Monday | April 13, 2026 |

ಗಾಲ್ಫ್‌ ಅಸೋಸಿಯೇಷನ್‌ನ ಜಮೀನಿನ ಸರ್ವೇ, ಆದಾಯ ಪರಿಶೀಲನೆ; ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ಕಾರ

ಬೆಂಗಳೂರು;  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಸರ್ವೇ ನಡೆಸಲು ಕಂದಾಯ ಇಲಾಖೆಯು ಮುಂದಾಗಿದೆ.ಹಾಗೆಯೇ ಗಾಲ್ಫ್‌ ಅಸೋಸಿಯೇಷನ್‌ ಸಂಸ್ಥೆಯ ಆದಾಯವನ್ನೂ ಸಹ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲು ಕ್ರಮವಹಿಸಿದೆ.

ಈ ಸಂಸ್ಥೆಯ ಆಡಳಿತ ಮಂಡಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಕ ಪ್ರಕ್ರಿಯೆಗಳಿಗೆ ಮುಂದಾಗಿದ್ದ ಕಂದಾಯ ಇಲಾಖೆಯು ಇದೀಗ ಈ ಸಂಸ್ಥೆಯು ಹೊಂದಿರುವ ಜಮೀನಿನ ಸರ್ವೆ ನಡೆಸುವ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೂರ್ವ ವಲಯದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದೆ.

ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸಲು ಸಿದ್ಧತೆ ನಡೆಸಿರುವ ಸರ್ಕಾರವು,  ಇದಕ್ಕಾಗಿ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿರುವ ನಡುವೆಯೇ ಜಮೀನಿನ ಸರ್ವೇ ನಡೆಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ಸಂಬಂಧ 2026ರ ಎಪ್ರಿಲ್‌ 7ರಂದು ನಡೆದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಕಂದಾಯ ಇಲಾಖೆಯು ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ವಿವರಣೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಇದೇ ಸಂಸ್ಥೆಗೆ ಸಂಬಂಧಿಸಿದಂತೆ 2023ರ ಮಾರ್ಚ್‌ 7, 2026ರ ಫೆ.10ರಂದು ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ    ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ  ಚರ್ಚೆ ನಡೆಸಿತ್ತು.

 

ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಭೂಮಿಯ ಮೇಲ್ವಿಚಾರಣೆ, ಷರತ್ತುಗಳ ಅನುಸರಣೆಯಾಗಿದೆಯೇ ಇಲ್ಲವೇ, ಮೇಲ್ವಿಚಾರಣೆ ಮಾಡದ ಕಾರಣ ಆಗಿರುವ ಪರಿಣಾಮಗಳು, ಭೂಮಿಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಂಟಿ ಭೌತಿಕ ಪರಿವೀಕ್ಷಣೆ ಮಾಡುವುದು, ಗುತ್ತಿಗೆ ಬಾಡಿಗೆ ಪಾವತಿಗಾಗಿ ತಗಾದೆ ಸೃಷ್ಟಿಸದೇ ಇರುವ ವಿಷಯಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಸಿರುವುದು ತಿಳಿದು ಬಂದಿದೆ.

2026ರ ಏಪ್ರಿಲ್‌ 7ರಂದು ನಡೆದ ಸಭೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಇತ್ತೀಚಿನ ಮಾಹಿತಿಯನ್ನು ಸಭೆಗೆ ಒದಗಿಸಿರುವುದು ಗೊತ್ತಾಗಿದೆ.

 

 

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಮಾಲೀಕತ್ವಕ್ಕೆ ಒಳಪಟ್ಟಿರುವ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ ಸಂಸ್ಥೆಗೆ ಗುತ್ತಿಗೆ ನೀಡಿರುವ ಜಮೀನಿನ ಸರ್ವೇ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಇಲಾಖೆಯು ನಿರ್ದೇಶನ ನೀಡಿದೆ.

