಣೆಗಳಿಲ್ಲ.

ಅದೇ ರೀತಿ 2023-24ರಲ್ಲಿ ಈ ಎರಡೂ ಲೆಕ್ಕ ಶೀರ್ಷಿಕೆಗಳಿಗೆ 1,212.61 ಕೋಟಿ ರುಪಾಯಿ ಮೊತ್ತದ ಅನುದಾನ ಅವಕಾಶ ಕಲ್ಪಿಸಿತ್ತು. ಈ ಪೈಕಿ 749.21 ಕೋಟಿ ರುಪಾಯಿ ವೆಚ್ಚ ಮಾಡಿದ್ದ ನಗರಾಭಿವೃದ್ಧಿ ಇಲಾಖೆಯು 463.4 ಕೋಟಿ ರುಪಾಯಿಗಳನ್ನು ಖರ್ಚು ಮಾಡದೇ ಉಳಿತಾಯ ಮಾಡಿತ್ತು. 2024-25ನೇ ಸಾಲಿನಲ್ಲಿಯೂ ಸಹ ಈ ಎರಡೂ ಲೆಕ್ಕ ಶೀರ್ಷಿಕೆಗಳಿಗೆ 306.69 ಕೋಟಿ ರುಪಾಯಿ ಅನುದಾನ ಅವಕಾಶವಿತ್ತು. ಈ ಪೈಕಿ 209.59 ಕೋಟಿಯಷ್ಟು ಅನುದಾನವನ್ನು ಖರ್ಚು ಮಾಡಿತ್ತು. 97. 1 ಕೋಟಿ ರುಪಾಯಿಗಳನ್ನು ಖರ್ಚು ಮಾಡದೇ ಬಾಕಿ ಉಳಿಸಿಕೊಂಡಿತ್ತು .
ಇನ್ನು ಒಟ್ಟು 28 ಅನುದಾನಗಳಲ್ಲಿ 26 ಅನುದಾನಗಳನ್ನು ಅದರ ಹಂಚಿಕೆಯ ಶೇ.70ರಷ್ಟು ಬಳಕೆಯಾಗಿತ್ತು. 26 ಅನುದಾನಗಳಲ್ಲಿ 17 ಅನುದಾನಗಳು ಅದರ ಹಂಚಿಕೆಯ ಶೇ. 90ಕ್ಕಿಂತ ಹೆಚ್ಚು ಬಳಸಿಕೊಂಡಿತ್ತು. 2024-25ನೇ ಸಾಲಿನ ಅವಧಿಯಲ್ಲಿ ಒಟ್ಟಾರೆ 26,904.16 ಕೋಟಿ ರುಪಾಯಿ ಉಳಿತಾಯ ಮಾಡಿಕೊಂಡಿತ್ತು. ಇದನ್ನು 4,428.65 ಕೋಟಿ ರು ಹೆಚ್ಚುವರಿಯಿಂದ ಸರಿದೂಗಿಸಿತ್ತು. ಈ ಅಂಕಿ ಅಂಶವನ್ನು ಪರಿಶೀಲಿಸಿರುವ ಸಿಎಜಿಯು ‘ ಉಳಿತಾಯವನ್ನು ಉಳಿಸಿಕೊಳ್ಳುವ ಮೂಲಕ ಯಾವುದೇ ಉದ್ದೇಶವನ್ನು ಪೂರೈಸಲು ಆಗುವುದಿಲ್ಲ. ಅದನ್ನು ಸಮಯಕ್ಕೆ ಸರಿಯಾಗಿ ಮರಳಿಸಬೇಕಾಗಿದೆ,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಹಾಗೆಯೇ 2024-25ನೇ ಸಾಲಿನಲ್ಲಿ 21 ಅನುದಾನಗಳಡಿಯಲ್ಲಿ 10.546.42 ಕೋಟಿ ರುಪಾಯಿ ಮೊತ್ತದ ಉಳಿತಾಯವನ್ನು ಇಲಾಖೆಗಳು ಸರ್ಕಾರಕ್ಕೆ ಮರಳಿಸಿರಲಿಲ್ಲ. ಮತ್ತು ಈ ಪೈಕಿ 2025ರ ಮಾರ್ಚ್ 31ರಂದು 10,.448 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿತ್ತು. ಈ ಅಂಕಿ ಅಂಶಗಳ ಪ್ರಕಾರ ಒಟ್ಟು ಮರಳಿಸಿದ್ದ 16,547 ಕೋಟಿಯಲ್ಲಿ 10,448 ಕೋಟಿ ರುಪಾಯಿ (ಶೇ. 63.14) ಮೊತ್ತವನ್ನು ಮಾರ್ಚ್ 31ರಂದು ಮರಳಿಸಿತ್ತು.