 

 

ಹಾಗೆಯೇ ಈ ಸಂಸ್ಥೆಯ ಆದಾಯವನ್ನು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ ವರದಿ ಸಲ್ಲಿಸಲು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಗೆ 2026ರ ಫೆ.6ರಂದು ಪತ್ರವನ್ನು ಬರೆದಿದೆ. ಅಲ್ಲದೇ 2026ರ ಏಪ್ರಿಲ್‌ 2ರಂದೂ ಸಹ ಈ ಇಲಾಖೆಗಳಿಗೆ ನೆನಪೋಲೆಗಳನ್ನೂ ಬರೆಯಲಾಗಿದೆ ಎಂದು ಕಂದಾಯ ಇಲಾಖೆಯು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಗಾಲ್ಪ್‌ ಅಸೋಸಿಯೇಷನ್‌ ಬಳಸುತ್ತಿರುವ ಜಮೀನು, ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಆಡಳಿತ ವಿಷಯದಲ್ಲಿಯೂ ನಿರ್ಣಯ ಕೈಗೊಳ್ಳುವ ಅಧಿಕಾರವೂ ಸರ್ಕಾರಕ್ಕಿದೆ ಎಂದು ಪ್ರತಿಪಾದಿಸುತ್ತಿದೆ. ಈ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿದ್ದರು.

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತವನ್ನು ನಿಯಂತ್ರಿಸಲು ಹೊರಟಿರುವ ಸರ್ಕಾರವು, ಹಲವು ಸಮರ್ಥನೀಯ ಅಂಶಗಳನ್ನು ಪಟ್ಟಿ ಮಾಡಿತ್ತು.  1980ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶ, 1986ರಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಮತ್ತು ನಿಗಮದ ನಡುವೆ ಆಗಿರುವ ಒಪ್ಪಂದವನ್ನು ಮುನ್ನೆಲೆಗೆ ತಂದಿತ್ತು. ಇದರ ಪ್ರಕಾರ ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸುವ ಕುರಿತು ಗೌರ್ನಿಂಗ್ ಕೌನ್ಸಿಲ್‌ ರಚಿಸಲು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಕಂದಾಯ ಇಲಾಖೆಯು ಪ್ರಸ್ತಾವವನ್ನೂ ಸಿದ್ಧಪಡಿಸಿತ್ತು.

 

 

 

ನಿಯಂತ್ರಣವೇಕೆ?

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಜತೆ 1986ರ ಜುಲೈ 25ರಂದು ಒಪ್ಪಂದ ಆಗಿದೆ. ಇದರ ಪ್ರಕಾರ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸರ್ಕಾರವು ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತವನ್ನು ನಿಯಂತ್ರಿಸಲು  ಗೌರ್ನಿಂಗ್‌ ಕೌನ್ಸಿಲ್‌ನ್ನು ನಿಯೋಜಿಸಲು ಮುಂದಾಗಿತ್ತು.

 

karnataka golf club fileld

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಯೋಜನೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಏಜೆಂಟ್‌ನಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿತ್ತು. ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನನ್ನು ಗಾಲ್ಫ್‌ ಉತ್ತೇಜಿಸಬೇಕು. ಸದಸ್ಯರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುಕೂಲಕರವಾದ ಪರಿಸರ ನಿರ್ಮಾಣ ಮಾಡುವುದು ಅವಶ್ಯಕವಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿತ್ತು.

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ಸದಸ್ಯರನ್ನು  ನೋಂದಾಯಿಸುವಾಗ ಸದಸ್ಯತ್ವವು ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿರಬೇಕು. ಮತ್ತು ಎಲ್ಲಾ ವರ್ಗದವರಿಗೂ ಸಹ ಕೈಗೆಟುಕುವ ಸದಸ್ಯತ್ವ ಶುಲ್ಕವನ್ನು ನಿರ್ಣಯಿಸುವ ಅವಶ್ಯಕತೆ ಇದೆ.  ಅಲ್ಲದೇ ಗಾಲ್ಫ್‌ ಅಸೋಸಿಯೇಷನ್‌, ಬಾಡಿಗೆ, ಸದಸ್ಯತ್ವ ಶುಲ್ಕ, ಇತ್ಯಾದಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ತ್ರೈಮಾಸಿಕ ಖಾತೆಯ ಹೇಳಿಕೆಗಳನ್ನು ಸಲ್ಲಿಸಬೇಕು.  ಅದೇ ರೀತಿ ಈ ಜಮೀನಿನ ಮೇಲಿನ ಎಲ್ಲಾ ಕಾನೂನುಬದ್ಧ ಶುಲ್ಕಗಳನ್ನು ಮತ್ತು ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು.

 

 

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಅಡಳಿತ ಮಂಡಳಿಗೆ ಈಗಾಗಲೇ ಸರ್ಕಾರಿ ಪ್ರತಿನಿಧಿಗಳನ್ನು ನೇಮಿಸಿದೆ. ಅಲ್ಲದೇ ಅವರ ಸಲಹೆ, ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರೂ ಸಹ ಗಾಲ್ಫ್‌ ಅಸೋಸಿಯೇಷನ್‌ ಕ್ರಮ ವಹಿಸುತ್ತಿಲ್ಲ. ಹಾಗೆಯೇ ಒಪ್ಪಂದದ ಅಂಶಗಳನ್ನು ಮೀರಿ ಸದಸ್ಯತ್ವ ಶುಲ್ಕ ವಸೂಲು ಮಾಡುತ್ತಿದೆ. ಅಲ್ಲದೇ ವ್ಯಾಪ್ತಿ ಮೀರಿ  ಸದಸ್ಯತ್ವವನ್ನು ನೋಂದಾಯಿಸುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿತ್ತು.

 

 

ಅಲ್ಲದೇ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ತನ್ನ ಆಂತರಿಕ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ, ಸರ್ಕಾರದ ಪೂರ್ವಾನುಮೋದನೆ ಅಗತ್ಯವಾಗಿದೆ. ಆದರೂ ಸಲಹ ಕಾಲಕಾಲಕ್ಕೆ ಜರಗುವ ಆಡಳಿತ ಮಂಡಳಿಯ ನಡವಳಿ ಮತ್ತು ನಿರ್ಣಯಗಳನ್ನು ಕರ್ನಾಟಕ ಪ್ರವಾಸೋದ್ಯ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸುವಲ್ಲಿ ವಿಫಲವಾಗಿತ್ತು.

 

 

ಈ ಎಲ್ಲಾ ಅಂಶಗಳನ್ನು ಮುಂದಿರಿಸಿರುವ ಕಂದಾಯ ಇಲಾಖೆಯು ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿ ಮೇಲೆ ನಿಯಂತ್ರಣ ಹೊಂದಲು ಬಯಸಿದೆ. ‘ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತದ ಮೇಲೆ ನಿಯಂತ್ರಣ ಸಾಧಿಸದೇ ಹೋದಲ್ಲಿ ಅದರಿಂದ ಸರ್ಕಾರಕ್ಕೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ,’ ಎಂದು ಕಂದಾಯ ಇಲಾಖೆಯು ತನ್ನ ಪ್ರಸ್ತಾವದಲ್ಲಿ ವಿವರಿಸಿತ್ತು.

ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ  ಐಎಎಸ್‌ ಅಧಿಕಾರಿ ನೇಮಕ

ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಹಿರಿಯ ಐಎಎಸ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ಪ್ರಸ್ತಾವದಲ್ಲಿ ಬೇಡಿಕೆ ಸಲ್ಲಿಸಿತ್ತು.  ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌, ಸೊಸೈಟಿ ಅಧಿನಿಯಮಗಳ ಅಡಿಯಲ್ಲಿ ನೋಂದಾಯಿತವಾಗಿದೆ. ಆಧರೆ ಅದು ಬಳಸುತ್ತಿರುವ ಜಮೀನು, ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಹೀಗಾಗಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ವಿಷಯವಾಗಿ ನಿರ್ಣಯ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಹಕ್ಕನ್ನು ಸ್ಥಾಪಿಸಿತ್ತು.

ಆಗಲಿದೆಯೇ ನಿಯಮ ಬದಲಾವಣೆ?

ಸೊಸೈಟಿ ನೋಂದಣಿ ಅಧಿನಿಯಮದ ಅಡಿಯಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ನೋಂದಾಯಿತ ಸಂಸ್ಥೆಯಾಗಿದೆ. ಅದಕ್ಕೆ ಅಧ್ಯಕ್ಷರನ್ನಾಗಿ ಚುನಾಯಿತ ಸದಸ್ಯರನ್ನು ನಿಯಮಾನುಸಾರ ಆಯ್ಕೆ ಮಾಡುವುದರಿಂದ ಸರ್ಕಾರದ ನಿಯಂತ್ರಣ ಕಡಿಮೆಯಾಗಿದೆ. ಹೀಗಾಗಿ ಸರ್ಕಾರದ ಸುಪರ್ದಿಗೆ ಒಳಪಡುವ ವ್ಯವಸ್ಥೆ ಮಾಡುವುದು ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನಿಯಮಗಳಲ್ಲಿ ಬದಲಾವಣೆ ಮಾಡುವುದು ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿತ್ತು.