ಮರಳಿಸದ ಮೊತ್ತದ ವಿವರ
ಕೃಷಿ ಮತ್ತು ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ಮೂಲ ಆಯವ್ಯಯದ ಪ್ರಕಾರ 6,688. 17 ಕೋಟಿ ರುಪಾಯಿ, ಪೂರಕ ಆಯವ್ಯಯದಲ್ಲಿ 533.67 ಕೋಟಿ ರು ಸೇರಿ ಒಟ್ಟಾರೆ 7,221.84 ಕೋಟಿ ರುಪಾಯಿ ಅವಕಾಶ ಕಲ್ಪಿಸಿತ್ತು. ಈ ಪೈಕಿ 6,389.12 ಕೋಟಿ ರುಪಾಯಿ ವಾಸ್ತವಿಕ ವೆಚ್ಚವಾಗಿತ್ತು. ಇದರಲ್ಲಿ 832.72 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 529.70 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ.
ಅದೇ ರೀತಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಮೂಲ ಮತ್ತು ಪೂರಕ ಆಯವ್ಯಯದಲ್ಲಿ 3,815.60 ಕೋಟಿ ರುಪಾಯಿ ಅವಕಾಶ ಕಲ್ಪಿಸಿತ್ತು. ಈ ಪೈಕಿ 3,613.62 ಕೋಟಿ ರುಪಾಯಿ ವಾಸ್ತವಿಕ ವೆಚ್ಚವಾಗಿತ್ತು. 201.98 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಈ ಪೈಕಿ 194.34 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಹಿಂದಿರಿಗಿಸಿರಲಿಲ್ಲ. ಆರ್ಥಿಕ ಇಲಾಖೆಗೆ ಒಟ್ಟು 38,173.63 ಕೋಟಿ ರುಪಾಯಿ ಅವಕಾಶ ಕಲ್ಪಿಸಿತ್ತು. ಇದರಲ್ಲಿ 35,319.78 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. 2,853.85 ಕೋಟಿ ರುಪಾಯಿ ಉಳಿತಾಯ ಮಾಡಿತ್ತಾದರೂ ಇದರಲ್ಲಿ 1,911.26 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 1,933.28 ಕೋಟಿ ರುಪಾಯಿ ಅವಕಾಶದ ಪೈಕಿ 1,588.98 ಕೋಟಿ ರುಪಾಯಿ ಖರ್ಚು ಮಾಡಿತ್ತು. 344.30 ಕೋಟಿ ರುಪಾಯಿ ಉಳಿತಾಯದ ಮೊತ್ತದ ಪೈಕಿ 324.25 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿರಲಿಲ್ಲ. ಒಳಾಡಳಿತ ಮತ್ತು ಸಾರಿಗೆ ಇಲಾಖೆಯು 20,529.62 ಕೋಟಿ ರುಪಾಯಿ ಅನುದಾನ ಅವಕಾಶದ ಪೈಕಿ 18,789.79 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಉಳಿತಾಯದ ಮೊತ್ತವಾಗಿದ್ದ 1,739.83 ಕೋಟಿ ರುಪಾಯಿನಲ್ಲಿ 1,397.32 ಕೋಟಿ ರುಪಾಯಿಯನ್ನು ಮರಳಿಸಿರಲಿಲ್ಲ.
ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಗೆ 983.58 ಕೋಟಿ ರುಪಾಯಿ ಅನುದಾನದ ಪೈಕಿ 932.28 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಈ ಪೈಕಿ 51.30 ಕೋಟಿ ರುಪಾಯಿ ಉಳಿತಾಯ ಮಾಡಿತ್ತಾದರೂ ಇದರಲ್ಲಿ 7.52 ಕೋಟಿ ರುಪಾಯಿಯನ್ನು ವಾಪಸ್ ಮಾಡಿರಲಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 22,720.22 ಕೋಟಿ ರುಪಾಯಿ ಒಟ್ಟು ಅನುದಾನದ ಅವಕಾಶದ ಪೈಕಿ 19,962.40 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. 2,757.82 ಕೋಟಿ ರುಪಾಯಿ ಉಳಿತಾಯ ಮಾಡಿತ್ತಾದರೂ 898.28 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯು 3,062.54 ಕೋಟಿ ರುಪಾಯಿ ಒಟ್ಟು ಅನುದಾನ ಅವಕಾಶ ಕಲ್ಪಿಸಿತ್ತು. ಇದರಲ್ಲಿ 2,606.14 ಕೋಟಿ ರುಪಾಯಿ ಖರ್ಚು ಮಾಡಿತ್ತು. ಇದರಲ್ಲಿ 456.40 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 76.40 ಕೋಟಿ ರುಪಾಯಿ ತನ್ನಲ್ಲೇ ಇಟ್ಟುಕೊಂಡಿತ್ತೇ ವಿನಃ ಸರ್ಕಾರಕ್ಕೆ ವಾಪಸ್ ಮಾಡಿರಲೇ ಇಲ್ಲ. ಸಹಕಾರ ಇಲಾಖೆಗೆ ಅವಕಾಶ ಕಲ್ಪಿಸಿದ್ದ 2,280.23 ಕೋಟಿ ರುಪಾಯಿ ಪೈಕಿ 2,133.91 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಇದರಲ್ಲಿ 146.32 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 0.55 ಕೋಟಿ ರುಪಾಯಿ ಮರಳಿಸಿರಲಿಲ್ಲ.
ಸಮಾಜ ಕಲ್ಯಾಣ ಇಲಾಖೆಯಲ್ಲಿಯೂ ಸಹ 14,982.96 ಕೋಟಿ ರುಪಾಯಿ ಅನುದಾನಕ್ಕೆ ಅವಕಾಶ ಕಲ್ಪಿಸಿತ್ತು. ಇದರಲ್ಲಿ 14,194.64 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. 788.32 ಕೋಟಿ ರುಪಾಯಿ ಉಳಿತಾಯ ಮಾಡಿದ್ದ ಸಮಾಜ ಕಲ್ಯಾಣ ಇಲಾಖೆಯು ಇದರಲ್ಲಿ 260.79 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ವಾಪಸ್ ನೀಡಿರಲಿಲ್ಲ. ಮಾಹಿತಿ ತಂತ್ರಜ್ಞಾನ ಇಲಾಖೆಯು 764.48 ಕೋಟಿ ರುಪಾಯಿ ಅವಕಾಶದ ಪೈಕಿ 741.08 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಈ ಪೈಕಿ 23.40 ಕೋಟಿ ರುಪಾಯಿಯನ್ನು ಉಳಿತಾಯ ಮಾಡಿಕೊಂಡಿತ್ತಾದರೂ ಇದರಲ್ಲಿನ 1.50 ಕೋಟಿ ರುಪಾಯಿಯನ್ನು ವಾಪಸ್ ಮಾಡಿರಲಿಲ್ಲ.