ನಿಯಮಗಳು ಬದಲಾವಣೆ ಆದಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿಯನ್ನು ನೇಮಿಸಬೇಕು. ಇದಕ್ಕೆ ಸರ್ಕಾರದ ನಿರ್ದೇಶನದ ಅವಶ್ಯಕತೆ ಇದೆ. ಅಧ್ಯಕ್ಷರು ಸರ್ಕಾರದ ಪ್ರತಿನಿಧಿಯಾದಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಆಡಳಿತ ಮತ್ತು ಅದರ ವ್ಯವಹಾರಗಳಲ್ಲಿ ಸರ್ಕಾರವು ನಿಯಂತ್ರಣ ಹೊಂದಬಹುದು. ಈ ರೀತಿ ಅವಕಾಶ ದೊರೆತಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನಿನ ನಿರ್ವಹಣೆಯೂ ಸುಲಭವಾಗಲಿದೆ ಎಂದು ಸಮರ್ಥಿಸಿಕೊಂಡಿತ್ತು.

ಅದೇ ರೀತಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ಗೆ ನೀಡಿರುವ ಜಮೀನಿನ ಸುತ್ತಮುತ್ತ ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಿಸುತ್ತಿದ್ದಾರೆ. ಅದನ್ನು ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ ವಿಫಲವಾಗಿದೆ. ಹೀಗಾಗಿ ಅತಿಕ್ರಮಣ ತಡೆಗಟ್ಟುವುದು ಮತ್ತು ಈಗಾಗಲೇ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಲು ಸರ್ಕಾರದ ನಿಯಂತ್ರಣದ ಅವಶ್ಯಕತೆ ಇದೆ ಎಂದು ಹೇಳಿತ್ತು.

ಹೆಚ್ಚಳವಾಗದ ಬಾಡಿಗೆ ಮೊತ್ತ

ಕರ್ನಾಟಕ ಗಾಲ್ಫ್‌ ಅಸೋಸಿಯೇ‍ಷನ್‌ನ ವಾರ್ಷಿಕ ಆದಾಯವು ಪ್ರತೀ ವರ್ಷ ಹೆಚ್ಚುತ್ತಿದೆ. ಆದರೆ ಹಣಕಾಸು ವಹಿವಾಟುಗಳ ಆಧಾರದ ಮೇಲೆ ಬಾಡಿಗೆ ಮೊತ್ತ ಹೆಚ್ಚಳವಾಗಿಲ್ಲ. 2012-13ರ ಆದಾಯದ ಲೆಕ್ಕಾಚಾರದ ಪ್ರಕಾರ ಶೇ.2ರಷ್ಟು ಮೊತ್ತವನ್ನು ಬಾಡಿಗೆಯಾಗಿ ತೆಗೆದುಕೊಳ್ಳುತ್ತಿದೆ. ಗಾಲ್ಫ್‌ ಕ್ಲಬ್‌ಗೆ ನೀಡಿರುವ ಜಮೀನಿನ ಮಾರುಕಟ್ಟೆ ದರ, ಬೆಂಗಳೂರಿನಲ್ಲಿರುವ ಇತರೆ ಜಾಗಗಳನ್ನು ಹೋಲಿಸಿದ್ದಲ್ಲಿ ಬಹಳಷ್ಟು ಹೆಚ್ಚಾಗುತ್ತದೆ. ಆದರೆ ಆ ಮಟ್ಟದಲ್ಲಿ ಸರ್ಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಾಗಿ ಬಾಡಿಗೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಪ್ರತಿಪಾದಿಸಿತ್ತು.

 

 

ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ವಾರ್ಷಿಕ ಆದಾಯ ಹೆಚ್ಚಿಸಿಕೊಳ್ಳಬೇಕಿದೆ. ಗಾಲ್ಫ್‌ ಕ್ಲಬ್‌ ಪ್ರತಿನಿತ್ಯ 5 ಸಾಲ್ಟ್‌ಗಳಲ್ಲಿ ಗಾಲ್ಫ್‌ ಪಂದ್ಯವನ್ನು ನಡೆಸಲು ಕ್ರಿಯಾ ಯೋಜನೆ ರೂಪಿಸಬೇಕಿದೆ. ಈ ಮಾಹಿತಿಯನ್ನು ಬೆಂಗಳೂರಿನಲ್ಲಿರುವ ಎಲ್ಲಾ ಪಂಚತಾರಾ ಹೋಟೆಲ್‌ಗಳಿಗೆ  ನೀಡಬೇಕು. ಮತ್ತು ಪ್ರತಿನಿತ್ಯ 5 ಸಾಲ್ಟ್‌ಗಳಲ್ಲಿ ಗಾಲ್ಫ್‌  ಪಂದ್ಯ ನಡೆಸಲು ಕ್ರಮಕೈಗೊಂಡಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಮಾಹಿತಿ ಒದಗಿಸಿತ್ತು.

 

 

ಅದೇ ರೀತಿ ಕರ್ನಾಟಕ ಗಾಲ್ಫ್‌ ಅಸೋಷಿಯೇನ್‌ನಿಂದ ಸರ್ಕಾರಕ್ಕೆ ಕ್ಲಬ್‌ನ ವಾರ್ಷಿಕ ಆದಾಯದ ಶೇ. 2ರಷ್ಟು ಗುತ್ತಿಗೆ ಮೊತ್ತವನ್ನು ನಿಗದಿಪಡಿಸಿದೆ. ಸರ್ಕಾರಕ್ಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ಲಬ್‌ನ ವಾರ್ಷಿಕ ಆದಾಯದ ಶೇ. 20ರಷ್ಟು ಗುತ್ತಿಗೆ ಬಾಡಿಗೆಯನ್ನು ನಿಗದಿಪಡಿಸಬಹುದು ಎಂದು ಸಲಹೆ ನೀಡಿತ್ತು. ಹೆಚ್ಚಳ ಮಾಡಿದ ಗುತ್ತಿಗೆ ಬಾಡಿಗೆಯನ್ನು ಪ್ರತಿ 5 ವರ್ಷಕ್ಕೊಮ್ಮೆ ಗುತ್ತಿಗೆ ಅವಧಿ ಮುಗಿಯುವವರೆಗೆ ಶೇ. 10 (ಶೇ.20ರ ಮೇಲೆ) ಹೆಚ್ಚಿಸಿ ಗುತ್ತಿಗೆ ಬಾಡಿಗೆಯನ್ನು ಪರಿಷ್ಕರಿಸಲು ಗುತ್ತಿಗೆ ಕರಾರಿನಲ್ಲಿ ತಿದ್ದುಪಡಿ ಮಾಡಬಹುದು ಎಂದು ಹೇಳಿದೆ. ಮತ್ತು ಸರ್ಕಾರವು, ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ನ ಹಣಕಾಸು ವ್ಯವಹಾರಗಳನ್ನು ನಿಯಮಿತವಾಗಿ ಲೆಕ್ಕ ಪರಿಶೋಧನೆ ಮಾಡಿ ವರದಿ ಪಡೆಯಬಹುದು ಎಂದು ಸಲಹೆ ನೀಡಿತ್ತು.

 

 

 

ಗಾಲ್ಫ್‌ ಅಸೋಸಿಯೇಷನ್‌ಗೆ ಸಂಬಂಧಿಸಿದಂತೆ ಸರ್ಕಾರವು 2013ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಹೊಸ ಕಟ್ಟಡ ನಿರ್ಮಾಣ ಮಾಡದಂತೆ ನಿಬಂಧನೆ ವಿಧಿಸಿತ್ತು. ಸರ್ಕಾರದ ಅನುಮತಿಯಿಲ್ಲದೇ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಈ ಅಸೋಸಿಯೇಷನ್‌ಗೆ ನೀಡಿರುವ ಜಮೀನು ಅತ್ಯಂತ ಬೆಲೆಬಾಳಲಿದೆ. ಈ ಜಮೀನಿನ ಒಪ್ಪಂದದ ಅವಧಿಯು 2040ಕ್ಕೆ ಪೂರ್ಣಗೊಳ್ಳಲಿದೆ.

2040ರ ನಂತರ ಒಪ್ಪಂದ ಮುಂದುವರೆಸುವ ವಿಷಯವು ಸರ್ಕಾರದ ವಿವೇಚನೆಗೆ ಒಳಪಟ್ಟಿದೆ. ಸರ್ಕಾರದ ಆದೇಶ ಮತ್ತು ಒಪ್ಪಂದದಲ್ಲಿ ಹೇಳಿರುವಂತೆ ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್‌ 2010ರ ನಂತರ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಪ್ರತಿಬಂಧಿಸಿರುವುದನ್ನು ಸ್ಮರಿಸಬಹುದು.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

Related Articles

Popular Categories

error: Content is protected !!