ಶಿಕ್ಷಣ ಇಲಾಖೆಗೆ ಒಟ್ಟಾರೆ 44,497.55 ಕೋಟಿ ರುಪಾಯಿ ಅನುದಾನಕ್ಕೆ ಅವಕಾಶ ಕಲ್ಪಿಸಿತ್ತು. ಈ ಪೈಕಿ 38,520.74 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಇದರಲ್ಲಿ 5,976 ಕೋಟಿ ರುಪಾಯಿ ಉಳಿತಾಯ ಮಾಡಿದ್ದ ಶಿಕ್ಷಣ ಇಲಾಖೆಯು 3,661.42 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೂ ಸಹ 2,538.63 ಕೋಟಿ ರುಪಾಯಿ ಪೈಕಿ 2,499.53 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. ಇದರಲ್ಲಿ ಉಳಿತಾಯ ಮಾಡಿದ್ದರ 39.10 ಕೋಟಿ ರುಪಾಯಿ ಪೈಕಿ 1.93 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ವಾಪಸ್ ಮಾಡಿರಲಿಲ್ಲ.
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯು ಒಟ್ಟಾರೆ 21,336.04 ಕೋಟಿ ರುಪಾಯಿ ಒಟ್ಟು ಅನುದಾನ ಅವಕಾಶದ ಪೈಕಿ 19,291.95 ಕೋಟಿ ರುಪಾಯಿ ವಾಸ್ತವಿಕವಾಗಿ ಖರ್ಚು ಮಾಡಿತ್ತು. ಇದರಲ್ಲಿ ಉಳಿತಾಯವಾಗಿದ್ದ 2,044.09 ಕೋಟಿ ರುಪಾಯಿನಲ್ಲಿ 823.98 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಮರಳಿ ನೀಡಿರಲಿಲ್ಲ.

ಲೋಕೋಪಯೋಗಿ ಇಲಾಖೆಯಲ್ಲಿ 12,267.32 ಕೋಟಿ ರುಪಾಯಿ ಪೈಕಿ 12,038.11 ಕೋಟಿ ರುಪಾಯಿ ವಾಸ್ತವಿಕವಾಗಿ ಖರ್ಚು ಮಾಡಿತ್ತು. 229.21 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 74.66 ಕೋಟಿ ರುಪಾಯಿಯನ್ನು ವಾಪಸ್ ಮಾಡಿರಲಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 15,707.67 ಕೋಟಿ ರುಪಾಯಿ ಅನುದಾನ ಅವಕಾಶದ ಪೈಕಿ 13,878.72 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಲಾಗಿತ್ತು. ಉಳಿತಾಯ ಮಾಡಿದ್ದರ 1,828.95 ಕೋಟಿ ರುಪಾಯಿನಲ್ಲಿ 286.86 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಮರಳಿ ನೀಡಿರಲಿಲ್ಲ.
ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಗೆ 3,229.32 ಕೋಟಿ ರುಪಾಯಿ ಅನುದಾನ ಬಳಕೆಗೆ ಅವಕಾಶ ನೀಡಿತ್ತು. ಈ ಪೈಕಿ 2,276.45 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿದ್ದ ಇಲಾಖೆಯು 952.87 ಕೋಟಿ ರುಪಾಯಿಗಳನ್ನು ಉಳಿತಾಯ ಮಾಡಿಕೊಂಡಿತ್ತು. ಆದರೆ ಈ ಪೈಕಿ 46.09 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿರಲಿಲ್ಲ.
ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ ಇಲಾಖೆಯು 3,843.47 ಕೋಟಿ ರುಪಾಯಿ ಒಟ್ಟು ಅನುದಾನ ಅವಕಾಶದ ಪೈಕಿ 3,802.99 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿತ್ತು. 40.48 ಕೋಟಿ ರುಪಾಯಿ ಉಳಿತಾಯ ಮೊತ್ತದ ಪೈಕಿ 0.67 ಕೋಟಿ ರುಪಾಯಿಗಳನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಕಾನೂನು ಇಲಾಖೆಯು 2,487.77 ಕೋಟಿ ರುಪಾಯಿ ಒಟ್ಟು ಅನುದಾನದಲ್ಲಿ 2,112.21 ಕೋಟಿ ರುಪಾಯಿ ಖರ್ಚು ಮಾಡಿತ್ತು. ಈ ಪೈಕಿ 375.56 ಕೋಟಿ ರುಪಾಯಿ ಉಳಿತಾಯದ ಪೈಕಿ 41.69 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ.
ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆಯೂ ಸಹ 436.91 ಕೋಟಿ ರುಪಾಯಿ ಅನುದಾನ ಬಳಕೆಗೆ ಅವಕಾಶ ನೀಡಿತ್ತು. ಈ ಪೈಕಿ 389.96 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿ 46.95 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 5.95 ಕೋಟಿ ರುಪಾಯಿ ವಾಪಸ್ ಮಾಡಿರಲಿಲ್ಲ.
ಋಣ ಮೇಲುಸ್ತುವಾರಿ ಇಲಾಖೆಯೂ ಸಹ 66,207.83 ಕೋಟಿ ರುಪಾಯಿ ಅನುದಾನದ ಪೈಕಿ 63,016.56 ಕೋಟಿ ರುಪಾಯಿ ಖರ್ಚು ಮಾಡಿ 3,91.27 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಇದರಲ್ಲಿ 1.26 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಮರಳಿಸಿರಲಿಲ್ಲ. ಒಟ್ಟಾರೆ 21 ಇಲಾಖೆಗಳಿಗೆ 2,89,020.49 ಕೋಟಿ ರುಪಾಯಿ ಅನುದಾನ ನೀಡಲಾಗಿತ್ತು. ಇದರಲ್ಲಿ 2,64,098.96 ಕೋಟಿ ರುಪಾಯಿ ವಾಸ್ತವಿಕ ವೆಚ್ಚ ಮಾಡಿದ್ದ ಇಲಾಖೆಗಳು 24,921.53 ಕೋಟಿ ರುಪಾಯಿ ಉಳಿತಾಯ ಮಾಡಿತ್ತು. ಈ ಪೈಕಿ 10,546.42 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ ಆದ್ಯರ್ಪಿಸಿರಲಿಲ್ಲ.
ಹಾಗೆಯೇ 15 ಇಲಾಖೆಗಳು 2025ರ ಮಾರ್ಚ್‌ನ ಕೊನೆಯ ದಿನಾಂಕಂದು ಸರ್ಕಾರಕ್ಕೆ 10,.447.77 ಕೋಟಿ ರುಪಾಯಿಯನ್ನು ವಾಪಸ್ ಮಾಡಿತ್ತು.

ಇದರಲ್ಲಿ ಋಣ ಮೇಲುಸ್ತುವಾರಿ ಇಲಾಖೆಯದ್ದೇ ಸಿಂಹಪಾಲು ಇತ್ತು. ಈ ಇಲಾಖೆಯು 3,157.72 ಕೋಟಿ ರುಪಾಯಿಗಳನ್ನು 2025ರ ಮಾರ್ಚ್ 31ರಂದು ಹಿಂದಿರುಗಿಸಿತ್ತು. ಉಳಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು 1,256.30 ಕೋಟಿ, ಶಿಕ್ಷಣ ಇಲಾಖೆಯು 2.083.52 ಕೋಟಿ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯು 1,294.60 ಕೋಟಿ ರುಪಾಯಿಗಳನ್ನು ಆರ್ಥಿಕ ವರ್ಷದ ಕೊನೆ ದಿನದಂದು ಸರ್ಕಾರಕ್ಕೆ ಮರಳಿಸಿತ್ತು.





